ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ಹಾಡುಗಳು, ನಮ್ಮವೂ ಆಗಲಿ

ಮಕ್ಕಳ ದಿನಾಚರಣೆ ವಿಶೇಷ
Last Updated 10 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಮಕ್ಕಳ ಮುಗ್ಧ ಮನಸ್ಸಿಗೆ ಉಪದೇಶ ಒಗ್ಗುವುದಿಲ್ಲ. ಆದರೆ ಅದೇ ಉಪದೇಶವನ್ನು ಹಾಡಿನ ರೂಪದಲ್ಲಿ ಕಥೆಯ ಪರಿಭಾಷೆಯಲ್ಲಿ ಹೇಳಿದರೆ ಹಸಿ ಗೋಡೆಯ ಮೇಲೆ ಚುಚ್ಚಿದ ಗಾಜಿನ ಚೂರಿನಂತೆ ಗಟ್ಟಿಯಾಗಿ ಕೂರುತ್ತದೆ. ಇದೇ ಉದ್ದೇಶವಿಟ್ಟುಕೊಂಡು ಖ್ಯಾತ ಸಂಗೀತಗಾರ ರಿಕ್ಕಿ ಕೇಜ್‌, ಮಕ್ಕಳ ಪದ್ಯಗಳ ಆಲ್ಬಂ ರೂಪಿಸಿದ್ದಾರೆ. ‘ನಮ್ಮ ಭೂಮಿ ಗೀತೆಗಳು’ ಎಂಬುದು ಆ ಆಲ್ಬಂ ಹೆಸರು.

‘ಮಳೆಯಿಲ್ಲ, ನನ್ನ ಬಾಯಾರಿದೆ

ಒಣಗುತ್ತಿದೆ ಗಂಟಲು

ಕಡಿದರೆ ನನ್ನನು ನಿಮಗೆಲ್ಲಿದೆ

ಪ್ರಾಣವಾಯು ಉಸಿರಾಡಲು’

ಇದು ಈ ಆಲ್ಬಂನಲ್ಲಿನ, ಕಾಡಿನ ಗಿಡಗಳ ಆತ್ಮಸ್ವಗತದಂತಿರುವ ಒಂದು ಹಾಡಿನ ಸಾಲುಗಳು. ಹೀಗೆ ಒಂದೊಂದು ಹಾಡೂ ಒಂದೊಂದು ಪರಿಸರ ರಕ್ಷಣೆಯ ನೀತಿಯನ್ನು ಉಣಿಸುವ ಹಾಗಿವೆ.

ರಿಕಿ ಕೇಜ್‌ ಅವರ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಲಭ್ಯವಿರುವ ಈ ಆಲ್ಬಂನಲ್ಲಿ 21 ಪುಟ್ಟ ಪುಟ್ಟ ಪದ್ಯಗಳಿವೆ. ನಮ್ಮ ಭೂಮಿ, ಪರಿಸರ ರಕ್ಷಣೆ, ಪ್ಲಾಸ್ಟಿಕ್‌ನಿಂದ ಆಗುವ ದುಷ್ಟಪರಿಣಾಮಗಳು, ಲಿಂಗ ತಾರತಮ್ಯದ ಅಸಂಬದ್ಧತೆ ಹೀಗೆ ಇಲ್ಲಿನ ಒಂದೊಂದು ಪದ್ಯವೂ ಒಂದೊಂದು ಉಪಯುಕ್ತ ಸಂದೇಶವನ್ನು ಒಳಗೊಂಡಿವೆ.

ಪರಿಸರ ರಕ್ಷಣೆ ಕುರಿತು ವಿಶೇಷ ಕಾಳಜಿ ಹೊಂದಿರುವ ರಿಕಿ ಕೇಜ್‌, ಈ ಹಾಡುಗಳ ಮೂಲಕ ಎಳೆಯರ ಮನಸಲ್ಲಿ ಅಗತ್ಯ ಜವಾಬ್ದಾರಿಯ ಅರಿವನ್ನು ಮೂಡಿಸಲು ಹೊರಟಿದ್ದಾರೆ.

ಈ ಆಲ್ಬಂ ಮೊದಲು ರೂಪುಗೊಂಡಿದ್ದು ಇಂಗ್ಲಿಷಿನಲ್ಲಿ. ‘ಮೈ ಅರ್ತ್‌ ಸಾಂಗ್ಸ್‌’ ಎಂಬ ಹೆಸರಿನ ಈ ಆಲ್ಭಂಗೆ ಡೊಮಿನಿಕ್‌ ಡಿ’ಕ್ರೂಸ್‌, ಲೊನ್ನೀ ಪಾರ್ಕ್‌ ಮತ್ತು ರಿಕಿ ಕೇಜ್‌ ಸಾಹಿತ್ಯ ಬರೆದಿದ್ದರು. ಇದು ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ರೂಪುಗೊಳ್ಳಬೇಕು. ತನ್ಮೂಲಕ ಎಲ್ಲ ಭಾಗದ ಮಕ್ಕಳಿಗೂ ತಲುಪಬೇಕು ಎನ್ನುವುದು ರಿಕಿ ಕನಸು. ಅದರ ಫಲವಾಗಿ ಕನ್ನಡದಲ್ಲಿ ‘ನನ್ನ ಭೂಮಿ ಗೀತೆಗಳು’ ಎಂಬ ಹೆಸರಿನಲ್ಲಿ ಮೂಡಿಬಂದಿದೆ. ಎಲ್ಲ 21 ಹಾಡುಗಳನ್ನೂ ಬಿ.ಆರ್‌. ಲಕ್ಷ್ಮಣರಾವ್‌ ಕನ್ನಡಕ್ಕೆ ಅನುವಾದಿಸಿದ್ದಾರೆ. ಚೈತ್ರಾ ಅವರು
ಹಾಡಿದ್ದಾರೆ.

ಈ ಆಲ್ಬಂನ ಪೂರ್ತಿ ವೆಚ್ಚವನ್ನು ರಿಕಿ ಕೇಜ್ ಅವರೇ ಭರಿಸಿದ್ದಾರೆ. ಒಂದು ಅಭಿಯಾನ ರೂಪದಲ್ಲಿ ಈ ಹಾಡುಗಳನ್ನು ಎಲ್ಲ ಶಾಲೆಗಳಲ್ಲಿ,
ಮಕ್ಕಳಿಗೆ ಉಚಿತವಾಗಿ ತಲುಪಿಸುವ ಕನಸೂ ಅವರಿಗೆ ಇದೆ.

*ಈ ಹಾಡುಗಳು ನಮ್ಮ ಭೂಮಿಯ ಹಾಡುಗಳು– ಅವು ನಿಮ್ಮ ಹಾಡುಗಳೂ ಹೌದು. ನನ್ನ ಹಾಡುಗಳೂ ಹೌದು. ಪ್ರತಿಯೊಬ್ಬರೂ ಇದು ನನ್ನಹಾಡು ಎಂದು ಹೇಳುವಲ್ಲಿಯವರೆಗೆ ಇವುಗಳನ್ನು ಹಾಡಿ–ಉಳಿದವರೊಂದಿಗೆ ಹಂಚಿಕೊಳ್ಳಿ

–ರಿಕಿ ಕೇಜ್‌, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ

*ಸಾಹಿತ್ಯ ಮೌಲ್ಯಗಳಿಗಿಂತ, ಮಕ್ಕಳಿಗೆ ಒಂದಿಷ್ಟು ಒಳ್ಳೆಯ ವಿಚಾರಗಳನ್ನು ತಲುಪಿಸುವ ಉದ್ದೇಶವೇ ಇಲ್ಲಿನ ಹಾಡುಗಳ ಮುಖ್ಯ ಉದ್ದೇಶ. ಆ ಉದ್ದೇಶದಲ್ಲಿ ಈ ಆಲ್ಬಂ ಸಫಲವಾಗಿದೆ. ಹಾಡುಗಳು ಚೆನ್ನಾಗಿ ಮೂಡಿಬಂದಿವೆ.

–ಬಿ.ಆರ್. ಲಕ್ಷ್ಮಣರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT