ಅಂಧರ ‘ಕಲಾ ಸಾಧನ’

7

ಅಂಧರ ‘ಕಲಾ ಸಾಧನ’

Published:
Updated:
Deccan Herald

ಅಲ್ಲಿರುವ ಕಲಾವಿದರೆಲ್ಲ ಅಂಧರು. ಹಾಡುವವರು, ಕೊಳಲು, ಹಾರ್ಮೋನಿಯಂ ನುಡಿಸುವವರೂ ಅಂಧರೇ. ಅದುವೇ ‘ಕಲಾ ಸಾಧನ’. ಬಡ ಅಂಧ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುವುದರ ಜತೆಗೆ ಅವರ ಜೀವನ ನಿರ್ವಹಣೆಗೆ ನೆರವಾಗುವುದು ಈ ಸಂಸ್ಥೆಯ ಉದ್ದೇಶ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅಂಧರ ವಾದ್ಯಗೋಷ್ಠಿಯನ್ನು ಈ ಸಂಸ್ಥೆ ನಡೆಸುತ್ತಿದೆ. ಪೂರ್ಣ ಅಂಧರಾಗಿರುವ ಸುರೇಶ್‌ ‘ಕಲಾ ಸಾಧನ’ದ ರೂವಾರಿ. ಅವರು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಡಿಪ್ಲೊಮಾ ಓದಿದ್ದಾರೆ. ಅವರ ಪತ್ನಿ ಶಾಂತಕುಮಾರಿ ಅವರೂ ಅಂಧರಾಗಿದ್ದು, ಪತಿಯ ಕಾಯಕದಲ್ಲಿ ಕೈಜೋಡಿಸಿದ್ದಾರೆ. ಈಗ ಸಂಗೀತವೇ ಅವರ ಬದುಕಾಗಿದ್ದು, ವಿವಿಧೆಡೆ ವಾದ್ಯಗೋಷ್ಠಿಗಳನ್ನು ನಡೆಸುವುದರ ಜತೆಗೆ ಬೆಂಗಳೂರಿನಲ್ಲಿ ಸಂಗೀತ ಕಲಿಸುವ ಕಾರ್ಯದಲ್ಲೂ ಮಗ್ನರಾಗಿದ್ದಾರೆ.

ಮೈಸೂರಿನ ಎಚ್‌.ಡಿ.ಕೋಟೆಯ ಸುರೇಶ್‌ ರಾಮನಗರದಲ್ಲಿನ ಆದಿಚುಂಚನಗಿರಿ ಮಠದ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು. ಅಲ್ಲಿ ಅಧ್ಯಯನದ ಜತೆಗೆ ಸಂಗೀತವನ್ನೂ ಕಲಿತವರು. ಸಂಗೀತದಲ್ಲಿ ಜೂನಿಯರ್‌ ಹಂತ ಮುಗಿಸಿರುವ ಅವರಿಗೆ, ಸೀನಿಯರ್‌, ವಿದ್ವತ್‌ ಹಂತಗಳನ್ನು ಕಲಿ
ಯುವ ಆಸಕ್ತಿ ಇತ್ತು. 6ನೇ ತರಗತಿ ಓದುವಾಗಲೇ (2001ರಲ್ಲಿ) ಅಪಘಾತಕ್ಕೀಡಾಗಿ ಶಾಲೆ ತೊರೆದರು.

2010– 11ರಲ್ಲಿ ಖಾಸಗಿ ಅಭ್ಯರ್ಥಿಯಾಗಿ ಎಸ್‌ಎಸ್‌ಎಲ್‌ಸಿ, ಹಾಗೂ 2012– 13ರಲ್ಲಿ ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯುಸಿ ತೇರ್ಗಡೆಯಾದ ಸುರೇಶ್‌, ನಂತರ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಡಿಪ್ಲೊಮಾ ಕೂಡ ಪಡೆದರು. ಬಳಿಕ ನಗರದ ‘ಶ್ರೀನಿಧಿ ಚಾರಿಟಬಲ್‌’ ಸಂಸ್ಥೆ ನಡೆಸುವ ಅಂಧರ ಕಂಪ್ಯೂಟರ್‌ ಕಲಿಕಾ ಕೇಂದ್ರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ಇದಲ್ಲದೆ ಕಾಲ್‌ಸೆಂಟರ್‌, ಗಾರ್ಮೆಂಟ್ಸ್‌, ಬೋರ್‌ವೆಲ್‌ ಕಚೇರಿ, ಸೌರಶಕ್ತಿ ಫಲಕಗಳ ಮಾರಾಟದ ಕಂಪನಿ, ನರ್ಸರಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

‘ವಿವಿಧ ಕಾರಣಕ್ಕೆ ಕೆಲಸ ಬಿಟ್ಟಾಗ ಅಥವಾ ಕೆಲಸ ನೀಡಿದವರು ಕೆಲಸದಿಂದ ತೆಗೆದಾಗ ಮತ್ತೊಂದು ಕೆಲಸ ಸಿಗುವ ತನಕ ಎರಡು, ಮೂರು ತಿಂಗಳು ಮನೆಯಲ್ಲಿ ಸಂಪಾದನೆಯಿಲ್ಲದೆ ಕಳೆಯುತ್ತಿದ್ದ ದಿನ
ಗಳು ತುಂಬಾ ಕಷ್ಟಕರವಾಗಿದ್ದವು. ಸಿಗುತ್ತಿದ್ದ ಕೆಲಸದಲ್ಲಿ ಸ್ವಾತಂತ್ರ್ಯ ಇರುತ್ತಿರಲಿಲ್ಲವಾದ್ದರಿಂದ ತೃಪ್ತಿ ಇರಲಿಲ್ಲ. ಬೇರೆಯವರ ಕೈಕೆಳಗೆ ಎಷ್ಟೇ ಕೆಲಸ ಮಾಡಿದರೂ ಅವರ ಇಚ್ಛೆಯಂತೆಯೇ ದುಡಿಯಬೇಕಾಗಿತ್ತು. ಹಾಗಾಗಿ ನನಗೆ ತೃಪ್ತಿಯಿರುವ, ಸಂಗೀತ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ಸುರೇಶ್‌.

‘2017ರ ನವೆಂಬರ್‌ನಲ್ಲಿ ‘ಕಲಾ ಸಾಧನ’ ಸಂಸ್ಥೆಯನ್ನು ಹುಟ್ಟು ಹಾಕಿದೆ. ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ಶಿವಮೊಗ್ಗ ಸೇರಿದಂತೆ ವಿವಿಧೆಡೆ 10 ವೇದಿಕೆ ಕಾರ್ಯಕ್ರಮಗಳಲ್ಲಿ ಸಂಸ್ಥೆಯಿಂದ ವಾದ್ಯಗೋಷ್ಠಿ ನಡೆಸಿದ್ದೇನೆ. ಅಲ್ಲದೆ ಜನದಟ್ಟಣೆಯಿರುವ (ಉದ್ಯಾನ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ವಿವಿಧ ವೃತ್ತಗಳ ಸಮೀಪ) ಕಡೆಗೆ ಹೋಗಿ ಬೆಳಿಗ್ಗೆಯಿಂದ ಸಂಜೆವರೆಗೆ  ವಾದ್ಯಗೋಷ್ಠಿಗಳನ್ನು ನಡೆಸುತ್ತೇವೆ. ಇಂಥ 60 ಕಾರ್ಯಕ್ರಮಗಳನ್ನು ಇಲ್ಲಿಯವರೆಗೆ ನೀಡಿದ್ದೇವೆ. ಈ ರೀತಿಯ ವಾದ್ಯಗೋಷ್ಠಿಗಳಲ್ಲಿ ಜನರು ನೀಡುವ ದಾನ ಅಥವಾ ದೇಣಿಗೆಯೇ ನಮಗೆ ದೊರೆಯುವ ಗೌರವಧನ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

‘ಇದರಿಂದ ನಮಗೆ ತೃಪ್ತಿ ಸಿಕ್ಕಿದೆ. ಜತೆಗೆ ಇತರ ಅಂಧ ಕಲಾವಿದರಿಗೆ ಅವರ ಕಲೆಯನ್ನು ಅಭಿವ್ಯಕ್ತಪಡಿಸಲು ವೇದಿಕೆ ದೊರೆತಂತಾಗಿದೆ. ಅವರಿಗೆ ಗೌರವಧನವೂ ದೊರೆಯುತ್ತದೆ’ ಎನ್ನುತ್ತಾರೆ ಅವರು.

ಎಲ್ಲವೂ ಬಾಡಿಗೆ

‘ನನ್ನ ಬಳಿ ಕೀಬೋರ್ಡ್‌ ಮತ್ತು ಮುರಿದಿರುವ ಡೋಲಕ್‌ ಇದೆ. ಉಳಿದೆಲ್ಲವನ್ನೂ ಬಾಡಿಗೆಗೆ ಪಡೆಯುತ್ತೇನೆ. ಮಿನಿ ಸೌಂಡ್‌ ಸಿಸ್ಟಂ ಬಾಡಿಗೆಗೆ ದಿನಕ್ಕೆ ₹2,000, ವಾಹನಕ್ಕೆ ₹ 1,500, ಹಿರಿಯ ಅಂಧ ಕಲಾವಿದರಿಗೆ ತಲಾ ₹ 500ರಂತೆ ಇಬ್ಬರಿಗೆ ₹ 1,000, ಊಟ, ಸಾರಿಗೆ ವೆಚ್ಚ ಸೇರಿ ₹ 500 ಆಗುತ್ತದೆ. ಅಂದರೆ ಒಂದು ವಾದ್ಯಗೋಷ್ಠಿಗೆ ₹ 5,500ರ ವರೆಗೆ ಖರ್ಚಾಗುತ್ತದೆ. ಸಭಿಕರಿಂದ ಇದ
ಕ್ಕಿಂತ ಹೆಚ್ಚಿನ ಹಣ ಸಂಗ್ರಹವಾದರಷ್ಟೇ ಅನುಕೂಲ
ವಾಗುತ್ತದೆ. ಇಲ್ಲದಿದ್ದರೆ ಎಲ್ಲವನ್ನೂ ಉಳಿದವರಿಗೆ ಹಂಚಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ರಸ್ತೆ ಬದಿ, ವೃತ್ತಗಳ ಸಮೀಪ, ಬಸ್‌ ನಿಲ್ದಾಣ, ರೈಲು ನಿಲ್ದಾಣಗಳ ಬಳಿ ನಡೆಸುವ ವಾದ್ಯಗೋಷ್ಠಿಗಳಲ್ಲಿ ₹5,000ಕ್ಕಿಂತ ಹೆಚ್ಚು ಸಂಗ್ರಹವಾಗಲ್ಲ. ಆದರೆ, ಇದರಿಂದ ನನಗೆ ಬೇಸರವಿಲ್ಲ. ಖಾಸಗಿಯವರ ಬಳಿ ಹೋಗಿ ಅವರ ಇಚ್ಛೆಯಂತೆ ಕೆಲಸ ಮಾಡಿದರೂ ನನ್ನ ಆದಾಯ ತಿಂಗಳಿಗೆ ₹ 5,000ದಿಂದ ₹6,000ವಷ್ಟೇ ಇರುತ್ತಿತ್ತು. ಈಗ ಅದಕ್ಕಿಂತ ಉತ್ತಮವಾಗಿದೆ. ಸ್ವಾತಂತ್ರ್ಯವೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ತೃಪ್ತಿಯಿದೆ’ ಎಂದು ತಿಳಿಸುತ್ತಾರೆ.

ಮನೆಯಲ್ಲಿ ಸಂಗೀತ ಶಾಲೆ

ನಗರದ ಕೋಡಿಪಾಳ್ಯ ಬಳಿಯ ಎಚ್‌.ಗೊಲ್ಲಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಅವರು, ಇಲ್ಲಿಗೆ ಬರುವ ಆಸಕ್ತ ಅಂಧರಿಗೆ ಸಂಗೀತ ಕಲಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಕೆಲವರು ಮನೆಗೆ ಬರುತ್ತಾರೆ. ಇನ್ನೂ ಕೆಲವರಿಗೆ ವಿಳಾಸ ಹುಡುಕುವುದು ಕಷ್ಟ. ಅಂಥವರನ್ನು ಹತ್ತಿರದ ಬಸ್‌ ನಿಲ್ದಾಣಕ್ಕೆ ಬರುವಂತೆ ಹೇಳಿ, ಅಲ್ಲಿಂದ ಇವರೇ ಖುದ್ದು ಮನೆಗೆ ಕರೆದುಕೊಂಡು ಬಂದು ಸಂಗೀತ ಹೇಳಿಕೊಡುತ್ತಾರೆ.

ಮಾಹಿತಿಗೆ: 99802 37510, 90362 27520.

ಅಂಧರ ಕುಟುಂಬ

‘ನನ್ನ ತಂದೆ– ತಾಯಿಗೆ ನಾಲ್ವರು ಮಕ್ಕಳು. ಅವರಲ್ಲಿ ನಾನು ಎರಡನೆಯವನು. ಒಬ್ಬ ಅಕ್ಕ, ಒಬ್ಬ ತಂಗಿ ಇದ್ದು, ಅವರು ಅಂಧರಾಗಿದ್ದಾರೆ. ಕೊನೆಯ ತಂಗಿಗೆ ನೇತ್ರ ದೋಷವಿಲ್ಲ. ಅಪ್ಪ, ಅಮ್ಮನಿಗೂ ಅಂಧತ್ವ ಇಲ್ಲ. ನಾವು ಮೂವರು ಅಂಧರೂ, ಅಂಧರನ್ನೇ ವಿವಾಹವಾಗಿದ್ದೇವೆ. ಒಟ್ಟಾರೆ ನಮ್ಮ ಕುಟುಂಬದಲ್ಲಿ ಆರು ಮಂದಿ ಅಂಧರಿದ್ದೇವೆ’ ಎಂದು ಬೇಸರದಿಂದಲೇ ಹೇಳುತ್ತಾರೆ ಸುರೇಶ್‌.

‘ನನ್ನ ಪತ್ನಿ ಮನೆಯಲ್ಲೂ ಇಂಥದ್ದೇ ಸ್ಥಿತಿಯಿದೆ. ಅವರ ಇಬ್ಬರು ಅಣ್ಣಂದಿರೂ ಅಂಧರು. ಅವರ ತಂದೆ–ತಾಯಿ ಅಂಧರಲ್ಲ’ ಎನ್ನುತ್ತಾರೆ ಅವರು.

‘ಏಕೆ ಹೀಗಾಗಿದೆಯೋ ಗೊತ್ತಿಲ್ಲ. ರಕ್ತ ಸಂಬಂಧಗಳಲ್ಲಿ ಆದ ವಿವಾಹಗಳಿಂದ ಹೀಗಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಕುಟುಂಬದಲ್ಲಿ ಬಹುತೇಕರನ್ನು ಅಂಧರನ್ನಾಗಿಸಿರುವ ದೇವರು ಸಂಗೀತದ ಮೂಲಕ ನಮಗೆ ಬೆಳಕು ತೋರಿದ್ದಾನೆ. ಅದರ ಮೂಲಕವೇ ಬದುಕು ಕಟ್ಟಿಕೊಳ್ಳುತ್ತೇನೆ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !