ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಲೊಂದು ಲೀಲೆ ಹಲವು

Last Updated 19 ಜೂನ್ 2021, 19:30 IST
ಅಕ್ಷರ ಗಾತ್ರ

ಪ್ರವೀಣ್‌ ಗೋಡ್ಖಿಂಡಿ ರೂಪಿಸಿದ ‘ಗಾಡ್ಸ್‌ ಬನ್ಸಿ’ ಕೊಳಲು ಎಂಟು ಅಡಿ ಎತ್ತರ, 22 ಕೆ.ಜಿ ಭಾರ ಇದೆ, ಗೊತ್ತಾ?

ದ್ವಾಪರಯುಗದ ಶ್ರೀಕೃಷ್ಣನ ಕೊಳಲನಾದ ಕೇಳಿದವರಿಲ್ಲ. ಆದರೆ, ಕಲಿಯುಗದ ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ ಅವರ ಕೊಳಲನಾದ ಕೇಳದವರೇ ಇಲ್ಲ. ಬಿದಿರಿನ ರಂಧ್ರದೊಳಗಿಂದ ತೂರಿ ಬರುವ ಗೋಡ್ಖಿಂಡಿ ಉಸಿರು ಕೇಳುಗರ ಎದೆಯೊಳಗೆ ನಾದಾನಂದ ಸೃಷ್ಟಿಸಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಕ್ಷಯ ಪಾತ್ರೆಯೊಳಗಿಂದ ಪಡಿಮೂಡುವ ಸ್ವರಗಳ ಸವಿಯೂಟ ವೈವಿಧ್ಯಮಯ ಪರಿಮಳ, ಕಂಪಿನೊಂದಿಗೆ ಕೇಳುಗರ ಮನ ಮುಟ್ಟಿದೆ. ಕಛೇರಿ, ಕೃತಿ, ಕೀರ್ತನೆಗಳಿಗಷ್ಟೇ ಸೀಮಿತವಾಗದ ಅವರು ಯೋಗ, ಪ್ರಯೋಗಗಳ ಮೂಲಕ ‘ಕೊಳಲಿನ ದೇವರು’ ಎನಿಸಿಕೊಂಡಿದ್ದಾರೆ.

ಕ್ಷಣಮಾತ್ರದಲ್ಲಿ ರಾಗದ ಛಾಯೆ ರಚಿಸುವ ಅವರು ಅಚ್ಚರಿಯ ಅಲೆ ಸೃಷ್ಟಿಸುತ್ತಾರೆ. ದೇವಾಲಯಗಳ ಮಂಗಳಾರತಿಯಾಗಿ, ಮೊಬೈಲ್‌ ಫೋನ್‌ ರಿಂಗಣವಾಗಿ, ಮನೆಯ ಕಾಲಿಂಗ್‌ ಬೆಲ್ಲಿನ ಧ್ವನಿಯಾಗಿ, ಕಾರಿನ ರಿವರ್ಸ್‌ ಗೇರ್‌ ಶಬ್ದವಾಗಿ ಪ್ರವೀಣ್‌ ಗೋಡ್ಖಿಂಡಿ ಕೊಳಲು ನಿತ್ಯ ನಿರಂತರ ನುಡಿಯುತ್ತಲೇ ಇದೆ.

ಸದಾ ಹುಡುಕಾಟದ ಮನೋಭಾವದ ಅವರು ಏಳಿಂಚಿನ ಕೊಳಲಿನಿಂದ ಎಂಟಡಿ ಬಾನ್ಸುರಿಯೊಳಗೆ ತಮ್ಮ ಉಸಿರು ತುಂಬಿದ್ದಾರೆ. ವಾದ್ಯದ ಜೊತೆ ಪ್ರಯೋಗಕ್ಕಿಳಿಯುವ ಅವರು ಕೊಳಲಿಗೆ ಹೊಸ ರೂಪ ಕೊಟ್ಟಿದ್ದಾರೆ. ವಿಶೇಷ ನುಡಿಸಾಣಿಕೆ ಜೊತೆಜೊತೆಯಲ್ಲೇ ಹಲವು ಬಗೆಯ ಬಾನ್ಸುರಿ ಬಳಕೆಯಲ್ಲೂ ಬೆರಗು ಮೂಡಿಸಿದ್ದಾರೆ.

50ರ ದಶಕದಲ್ಲೇ ಪಂಡಿತ್‌ ಪನ್ನಾಲಾಲ್‌ ಘೋಷ್‌ ಅವರು ಬಾನ್ಸುರಿಗೆ ಹೊಸ ರೂಪ ಕೊಟ್ಟರು. ಸಾಮಾನ್ಯವಾಗಿ ಏಳು ರಂಧ್ರಗಳ (ಆರು ಸ್ವರ ರಂಧ್ರ, ಒಂದು ಊದುವ ರಂಧ್ರ) ಕೊಳಲಿಗೆ ತೀವ್ರ ಮಧ್ಯಮ ಸೇರ್ಪಡೆ ಮಾಡಿ ಇನ್ನೊಂದು ರಂಧ್ರ ಸೃಷ್ಟಿಸಿದರು.

ನಂತರ ಹಲವು ಸಂಗೀತಗಾರರು ಮತ್ತಷ್ಟು ಪ್ರಯೋಗ ಮಾಡಿದರು. ನಮ್ಮವರೇ ಆದ ಪಂಡಿತ್‌ ವೆಂಕಟೇಶ ಗೋಡ್ಖಿಂಡಿ ಅವರು 80ರ ದಶಕದಲ್ಲಿ ಪಂಚಮಕ್ಕಾಗಿ ಎಂಟನೇ ರಂಧ್ರ ತೆರೆದರು. ಜೊತೆಗೆ ಪಿವಿಸಿ ಪೈಪ್‌ನಲ್ಲೂ ಬಾನ್ಸುರಿ ಬಾರಿಸಿ ಆಶ್ಚರ್ಯ ಉಂಟುಮಾಡಿದರು. ನಂತರ ಬಂದ ಅವರ ಮಗ ಪ್ರವೀಣ್‌ ಗೋಡ್ಖಿಂಡಿ ಕೊಳಲು ನುಡಿಸಾಣಿಕೆಯಲ್ಲಿ ಹಲವು ದಾಖಲೆ ಬರೆದರು. ಭಾರತೀಯ ಬಾನ್ಸುರಿಯ ಜೊತೆ ಹಲವು ದೇಶಗಳ ಕೊಳಲನ್ನು ಬೆಸೆಯುವಲ್ಲಿ ಯಶಸ್ವಿಯಾದರು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಆಧಾರದ ಮೇಲೆ ಸಮಕಾಲೀನ ಸಂಗೀತದ ಚಿತ್ತಾರ ಮೂಡಿಸಿದರು. ತಂದೆಯ ಜೊತೆಗೂಡಿ ‘ಗೋಡ್ಖಿಂಡಿ ಘರಾಣೆ’ಯನ್ನೇ ಸೃಷ್ಟಿಸಿದರು. ಗಾಯನದಂತೆಯೇ ನುಡಿಯುವ ವಾದ್ಯವೈಭವ ಈ ಘರಾಣೆಯ ವಿಶೇಷ.

ಕಾಂಟ್ರಾಬಾಸ್‌ ಕೊಳಲು: ಎಂಟು ಅಡಿ ಉದ್ದವಿರುವ ಅಪರೂಪದ ಕಾಂಟ್ರಾಬಾಸ್‌ ಕೊಳಲು ನುಡಿಸುವ ವಿಶ್ವದ ಬೆರಳೆಣಿಕೆಯಷ್ಟು ಕಲಾವಿದರಲ್ಲಿ ಪ್ರವೀಣ್‌ ಗೋಡ್ಖಿಂಡಿ ಒಬ್ಬರು. 22 ಕೆ.ಜಿ ತೂಕ, ನಾಲ್ಕು ತುಂಡಗಳಲ್ಲಿರುವ ಈ ಕೊಳಲು ನುಡಿಸಲು ಕಲಾವಿದನಿಗೆ ವಿಶೇಷ ಶಕ್ತಿಯೇ ಇರಬೇಕು. ಸಾಮಾನ್ಯ ಬಾನ್ಸುರಿಗಿಂತ ಹತ್ತುಪಟ್ಟು ಹೆಚ್ಚು ಉಸಿರು ತುಂಬಿದರೆ ಮಾತ್ರ ಅದರಲ್ಲಿ ಧ್ವನಿ ಮೂಡುತ್ತದೆ. ಅಬ್ದುಲ್‌ ಕಲಾಂ ಅವರ ಎದುರು ಮೊದಲ ಬಾರಿಗೆ ಕಾಂಟ್ರಾಬಾಸ್‌ ಕೊಳಲಿನಲ್ಲಿ ಹಿಂದೂಸ್ತಾನಿ ರಾಗ ನುಡಿಸುವ ಮೂಲಕ ಪ್ರವೀಣ್‌ ಹೊಸ ದಾಖಲೆ ಸೃಷ್ಟಿಸಿದರು.

ಈ ಸಾಧನೆ ಅಷ್ಟು ಸುಲಭದ್ದಾಗಿರಲಿಲ್ಲ. ಶ್ರೀಕೃಷ್ಣ ಚಿತ್ರಪಟಗಳಲ್ಲಿ, ಮೂರುತಿಗಳಲ್ಲಿ ತನ್ನ ಬಲಭಾಗಕ್ಕೆ ಕೊಳಲ ಪಿಡಿದು ನಿಂತಿದ್ದಾನೆ, ಎಡಗೈ ಮೇಲಿದ್ದು, ಬಲಗೈ ಕೆಳಗಿದೆ. ಶೇ 99ರಷ್ಟು ಕಲಾವಿದರು ಇದೇ ಮಾದರಿಯಲ್ಲಿ ವಾದ್ಯ ನುಡಿಸುತ್ತಾರೆ. ಆದರೆ, ಪ್ರವೀಣ್‌ ಗೋಡ್ಖಿಂಡಿ ಅವರು ತಮ್ಮ ಎಡಭಾಗದಲ್ಲಿ ಕೊಳಲು ನುಡಿಸುತ್ತಾರೆ, ಬಲಗೈ ಮೇಲೆ, ಎಡಗೈ ಕೆಳಗಿರುತ್ತದೆ.

ಕಾಂಟ್ರಾಬಾಸ್‌ ಕೊಳಲು ನುಡಿಸುವಾಗ ಬಲುದೊಡ್ಡ ಸವಾಲು ಎದುರಿಸಬೇಕಾಯಿತು. ಈ ವಾದ್ಯವನ್ನು ಎಡಗೈ ಮೇಲೆ, ಬಲಗೈ ಕೆಳಗಿಟ್ಟು ನುಡಿಸಬೇಕು. ಹೀಗಾಗಿ ಅವರು ಸಣ್ಣ ಹುಡುಗನಂತೆ ಹೊಸ ಮಾದರಿಯಲ್ಲಿ ಬಾನ್ಸುರಿ ಕಲಿತು, ನುಡಿಸಿ ಸೈ ಎನಿಸಿಕೊಂಡರು. ಎರಡು ಸಂಗತಿಗಳ ನಡುವೆ ಉಸಿರು ತೆಗೆದುಕೊಳ್ಳುವ ಪ್ರಕ್ರಿಯೆಯೂ ಸಂಗೀತದ ಜೊತೆ ಬೆರೆತಿರುವುದು ಇಲ್ಲಿ ಬಹಳ ವಿಶೇಷ ಎನಿಸುತ್ತದೆ.

ಪ್ರವೀಣ್‌ ಗೋಡ್ಖಿಂಡಿ ಈ ವಾದ್ಯಕ್ಕೆ ‘ಗಾಡ್ಸ್ ಬನ್ಸಿ’ (ದೇವರ ಬಾನ್ಸುರಿ) ಎಂದು ನಾಮಕರಣ ಮಾಡಿದ್ದಾರೆ. ಶ್ರೀಕೃಷ್ಣ ಪರಮಾತ್ಮ ಧರೆಗಿಳಿದು ಬಂದರೆ ಅವರಿಗೆ ಈ ವಾದ್ಯವನ್ನು ಉಡುಗೊರೆಯಾಗಿ ಕೊಡುವ ಭಕ್ತಿ ಭಾವನೆ ಅವರ ಮನದಲ್ಲಿದೆ.

ಆಲ್ಟೊ ಬಾನ್ಸುರಿ ಸೃಷ್ಟಿಕರ್ತ: ಭಾರತೀಯ ಬಾನ್ಸುರಿ ಹಾಗೂ ಪಾಶ್ಚಾತ್ಯ ಕೊಳಲಿನ ನಡುವಿನ ಹೊಸ ರೂಪದಂತಿರುವ ‘ಆಲ್ಟೊ ಬಾನ್ಸುರಿ’ ಪ್ರವೀಣ್‌ ಗೋಡ್ಖಿಂಡಿ ಅವರ ಸೃಷ್ಟಿ. ಕೊಳಲು ಜಗತ್ತಿನ ಸೋಜಿಗಂತಿರುವ ಈ ಬಾನ್ಸುರಿ ‘ಯು’ ಆಕಾರದಲ್ಲಿದೆ.

ರಂಧ್ರಗಳ ನಡುವೆ ದೊಡ್ಡ ಅಂತರವಿದ್ದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ನುಡಿಸಾಣಿಕೆ ದೊಡ್ಡ ಸವಾಲು.

ಇದರಲ್ಲೂ ಯಶಸ್ವಿಯಾಗಿರುವ ಪ್ರವೀಣ್‌ ಗೋಡ್ಖಿಂಡಿ ಅವರು ಕೊಳಲು ಜಗತ್ತಿಗೆ ಹೊಸ ವಾದ್ಯ ನೀಡಿದ ಹೆಮ್ಮೆಯನ್ನೂ ಹೊಂದಿದ್ದಾರೆ.

ಏಳಿಂಚಿನ ಕೊಳಲು: ಸೋಲೊ ಜೊತೆಗೆ ಜುಗಲ್‌ಬಂದಿ ಕಛೇರಿ, ಸಮಕಾಲೀನ ಸಂಗೀತ ಕಾರ್ಯಕ್ರಮ ನುಡಿಸುವಾಗ ಪ್ರವೀಣ್‌ ಅವರ ಸುತ್ತಲೂ ವಿವಿಧ ಅಳತೆಯ ಬಾನ್ಸುರಿಗಳ ರಾಶಿಯೇ ಇರುತ್ತದೆ. ಅದರಲ್ಲೊಂದು ಏಳಿಂಚಿನ ಪುಟಾಣಿ ಕೊಳಲು ಗಮನ ಸೆಳೆಯುತ್ತದೆ. ಎತ್ತರದ ಸ್ಥಾಯಿಗಳ ಸ್ವರ ನುಡಿಸುವಾಗ ಇದು ರೋಮಾಂಚನ ಸೃಷ್ಟಿ ಮಾಡುತ್ತದೆ.

ಉಸಿರು ಕಟ್ಟಿ ನುಡಿಸುವ ಪ್ರಯೋಗ: ಹಲವರು ಉಸಿರುಗಟ್ಟಿ ಹಾಡಿ (ಬ್ರೆಥ್‌ಲೆಸ್‌ ಸಾಂಗ್‌) ಸಾಧನೆ ಮಾಡಿದ್ದಾರೆ. ಆದರೆ ವಾಸ್ತವವಾಗಿ ಅದು ರೆಕಾರ್ಡಿಂಗ್‌ ವೇಳೆ ನಡೆಯುವ ತಾಂತ್ರಿಕತೆಯೇ ಆಗಿರುತ್ತದೆ. ಆದರೆ ಕೊಳಲನ್ನು ಉಸಿರುಗಟ್ಟಿಸಿ ನುಡಿಸುವ ಪ್ರಯೋಗವೊಂದನ್ನು ಪ್ರವೀಣ್‌ ಗೋಡ್ಖಿಂಡಿ ಮಾಡಿದ್ದಾರೆ. ಉಸಿರನ್ನು ಗಂಟಲಿನಲ್ಲಿ ಕೇಂದ್ರೀಕರಿಸಿ ಸ್ವರಗಳ ನಡುವೆ ಬಿಡುವು ನೀಡದೆ ನಿರಂತರವಾಗಿ ನುಡಿಸುವ ಪರಿ ಇದು. ಸಂಗೀತ ಸಂಗತಿಯ ಅಂತಿಮ ಹಂತದಲ್ಲಿ ಕ್ಷಣಕಾಲ ಈ ತಂತ್ರ ಪ್ರಯೋಗಿಸಿ ಕೇಳುಗರ ಉಸಿರುಗಟ್ಟಿಸುತ್ತಾರೆ. ಈ ತಂತ್ರಕ್ಕೆ ಕೇಂದ್ರಿತ ಉಸಿರಾಟ ತಂತ್ರ (ಸರ್ಕ್ಯುಲೇಟೆಡ್‌ ಬ್ರೀಥಿಂಗ್‌ ಟೆಕ್ನಿಕ್‌) ಎಂದು ಕರೆದಿದ್ದಾರೆ.

ಮದುವೆ ಬ್ಯಾಂಡ್‌ಸೆಟ್‌ನಲ್ಲಿ, ನಾದಸ್ವರ ಕಾರ್ಯಕ್ರಮಗಳಲ್ಲಿ ಶ್ರುತಿ ನುಡಿಸುವಾತ ದವಡೆಯಲ್ಲಿ ಉಸಿರು ತುಂಬಿಕೊಂಡು ನುಡಿಸುವುದನ್ನು ನೋಡಿದ್ದೇವೆ. ಇದೇ ತಂತ್ರವನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ನಾದಸ್ವರದಂತೆ ಕೊಳಲನ್ನು ತುಟಿ ಮುಚ್ಚಿ ನುಡಿಸಲಾಗದು. ಹೀಗಾಗಿ ಗಂಟಲಲ್ಲಿ ಉಸಿರು ಕೇಂದ್ರೀಕರಿಸಿ ಕೊಳಲು ನುಡಿಸುವ ಪ್ರಯೋಗವಿದು. ರಾಜಸ್ಥಾನದ ಜನಪದ ವಾದ್ಯ ಅಲ್ಗೋಜಾವೂ ಇದಕ್ಕೆ ಪ್ರೇರಣೆಯಾಗಿದೆ.

‘ಬಿದಿರಿಗೆ ಪರ್ಯಾಯವಾಗಿ ಮರ, ಉಕ್ಕು, ಬೆಳ್ಳಿ, ಫೈಬರ್‌ ಕೊಳವೆ, ಗಾಜು, ಎಬೋನೈಟ್‌ ಮಾಧ್ಯಮದಲ್ಲಿ ಕೊಳಲುಗಳಿವೆ. ಚಿನ್ನದ ಹೊದಿಕೆಯ ಕೊಳಲುಗಳೂ ಇವೆ. ಇವುಗಳಲ್ಲಿ ಹಲವು ನನ್ನ ಸಂಗ್ರಹದಲ್ಲಿವೆ. ಆದರೆ ಬಿದಿರಿನಲ್ಲಿ ಸಿಗುವ ನಾದಸುಖ ಬೇರೆ ಯಾವುದೇ ಮಾಧ್ಯಮದ ವಾದ್ಯದಲ್ಲಿ ದೊರೆಯದು’ ಎಂಬುದು ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ ಅವರ ಮನದಾಳ.

101 ರಾಗಗಳ ರಾಗಟೈನ್‌ಮೆಂಟ್‌
ಲಾಕ್‌ಡೌನ್‌ ಅವಧಿಯಲ್ಲಿ ಪ್ರವೀಣ್‌ ಗೋಡ್ಖಿಂಡಿ ಅವರು ಆನ್‌ಲೈನ್‌ನಲ್ಲಿ ಹೊಸದೊಂದು ಪ್ರಯೋಗ ಮಾಡಿದ್ದಾರೆ. ವಾರಕ್ಕೆ ಎರಡು ರಾಗಗಳ ವಿಶೇಷತೆಗಳನ್ನು ಅನಾವರಣಗೊಳಿಸಲಾಗುತ್ತದೆ. ಜಗತ್ತಿನೆಲ್ಲೆಡೆ ಇರುವ ಸಂಗೀತಗಾರರನ್ನು ಒಳಗೊಳ್ಳುವ ಪ್ರಯತ್ನ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಈ ಪ್ರಯೋಗ ನಡೆಯುತ್ತಿದ್ದು ಜೂನ್‌ 24ರಂದು 101ನೇ ರಾಗದ ಪ್ರಯೋಗವಿದೆ. ಸಂಗೀತ ದಿಗ್ಗಜರೆಲ್ಲರೂ ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ವಿಶೇಷ ಕಾರ್ಯಕ್ರಮ ವೀಕ್ಷಣೆ ಮಾಡಲು ಪ್ರವೀಣ್‌ ಗೋಡ್ಖಿಂಡಿ ಅಫೀಷಿಯಲ್‌ ಫೇಸ್‌ಬುಕ್‌ ಪುಟ ತೆರೆಯಬಹುದು.

‘ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲರಲ್ಲೂ ನೋವಿತ್ತು. ನೋವು ಮರೆಸುವಂತಹ ರಾಗಗಳ ಪ್ರಯೋಗ ಮಾಡಲಾಗಿದೆ. ಜೊತೆಗೆ ಶಾಸ್ತ್ರೀಯ ಸಂಗೀತದತ್ತ ಯುವಕರನ್ನು ಸೆಳೆಯುವ ಉದ್ದೇಶದಿಂದಲೂ ಈ ಪ್ರಯೋಗ ಮಾಡುತ್ತಿದ್ದೇನೆ’ ಎಂದು ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ ಹೇಳುತ್ತಾರೆ.

‘ಗಾಡ್ಸ್‌ ಬನ್ಸಿ’ಯೊಂದಿಗೆ ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ
‘ಗಾಡ್ಸ್‌ ಬನ್ಸಿ’ಯೊಂದಿಗೆ ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT