ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ರಹಿತ ಸ್ವೀಕೃತಿ ವ್ಯವಸ್ಥೆ ಇಂದಿನಿಂದ

ಚಾಮರಾಜನಗರ ನಗರಸಭೆ: ಇನ್ನು ಮುಂದೆ ಬ್ಯಾಂಕ್ ಮೂಲಕ ತೆರಿಗೆ ಪಾವತಿ
Last Updated 2 ಏಪ್ರಿಲ್ 2018, 7:11 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ನಗರಸಭೆಯಲ್ಲಿ ಇಂದಿನಿಂದ ನಗದು ರಹಿತ ಸ್ವೀಕೃತಿ ಪದ್ಧತಿಯನ್ನು ಜಾರಿಗೊಳಿಸಲಾಗಿದೆ.ಏಪ್ರಿಲ್ 2ರಿಂದ ಕೆ.ಎಂ.ಎಫ್. 14 ಕೈಬರಹ ರಸೀದಿ ಪುಸ್ತಕಗಳನ್ನು ನಗರಸಭೆ ಸಂಪೂರ್ಣವಾಗಿ ರದ್ದುಗೊಳಿಸಿದ್ದು, ಸಾರ್ವಜನಿಕರು ನಗರಸಭೆಗೆ ಪಾವತಿಸುವ ಶುಲ್ಕ, ತೆರಿಗೆಗಳ ನಗದು, ಡಿ.ಡಿ, ಚೆಕ್‌ಗಳನ್ನು ಸಿಬ್ಬಂದಿಗೆ ನೀಡಬಾರದು. ಬ್ಯಾಂಕ್ ಮೂಲಕವೇ ಪಾವತಿಸಬೇಕು.

ಏನಿದು ಪದ್ದತಿ?: ನಗರಸಭೆ ವೆಬ್‌ಸೈಟ್ www.chamarajanagaracity.mrc.gov.inನ ಮುಖಪುಟದಲ್ಲಿ ಸ್ವೀಕೃತಿ ತಂತ್ರಾಂಶವನ್ನು ಅಳವಡಿಸಲಾಗಿದ್ದು, ತಂತ್ರಾಂಶದ ಲಿಂಕ್ ಉಪಯೋಗಿಸಿ ಸಾರ್ವಜನಿಕರೇ ನಗರಸಭೆಗೆ ಪಾವತಿಸಬಹುದಾದ ತೆರಿಗೆ ಶುಲ್ಕಗಳ ಚಲನ್‌ಗಳನ್ನು ಜನರೇಟ್ ಮಾಡಿಕೊಂಡು, ಭಾರತೀಯ ಸ್ಟೇಟ್‌ ಬ್ಯಾಂಕ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಂಟರ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಬ್ಯಾಂಕ್ ಶಾಖೆಗಳಲ್ಲಿ ಹಣ ಪಾವತಿಸಬಹುದು.ನಗರಸಭೆ ಆವರಣದಲ್ಲಿ ತೆರೆಯಲಾದ ಕೌಂಟರ್‌ನಲ್ಲಿ ತಮ್ಮ ಆಸ್ತಿಗೆ ಸಂಬಂಧಿಸಿದ ಆಸ್ತಿ ತೆರಿಗೆ, ನೀರಿನ ತೆರಿಗೆ, ಉದ್ದಿಮೆ ಪರವಾನಗಿ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ ಮತ್ತು ಇತರೆ ಶುಲ್ಕಗಳ ಚಲನ್‍ಗಳನ್ನು ನಗರಸಭೆ ಸಿಬ್ಬಂದಿಯ ಸಹಾಯದಿಂದ ಪಡೆದುಕೊಂಡು ಮೇಲಿನ ಬ್ಯಾಂಕ್ ಶಾಖೆಗಳಲ್ಲಿ ಜಮಾ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಇ-ಪಾವತಿ, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಇಚ್ಚಿಸುವ ಸಾರ್ವಜನಿಕರು ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟರ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ದೇನಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ವಿಜಯಾ ಬ್ಯಾಂಕ್‍ನ ಯಾವುದೇ ಶಾಖೆಗಳಲ್ಲಿ ಪಾವತಿಸಬಹುದಾಗಿದೆ.ಮಧ್ಯವರ್ತಿಗಳಿಗೆ, ನಗರಸಭೆ ಸಿಬ್ಬಂದಿಗೆ ಹಣ, ಡಿ.ಡಿ ಅಥವಾ ಚೆಕ್ ನೀಡಿ ಮೋಸ ಹೋದರೆ ಅವರ ನಷ್ಟಕ್ಕೆ ನಗರಸಭೆ ಹೊಣೆಯಲ್ಲ ಎಂದು ನಗರಸಭೆ ಆಯುಕ್ತರು ತಿಳಿಸಿದ್ದಾರೆ.

ಏನಿದರ ಲಾಭ?

ಹೊಸ ಪದ್ಧತಿಯ ಜಾರಿಯಿಂದ ಸಾರ್ವಜನಿಕ ಸ್ನೇಹಿ ಮತ್ತು ಪಾರದರ್ಶಕ ಇ-ಆಡಳಿತ ಜಾರಿಯಾಗುತ್ತದೆ. ಈ ಮೊದಲು ಸಿಬ್ಬಂದಿಗೆ ಹಣ ನೀಡಿ ರಸೀದಿ ನೀಡುವ ವ್ಯವಸ್ಥೆ ಇತ್ತು. ಆದರೆ, ಕೆಲವು ಸಿಬ್ಬಂದಿ ನಕಲಿ ರಸೀದಿ ನೀಡಿ ಸಾರ್ವಜನಿಕರನ್ನು ವಂಚಿಸಬಹುದಾದ ಸಾಧ್ಯತೆ ಅಧಿಕ ಇತ್ತು. ಬ್ಯಾಂಕ್‌ ಮೂಲಕ ತೆರಿಗೆ ಪಾವತಿಸುವ ಹೊಸ ವ್ಯವಸ್ಥೆಯಿಂದ ಇಂತಹ ವಂಚನೆಗಳನ್ನು ತಡೆಗಟ್ಟಬಹುದು.

ಹೊಸ ಪದ್ಧತಿಯ ಅಂಶಗಳು

*  www.chamarajanagaracity.mrc.gov.in ನಲ್ಲಿ ಸ್ವೀಕೃತಿ ಚಲನ್ ಲಭ್ಯ

* ಇಲ್ಲಿ ಚಲನ್ ಪಡೆದು ಬ್ಯಾಂಕ್‌ನಲ್ಲಿ ಹಣ ಪಾವತಿ

* ಇ-ಪಾವತಿ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕವೂ ಪಾವತಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT