ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡುಗಾರನ ಹೃದಯ ಹಾದಿ

Last Updated 30 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಕಾಡು ಮತ್ತು ಕಡಲಿನ ಉತ್ತರ ಕನ್ನಡಕ್ಕೂ ಬೆಳವಲ ನಾಡು ಧಾರವಾಡ ಸೀಮೆಗೂ ಮೊದಲಿನಿಂದಲೂ ಸಾಂಸ್ಕೃತಿಕ ಸಂಬಂಧವಿದೆ. ಮಳೆಗೆ ಸಮುದ್ರ ತೀರದ ಕನ್ನಡ ಜಿಲ್ಲೆಯ ಮೋಡವನ್ನು ಧಾರವಾಡ ನೋಡುತ್ತಿದ್ದರೆ ಬೆಳೆಗೆ ಬೆಳವಲದ ಹಸುರು ಬಯಲತ್ತ ಕನ್ನಡ ಜಿಲ್ಲೆ ಮುಖ ಹಾಕುತ್ತದೆ. ಉತ್ತರ ಕನ್ನಡದವರು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಉನ್ನತ ಶಿಕ್ಷಣವನ್ನು ಅರಸಿ ಹೋದವರು; ವೈದ್ಯಕೀಯ ಚಿಕಿತ್ಸೆಗಾಗಿ ಅಲ್ಲಿಯ ಆಸ್ಪತ್ರೆಗಳನ್ನು ಅವಲಂಬಿಸಿದವರು; ಸಂತೆ ವ್ಯಾಪಾರವನ್ನು ತಪ್ಪಿಸಿದವರಲ್ಲ; ಧಾರವಾಡ ಆಕಾಶವಾಣಿಯಲ್ಲಿ ಸುಗಮ ಸಂಗೀತ ಹಾಡಿ, ಯುವವಾಣಿಯಲ್ಲಿ ಕವಿತೆಗಳನ್ನು ಓದಿ, ಕೃಷಿರಂಗದ ಸಂದರ್ಶನದಲ್ಲಿ ಭಾಗವಹಿಸಿ, ತಾಳಮದ್ದಲೆ ಪ್ರಸ್ತುತಿಪಡಿಸಿ ತರಂಗಾಂತರದಿಂದ ಹತ್ತಿರವಾದವರು. ಪ್ರತೀ ಮನೆಯ ರೇಡಿಯೊದಲ್ಲಿ ಧಾರವಾಡದ ಬೇಂದ್ರೆ, ಮನ್ಸೂರ್ ಅಶರೀರವಾಣಿಯಾಗಿ ಹಾಜರಾದವರು; ಕನ್ನಡ ಶಾಲೆಯ ಪಠ್ಯ ಪುಸ್ತಕದಲ್ಲಿ ಪರಿಚಯಿಸಿಕೊಂಡವರು.

ಉನ್ನತ ಪದವಿ ಓದಿಗೆ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದ ಉತ್ತರ ಕನ್ನಡ ಜಿಲ್ಲೆಯವರಿಗೆ ಧಾರವಾಡದಲ್ಲಿ ಸಾಹಿತ್ಯ ಮತ್ತು ಸಂಗೀತ ಬೋನಸ್ಸಾಗಿ ದೊರಕುತ್ತಿತ್ತು. ಓದಿನ ದಿನಗಳಲ್ಲಿ ಹಾಸ್ಟೇಲಿನಲ್ಲೊ ಕೈ ಅಡಿಗೆಯ ಬಾಡಿಗೆ ಖೋಲಿಯಲ್ಲೊ ಉಳಿಯುತ್ತಿದ್ದವರಿಗೆ ಉತ್ತರ ಭಾರತದಿಂದ ಬರುತ್ತಿದ್ದ ಲೋಕ ಪ್ರಸಿದ್ಧ ಸಂಗೀತಗಾರರ ಗಾಯನ ಕಲಾಭವನದಲ್ಲಿ ಇಡೀ ರಾತ್ರಿ ಉಚಿತವಾಗಿ ಸಿಗುತ್ತಿತ್ತು. ಮುರುಘಾಮಠದ ಜಾತ್ರೆಯಲ್ಲಿ ಮನ್ಸೂರರು ಹಾಡುತ್ತಿದ್ದ ಅಕ್ಕನ ವಚನದ ಗುಂಗಿಗೆ ಮಾರುಹೋಗುತ್ತಿದ್ದರು. ಕುಂದಗೋಳ ನಾಡಗೀರ ವಾಡೆಯಲ್ಲಿ ಅಹೋರಾತ್ರಿ ಜರುಗುತ್ತಿದ್ದ ಸಂಗೀತ ಉತ್ಸವದಲ್ಲಿ ಭೀಮಸೇನ ಜೋಶಿಯವರು ಹಾಡುತ್ತಿದ್ದ ರಾಗದ ಉಯ್ಯಾಲೆಯಲ್ಲಿ ವರ್ಷವಿಡೀ ತೂಗಿಕೊಳ್ಳುತ್ತಿದ್ದರು. ಓಪನ್ ಏರ್ ಥಿಯೆಟರ್‌ನಲ್ಲಿ ರಾಜಗುರು ಅವರ ರಂಗಗೀತೆಯ ಮಾಧುರ್ಯಕ್ಕೆ ಉಕ್ಕುತ್ತಿದ್ದರು. ರೊಟ್ಟಿ ತಟ್ಟುವ ಸಪ್ಪಳ, ಟಾಂಗಾ ಕುದುರೆಯ ಲಾಳದ ಗೊರಸಿನ ತಾಳ ಕೇಳುತ್ತಿದ್ದ ಓಣಿಗಳಲ್ಲಿ ಕವಿತೆಯಲ್ಲಿ ಭಾವ ನೇಯುತ್ತಿದ್ದ ಕವಿ ಮತ್ತು ಅದಕ್ಕೆ ನಾದ ನಾದುತ್ತಿದ್ದ ಸಂಗೀತಗಾರರು ಕಾಣುತ್ತಿದ್ದದ್ದು ಅಪರೂಪವಾಗಿರಲಿಲ್ಲ. ಇಂಥ ನಾದಮಯ ಪರಿಸರದ ನಿರಂತರ ಪ್ರಭಾವದಿಂದ ಅಶೋಕ ಹುಗ್ಗಣ್ಣವರ ಹಿಂದೂಸ್ತಾನಿ ಸಂಗೀತ ಕಲಾವಿದರಾಗಿ ರೂಪುಗೊಂಡವರು.

ಉತ್ತರ ಕನ್ನಡ ಜಿಲ್ಲೆಯಿಂದ ತಮ್ಮ ದೈವ ಅರಸುತ್ತ ಬೆಳವಲ ನಾಡಿಗೆ ಹಲವರು ಕಲಿಯಲು ಹೊರಟರೆ ಬಯಲಿಂದ ಹರಿದು ಬಂದ ಶಾಲ್ಮಲಾ, ವರದಾ, ಬೇಡ್ತಿ ನದಿಗಳಂತೆ ಸಮುದ್ರ ತೀರದ ಹೊನ್ನಾವರಕ್ಕೆ ಹುಗ್ಗಣ್ಣವರ್ ಸಂಗೀತ ಸಾಕ್ಷಾತ್ಕಾರಗೊಳಿಸಿಕೊಳ್ಳಲು ಬಂದರು. ಪರಜೀವವನ್ನು ಪೊರೆಯಲೆಂದೆ ಹರಿವ ನದಿಯ ಗುಣ ಹುಗ್ಗಣ್ಣವರ ಮನೆತನದಲ್ಲಿ ಅಂತರ್ಗತವಾಗಿತ್ತೆಂದು ಅವರ ನಿಡುಗಾಲ ಸ್ನೇಹಿತ ಗಾಯಕ ನಾಗರಾಜರಾವ್ ಹವಾಲ್ದಾರರು ತಮ್ಮ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ. (ಸ್ವರ ಸನ್ನಿಧಿ, ಡಾ. ನಾಗರಾಜರಾವ್ ಹವಾಲ್ದಾರ್; ವಸಂತ ಪ್ರಕಾಶನ, ಬೆಂಗಳೂರು). ಹವಾಲ್ದಾರರ ನಿರೂಪಣೆ ಹೀಗಿದೆ: ‘ನಮ್ಮ ಸಮಕಾಲೀನರು ಪ್ರೈಮರಿ ಶಾಲೆಯಲ್ಲಿದ್ದಾಗ ‘ಹುಗ್ಗಿಯ ಚಿನ್ನಕ್ಕ’ ಅಂತ ಒಂದು ಪಾಠ ಇತ್ತು. ಒಂದು ಮಂತ್ರ ಹೇಳಿದರೆ ಅಕ್ಷಯ ಪಾತ್ರೆಯಲ್ಲಿ ಬೇಕಾದಷ್ಟು ‘ಹುಗ್ಗಿ’ ರೆಡಿ ಆಗಿಬಿಡ್ತಿತ್ತು. ಮನೆಯವರಿಗೆಲ್ಲ ಸಾಕು ಅನಿಸಿದ ಮೇಲೆ, ಮತ್ತೊಂದು ಮಂತ್ರ ಹೇಳಿದರೆ ಪಾತ್ರೆ ಸುಮ್ಮನಾಗುತ್ತಿತ್ತು. ಎಂತಹ ಸುಂದರ, ಸರಳ ಕಲ್ಪನೆ! ಮುಂದೆ ಬೇರೊಬ್ಬರು ದುರಾಸೆಗೆ ಆ ಪಾತ್ರೆ ಕದೀತಾರೆ... ಕತೆ ಮುಂದುವರಿಯುತ್ತೆ. ಆದರೆ, ಹುಗ್ಗಿಯ ಪಾತ್ರೆಯಂತೆ, ನಿಜ ಜೀವನದಲ್ಲಿ ಒಂದು ಕುಟುಂಬ ಪೂರ್ತಿ, ಜನಸೇವೆ ಸಲುವಾಗಿ ಮುಡಿಪಾಗಿತ್ತು ಅಂದ್ರೆ ನೀವು ನಂಬ್ತೀರಾ..? ಹಕೀಕತು ಹಿಂಗದ ಕೇಳ್ರಿ:

ಕುಂದಗೋಳ ತಾಲ್ಲೂಕಿನಲ್ಲಿ ಯರಗುಪ್ಪಿ ಒಂದು ಹಳ್ಳಿ. ಕೆಲವರ್ಷಗಳ ಹಿಂದೆ ಭೀಕರ ಬರಗಾಲ ಬಂತು. ಹಳ್ಳಿ ಜನ ಎಲ್ಲಾ ಕಂಗಾಲಾದ್ರು. ಕೆಲವರು ಊರು ಬಿಡ್ಲಿಕ್ಕೆ ಹತ್ತಿದ್ರು. ಆಗ, ಅದೇ ಹಳ್ಳಿಯ, ಇದ್ದುದರಲ್ಲೇ ಸ್ಥಿತಿವಂತರು ಅನ್ನೋ ಒಂದು ಕುಟುಂಬ ಊರ ಜನಕ್ಕೆಲ್ಲ ‘ಹುಗ್ಗಿ’ ಮಾಡಿ, ಮಾಡಿ ಆದಷ್ಟು ದಿವಸ ಉಣಬಡಿಸಿದರು. ನಿಜ ಅರ್ಥದಲ್ಲಿ ದಾಸೋಹ ನಡೆಸಿದರು. ಹಾಗಾಗಿ ಆ ಮನೆತನಕ್ಕೆ ಅಂದಿನಿಂದ ‘ಹುಗ್ಗಣ್ಣವರ’ ಅಂತ ಅಡ್ಡ ಹೆಸರು ಬಂತು. ಈ ಹೃದಯ ಶ್ರೀಮಂತಿಕೆಯ ಮನೆತನದವರೇ ಡಾ. ಅಶೋಕ ಹುಗ್ಗಣ್ಣವರ.’

ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಎಂಬತ್ತರ ದಶಕ ಪಂ.ಮಲ್ಲಿಕಾರ್ಜುನ ಮನ್ಸೂರವರನ್ನು ವಿಭಾಗದ ಮುಖ್ಯಸ್ಥರನ್ನಾಗಿ ಪಡೆದ ಕಾಲ. ಅದೇ ವಿಭಾಗದಲ್ಲಿ ಪಾಠ ಮಾಡುತ್ತಿದ್ದ ಪಂ. ಸಂಗಮೇಶ್ವರ ಗುರವ್ ಅವರ ವಿಶೇಷ ಗಮನವನ್ನು ಹುಗ್ಗಣ್ಣವರ ತನ್ನ ಗಟ್ಟಿ ಕಂಠ, ಲಯ ಜ್ಞಾನ, ರಾಗ ಸ್ಪಷ್ಟತೆಯಿಂದ ಸೆಳೆದರು. ಪಂ. ಗುರವ್ ಅವರಿಂದ ಕಿರಾನಾ ಘರಾನಾ ಗಾಯನ ಶೈಲಿಯ ದೀಕ್ಷೆಯನ್ನು ಪಡೆದರು. ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸಂಗೀತರತ್ನ ಪದವಿ ಜೊತೆ ಮಾಸ್ಟರ್ ಆಫ್ ಮ್ಯೂಸಿಕ್ ಸ್ವರ್ಣಪದಕದೊಂದಿಗೆ ನಾದ ಪಯಣವನ್ನು ಆರಂಭಿಸಿದರು. ಇದರೊಟ್ಟಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಶೋಧನಯ ಮಹಾ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪಡೆದರು.

ಹೊನ್ನಾವರದ ಕಾಲೇಜಿನ ಸಂಗೀತ ವಿಭಾಗವನ್ನು ಪ್ರಾಧ್ಯಾಪಕರಾಗಿ ಹುಗ್ಗಣ್ಣವರ ಪ್ರವೇಶಿಸಿದ ನಂತರ ಮನೆತನದ ಹುಗ್ಗಿಯ ದಾಸೋಹ ಪರಂಪರೆ ಸ್ನೇಹದ ಸೇತುವೆ ಕಟ್ಟುತ್ತ ಸಂಗೀತವನ್ನು ಆಪ್ತರಲ್ಲಿ ಹಂಚಿಕೊಳ್ಳಲು ತೆರೆದ ದಾರಿಯಲ್ಲಿ ಮುಂದುವರಿಯಿತು. ಅವರು ಬರುವಷ್ಟರಲ್ಲಿ ಜಿಲ್ಲೆಯ ಮಣ್ಣು ಅಲ್ಲಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಯಕ್ಷಗಾನ ಭಾಗವತಿಕೆ, ನಾಟಕದ ಪದ, ಮದುವೆ ಹಾಡು, ಸುಗ್ಗಿ ಹಾಡು, ಭಜನೆಗಳಿಂದ ಉಳುಮೆಗೆ ಹದವಾಗಿತ್ತು. ಸಂಗೀತದ ಅಭಿರುಚಿಯ ಬೀಜವನ್ನು ಬಿತ್ತುವ ಕೆಲಸಕ್ಕೆ ಮುಂದಾದರು. ಸಂಗೀತದ ಬಗ್ಗೆ ತುಸು ಒಲವಿದ್ದ ಸ್ನೇಹಿತರ ಮನೆಗೆ ಹೋಗಿ ಹಳೆಯ ಹಾರ್ಮೋನಿಯಂ ಹೊರ ತೆಗೆದು ಲಯದತ್ತ ಒಲವಿರುವ ಮಕ್ಕಳನ್ನು ಎದುರಿಗೆ ಕೂರಿಸಿ ಸಂಗೀತದ ಪ್ರಥಮ ಪಾಠ ಮಾಡಿ, ‘ಕಂಠ ಚಲೊ ಐತಿ ಹಾಡಾಕೆ ಹಚ್ಚರಿ’ ಎಂದು ಹೆತ್ತವರಿಗೆ ‘ಹುಚ್ಚು’ ಹಿಡಿಸುತ್ತಿದ್ದರು. ಕರೆದವರ ಮನೆಗೆ ಪ್ರೀತಿಯಿಂದ ಹೋಗಿ ಸಂಗೀತದ ದೀಪ ಹಚ್ಚಿದರು; ಅದು ನಂದದಂತೆ ಆಸಕ್ತರ ಸಹಕಾರದಿಂದ ಸಂಗೀತ ಶಾಲೆಯನ್ನು ತೆರೆಯಿಸಿದರು. ವಾರಕ್ಕೊಮ್ಮೆ ಶಾಲೆಗೆ ಹೋಗಿ ಪಾಠ ಮಾಡಿದರು. ‘ಹಾರ್ಮೋನಿಯಂ ಜೋಡಿ ಹಾಡಿದ್ರ ನಿಮ್ಮ ಒರಿಜಿನಲ್‌ ಸ್ವರ ಮುಚ್ಚಿ ಹೋಗ್ತದ; ತಾನ್‌ಪೂರ ಶೃತಿ ಜತಿ ಟ್ಯೂನ್ ಮಾಡಕೋರಿ’ ಎಂದು ಅರಂಭದಲ್ಲೆ ಸರಿ ದಾರಿಯನ್ನು ತೋರಿಸುತ್ತಿದ್ದರು.

ಹಾಡುಗಾರಿಕೆಯಲ್ಲಿ ಇರಬೇಕಾದ ಶಾಸ್ತ್ರೀಯ ಶಿಸ್ತಿನೊಂದಿಗೆ, ಸಲ್ಲಬೇಕಾದ ಗಾಂಭೀರ್ಯದ ಜೊತೆಗೆ ಅವರೆಂದೂ ರಾಜಿ ಮಾಡಿಕೊಂಡವರಲ್ಲ. ಯಾವೊತ್ತೂ ಅವರ ರಿಯಾಜ್, ವಿದ್ಯಾರ್ಥಿಗಳಿಗೆ ಕಟು ಮಧುರ ಅನುಭವವೇ. ಅದೊಂದು ಅಪೂರ್ವ ರಾಗ ಸಂವಾದ ಮತ್ತು ಮೋಹಕ ಸಂವಹನ. ಸಂಗೀತದ ಬಗ್ಗೆ ಅಚಲ ನಿಷ್ಠೆ, ಸಾಧಿಸುವ ಛಲ, ತಕ್ಷಣ ಸೂಕ್ಷ್ಮಗಳನ್ನು ಗ್ರಹಿಸುವ ಪ್ರತಿಭೆಯನ್ನು ಶಿಷ್ಯರಲ್ಲಿ ಗುರುತಿಸಿ ನಸುಕಿಗೆ ಅವರ ಮನೆಗೆ ಹೋಗಿ ತಡ ರಾತ್ರಿಯವರೆಗೆ ರಿಯಾಜ್‌ ಮಾಡಿಸುತ್ತಿದ್ದರು.

ಶಿಷ್ಯರನ್ನು ಸಂಗೀತ ಕಛೇರಿಗೆ ಕರೆದೊಯ್ದು ಅಲ್ಲಿ ಕಲಾವಿದರನ್ನು ಪರಿಚಯಿಸುವುದು, ಕಲಾ ರಸಿಕರೆದುರು ಕಲಾವಿದ ತನ್ನ ಅತ್ಯುನ್ನತ ಎತ್ತರಕ್ಕೆ ಏರಿ ಅದ್ಭುತ ಗಾಯನವನ್ನು ಪ್ರಸ್ತುತಿ ಪಡಿಸುವ ಕ್ಷಣಕ್ಕೆ ಸಾಕ್ಷಿಯಾಗಲು ಅವಕಾಶ ಒದಗಿಸುವುದು, ಸಂಗೀತ ಅಭ್ಯಾಸದ ಜೊತೆ ಜೊತೆಯಲ್ಲೇ ವೇದಿಕೆಯಲ್ಲಿ ಗಾಯನ ಪ್ರಸ್ತುತಿಗೆ ಅವಕಾಶ ಒದಗಿಸುವುದು ಪರಸ್ಪರ ಪೂರಕವಾಗಿ ಸಾಗುತ್ತಿತ್ತು. ದೇವಸ್ಥಾನ, ಸಣ್ಣ ಉತ್ಸವಗಳು, ಬೈಟಕುಗಳು ಯಾವುದೇ ವೇದಿಕೆ ಆಗಿರಲಿ, ಶಿಷ್ಯರಿಗೆ ರೂಢಿ ಇರಲೆಂದು ಅವಕಾಶ ಮಾಡಿ ಕೊಡುವುದು, ಸಂಗೀತ ಪರೀಕ್ಷೆಗೆ ಕಟ್ಟಿಸುವುದು, ಶಿಷ್ಯವೇತನಕ್ಕೆ ಪ್ರಯತ್ನಿಸುವುದು, ಆಕಾಶವಾಣಿ ಗ್ರೇಡ್ ಕಲಾವಿದರಾಗಲು ಪ್ರೋತ್ಸಾಹಿಸುವುದು, ಕನ್ನಡ ಸಂಸ್ಕೃತಿ ಇಲಾಖೆ ಏರ್ಪಡಿಸುತ್ತಿದ್ದ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುವುದು ನಿರಂತರ ನಡೆಯುತ್ತಿತ್ತು. ಇದರಿಂದ ವಿದ್ಯಾರ್ಥಿಗಳಲ್ಲಿ ಸಭಾ ಕಂಪನವಿರದೆ ಹಾಡುವ ಆತ್ಮವಿಶ್ವಾಸ ವೃದ್ಧಿಸುತ್ತಿತ್ತು. ಕಲಾವಿದರಿಗಿಂತ ಸಂಗೀತ ದೊಡ್ಡದು ಎಂಬ ವಿನೀತ ಭಾವವನ್ನು ತಮ್ಮ ಶಿಷ್ಯರಲ್ಲೂ ಅವರು ಪೋಷಿಸಿದರು.

ಅವರು ಸಂಗೀತದ ಮೂಲಕ ನೇಯ್ದ ಸ್ನೇಹಜಾಲದ ವ್ಯಾಪ್ತಿ ವಿಸ್ತಾರವಾದದ್ದು. ವಿವಿಧ ಜಾತಿ, ಮತ, ವರ್ಗ, ಪ್ರದೇಶ, ಭಾಷೆಯ ಮನುಷ್ಯರು ಸಂಗೀತದ ಸನ್ನಿಧಿಯಲ್ಲಿ ಪರಸ್ಪರ ಕೈ ಹಿಡಿದು ಪರಿಚಯಿಸಿಕೊಂಡು ಒಂದಾದ ಸಮಾಜವನ್ನು ನಿರ್ಮಿಸಿದರು. ಸಮಾಜದ ಎಲ್ಲ ವೃತ್ತಿಯವರು, ವಯಸ್ಸಿನವರು, ಬಡವರು, ಸಿರಿವಂತರು ಅವರ ಆತ್ಮೀಯತೆಗೆ ಒಳಗಾಗಿ ಸಂಗೀತವನ್ನು ಗೌರವಿಸುವ ಆಪ್ತ ಕೂಟಗಳಾಗಿ, ಪರಿಚಾರಕರಾಗಿ ನಾಡಿನಾದ್ಯಂತ ಗುರುತಿಸಿಕೊಂಡರು. ಶಿಷ್ಯರಿಗೋಸ್ಕರ ನಾಡಿನ ಹಲವು ಸಂಘ-ಸಂಸ್ಥೆಗಳು ಸಂಗೀತ ಸೇವೆಗೆ ಮುಂದಾಗಲು ಕಾರಣರಾದರು.

ದೇಶ-ವಿದೇಶಗಳಲ್ಲಿ ಸಂಗೀತ ಕಛೇರಿ ನಡೆಸಿದರೂ ವಿಶಾಲ ಆಕಾಶದಲ್ಲಿ ಹಾರುವ ಹಕ್ಕಿ ಮರಿಗಳನ್ನು ನೆನೆಸಿ ಗೂಡಿಗೆ ಮರಳುವಂತೆ ಊರಿಗೇ ಬಂದು ತಮ್ಮ ಎಂದಿನ ಗಾಯನ ಒಕ್ಕಲುತನವನ್ನು ಮುಂದುವರಿಸಿದರು. ಪ್ರಶಸ್ತಿ, ಸಂಭಾವನೆ, ಅಧಿಕಾರ, ಪ್ರಚಾರಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಅಭಿಮಾನಿಗಳ ಪ್ರೀತಿಯೇ ಸನ್ಮಾನವೆಂದು ನಂಬಿ ಪ್ರಸನ್ನರಾದವರು. ಕರ್ನಾಟಕದಲ್ಲಿ ಗುರು-ಶಿಷ್ಯ ಪರಂಪರೆಯನ್ನು ಪೊರೆದ ಕೆಲವೇ ಅಗ್ರಗಣ್ಯ ಸಂಗೀತ ಗುರುಗಳಲ್ಲಿ ಹುಗ್ಗಣ್ಣವರ ಅವರೂ ಒಬ್ಬರು. ಸಂಗೀತ ಪರಂಪರೆಗೆ ಹೊಸ ಪ್ರತಿಭಾವಂತ ಗಾಯಕರನ್ನು ಸೇರಿಸುವ ಅವರ ನಿರಂತರ ತಪಸ್ಸನ್ನು ಮರೆಯಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT