ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್. ಬಾಲಿಗೆ ಗಾಯನಗಂಗಾ ಪ್ರಶಸ್ತಿ

ಎಸ್.ಬಾಲಿ ಬಾಲಸುಬ್ರಹ್ಮಣ್ಯ ಸಂಗೀತ ನಿರ್ದೇಶಕ ಲಯವಾದ್ಯ
Last Updated 14 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಎಂಬ ಸಂಗೀತದ ರಿಯಾಲಿಟಿ ಶೋದಲ್ಲಿ ಜೂರಿ ಪ್ಯಾನೆಲ್‌ನಲ್ಲಿ ಕುಳಿತಿರುವ ಒಬ್ಬ ಹಿರಿಯ ವಿದ್ವಾಂಸ ಯಾರಿಗಾದರೂ 100ಕ್ಕೆ 100 ಅಂಕ ಕೊಟ್ಟರೆ ಆ ಹಾಡುಗಾರನಿಗೆ ಸ್ವರ್ಗಕ್ಕೆ ಮೂರೇ ಗೇಣು. ಅವರೇ ಎಸ್. ಬಾಲಿ (ಬಾಲಸುಬ್ರಹ್ಮಣ್ಯ).

ಮೃದಂಗ, ತಬಲಾ, ಢೋಲಕ್‌, ಖಂಜರಿ, ಢೋಲ್ಕಿ, ಖೋಲ್‌ ಹೀಗೆ ಹಲವು ಲಯವಾದ್ಯಗಳ ನುಡಿಸಾಣಿಕೆಯಲ್ಲಿ ಪಕ್ವ ಅನುಭವ ಹೊಂದಿದ ಅಪರೂಪದ ವಿದ್ವಾಂಸ. ಶಂಕರ್‌ನಾಗ್‌ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು, ಸುಗಮ ಸಂಗೀತ ಕ್ಷೇತ್ರದ ಅನುಭವಿಗಳು ಬಾಲಿ ಅವರನ್ನು‘ರಿದಂ ಕಿಂಗ್’ ಎಂದು ಕರೆಯುತ್ತಿದ್ದರಂತೆ. ಸುಗಮ ಸಂಗೀತ ಗಾಯನದಲ್ಲಿಯೂ ಬಾಲಿ ಅನುಭವಿ.

ಶಂಕರನಾಗ್‌ ಅವರ ಸಂಕೇತ್‌ ಸ್ಟುಡಿಯೊ ಆರಂಭದ ಸವಾಲುಗಳನ್ನು ಎದುರಿಸಲು ಹೆಗಲೆಣೆಯಾಗಿ ನಿಂತವರು ಎಸ್.ಬಾಲಿ (ಬಾಲಸುಬ್ರಹ್ಮಣ್ಯ). ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್‌, ಆಯೋಜಕರು ಮತ್ತು ನಿರ್ದೇಶಕರು ಎಂಬ ಹೆಗ್ಗಳಿಕೆ ಬಾಲಿ ಅವರದು.

ಬಾಲಸುಬ್ರಹ್ಮಣ್ಯ ತಂದೆ ‘ಬಯಾಲಜಿ ಸುಂದರೇಶನ್‌’ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್‌. ತಾಯಿ ಸಾವಿತ್ರಿ. ಮನೆಯಲ್ಲಿನ ಸಂಗೀತದ ವಾತಾವರಣವಿತ್ತು. ಬಾಳಪ್ಪ ಹುಕ್ಕೇರಿ, ಕಾಳಿಂಗರಾವ್‌, ಮೈಸೂರು ಅನಂತಸ್ವಾಮಿ, ಶ್ಯಾಮಲಾ ಭಾವೆ, ಸಿ.ಅಶ್ವತ್ಥ್‌, ರತ್ನಮಾಲಾ ಪ್ರಕಾಶ್‌ ಅವರಿಗೆ ಬಾಲಿ ಸಾಥ್‌ ನೀಡುತ್ತಿದ್ದುದು.

‘ಶಾಸ್ತ್ರೀಯವಾಗಿ ಕಲಿತದ್ದು ಮೃದಂಗ ಮಾತ್ರ. ಇತರ ಎಲ್ಲಾ ವಾದ್ಯಗಳ ನುಡಿಸುವುದನ್ನು ನಾನೇ ಸ್ವತಃ ಕಲಿತಿರುವುದು. ಆಸಕ್ತಿಯೇ ಗುರು ಅಂತಾರಲ್ಲ ಹಾಗೆ’ ಎಂದು ಅವರು ನಗುತ್ತಾರೆ.

ಸುಗಮ ಸಂಗೀತ, ಚಿತ್ರ ಸಂಗೀತ ಮತ್ತು ಲಯವಾದ್ಯಗಳ ಬಳಕೆ ಕುರಿತು ಖಡಕ್‌ ಮಾತಿನಿಂದ ವಿಶ್ಲೇಷಿಸುವುದು ಬಾಲಿ ಅವರ ಗುಣ. ‘ನಮ್ಮ ಜ್ಞಾನವನ್ನು ಹಂಚಿಕೊಳ್ಳುವಾಗ ಮುಲಾಜು ಮಾಡಿದರೆ ಅದರ ಫಲಾನುಭವಿಗಳಿಗೆ ವಂಚನೆ ಮಾಡಿದಂತಾಗುತ್ತದೆ. ಹಾಗಾಗಿ ಅನಿಸಿದ್ದನ್ನು ನೇರವಾಗಿ ಹೇಳುವುದು ನನ್ನ ಗುಣ’ ಎಂದು ನಗುತ್ತಾರೆ ಬಾಲಿ.

‘ಸಂಕೇತ್‌ ಸ್ಟುಡಿಯೊ ಆರಂಭದ ದಿನಗಳಲ್ಲಿ ಶಂಕರ್‌ನಾಗ್‌ ಗಾಯಕರು ಬೇಕು ಎಂದು ಅರ್ಜಿ ಆಹ್ವಾನಿಸಿ ಜಾಹೀರಾತು ಪ್ರಕಟಿಸಿದಾಗ 300ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಜಿ.ಕೆ. ವೆಂಕಟೇಶ್‌ ಅವರ ಸಲಹೆಯಂತೆ ಶಂಕರ್‌ನ ಭೇಟಿಯಾಗಿ ಪ್ರತಿಭಾವಂತರನ್ನಷ್ಟೇ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದೆ. ಅದು ಶಂಕರನಿಗೆ ಇರುಸುಮುರುಸು ಮಾಡಿತ್ತು. ಆದರೆ ಕೆಲವೇ ದಿನಗಳಲ್ಲಿ ನನ್ನ ಮಾತು ನಿಜ ಎಂಬುದು ಅವನಿಗೆ ಅರ್ಥವಾಗಿ ಸ್ಟುಡಿಯೊದ ಪ್ರತಿ ಹೆಜ್ಜೆಗಳಲ್ಲೂ ನನ್ನ ಸಲಹೆ ತೆಗೆದುಕೊಂಡಿದ್ದ’ ಎಂದು ನೆನಪಿಸಿಕೊಳ್ಳುತ್ತಾರೆ ಬಾಲಿ.

1974–75ರಲ್ಲಿ ಕರ್ನಾಟಕ ಫಿಲಂ ಇಂಡಸ್ಟ್ರಿ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ನಿರ್ಮಿಸಿದ್ದ ಸಿನಿಮಾಗಳಿಗೂ ಸಂಗೀತ ನೀಡಿದ್ದರು. ಆಗಿನ ದಿನಗಳಲ್ಲಿ ಯಾವುದೇ ಸಂಗೀತ ಕಾರ್ಯಕ್ರಮ, ರೆಕಾರ್ಡಿಂಗ್‌ಗೆ ಬಾಲಿ ಇರಲೇಬೇಕು ಎಂಬಷ್ಟು ಬೇಡಿಕೆಯಲ್ಲಿದ್ದರು ಬಾಲಿ. ಈಗ ರೆಕಾರ್ಡಿಂಗ್‌ಗೆ ತಂತ್ರಜ್ಞಾನ ಆಧರಿತ ಉಪಕರಣಗಳು ಬಂದಿರುವ ಕಾರಣ ನಮ್ಮ ಕಾಲದ ಸಂಗೀತ ತಜ್ಞರಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ವರ್ತಮಾನದ ಚಿತ್ರಣ ಕೊಡುತ್ತಾರೆ.

ಪ್ರಶಸ್ತಿಗೆ ಇತಿಮಿತಿ ಇರಬೇಕು!

ಸುಗಮ ಸಂಗೀತ ಕ್ಷೇತ್ರದಲ್ಲಿ ತನ್ನದೇ ಧಾಟಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹೊಸಕೆರೆಹಳ್ಳಿಯ ‘ಗಾಯನಗಂಗಾ ಟ್ರಸ್ಟ್‌’ ಪ್ರತಿ ವಾರ್ಷಿಕೋತ್ಸವದಂದು ವಿದ್ವಾಂಸರಿಗೆ ‘ಸ್ವರ ಸಾಮ್ರಾಟ್‌’ ಎಂಬ ಪ್ರಶಸ್ತಿ ನೀಡುತ್ತದೆ. ಈ ಬಾರಿ ಸಂಸ್ಥೆಯ ದಶಮಾನೋತ್ಸವದ ನೆಪದಲ್ಲಿ ಬಾಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿ ತಮ್ಮ ಸೇವಾ ಅನುಭವಕ್ಕೆ ಭಾರವಾಯಿತು ಎಂದು ಬಾಲಿ ಅವರು ಆಕ್ಷೇಪ ಎತ್ತಿದ್ದಾರೆ!

‘ಪ್ರತಿ ಪ್ರಶಸ್ತಿಗೂ, ಬಿರುದಿಗೂ ಒಂದು ಮೌಲ್ಯ ಇರುತ್ತದೆ. ಯಾವುದೇ ಬಿರುದು ನಮ್ಮ ಯೋಗ್ಯತೆಯನ್ನು ಮೀರಿರಬಾರದು. ಸ್ವರ ಸಾಮ್ರಾಟ್‌ ಎಂದು ಕರೆಸಿಕೊಳ್ಳುವಷ್ಟು ನಾನು ಯೋಗ್ಯನಲ್ಲ ಎಂದು ಬಾಲಿ ಅವರು ಆಕ್ಷೇಪಿಸಿದ್ದಾರೆ. ಆದರೆ ಸಂಸ್ಥೆ ಸ್ಥಾಪಿಸಿರುವ ಪ್ರಶಸ್ತಿಯ ಹೆಸರೇ ಹಾಗಿದೆ’ ಎಂದು, ಗಾಯನಗಂಗಾದ ಅಧ್ಯಕ್ಷಆನಂದ ಮಾದಲಗೆರೆ ಹೇಳುತ್ತಾರೆ.‌

ನಾಳೆ ‘ಹಾಡು ಕೋಗಿಲೆ ಗೀತೋತ್ಸವ’, ಪ್ರಶಸ್ತಿ ಪ್ರದಾನ

ಗಾಯನಗಂಗಾ ಟ್ರಸ್ಟ್‌ನ ದಶಮಾನೋತ್ಸವ ಫೆ.16 ಶನಿವಾರ ನಡೆಯಲಿದೆ. ಉದ್ಘಾಟನೆ– ಎಚ್.ಎಸ್.ವೆಂಕಟೇಶ ಮೂರ್ತಿ. ಉಪಸ್ಥಿತಿ– ನಗರ ಶ್ರೀನಿವಾಸ ಉಡುಪ, ಅಶೋಕ ಎನ್.ಛಲವಾದಿ, ಹೇಮಾಪ್ರಸಾದ್‌, ಆನಂದ ಮಾದಲಗೆರೆ. ಪ್ರಶಸ್ತಿ ಪ್ರದಾನ– ಎಸ್. ಬಾಲಿ ಅವರಿಗೆ. ಅಧ್ಯಕ್ಷತೆ– ಶ್ರೀನಿವಾಸ ಜಿ.ಕಪ್ಪಣ್ಣ.ನಂತರ ಹಿರಿಯ ಮತ್ತು ಉದಯೋನ್ಮುಖ ಗಾಯಕರಿಂದ ಸುಗಮ ಸಂಗೀತ ಗಾಯನ ಇರುತ್ತದೆ.

ಸ್ಥಳ– ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಸಂಜೆ 4.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT