ತಾಳವಾದ್ಯಗಳ ಮಹಾಮೇಳ ‘ಬೆಂಗಳೂರು ಡ್ರಮ್ಸ್‌ ಫೆಸ್ಟಿವಲ್‌’

7
drum festival

ತಾಳವಾದ್ಯಗಳ ಮಹಾಮೇಳ ‘ಬೆಂಗಳೂರು ಡ್ರಮ್ಸ್‌ ಫೆಸ್ಟಿವಲ್‌’

Published:
Updated:
Prajavani

ಹಿಂದೆ ಆರ್ಕೆಸ್ಟ್ರಾಗಳಲ್ಲಿ ಹಾಡುಗಾರನಿಗಿಂತಲೂ ವಾದ್ಯ ನುಡಿಸುವವರೇ ಹೆಚ್ಚು ಗಮನ ಸೆಳೆಯುತ್ತಿದ್ದರು. ಅದರಲ್ಲೂ ಕೋಲನ್ನು ಕೈಯಲ್ಲಿ ಗಿರಗಿರನೆ ತಿರುಗಿಸುತ್ತಾ ಕತ್ತು ಆಡಿಸುತ್ತಾ, ಕೂದಲು ಹಾರಿಸುತ್ತಿದ್ದ ಡ್ರಮ್ಮರ್‌ ಪರಿಗೆ ಇಡೀ ಜನಸ್ತೋಮವೇ ಹುಚ್ಚೆದ್ದು ಕುಣಿಯುತ್ತಿತ್ತು.

ಡ್ರಮ್ಸ್‌ ವಾದಕರು ವಿಶ್ವವಿಖ್ಯಾತ ಗಾಯಕರ ಸಂಗೀತ ಕಾರ್ಯಕ್ರಮಗಳ ಕೇಂದ್ರಬಿಂದುಗಳಾಗುತ್ತಿದ್ದಾರೆ. ಎ.ಆರ್.ರೆಹಮಾನ್‌, ಪಂಡಿತ್‌ ರವಿಶಂಕರ್‌, ಲೂಯಿಸ್‌ ಬ್ಲಾಂಕ್‌ ಅವರಂತಹ ದಿಗ್ಗಜರಿಗೆ ರಂಜೀತ್‌ ಬ್ಯಾರೊಟ್‌ ಉಪಸ್ಥಿತಿ ಕಡ್ಡಾಯ. ಲೂಯಿಸ್ ಬ್ಯಾಂಕ್ಸ್‌ ಅವರ ಮಗ ಗಿನೊ ಬ್ಯಾಂಕ್ಸ್‌, ಜೈ ರೊ ಕವಿ, ಜಿರೊರಾಜ್‌ ಜಾರ್ಜ್‌ ಸ್ಟ್ಯಾನ್ಸಿ, ವಿನಾಯಕ್‌ ಪಾಲ್‌, ಬೆಂಗಳೂರಿನವರೇ ಆದ ಅರುಣ್‌ ಕುಮಾರ್‌ ವಿಶ್ವದ ಮುಂಚೂಣಿ ಡ್ರಮ್ಮರ್‌ಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

48 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಜಾಸ್‌ ಡ್ರಮ್ಸ್‌ ವಾದನವನ್ನು ಪರಿಚಯಿಸಿದವರು ತ್ಯಾಗರಾಜನಗರದ ಬಿ.ಎಸ್. ಸುಕುಮಾರ್‌. ‘ಡ್ರಮ್ಮರ್‌ ಬಾಬು’ ಎಂದೇ ಅವರು ಹೆಸರುವಾಸಿ.

ಅವರ ಮಗ ಅರುಣ್‌ ಕುಮಾರ್‌ ತಮ್ಮದೇ ಶೈಲಿಯ ವಾದನದಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಮೆರಿಕದಲ್ಲಿರುವ 380 ವರ್ಷಗಳಷ್ಟು ಹಳೆಯ ‘ಜಿಡ್‌ಜಿಯಾನ್‌’ ಸೇರಿದಂತೆ ಹಲವು ವಿದೇಶಿ ಸಂಗೀತ ಸಂಸ್ಥೆಗಳ ರಾಯಭಾರಿಯ ಮನ್ನಣೆಯನ್ನು ಪಡೆದವರು ಅರುಣ್‌ ಕುಮಾರ್‌. ಕರ್ನಾಟಕ ಸಂಗೀತಕ್ಕೆ ಡ್ರಮ್ಸ್‌ನ್ನು ಒಗ್ಗಿಸಿ ಯಶಸ್ವಿಯಾದ ಏಕೈಕ ವಿದ್ವಾಂಸ ಅರುಣ್‌. 

ದಕ್ಷಿಣ ಭಾರತದ ಮೊದಲ ಡ್ರಮ್ಸ್‌ ಮೇಳ
‘ಬೆಂಗಳೂರಿನಲ್ಲಿ ಎಲ್ಲಾ ಬಗೆಯ ಸಂಗೀತ ಕಾರ್ಯಕ್ರಮಗಳು ನಡೆದರೂ ವಿದೇಶಿ ಡ್ರಮ್‌ಗಳಿಗೆ ಮೀಸಲಾದ ಕಾರ್ಯಕ್ರಮಗಳು ನಡೆದದ್ದಿಲ್ಲ. ಡ್ರಮ್ಸ್‌ ವಾದನಕ್ಕಷ್ಟೇ ಮೀಸಲಾದ ‘ಮುಂಬೈ ಡ್ರಮ್‌ ಡೇ’ ವಿವಿಧ ದೇಶಗಳ ಪರ್ಕಷನ್‌ ಮತ್ತು ಡ್ರಮ್ಸ್‌ ಪಂಡಿತರನ್ನು ಸೆಳೆಯುತ್ತಿದೆ. ಅದಕ್ಕಾಗಿ ‘ಬೆಂಗಳೂರು ಡ್ರಮ್ಸ್‌ ಫೆಸ್ಟಿವಲ್‌’ ನಡೆಸಲು ನಿರ್ಧರಿಸಿದೆವು’ ಎಂದು ಹೇಳುತ್ತಾರೆ ಅರುಣ್‌ ಕುಮಾರ್.

ಇದೇ 15ರಂದು ವೈಯ್ಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಈ ಮಹಾ ಮೇಳ ನಡೆಯಲಿದೆ. ನಮ್ಮ ತಂದೆ ಸ್ಥಾಪಿಸಿದ ‘ಬಾಬು ಸ್ಕೂಲ್‌ ಆಫ್‌ ರಿದಮ್ಸ್‌’ ಈ ಉತ್ಸವವನ್ನು ಆಯೋಜಿಸಿದೆ. ಮುಂದಿನ ವರ್ಷಗಳಲ್ಲಿ ದೇಶ ವಿದೇಶದ ಮಹಿಳಾ ಡ್ರಮ್ಮರ್‌ಗಳನ್ನೂ ಆಹ್ವಾನಿಸಲಿದ್ದೇವೆ’ ಎಂದು ಅವರು ವಿವರಿಸುತ್ತಾರೆ. 

ಅಂದು ರಾತ್ರಿ 7ಕ್ಕೆ ರಂಜೀತ್‌ ಬ್ಯಾರೊಟ್‌ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸುಕುಮಾರ್‌ ಮತ್ತು ಅರುಣ್‌ ಅವರಲ್ಲದೆ ರಂಜೀತ್‌ ಬ್ಯಾರೊಟ್‌, ಗಿನೊ ಬ್ಯಾಂಕ್ಸ್‌, ಜೈ ರೊ ಕವಿ, ಜಿಯೊರಾಜ್‌ ಜಾರ್ಜ್‌ ಸ್ಟ್ಯಾನ್ಸಿ, ವಿನಾಯಕ್‌ ಪಾಲ್‌ ಕೂಡಾ ತಮ್ಮ ಡ್ರಮ್ಸ್‌ ಕೈಚಳಕವನ್ನು ಪ್ರದರ್ಶಿಸಲಿದ್ದಾರೆ. ಟಿಕೆಟ್‌ಗಳು ಆನ್‌ಲೈನ್‌ನಲ್ಲಿ (www.bookmyshow) ಲಭ್ಯವಿದೆ. 

ಹಲವು ಬಗೆಯ ವಿದೇಶಿ ತಾಳವಾದ್ಯ ಮತ್ತು ಡ್ರಮ್ಸ್‌ ವಿದ್ವಾಂಸರನ್ನು ಒಂದೇ ವೇದಿಕೆಯಲ್ಲಿ ಕಾಣುವುದು ಮತ್ತು ಅವರ ಮಾಯಾವಿ ಬೀಟ್‌ಗಳಿಗೆ ಸಾಕ್ಷಿಯಾಗುವುದು ರೋಮಾಂಚಕ ಅನುಭವ.

‘ಡ್ರಮ್ಮರ್‌ ಬಾಬು’
ತ್ಯಾಗರಾಜನಗರದ ಬಿ.ಎಸ್.ಸುಕುಮಾರ್‌ ಬಾಬು ಯಾನೆ ‘ಡ್ರಮ್ಮರ್‌ ಬಾಬು’ 70–80ರ ದಶಕದಲ್ಲಿ ನಗರದ ಆರ್ಕೆಸ್ಟ್ರಾಗಳ ಬೆನ್ನುಹುರಿಯಾಗಿದ್ದರು. ಅವರು, ನಗರದ ಮಟ್ಟಿಗೆ ಬಹಳ ಅಪರೂಪದ ಜಾಸ್‌ ಡ್ರಮ್ಸ್‌ ನುಡಿಸುತ್ತಿದ್ದುದು ಇದಕ್ಕೆ ಕಾರಣ. 
ಗಾಂಧಿ ಬಜಾರ್‌ನಲ್ಲಿ ರೂಬಿ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯೂಸಿಕ್‌ನಲ್ಲಿ ಜಾಸ್‌ ಡ್ರಮ್ಸ್‌ ವಾದನ ಕಲಿತು ಆರ್ಕೆಸ್ಟ್ರಾಗಳಲ್ಲಿ ನುಡಿಸುತ್ತಿದ್ದರು ಡ್ರಮ್ಮರ್‌ ಬಾಬು. 70ರ ದಶಕದಲ್ಲಿ ನಗರದಲ್ಲಿ ಹೆಸರುವಾಸಿಯಾಗಿದ್ದ ‘ಕೊಲಂಬಸ್‌’ ಮತ್ತು ‘ಬ್ಲೂ ಬಾಯ್ಸ್‌’ ಎಂಬ ಆರ್ಕೆಸ್ಟ್ರಾ ತಂಡಗಳ ಜೊತೆ ತಿಂಗಳ ಮೂವತ್ತೂ ದಿನ ದೇಶದುದ್ದಕ್ಕೂ ಕಾರ್ಯಕ್ರಮ ನೀಡುತ್ತಿದ್ದರು.

2004ರಲ್ಲಿ ಅವರು ಆರಂಭಿಸಿದ ‘ಬಾಬು ಸ್ಕೂಲ್‌ ಆಫ್‌ ರಿದಮ್ಸ್‌’ಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಇದೆ. ಲಂಡನ್‌ನ ವಿಶ್ವವಿಖ್ಯಾತ ಟ್ರಿನಿಟಿ ಸ್ಕೂಲ್‌ ಆಫ್‌ ಡ್ರಮ್ಸ್‌ ಮಾನ್ಯತೆಗಾಗಿ ಬೆಂಗಳೂರಿನಲ್ಲಿ ಪರೀಕ್ಷೆ ನಡೆಸುವ ಏಕೈಕ ಸಂಸ್ಥೆ ಇದು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !