ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಯಾರಲ್‌’ ಗೀತೆಗಳ ಸಂಭ್ರಮ

Last Updated 20 ಡಿಸೆಂಬರ್ 2018, 19:39 IST
ಅಕ್ಷರ ಗಾತ್ರ

ಕ್ರಿಸ್‌ಮಸ್‌ ಗೀತೆಗಳನ್ನು ಹಾಡುವ ‘ಕ್ಯಾರಲ್‌’ ತಂಡಗಳಿಗೆ ಡಿಸೆಂಬರ್‌ನಲ್ಲಿ ಎಲ್ಲಿಲ್ಲದ ಬೇಡಿಕೆ. ನಗರದ ಬಹುತೇಕ ಚರ್ಚ್‌ಗಳು ತನ್ನದೇ ಆದ ಕ್ಯಾರಲ್‌ ತಂಡಗಳನ್ನು ಹೊಂದಿವೆ. ತಂಡದ ಸದಸ್ಯರು ಸಾಂಪ್ರದಾಯಿಕ ಮತ್ತು ಕಂಟೆಂಪರರಿ ಕ್ರಿಸ್‌ಮಸ್‌ ಗೀತೆಗಳನ್ನು ಹಾಡುವುದರ ಮೂಲಕ ಹಬ್ಬದ ಸಂಭ್ರಮ ಹೆಚ್ಚುವಂತೆ ಮಾಡುತ್ತಾರೆ.

ಸಾಮಾನ್ಯವಾಗಿ ಚರ್ಚ್‌ಗಳಲ್ಲಿ ಪ್ರತಿ ಭಾನುವಾರ ಕ್ಯಾರಲ್‌ ಬ್ಯಾಂಡ್‌ ತಂಡದವರು ಸೌಹಾರ್ದತೆ ಸಂದೇಶದ ಗೀತೆಗಳು ಹಾಡುತ್ತಾರೆ. ಕ್ರಿಸ್‌ಮಸ್‌ ಸಂದರ್ಭದಲ್ಲಿ ತಿಂಗಳ ಪೂರ್ತಿ ಚರ್ಚ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಕ್ಯಾರಲ್‌ಗಳ ಗೀತೆಗಾಯನಕ್ಕೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಡಿಸೆಂಬರ್‌ನಲ್ಲಿ ಚರ್ಚ್‌ಗಳ ಸದಸ್ಯರ ಮನೆಗಳಿಗೆ ಆಹ್ವಾನದ ಮೇರೆಗೆ ಹೋಗುವ ಈ ‘ಕ್ಯಾರಲ್‌’ ತಂಡಗಳು ಕ್ರಿಸ್‌ಮಸ್‌ ಗೀತೆಗಳನ್ನು ಹಾಡಿ, ಪರಸ್ಪರ ಶುಭಕೋರಿ ಇಡೀ ಮನೆಯನ್ನು ಹಬ್ಬಕ್ಕೆ ಸಜ್ಜಾಗುವಂತೆ ಮಾಡುತ್ತಾರೆ.

ಮೆಲುದನಿಯಲ್ಲಿ ಹಾಡುವ ಕ್ಯಾರಲ್‌ ಗೀತೆಗಳು ಏಸು ಕ್ರಿಸ್ತನ ಹುಟ್ಟು, ಬೆಳವಣಿಗೆ ಮತ್ತು ಮಹತ್ವವನ್ನು ಸಾರುತ್ತವೆ. ಇಂಗ್ಲಿಷ್‌, ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕ್ರಿಸ್‌ಮಸ್‌ ಗೀತೆಗಳನ್ನು ಹಾಡುವ ವಿವಿಧ ಕ್ಯಾರಲ್‌ ತಂಡಗಳು ನಗರದಲ್ಲಿವೆ.

ಜನಪ್ರಿಯ ಗೀತೆಗಳು: ಇಂಗ್ಲಿಷ್‌ನಲ್ಲಿ ಪ್ರಮುಖವಾಗಿ ‘ಜಾಯ್ ಟು ದಿ ವರ್ಲ್ಡ್', `ಸೈಲ್ ನೈಟ್‌ ಹೋಲಿ ನೈಟ್', `ವೈಲ್ ಷೆಫರ್ಡ್ ವಾಚ್ ದೇರ್ ಫ್ಲಾಕ್ಸ್ ಬೈ ನೈಟ್', ‘ಜಿಂಗಲ್‌ ಬೆಲ್ಸ್‌’, ‘ಒನ್ಸ್‌ ಇನ್‌ ಎ ಇಯರ್‌’, ಸೇರಿದಂತೆ ಹಲವು ಗೀತೆಗಳು ಜನಪ್ರಿಯವಾಗಿವೆ. ಅಂತೆಯೇ ಕನ್ನಡದಲ್ಲಿ, ‘ಆ ಒಂದು ದಿನದಲ್ಲಿ’, ‘ಬೆತ್ಲೆಮ್‌ ಒಂದು ನಗರ’, ‘ಧರಣಿಯ ಜನರೇ’, ‘ಅನುಪಮ ಸುಂದರ ಶಿಶುವಾಗಿ’, ‘ಬನ್ನಿರಿ ಮಿತ್ರರೇ ಹರ್ಷವ ಹೊಂದುವ’ ಹೀಗೆ ಹಲವು ಗೀತೆಗಳು ಜನಪ್ರಿಯವಾಗಿವೆ.

ಕ್ರಿಸ್‌ಮಸ್‌ ದಿನವಾದ ಡಿಸೆಂಬರ್‌ 25ರಂದು ಕ್ರಿಸ್‌ಮಸ್‌ ಗೀತೆಗಳ ಗಾಯನಕ್ಕೆ ವಿಶೇಷ ವೇದಿಕೆಗಳನ್ನು ಎಲ್ಲ ಚರ್ಚ್‌ಗಳು ಕಲ್ಪಿಸುತ್ತವೆ. ಇಂಗ್ಲಿಷ್‌ನ ಬಹುತೇಕ ಗೀತೆಗಳಿಗೆ ‘ಆರ್ಗಾನ್‌’, ‘ಪಿಯಾನೊ’, ಗಿಟಾರ್‌ ವಾದ್ಯಗಳು ಸಾಥ್‌ ನೀಡುತ್ತವೆ. ಕನ್ನಡದ ಗೀತೆಗಳಿಗೆ ಹಾರ್ಮೋನಿಯಂ, ತಬಲ, ಪಿಟೀಲು, ಗಿಟಾರ್‌, ಖಂಜಿರಾ ವಾದ್ಯಗಳು ಸಾಥ್‌ ನೀಡುತ್ತವೆ.

ಕನ್ನಡ ಭಜನಾ ಮಂಡಳಿ

ನಗರದಲ್ಲಿ ಕನ್ನಡ ಚರ್ಚ್‌ಗಳ ಮಾತೃ ಚರ್ಚ್‌ ಎಂದೇ ಕರೆಯಲಾಗುವ ಹಡ್ಸ್‌ನ ಚರ್ಚ್‌ನಲ್ಲಿ ಕನ್ನಡದಲ್ಲಿಯೇ ಹಾಡುವ ಭಜನಾ ಮತ್ತು ಗಾಯನ ಮಂಡಳಿಯೇ ಇದೆ. ಪ್ರತಿ ಭಾನುವಾರ, ಗುಡ್‌ಫ್ರೈಡೆ, ಇಸ್ಟರ್ನ್‌, ಹಾರ್ವೆಸ್ಟ್‌ ಡೆ, ಚರ್ಚ್‌ನ ವಾರ್ಷಿಕೋತ್ಸವದಂದು ಈ ತಂಡ ಸಂದರ್ಭಕ್ಕೆ ತಕ್ಕಂತೆ ಗೀತೆ ಗಾಯನಗಳನ್ನು ಪ್ರಸ್ತುತ ಪಡಿಸುತ್ತದೆ. ಅಲ್ಲದೆ ಕ್ರಿಸ್‌ಮಸ್‌ ಮಾಸದಲ್ಲಿ ವಿಶೇಷವಾಗಿ ಕ್ರಿಸ್ತನ ಜನನ, ಬೆಳವಣಿಗೆ, ಸಾಧನೆಯ ಕುರಿತ ಗಾಯನಗಳು ಇರುತ್ತವೆ ಎನ್ನುತ್ತಾರೆ ಭಜನಾ ಮಂಡಳಿಯ ಸದಸ್ಯರೂ ಆದ ಹಡ್ಸನ್‌ ಚರ್ಚ್‌ನ ಗೌರವ ಕಾರ್ಯದರ್ಶಿ ಪಿ. ಸತೀಶ್‌.

‘ನಮ್ಮ ಚರ್ಚ್‌ನ ಭಜನಾ ಮಂಡಳಿಯಲ್ಲಿ 35 ಸದಸ್ಯರಿದ್ದಾರೆ. ಕ್ರಿಸ್‌ಮಸ್‌ ಮಾಸದ ಪ್ರಯುಕ್ತ 3 ಗುಂಪುಗಳನ್ನಾಗಿ ವಿಂಗಡಿಸಿದ್ದೇವೆ. ಚರ್ಚ್‌ನ ಸದಸ್ಯರ ಆಹ್ವಾನದ ಮೇರೆಗೆ ಅವರ ಮನೆಗಳಿಗೆ ಹೋಗುವ ತಂಡದ ಸದಸ್ಯರು ಕ್ರಿಸ್‌ಮಸ್‌ ಗೀತೆಗಳನ್ನು ಪ್ರಸ್ತುತ ಪಡಿಸುತ್ತಾರೆ. ಈ ವರ್ಷ ಡಿಸೆಂಬರ್‌ 3ರಿಂದಲೇ ನಮ್ಮ ತಂಡದ ಚಟುವಟಿಕೆ ಚುರುಕುಗೊಂಡಿದ್ದು ಈ ತಿಂಗಳಾಂತ್ಯದವರೆಗೂ ನಡೆಯುತ್ತದೆ. ಪ್ರತಿ ದಿನ ಒಂದಲ್ಲ ಒಂದು ಮನೆಯಲ್ಲಿ ರಾತ್ರಿಯೆಲ್ಲ ಭಜನೆ ನಡೆಯುತ್ತದೆ. ನಮ್ಮೊಂದಿಗೆ ಇಡೀ ಕುಟುಂಬದವರು ಧ್ವನಿಗೂಡಿಸುತ್ತಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.

ಇದಲ್ಲದೆ ಚರ್ಚ್‌ನ ಸದಸ್ಯರ ಗೃಹಪ್ರವೇಶ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ನಿಧನ ಮತ್ತು ಪುಣ್ಯ ಸ್ಮರಣೆಯ ದಿನಗಳಂದು ನಮ್ಮ ತಂಡ ಸಂದರ್ಭಕ್ಕೆ ತಕ್ಕಂತೆ ಗೀತೆಗಳನ್ನು ಕನ್ನಡದಲ್ಲಿಯೇ ಪ್ರಸ್ತುತಪಡಿಸುತ್ತದೆ ಎಂದು ಅವರು ವಿವರಿಸುತ್ತಾರೆ.

ಮ್ಯೂಸಿಕ್‌ ಸ್ಕೂಲ್‌

ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಸೇಂಟ್‌ ಮಾರ್ಕ್ಸ್‌ ಕೆಥೆಡ್ರಲ್‌ ಚರ್ಚ್‌ ಕೂಡ ತನ್ನದೇ ಆದ ಕ್ಯಾರಲ್‌ ತಂಡವನ್ನು ಹೊಂದಿದೆ. ವೆಸ್ಟರ್ನ್‌ ಮ್ಯೂಸಿಕ್‌ಗೆ ಈ ತಂಡ ಒತ್ತು ನೀಡುತ್ತದೆ. ಸೇಂಟ್‌ ಮಾರ್ಕ್ಸ್‌ ಕೆಥೆಡ್ರಲ್‌ ತನ್ನದೇ ಆದ ಮ್ಯೂಸಿಕ್‌ ಸ್ಕೂಲ್‌ ಹೊಂದಿದೆ. ಚರ್ಚ್‌ನ ಪ್ರಾರ್ಥನೆ, ಆರಾಧನೆ ಸಮಯದಲ್ಲಿ ಕ್ಯಾರಲ್‌ ಗೀತೆಗಳ ಗಾಯನಕ್ಕಾಗಿ ಗಾಯಕರು, ಸಂಗೀತಗಾರರನ್ನು ಸೃಷ್ಟಿಸಲು ಈ ಚರ್ಚ್‌ 1990ರಲ್ಲಿ ಮ್ಯೂಸಿಕ್‌ ಸ್ಕೂಲ್‌ ಆರಂಭಿಸಿತು. ಅದನ್ನು ಮೊದಲು ‘ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌’ ಎಂದು ಕರೆಯಲಾಗುತ್ತಿತ್ತು. 2005ರಲ್ಲಿ ಈ ಸ್ಕೂಲ್‌ನ ಹೆಸರನ್ನು ‘ಸೇಂಟ್‌ ಮಾರ್ಕ್ಸ್‌ ಮ್ಯೂಸಿಕ್‌ ಅಕಾಡೆಮಿ’ ಎಂದು ಬದಲಿಸಲಾಯಿತು. ಇಲ್ಲಿ ಆರು ವರ್ಷದಿಂದ 60 ವರ್ಷದವರೆಗಿನವರು ಮ್ಯೂಸಿಕ್‌ ಕಲಿಕೆಯಲ್ಲಿ ತೊಡಗಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕ್ರಿಸ್‌ಮಸ್‌ ಮಾಸದಲ್ಲಿ ಸೇಂಟ್‌ ಮಾರ್ಕ್ಸ್‌ ಕೆಥೆಡ್ರಲ್‌ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಗೀತೆಗಾಯನಕ್ಕೆ ವೇದಿಕೆ ನೀಡುತ್ತದೆ ಎನ್ನುತ್ತಾರೆ ಚರ್ಚ್‌ನ ಆಡಳಿತಾಧಿಕಾರಿ ಅರುಣ್‌ ಕುಮಾರ್‌.

ಕ್ಯಾರಲ್‌ ಕುರಿತು

ಕ್ರಿಸ್ತನ ಮೂರ್ತಿಯೆದುರು ಅವನ ಆರಾಧಕರು ಹಾಡುವ ಗೀತೆಗಳಿವು. ಲಯಬದ್ಧ ಸಂಗೀತದ ಮೂಲಕ ಕ್ರಿಸ್ತನ ಜೀವನಗಾಥೆಯ ಗುಣಗಾನವನ್ನು ಇಲ್ಲಿ ಮಾಡಲಾಗುತ್ತದ. ಕ್ರಿಸ್ತನ ಹುಟ್ಟು, ದೇವ ಮಾನವನಾಗಿ ಭೂಮಿಗೆ ಬಂದ ಬಳಿಕ ಅವನ ಜೀವನದಲ್ಲಿ ನಡೆದ ಘಟನಾವಳಿಗಳ ಚರಿತ್ರೆ, ಆತನ ಸಂದೇಶಗಳನ್ನು ವಿವರಿಸುವ ಗೀತೆಗಳಿವು. ಹಾರ್ಮೋನಿಯಂ, ಕಾಂಗೋ, ಝಾಲರಿ, ಕೀಬೋರ್ಡ್‌ಗಳು ಸೇರಿದಂತೆ ವಿವಿಧ ಸಂಗೀತ ಸಾಧನಗಳ ಸಹಾಯದಿಂದ ಇದನ್ನು ಹಾಡಲಾಗುತ್ತದೆ. ಹಬ್ಬದ ಸಂತಸವನ್ನು ಅಭಿವ್ಯಕ್ತಗೊಳಿಸಲು, ಕ್ರಿಸ್‌ಮಸ್‌ ಸಂದೇಶವನ್ನು ಸಾರಲು ಕ್ರೈಸ್ತರು ಅದರಲ್ಲೂ ಯುವಕರು ತಂಡತಂಡವಾಗಿ ಮನೆ ಮನೆಗಳಿಗೆ ಹೋಗಿ ಕ್ಯಾರಲ್‌ ಹಾಡುತ್ತಾರೆ. ಸಾರ್ವಜನಿಕ ಸಮಾರಂಭಗಳನ್ನು ಏರ್ಪಡಿಸುತ್ತಾರೆ. ಈ ಹಾಡುಗಳಲ್ಲಿ ಶಾಂತಿ, ಸೌಹಾರ್ದತೆಯ ಸಂದೇಶ ಇರುತ್ತದೆ. ಈ ಹಾಡುಗಳ ಮೂಲಕ ಶಾಂತಿದೂತನಾದ ಕ್ರಿಸ್ತನನ್ನು ಜಗತ್ತಿಗೆ ಅವರು ಪರಿಚಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT