ಗುರುವಾರ , ಜೂನ್ 4, 2020
27 °C

‘ಹಾರ್ಮೋನಿಯಂ ಶೃಂಗ’ ನಾದಸಿಂಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾರ್ಮೋನಿಯಂ ಇಂಪಾದ ನಾದ ಕೊಡುವ ವಿಶಿಷ್ಟ ವಾದ್ಯ. ಮೊದಲೆಲ್ಲ ಇದನ್ನು ಗಾಯನದ ಜೊತೆಗೆ ಸಾಥಿವಾದ್ಯವಾಗಿ ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ಸೊಲೊ ಮತ್ತು ಜುಗಲ್‌ಬಂದಿಗಳಲ್ಲೂ ಹಾರ್ಮೋನಿಯಂ ನಾದ ಮಾಧುರ್ಯ ಬೀರುತ್ತಿದೆ.

ಬಸವೇಶ್ವರ ನಗರದಲ್ಲಿರುವ ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್‌ ಎರಡನೇ ವಿಶ್ವ ಸಂವಾದಿನಿ ಶೃಂಗ ಆಯೋಜಿಸಿದೆ. ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್‌ನ  ರೂವಾರಿ ಹಾರ್ಮೋನಿಯಂ ವಿದ್ವಾಂಸ ರವೀಂದ್ರ ಕಾಟೋಟಿ ನೇತೃತ್ವದಲ್ಲಿ ಈ ಶೃಂಗ ನಡೆಯಲಿದೆ. ಜನವರಿ 3 ಹಾಗೂ 4ರಂದು ಮಲ್ಲೇಶ್ವರದ ಸೇವಾಸದನದಲ್ಲಿ ಮತ್ತು ಜ.5 ರಂದು ಐಐಎಸ್‌ಸಿಯಲ್ಲಿರುವ ಸರ್ ಜೆ.ಎನ್. ಟಾಟಾ ಸಭಾಂಗಣದಲ್ಲಿ ಹಾರ್ಮೋನಿಯಂ ನಾದ ಅನುರಣಿಸಲಿದೆ. 

'ವಿಶ್ವ ಸಂವಾದಿನಿ  ಶೃಂಗ'ವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಉದ್ಘಾಟಿಸುವರು. ರಾಮಕೃಷ್ಣಾಶ್ರಮದ ಸ್ವಾಮಿ ತದ್ಯುಕ್ತಾನಂದಜಿ ಮುಖ್ಯ ಅತಿಥಿ ಹಾಗೂ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ವಿದ್ವಾನ್‌ ಆನೂರು ಅನಂತಕೃಷ್ಣ ಶರ್ಮ ಅಧ್ಯಕ್ಷತೆ ವಹಿಸುವರು.

ಹಾರ್ಮೋನಿಯಂ ವಾದ್ಯದ ಕುರಿತಾದ ಸಾಂಗೀತಿಕ, ವೈಚಾರಿಕ, ಬೌದ್ಧಿಕ ಸಂವಾದಕ್ಕೆ ಇದು ಅತ್ಯುತ್ತಮ ವೇದಿಕೆಯಾಗಲಿದೆ. ಹಾರ್ಮೋನಿಯಂ ಸೋಲೊ, ಜುಗಲ್‌ಬಂದಿ, ವಾದ್ಯಗೋಷ್ಠಿ, ಚಿತ್ರ ಪ್ರದರ್ಶನ, ಸಂವಾದ, ಪ್ರಾತ್ಯಕ್ಷಿಕೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆ.

ಹಾರ್ಮೋನಿಯಂ ಸಂತ ಪಂ. ಬಿಜಾಪುರೆ!

ಹಾರ್ಮೋನಿಯಂನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ನಾಡಿನಾದ್ಯಂತ ನೂರಾರು ಶಿಷ್ಯಂದಿರಿಗೆ ಈ ವಿದ್ಯೆಯನ್ನು ಧಾರೆಯೆರೆದವರು ಪಂ. ರಾಮಭಾವು ಬಿಜಾಪುರೆ ಅವರು. ದೇಶದ ಹಲವಾರು ಸಂಗೀತ ದಿಗ್ಗಜರಿಗೆ ಸಮರ್ಥವಾದ ಹಾರ್ಮೋನಿಯಂ ಸಾಥಿ ನೀಡಿದ ಹೆಗ್ಗಳಿಕೆ ಇವರದು. ಗಾಯಕ ಉಸ್ತಾದ್‌ ಕರೀಮ್‌ ಖಾನ್‌ ಅವರಿಂದ ಮೊದಲ್ಗೊಂಡು ಬಹುತೇಕ ಸಂಗೀತಜ್ಞರ ಗಾಯನಕ್ಕೆ ಎಳೆಎಳೆಯಾಗಿ ನಾದಮಾಧುರ್ಯ ಮೂಡಿಸುತ್ತಿದ್ದ ಪರಿ ಅದ್ಭುತ!. 

ಅವರ ಸವಿನೆನಪಿಗಾಗಿ ಅವರ ಹಿರಿಯ ಶಿಷ್ಯರಾದ ಪಂ. ರವೀಂದ್ರ ಕಾಟೋಟಿ ಬಿಜಾಪುರೆ ಹಾರ್ಮೋನಿಯಂ ಪ್ರತಿಷ್ಠಾನವನ್ನು 2003ರಲ್ಲಿ ಬಸವೇಶ್ವರನಗರದಲ್ಲಿ ಸ್ಥಾಪಿಸಿದರು. ಹಾರ್ಮೋನಿಯಂ ಅನ್ನು ಒಂದು ಸಾಥಿ ವಾದ್ಯವಾಗಿ ಮಾತ್ರ ಪರಿಗಣಿಸದೆ ಸೋಲೊ ವಾದ್ಯವಾಗಿಯೂ ನುಡಿಸಬಹುದು ಎಂಬುದನ್ನು ಜನಪ್ರಿಯಗೊಳಿಸಿದವರು ಕಾಟೋಟಿ.

ಸ್ಥಳ: ಸೇವಾ ಸದನ ಮಲ್ಲೇಶ್ವರಂ, ಬೆಳಿಗ್ಗೆ 9. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು