ಭಾನುವಾರ, ನವೆಂಬರ್ 29, 2020
25 °C
ಮಾಜಿ ಮೇಯರ್ ಸಖತ್ ಸಿಂಗರ್

PV Web Exclusive: ಗಾಯಕ ಈ ನಾಯಕ ಹಾಡಿದರೆ ಲಕ್ಷಲಕ್ಷ ವಿವ್ಸ್‌

ಎಂ. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

ರಾಜಕಾರಣಿಗಳು ಭರ್ಜರಿ ಭಾಷಣ ಮಾಡಿದರೆ ಸಾವಿರಾರು ಓಟು ಬೀಳುವುದು ಸಾಮಾನ್ಯ, ಆದರೆ ಇಲ್ಲೊಬ್ಬ ರಾಜಕಾರಣಿ ಹಾಡಿದರೆ ಲಕ್ಷಾಂತರ ವೀಕ್ಷಣೆ (views‌) ಸಿಗುತ್ತವೆ. ಪ್ರಯಾಣದಲ್ಲಿ ಗಾಯನ ಇವರ ವೈಶಿಷ್ಟ್ಯತೆ. ಕರೋಕೆಯೊಂದಿಗೆ (ಹಿನ್ನೆಲೆ ಸಂಗೀತ) ಹಳೆಯ ಹಿಂದಿ ಮತ್ತು ಕನ್ನಡ ಹಾಡುಗಳನ್ನು ಹಾಡುತ್ತಿದ್ದರೆ ಸಂಗೀತಪ್ರಿಯರು ತಲೆತೂಗಿಸದಿರರು.

ಇವರ ಹೆಸರು ಅನಿಲ್ ಕುಮಾರ ಪಾಟೀಲ; ಕಾಂಗ್ರೆಸ್‌ನ ಧಾರವಾಡ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ. ಮೂವತ್ತು ವರ್ಷಗಳಿಂದ ರಾಜಕಾರಣದಲ್ಲಿರುವ ಅವರು ಹುಬ್ಬಳ್ಳಿ– ಧಾರವಾಡದ ಮೇಯರ್ ಆಗಿ ಸಹ ಕೆಲಸ ಮಾಡಿದ್ದಾರೆ.

ರಾಜಕೀಯ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ಧಾರವಾಡದಿಂದ ಆಗಾಗ್ಗೆ ಬೆಂಗಳೂರಿಗೆ ಹಾಗೂ ಬೆಳಗಾವಿಗೆ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಗಾನದೊಂದಿಗೆ ಯಾನವನ್ನು ಸೊಗಸಾಗಿಸುತ್ತಾರೆ. ಇತ್ತೀಚೆಗೆ ಇವರು ಹಾಡಿರುವ ಹಾಡುಗಳನ್ನು ಸಾವಿರಾರು ಜನರು ಫೇಸ್‌ಬುಕ್‌ನಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತ‍ಪಡಿಸಿದ್ದಾರೆ.

ಖ್ಯಾತ ಗಾಯಕ ಕಿಶೋರ್ ಅವರು ಹಾಡಿರುವ ಹಾಗೂ ದೇಶದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ನಟಿಸಿರುವ ‘ಆರಾಧನಾ’ ಚಿತ್ರದ ’ಮೇರಿ ಸಪ್ನೋಂಕಿ ರಾನಿ ಕಬ್‌ ಆಯೇಗಿ ತು’ ಹಾಡನ್ನು ಪಾಟೀಲರು ಹಾಡಿದ್ದು ಫೇಸ್‌ಬುಕ್‌ನಲ್ಲಿ ಇದಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರೋಬ್ಬರಿ ಆರು ಲಕ್ಷ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ.

ಖ್ಯಾತ ಗಾಯಕ ಮಹಮ್ಮದ್‌ ರಫಿ ಅವರು ಹಾಡಿರುವ ‘ದಿ ಟ್ರೇನ್‘ ಚಿತ್ರದ ‘ಗುಲಾಬಿ ಆಂಖೆ ಜೊ ತೇರಿ ದೇಖಿ’, ’ಆ್ಯನ್ ಈವ್ನಿಂಗ್‌ ಇನ ಪ್ಯಾರಿಸ್’ ಚಿತ್ರದ ‘ಆಸಮಾನ್‌ಸೆ ಆಯಾ ಫರಿಷ್ತಾ, ಪ್ಯಾರಕ ಸಬಕ್‌ ಸಿಖಲಾನೆ..’ ಮುಂತಾದ ಜನಪ್ರಿಯ ಹಳೆಯ ಹಿಂದಿ ಚಿತ್ರಗೀತೆಗಳನ್ನು ಹಾಡಿದ್ದಾರೆ. ಪ್ರಣಯರಾಜ ಶ್ರೀನಾಥ್ ಅವರು ನಟಿಸಿರುವ ಮಾನಸ ಸರೋವರ ಚಿತ್ರದ ‘ನೀನೆ ಸಾಕಿದ ಗಿಣಿ ನಿನ್ನ ಮುದ್ದಿನ ಗಿಣಿ’ ಇವರ ನೆಚ್ಚಿನ ಗೀತೆಗಳಲ್ಲೊಂದು.


ಅನಿಲ್ ಕುಮಾರ ಪಾಟೀಲ

200 ಹಾಡು ಬಾಯಿ ಪಾಠ: ಕನ್ನಡ ಹಾಗೂ ಹಿಂದಿನ ಹಳೆಯ ಸುಮಾರು 200 ಹಾಡುಗಳು ಇವರಿಗೆ ಬಾಯಿಪಾಠ. ಒಮ್ಮೆ ಹಾಡಲು ಆರಂಭಿಸಿದರೆ ಒಂದೇ ಒಂದು ಪದವೂ ತಪ್ಪದಂತೆ ಪೂರ್ಣ ಹಾಡನ್ನು ಹಾಡುತ್ತಾರೆ. ಹಾಡಿ ಹಾಡಿಯೇ ಸಾಹಿತ್ಯ ಬಾಯಿಪಾಠವಾಗಿದೆ ಎಂದು ಅವರು ಹೇಳುತ್ತಾರೆ.

ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ನೇಹಿತರು ಸಹ ಪಾಟೀಲರ ಗಾಯನವನ್ನು ಮೆಚ್ಚಿಕೊಂಡು ಹುರಿದುಂಬಿಸುತ್ತಿದ್ದಾರೆ. ಗಾಯನ ಪ್ರಿಯರಿಂದ ಸಿಗುತ್ತಿರುವ ಪ್ರತಿಕ್ರಿಯೆಗೆ ಇನ್ನಷ್ಟು ಥ್ರಿಲ್‌ ಆಗಿರುವ ಅವರು ಯೂಟ್ಯೂಬ್‌ನಲ್ಲಿಯೂ ಹಾಡುಗಳನ್ನು ಅಪ್‌ಲೋಡ್ ಮಾಡಲು ಸಿದ್ಧತೆ ನಡೆಸಿದ್ದಾರೆ.

‘ಶಾಲಾ ಕಾಲೇಜು ದಿನಗಳಲ್ಲಿಯೇ ಸಿನಿಮಾ ಹಾಗೂ ಸಿನಿಮಾ ಹಾಡುಗಳ ಬಗ್ಗೆ ಅತೀವ ಆಸಕ್ತಿ ಬೆಳೆಯಿತು. ಹಿಂದಿ ಮತ್ತು ಕನ್ನಡ ಸಿನಿಮಾಗಳನ್ನು ತಪ್ಪದೆ ನೋಡುತ್ತಿದ್ದೆ, ಹಾಡುಗಳನ್ನು ಕಲಿಯುತ್ತಿದ್ದೆ. ಕಾಲೇಜಿನಲ್ಲಿ ಇದ್ದಾಗ ಸಹ ಹಾಡುತ್ತಿದ್ದೆ. 90ರ ದಶಕದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ನಂತರವೂ ಹಾಡುವ ಗೀಳು ಹೋಗಲಿಲ್ಲ. ಮನೆಯಲ್ಲಿ ಟೇಪ್‌ರೆಕಾರ್ಡರ್ ಆನ್ ಮಾಡಿ ಅದರೊಂದಿಗೆ ಹಾಡುತ್ತಿದ್ದೆ. ಯಾವಾಗ ಕರೋಕೆ ಬಂತೋ ಆಗಿನಿಂದ ನನ್ನ ಗಾಯನ ಇನ್ನೊಂದು ತಿರುವು ಪಡೆಯಿತು. ನೆಚ್ಚಿನ ಗೀತೆಯ ಕರೋಕೆಯೊಂದಿಗೆ ಹಾಡಲು ಆರಂಭಿಸಿದೆ’ ಎನ್ನುತ್ತಾರೆ ಅನಿಲ್ ಕುಮಾರ್ ಪಾಟೀಲ.

‘ಮಹಮ್ಮದ್ ರಫಿ, ಕಿಶೋರ್ ಕುಮಾರ್ ಹಾಗೂ ಮುಖೇಶ್ ಅವರು ಹಿಂದಿಯಲ್ಲಿ ನನ್ನ ನೆಚ್ಚಿನ ಗಾಯಗರು. ಪಿ.ಬಿ. ಶ್ರೀನಿವಾಸ್‌ ಹಾಗೂ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಹಾಡುಗಳೆಂದರೆ ಇಷ್ಟ. ಈ ಗಾಯಕರ ಅತ್ಯುತ್ತಮ ಸಾಹಿತ್ಯದ ಹಾಡುಗಳನ್ನು ಆಯ್ಕೆ ಮಾಡಿಕೊಂಡು ಹಾಡುತ್ತಿದ್ದೇನೆ. ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ನಿಧನರಾದಾಗ ಗಾಯನದ ಮೂಲಕವೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ’ ಎನ್ನುತ್ತಾರೆ ಅವರು.

‘ಸಕ್ರಿಯ ರಾಜಕಾರಣಿ ಆಗಿರುವುದರಿಂದ ಗಾಯನಕ್ಕೆ ಪ್ರತ್ಯೇಕ ಸಮಯ ಸಿಗುವುದಿಲ್ಲ. ಆದ್ದರಿಂದ ಕಾರಿನಲ್ಲಿ ಪ್ರಯಾಣಿಸುವ ವೇಳೆ ಹಾಡುತ್ತೇನೆ. ದೂರ ಪ್ರಯಾಣದ ದಾರಿಯಲ್ಲಿ ಹಾಡುವುದು ನನಗಿಷ್ಟ. ಇದರಿಂದ ಪ್ರಯಾಣವೂ ಸುಖಕರವಾಗಿರುತ್ತದೆ, ಕಾರಿನಲ್ಲಿ ಹಾಡಿದ್ದನ್ನು ನಮ್ಮವರೇ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದರು. ಅದನ್ನು ನೋಡಿದವರೆಲ್ಲರೂ ಮೆಚ್ಚಿಕೊಂಡರು. ಆ ನಂತರ ಪ್ರಯಾಣದಲ್ಲಿ ಹಾಡುವ ಎಲ್ಲ ಹಾಡುಗಳನ್ನು ಅಪ್‌ಲೋಡ್ ಮಾಡಲು ಆರಂಭಿಸಿದೆ’ ಎಂದು ತಿಳಿಸಿದರು.

ರೇಸುಗಾರ ಪಾಟೀಲ: ಅನಿಲ್ ಕುಮಾರ ಪಾಟೀಲ ಅವರು ಹಾಡುಗಾರ ಮಾತ್ರವಲ್ಲ ಮಾಜಿ ರೇಸುಗಾರರೂ ಹೌದು. ಕಾಲೇಜು ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಬೈಕ್ ರೇಸ್‌ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದಾರೆ. ಫಿಟ್‌ನೆಸ್‌ ಬಗ್ಗೆ ಅಪಾರ ಕಾಳಜಿ ಇರುವ ಅವರು ಪ್ರತಿದಿನ ತಪ್ಪದೇ ವ್ಯಾಯಾಮ ಮಾಡುತ್ತಾರೆ.

ಸುದೀರ್ಘ ರಾಜಕಾರಣ ಮಾಡಿ ಧಾರವಾಡ ಜಿಲ್ಲೆಯ ಕಾಂಗ್ರೆಸ್‌ ನಾಯಕರಾಗಿ ಗುರುತಿಸಿಕೊಂಡಿರುವ ಅವರು, ಗಾಯನದ ಮೂಲಕ ಗಾಯಕರಾಗಿಯೂ ಸದ್ದು ಮಾಡುತ್ತಿದ್ದಾರೆ. ‘ನಿಮ್ಮ ಹಾಡು ಚೆನ್ನಾಗಿತ್ತು’ ಎಂದು ಯಾರಾದರೂ ಹೇಳಿದರೆ ಬಹಳ ಸಂತೋಷವಾಗುತ್ತದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು