ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆ ನೆರಳಿನಲ್ಲಿ ಸ್ವಂತಿಕೆ ಹುಡುಕಾಟ

Last Updated 1 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

‘ನಾನು ಪ್ರಾಡಿಜಿನೂ ಅಲ್ಲ, ಟ್ರಾಜಿಡಿನೂ ಅಲ್ಲ, ಮಧ್ಯದಲ್ಲಿದ್ದೀನಿ’ ಎಂದು ನಗುತ್ತಲೇ ಹೇಳುತ್ತಾರೆ ‘ಮೈಸೂರು ಬಾನಿ’ ಪರಂಪರೆಯನ್ನು ಇನ್ನಷ್ಟು ಮೇಲೆತ್ತರಿಸಿರುವ ಖ್ಯಾತ ವೈಣಿಕರಾದ ವಿದ್ವಾನ್ ಡಿ. ಬಾಲಕೃಷ್ಣ.

ಈಗ ವೀಣೆಯ ಮೇಲಾಡುವ ಬೆರಳುಗಳು ಬಾಲ್ಯದಲ್ಲಿ ಮೊದಲು ಕಲಿತಿದ್ದು ಮೃದಂಗವನ್ನು ಎಂದರೆ ಅಚ್ಚರಿಯೆನ್ನಿಸಬಹುದು. ವೀಣೆಗೆ ಇನ್ನೊಂದು ಸಮಾನಾರ್ಥಕ ಪದ ಎಂಬಷ್ಟರಮಟ್ಟಿಗೆ ಪ್ರಸಿದ್ಧರಾದ, ‘ಮೈಸೂರು ಬಾನಿ’ಯನ್ನು ಹುಟ್ಟುಹಾಕಿದ ಶ್ರೇಷ್ಠ ವೈಣಿಕರಾಗಿದ್ದ ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್ ಅವರ ಎರಡನೇ ಮಗನಾದ ವಿದ್ವಾನ್ ಬಾಲಕೃಷ್ಣ ಹುಟ್ಟಿದ್ದು ಮೈಸೂರಿನ ಹಳೇ ಅಗ್ರಹಾರದ ಮನೆಯಲ್ಲಿ. ದೊರೆಸ್ವಾಮಿಯವರ ತಂದೆ ವಿದ್ವಾನ್ ವೆಂಕಟೇಶ ಅಯ್ಯಂಗಾರ್ ಮೈಸೂರು ಆಸ್ಥಾನದ ವಿದ್ವಾನ್ ಆಗಿದ್ದವರು.

ಪ್ರಖ್ಯಾತ ವೈಣಿಕರ ಮನೆಯಲ್ಲಿ ವೀಣೆಯ ಝೇಂಕಾರವನ್ನು ಆಗಾಗ ಕೇಳುತ್ತಲೇ ಇದ್ದ ಬಾಲಕೃಷ್ಣರಿಗೆ ಚಿಕ್ಕಂದಿನಲ್ಲಿ ಮಾತ್ರ ಮೃದಂಗದ ಸೆಳೆತ. ಖಾಲಿಯಾದ ಅಕ್ಕಿಯ ಟಿನ್‌ಅನ್ನು ಮಲಗಿಸಿ, ಮೃದಂಗದಂತೆ ಇಟ್ಟುಕೊಂಡು ಬಡಿಯುವುದು, ಖಾಲಿ ಬೋರ್ನ್‌ವಿಟಾ ಡಬ್ಬಿಯನ್ನು ಬಡಿಯುವುದು ಇಂತಹದ್ದೇ ಹವ್ಯಾಸ. ಬಾಲಕೃಷ್ಣರು ಹುಟ್ಟಿದ ವರ್ಷವೇ, ಅಂದರೆ 1955ರಲ್ಲಿ ದೊರೆಸ್ವಾಮಿಯವರು ಬೆಂಗಳೂರು ಆಕಾಶವಾಣಿಗೆ ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಸೇರಿದರು. ಆದರೆ ಕುಟುಂಬದವರು ಮಾತ್ರ ಮೈಸೂರಿನಲ್ಲಿಯೇ ಇದ್ದರು. 1962-63ರ ಸುಮಾರಿಗೆ ಕುಟುಂಬವನ್ನು ಬೆಂಗಳೂರಿಗೆ ಕರೆದುಕೊಂಡು ಬಂದರು. ಬೆಂಗಳೂರಿಗೆ ಬಂದ ನಂತರ ವಿದ್ವಾನ್ ಸಿ.ಕೆ. ಅಯ್ಯಮಣಿ ಅಯ್ಯರ್ ಅವರಿಂದ ಏಳು ವರ್ಷದ ಬಾಲಕೃಷ್ಣರಿಗೆ ಮೃದಂಗದ ಪಾಠಗಳು ಶುರುವಾದವು. ಸುಮಾರು ಅವರಿಗೆ 12-13 ವರ್ಷ ಆಗುವವರೆಗೂ ಮೃದಂಗದ ಕಲಿಕೆ ಮುಂದುವರೆಯಿತು.

ಆಗೊಮ್ಮೆ ಸುಮ್ಮನೇ ಕೈಯಾಡಿಸಲೆಂದು ತೆಗೆದುಕೊಂಡ ವೀಣೆಯನ್ನು ಬಾಲಕೃಷ್ಣ ಸಾಕಷ್ಟು ಚೆನ್ನಾಗಿಯೇ ನುಡಿಸಿದರು. ದೊರೆಸ್ವಾಮಿಯವರ ಚಿಕ್ಕಪ್ಪ ಇವರು ನುಡಿಸುವುದನ್ನು ಕೇಳಿದರು. ‘ಇವನು ಚೆನ್ನಾಗಿ ನುಡಿಸ್ತಾನಯ್ಯ, ನೀನೇ ಅವನಿಗೆ ವೀಣೆ ಹೇಳಿಕೊಡು’ ಎಂದು ದೊರೆಸ್ವಾಮಿಯವರ ಮನವೊಲಿಸಿದರು. ತಮ್ಮ ನಾಲ್ಕು ಜನ ಗಂಡುಮಕ್ಕಳಿಗಾಗಲೀ, ಹೆಣ್ಣುಮಕ್ಕಳಿಗಾಗಲೀ ವೀಣೆ ಕಲಿಯಿರಿ ಎಂದು ದೊರೆಸ್ವಾಮಿಯವರು ಎಂದೂ ಒತ್ತಾಯಿಸಿರಲಿಲ್ಲ. ಆಸಕ್ತಿ ಎನ್ನೋದು ಒಳಗಿನಿಂದ ಸಹಜವಾಗಿಯೇ ಹುಟ್ಟಿದರೆ ಮಾತ್ರ ಕಲಿಸಬೇಕು ಎಂಬ ಮನೋಭಾವ ಅವರದ್ದಾಗಿತ್ತು. ಜೊತೆಗೆ ಆಗ ದೊರೆಸ್ವಾಮಿಯವರು ಅವರ ಸಂಗೀತಸಾಧನೆಯ ಉತ್ತುಂಗದಲ್ಲಿದ್ದರು, ಸದಾ ಕಛೇರಿಗಳು, ಆಕಾಶವಾಣಿಯ ವೃತ್ತಿ ಬೇರೆ, ಅವರಿಗೆ ಸಮಯವೂ ಇರುತ್ತಿರಲಿಲ್ಲ. ಬಾಲಕೃಷ್ಣ ನುಡಿಸುವುದನ್ನು ಕೇಳಿದ ದೊರೆಸ್ವಾಮಿಯವರು, ‘ನಿನ್ನ ಲಯಜ್ಞಾನ ಚೆನ್ನಾಗಿದೆ’ ಎಂದು ಕಲಿಸಲು ಆರಂಭಿಸಿದರು. ಮೃದಂಗದ ಕಲಿಕೆ ವ್ಯರ್ಥವಾಗಿರಲಿಲ್ಲ, ಅದು ಲಯಜ್ಞಾನದ ಗಟ್ಟಿಯಾದ ಬುನಾದಿಯನ್ನು ಹಾಕಿತ್ತು.

‘ತಂದೆಯವರು ಮೊದಲು ಹಾಡಿ ತೋರಿಸುತ್ತಿದ್ದರು. ಏನು ಸ್ವರಗಳು ಬರುತ್ತಿವೆ ಎಂಬ ಕಲ್ಪನೆ ನಮಗೆ ಇರಬೇಕು, ಆ ಸಂಗೀತವನ್ನು, ಕೀರ್ತನೆಯನ್ನು ಮೊದಲು ಮನಸ್ಸಿನೊಳಗೆ ಅನುಭವಿಸಬೇಕು, ಅದು ನಮ್ಮನ್ನು ಕಾಡಬೇಕು, ಆಮೇಲೆ ಹಾಡಬೇಕು. ಕೀರ್ತನೆ ಹಾಡುವಾಗ ತಪ್ಪಿದ್ದರೆ ಸರಿ ಮಾಡುತ್ತಿದ್ದರು. ನಂತರ ವೀಣೆಯಲ್ಲಿ ನುಡಿಸಬೇಕಿತ್ತು.

‘ನಮ್ಮ ಚಿಕ್ಕಜ್ಜ ಹೇಳಿದ್ದರಿಂದಲೇ ಅವರು ನನಗೆ ಕಲಿಸೋದಕ್ಕೆ ಶುರುಮಾಡಿದರು, ಆಗ ಸುಮಾರು ಹದಿಮೂರು ವರ್ಷ ನನಗೆ. ಆರಂಭದಲ್ಲಿಯೂ ಅಷ್ಟು ಕಷ್ಟವಾಗಲಿಲ್ಲ. ಅವರು ನುಡಿಸೋದನ್ನು ನೋಡುತ್ತ ಬೆರಳಿನ ತಂತ್ರಗಳು ಸ್ವಲ್ಪ ಆಗಲೇ ಬಂದುಬಿಟ್ಟಿದ್ದವು. ಇದರೊಂದಿಗೆ ಆನುವಂಶಿಕವಾಗಿ ಬಂದಿರುತ್ತೆ ಅಂತಾರಲ್ಲ ಹಂಗೆ. ಆದರೆ ಆಳಕ್ಕೆ ಹೋಗುತ್ತಿದ್ದಂತೆ ಸಂಗೀತ ಸಾಧನೆಗೆ ಅದರದ್ದೇ ಆದ ಸಮಸ್ಯೆಗಳಿರುತ್ತವೆ’ ಎಂದು ಬಾಲಕೃಷ್ಣ ನೆನಪಿಸಿಕೊಳ್ಳುತ್ತಾರೆ.

ಮೊದಲ ಕಛೇರಿ

ವಿದ್ವಾನ್ ದೊರೆಸ್ವಾಮಿಯವರು ಮಗನಿಗೆ ಮೊದಲಿಗೆ ಹೇಳಿಕೊಟ್ಟ ಕೃತಿ ‘ರಾಮಾ ನೀಪೈ ತನಕು’ ಎಂಬ ತ್ಯಾಗರಾಜರ ರಚನೆ. ಪ್ರತಿದಿನ ಸಂಜೆ ಅವರು ವೀಣೆ ನುಡಿಸುತ್ತ ಅಭ್ಯಾಸ ಮಾಡುವಾಗ ಗಮನವಿಟ್ಟು ಆಲಿಸಬೇಕು, ನೋಡಿಕೊಳ್ಳಬೇಕು. ಆಮೇಲೆ ಅಭ್ಯಾಸ ಮಾಡುತ್ತ, ತಮ್ಮ ಬೆರಳಿಗೆ ಇಳಿಸಿಕೊಳ್ಳಬೇಕು. ನಾಲ್ಕೈದು ವರ್ಷ ಕಲಿಕೆಯ ನಂತರ ಬಾಲಕೃಷ್ಣರಿಗೆ ಹತ್ತೊಂಬತ್ತೋ ಇಪ್ಪತ್ತೋ ವರ್ಷವಾಗಿರಬೇಕು. ಒಂದು ದಿನ ಇದ್ದಕ್ಕಿದ್ದಂತೆ ಮಗನಿಗೆ, ‘ನಾಡಿದ್ದು ನನ್ನ ಜೊತೆಗೆ ನುಡಿಸ್ತೀಯ ನೀನು’ ಎಂದುಬಿಟ್ಟರು. ‘ಹಾಗಂತ ಅದಕ್ಕೆ ತಯಾರಿ ಏನೂ ಇಲ್ಲ. ಏನು ನುಡಿಸೋದು ಎಂದು ಕೇಳಿದರೆ ನನ್ನ ಫಾಲೋ ಮಾಡಿಕೊಂಡು ನುಡಿಸಿಕೊಂಡು ಬಾ ಎಂದುಬಿಟ್ಟರು. ಅದು ನನ್ನ ಮೊದಲ ಕಛೇರಿ. ನಾನು ಇನ್ನೂ ಚೆನ್ನಾಗಿ ನುಡಿಸಬಹುದಿತ್ತು ಎಂದು ವ್ಯಥೆಯೂ ಆಗಿತ್ತು’ ಎಂದು ಬಾಲಕೃಷ್ಣ ನೆನಪಿಸಿಕೊಳ್ಳುತ್ತಾರೆ.

ನಿಜವೆಂದರೆ ವಿದ್ವಾನ್ ದೊರೆಸ್ವಾಮಿಯವರ ಜೊತೆ ವೇದಿಕೆಯ ಮೇಲೆ ಕೂರುವುದು ಅಷ್ಟು ಸರಳವಿರಲಿಲ್ಲ. ಪ್ರತಿದಿನದ ಅಭ್ಯಾಸ ನಡೆಯುತ್ತಲೇ ಇರುತ್ತಿತ್ತು ಎನ್ನುವುದನ್ನು ಹೊರತುಪಡಿಸಿದರೆ, ಎಷ್ಟೇ ದೊಡ್ಡ ಕಾರ್ಯಕ್ರಮವಾದರೂ, ಯಾವುದೇ ಕಛೇರಿಯಾದರೂ ಅವರು ಇಂಥದ್ದು, ಹೀಗೆ ನುಡಿಸಬೇಕು ಎಂದು ಮೊದಲು ಸಿದ್ಧತೆ, ರಿಹರ್ಸಲ್ ಮಾಡಿದವರೇ ಅಲ್ಲ. ಸಂಗೀತ ಎನ್ನುವುದು ಅಲ್ಲೇ ವೇದಿಕೆಯ ಮೇಲೆ ಘಟಿಸಬೇಕು ಎನ್ನುವ ಸ್ವಯಂಸ್ಫೂರ್ತಿಯ ಮನೋಭಾವ.

ಸ್ವಂತಿಕೆಯ ಹುಡುಕಾಟ

80ರ ದಶಕದಲ್ಲಿ ಸಂಗೀತವನ್ನೇ ವೃತ್ತಿಯಾಗಿಸಿಕೊಳ್ಳುವುದು ಕಷ್ಟವಿತ್ತು. ಎಂಎಸ್‍ಸಿ ಪದವಿ ಮುಗಿಸಿದ ಬಾಲಕೃಷ್ಣರಿಗೆ ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತು. ಬ್ಯಾಂಕ್ ವೃತ್ತಿ ಹಾಗೂ ಸಂಗೀತ ಎರಡನ್ನೂ ಸಮತೋಲನದಿಂದ ನಡೆಸಿಕೊಂಡು ಹೋಗುವುದು ಕಷ್ಟವೆನ್ನಿಸಲಿಲ್ಲ. ಆದರೆ ಸವಾಲು ಎನ್ನಿಸಿದ್ದು ತಂದೆಯ ದಾರಿಯಲ್ಲಿ ಸಾಗುತ್ತಲೇ, ತಮ್ಮದೇ ಇನ್ನೊಂದು ದಾರಿಯನ್ನು ಕಂಡುಕೊಳ್ಳುವುದು.

‘ಎಷ್ಟೋ ಸಲ ವೀಣೆಯನ್ನು ಬಿಟ್ಟುಬಿಡಲಾ ಅಂತಲೂ ಅನ್ನಿಸುತ್ತಿತ್ತು. ಪ್ರತಿದಿನ ಅಭ್ಯಾಸ ಮಾಡುತ್ತಿದ್ದೆ, ಕಲೀತಿದ್ದೆ. ಆದರೆ ಏನೋ ಅಷ್ಟಾಗಿ ಮುಂದೆ ಸಾಗ್ತಿರಲಿಲ್ಲ, ನಾನು ಇನ್ನೂ ಗಿಫ್ಟೆಡ್ ಆಗಿರಬೇಕಿತ್ತೇನೋ ಎನ್ನಿಸುತ್ತಿತ್ತು’ ಎಂದು ಬಾಲಕೃಷ್ಣ ನೆನಪಿಸಿಕೊಳ್ಳುತ್ತಾರೆ. ಅಷ್ಟು ಪ್ರಸಿದ್ಧ ವೈಣಿಕರ ಮಗನಾಗಿ, ಆ ಹೋಲಿಕೆಯ ಭಾರವನ್ನು ತಡೆದುಕೊಂಡು, ಸವಾಲನ್ನು ಎದುರಿಸಿ, ಸ್ವಂತಿಕೆಯ ಒಂದು ಛಾಪು ಮೂಡಿಸುವುದು ಅಷ್ಟು ಸರಳವಿರಲಿಲ್ಲ.

‘ಆರಂಭದಲ್ಲಿ ಅವರನ್ನು ಫಾಲೋ ಮಾಡಿಕೊಂಡು, ಅವರಂತೆಯೇ ನುಡಿಸುವುದಕ್ಕೆ ಪ್ರಯತ್ನಿಸ್ತಾ ಇದ್ದೆ. ನಮ್ಮ ತಂದೆಯವರಿಗೆ ಪುತಿನ ತುಂಬಾ ಆಪ್ತ ಸ್ನೇಹಿತರು. ಪುತಿನ ಅವರ ಹಲವಾರು ಗೀತ ರೂಪಕಗಳಿಗೆ ತಂದೆಯವರು ಸಂಗೀತ ನೀಡಿದ್ದರು. ಪುತಿನ ಅವರೊಮ್ಮೆ ನನಗೆ, ‘ಅಲ್ಲಯ್ಯಾ ನಿಂಗೆ 20 ವರ್ಷ, ಅವರಿಗೆ 55, ನೀನ್ಯಾಕಯ್ಯ ಐವತೈದು ವರ್ಷದವ್ರ ಹಂಗೆ ನುಡಿಸಬೇಕು? ನೀನು ಇಪ್ಪತ್ತು ವರ್ಷದ ಯುವಕನ ಹಂಗೆ ನುಡಿಸೋದನ್ನು ಬಿಟ್ಟು ನಿಮ್ಮ ತಂದೆಯ ಹಾಗೆ ಯಾಕೆ ನುಡಿಸ್ತಿದ್ದೀಯ’ ಎಂದು ಗಟ್ಟಿಯಾಗಿ ಕೇಳಿದರು.

‘ನನ್ನದು ಎಂದರೆ ಏನು? ಒಂದು ಪ್ರಖರ ಪ್ರಭಾವದಲ್ಲಿ ಬಂದುಬಿಟ್ಟರೆ, ಅದರಿಂದ ಬಿಡಿಸಿಕೊಳ್ಳೋದು ತುಂಬಾ ಕಷ್ಟ. ನಾನು ಹೊಸದಾಗಿ ಏನಾದರೂ ಮಾಡಿದರೆ ಅದು ಸ್ವೀಕೃತವಾಗಬೇಕಲ್ಲ. ಪ್ರಭಾವದಿಂದ ಕಲಿತಿರುವುದನ್ನು ಪೂರ್ಣ ಬಿಟ್ಟು, ನನ್ನತನವನ್ನು ಹೇಗೆ ಬೆರಳುಗೂಡಿಸಿಕೊಳ್ಳುವುದು ಎಂದು ಆಗ ಆಲೋಚನೆ ಶುರುವಾಯಿತು ನನಗೆ. ಫ್ರೆಶ್ ಆಗಿರಬೇಕು, ನುಡಿಸುವಾಗ ಯಾವ ಸಂಗತಿಯೂ ರಿಪೀಟ್ ಆಗಬಾರದು. ಪುನರಾವರ್ತನೆ ನಮ್ಮ ಶತ್ರು ಎನ್ನೋರು ನಮ್ಮ ತಂದೆ. ನಿನ್ನ ಕೈಯಲ್ಲಿ ಸ್ವಾಭಾವಿಕವಾಗಿ ಯಾವುದು ಬರುತ್ತೆ, ನಿನ್ನ ಅಭಿವ್ಯಕ್ತಿಗೆ ನೀನೇ ಕೆಲವೊಂದು ತಂತ್ರಗಳನ್ನು ಮೈಗೂಡಿಸಿಕೊಳ್ಳಬೇಕು ಅಂತ ತಂದೆಯವರೂ ಹೇಳುತ್ತಿದ್ದರು.

‘ಕೆಲವು ಬೇಸಿಕ್ ತಂತ್ರಗಳು ಎಲ್ಲದಕ್ಕೂ ಒಂದೇ ಇರುತ್ತವೆ. ಆದರೆ ಮತ್ತೆ ಕೆಲವು ಸಂಗತಿಗಳನ್ನು ಅಭಿವ್ಯಕ್ತಿಸುವಾಗ ನಮ್ಮದೇ ಆದ ವಿಧಾನವನ್ನು ಕಂಡುಕೊಳ್ಳಬೇಕು. ಅವರು ನುಡಿಸುವ ವಿಧಾನವನ್ನು ಅಳವಡಿಸಿಕೊಂಡಿದ್ದೆನಲ್ಲ, ಅದನ್ನು ನಿಧಾನವಾಗಿ ಕೈಬಿಡುತ್ತ, ರಾಗವನ್ನು ಶುರುಮಾಡುವ ವಿಧಾನ, ಭಾವಾಭಿವ್ಯಕ್ತಿ ಎಲ್ಲವನ್ನು ನನ್ನದೇ ರೀತಿಯಲ್ಲಿ ಶುರುಮಾಡಿಕೊಂಡೆ. ಕೆಲವೊಮ್ಮೆ ಹತಾಶೆಯೂ ಅನ್ನಿಸುತ್ತಿತ್ತು. ಆಮೇಲೆ ನಿಧಾನಕ್ಕೆ ನನ್ನ ದಾರಿಯನ್ನು ಕಂಡುಕೊಂಡೆ’ ಎಂದು ಬಾಲಕೃಷ್ಣ ತಾವು ನಡೆದುಬಂದ ಹಾದಿಯನ್ನು ತೆರೆದಿಡುತ್ತಾರೆ.

70-80ರ ದಶಕದಲ್ಲಿ ಈ ತಂದೆ-ಮಗನ ಜೋಡಿಯ ವೀಣೆಯ ಕಛೇರಿಗಳನ್ನು ಜನರು ಎದುರು ನೋಡುತ್ತಿದ್ದರು. ವರ್ಷದಲ್ಲಿ ಸರಿಸುಮಾರು ಎಪ್ಪತ್ತು ಕಛೇರಿಗಳನ್ನು ದೇಶಾದ್ಯಂತ ನೀಡುತ್ತಿದ್ದರು. ಸ್ವಾತಂತ್ರ್ಯೋತ್ಸವದ ರಜತೋತ್ಸವದ ಅಂಗವಾಗಿ 1997ರಲ್ಲಿ ಚೆನ್ನೈನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಕಾರ್ಯಕ್ರಮವೇ ತಂದೆ-ಮಗ ಜೊತೆಗೂಡಿ ನೀಡಿದ ಕೊನೆಯ ಕಛೇರಿಯಾಯಿತು. ನಂತರ ಅಕ್ಟೋಬರಿನಲ್ಲಿ ವೀಣೆಯ ದಂತಕಥೆಯಾಗಿದ್ದ ವಿದ್ವಾನ್ ದೊರೆಸ್ವಾಮಿಯವರ ಬೆರಳುಗಳು ಮೌನವಾದವು.

ಮೈಸೂರು ಬಾನಿ

ವೀಣೆ ನುಡಿಸುವಾಗ ಗಾಯನದ ಶೈಲಿಯನ್ನೇ ತೀರಾ ಅನುಕರಿಸತೊಡಗಿದರೆ, ವೀಣೆಯ ಸಾಧ್ಯತೆಗಳಿಗೆ, ಅದರ ಅನನ್ಯವಾದ ನಾದ, ಧ್ವನಿಗೆ ಮಿತಿ ಹೇರಿದಂತೆ ಆಗುತ್ತದೆ. ಆದರೆ ದೊರೆಸ್ವಾಮಿ ಅಯ್ಯಂಗಾರರು ವೀಣೆ ನುಡಿಸುವ ತಮ್ಮದೇ ವಿಧಾನವನ್ನು ಅಳವಡಿಸಿಕೊಂಡಿದ್ದರು, ಗಾಯನ ಹಾಗೂ ವಾದನದ ಶೈಲಿಗಳೆರಡರ ಹದವಾದ ಸಮನ್ವಯವದು. ಮುಂದೆ ಇದೇ ಮೈಸೂರು ಬಾನಿ ಎಂದು ಹೆಸರಾಯಿತು.

‘ಈ ಮೈಸೂರು ಬಾನಿಯ ವಿಶೇಷಗಳನ್ನು ಪದಗಳಲ್ಲಿ ವಿವರಿಸುವುದು ಕಷ್ಟ, ಅದು ಸೂಕ್ಷ್ಮವಾಗಿ ಕೇಳಿದಾಗ ಅನುಭವಕ್ಕೆ ದಕ್ಕುವಂಥದು. ಬಲಗೈಯನ್ನು ಬಳಸೋದು, ತಂತಿ ಮೀಟೋದು ತುಂಬ ಮೃದುವಾಗಿ, ಆದರೆ ದೃಢವಾಗಿ, ಸತತವಾಗಿ ಇರಬೇಕು, ನಮ್ಮ ಉಗುರಿನಿಂದಲೇ ಮೀಟಬೇಕು. ಜೊತೆಗೆ ಕೈಬೆರಳನ್ನು ಬಿಡಿಸಿ ನುಡಿಸು ಎನ್ನೋರು ನಮ್ಮ ತಂದೆ. ಅಂದರೆ ಎಡಗೈಯ ತೋರುಬೆರಳು, ಮಧ್ಯದ ಬೆರಳನ್ನು ಬಿಡಿಸಿಟ್ಟುಕೊಂಡು, ಆಯಾ ಸಂಗತಿಗೆ ಅನುಗುಣವಾಗಿ ನುಡಿಸೋದು‌’ ಎಂದು ಬಾಲಕೃಷ್ಣ ವಿವರಿಸುತ್ತಾರೆ.

ತಂದೆಯ ಮೆಚ್ಚಿಗೆಯೇ ದೊಡ್ಡ ಪ್ರಶಸ್ತಿ

ಒಮ್ಮೆ ರೇಡಿಯೊದಲ್ಲಿ ಬರುತ್ತಿದ್ದ ಬಾಲಕೃಷ್ಣರ ವೀಣಾ ಕಾರ್ಯಕ್ರಮವನ್ನು ಆಲಿಸುತ್ತ, ಅವರ ತಾಯಿಯವರು ತರಕಾರಿ ಸೋಸುತ್ತ ಕುಳಿತಿದ್ದರಂತೆ. ಅದನ್ನು ನೋಡಿದ ದೊರೆಸ್ವಾಮಿಯವರು, ‘ಅರೆ, ನನ್ನ ಕಾರ್ಯಕ್ರಮ ರೇಡಿಯೊದಲ್ಲಿ ಬರ್ತಾ ಇದ್ದರೆ, ನೀನು ಅಲ್ಲೆಲ್ಲೋ ಅಡುಗೆ ಮನೆಯಲ್ಲಿ ಇರ್ತೀಯ. ಬಾಲು ನುಡಿಸೋದನ್ನಾದ್ರೆ ಇಲ್ಲಿ ಕುಳಿತು ಗಮನವಿಟ್ಟು ಕೇಳ್ತೀಯ’ ಎಂದು ಹೆಂಡತಿಗೆ ತಮಾಷೆ ಮಾಡಿದರಂತೆ.

ಇದೇ ಅಕ್ಟೋಬರ್ 9ರಿಂದ 16ರವರೆಗೆ ನಡೆಯಲಿರುವ ಬೆಂಗಳೂರು ಗಾಯನ ಸಮಾಜದ 52ನೇ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ವಿದ್ವಾನ್ ಬಾಲಕೃಷ್ಣರಿಗೆ ‘ಸಂಗೀತ ಕಲಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕರ್ನಾಟಕ ಗಾನಕಲಾ ಪರಿಷತ್ತಿನ ‘ಗಾನಕಲಾಶ್ರೀ’ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಇವರ ಪ್ರತಿಭೆಗೆ ಸಂದ ಇನ್ನಿತರ ಪ್ರಶಸ್ತಿಗಳು.

ಈಗ ಹಲವಾರು ಪ್ರಶಸ್ತಿಯನ್ನು ಗಳಿಸಿರುವ ಬಾಲಕೃಷ್ಣರಿಗೆ ಈ ಎಲ್ಲದಕ್ಕಿಂತ ಮಿಗಿಲಾದ ಪ್ರಶಸ್ತಿ ಸಿಕ್ಕಿದ್ದು ತಂದೆಯವರಿಂದ, ಒಮ್ಮೆ ಕೆಲವು ಯುವ ಸಂಗೀತಗಾರರ ಕುರಿತು ಮಗನೊಂದಿಗೆ ಚರ್ಚಿಸುತ್ತ, ಲಯಜ್ಞಾನದ ಬಗ್ಗೆ ಹೇಳುತ್ತ, ‘ನೀನೂ ಪರವಾಗಿಲ್ಲ ಕಣಯ್ಯ’ ಎಂದು ಹೇಳಿದರಂತೆ. ಅದು ಮೊಟ್ಟಮೊದಲ ಸಲ ತಂದೆಯಿಂದ ದೊರೆತ ಮೆಚ್ಚುಗೆ. ಆಗ ಬಾಲಕೃಷ್ಣರಿಗೆ ಮೂವತ್ತೈದೋ ಮೂವತ್ತಾರೋ ವರ್ಷಗಳು. ಅವರ ಈ ಒಂದು ಮೆಚ್ಚಿಗೆಯೇ ವಿದ್ವಾನ್ ಬಾಲಕೃಷ್ಣರಿಗೆ ತಮ್ಮದೇ ದಾರಿ ಯಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯೂ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT