ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಸಂತನಿಗೆ 77ನೇ ವಸಂತ

Last Updated 31 ಮೇ 2020, 4:26 IST
ಅಕ್ಷರ ಗಾತ್ರ

ಇಳಯರಾಜ ಅವರು, ‘ಏನಪ್ಪ ಮ್ಯೂಸಿಕ್ ಕೂಡ ಮಾಡ್ತೀಯಂತೆ’ ಅಂದರು. ನಾನು ನಕ್ಕು ‘ನಮ್ಮ ಕಡೆ ಸಂಗೀತದ ಮೇಷ್ಟ್ರು ಅಂತಾರೆ. ನೀವು ಸಂಗೀತಕ್ಕೇ ಮೇಷ್ಟ್ರು. ನನ್ನ ಸಂಗೀತ ಜ್ಞಾನ ನಿಮ್ಮ ಒಂದು ಮ್ಯೂಸಿಕ್ ಬಿಟ್‌ಗೂ ಸಮ ಅಲ್ಲ’ ಅಂದೆ. ನಕ್ಕರು. ಅವರೊಡನೆ ಮಾತನಾಡಿದ್ದು ಭಕ್ತಿಭಾವಗಳ ವಿದ್ಯುದಾಲಿಂಗನದ ಅನುಭವ.

ಇಳಯರಾಜ ನಮ್ಮ ನಡುವಿನ ದಂತಕಥೆ. ದಶಕಗಳಿಂದ ನಮ್ಮ ಸಂವೇದನೆಗಳಿಗೆ ಸ್ವರವಾದ ದೈತ್ಯ ಪ್ರತಿಭೆ. ಅವರ ಸ್ವರ ಸಂಯೋಜನೆಗೆ ಜಗತ್ತೇ ತಲೆದೂಗಿದೆ. ಅಂತಹ ಸಂಗೀತ ಸಂತನೊಂದಿಗೆ ಕೆಲಸ ಮಾಡುವ ಭಾಗ್ಯ ನನಗೂ ದೊರಕಿದೆ. ಕನ್ನಡದಲ್ಲಿ ಅವರು ಸಂಗೀತ ನಿರ್ದೇಶಿಸಿದ್ದು ಪ್ರಮಾಣದಲ್ಲಿ ಕಡಿಮೆ ಚಿತ್ರಗಳಾದರೂ ಗಮನಾರ್ಹ ಗೀತೆಗಳನ್ನು ನೀಡಿದವರು. ಸುಮಾರು ಹತ್ತು ವರ್ಷಗಳ ಹಿಂದೆ ‘ನನ್ನವನು’ ಚಿತ್ರಕ್ಕೆ ಹಾಡುಗಳನ್ನು ಬರೆಯುವ ಮೂಲಕ ನನ್ನ ಅವರ ಸಾಂಗತ್ಯ ಬೆಳೆಯಿತು. ಅವರ ಭೇಟಿಗೆ ಮೊದಲ ಬಾರಿ ನನಗೆ ಕರೆ ಬಂದಾಗ ನಂಬಲಾಗಲಿಲ್ಲ. ಮದ್ರಾಸಿಗೆ ಹೊರಟೆ. ನಾನು ಹೊರಟ ವಿಮಾನ ಹೊರಡಲು ಅನುವಾಗುತ್ತಿತ್ತು. ಒಬ್ಬ ಪ್ರಯಾಣಿಕರಿಗಾಗಿ ಕಾಯುತ್ತಿತ್ತು.

ಕೊನೆಯದಾಗಿ ಹತ್ತಿದ ಪ್ರಯಾಣಿಕರು ಬೇರಾರೂ ಅಲ್ಲ ಹಂಸಲೇಖ. ನನ್ನ ಪಕ್ಕದ ಸೀಟು ಖಾಲಿ ಇತ್ತು. ಹಂಸಲೇಖ ಅವರನ್ನು ನನ್ನ ಪಕ್ಕದಲ್ಲೇ ಕೂರುವಂತೆ ವಿನಂತಿಸಿಕೊಂಡೆ. ನಾನು ಆರಾಧಿಸುವ ಇಳಯರಾಜ ಅವರನ್ನು ಭೇಟಿ ಮಾಡಲು ಹೋಗುವಾಗ ಮತ್ತೊಬ್ಬ ಮಹಾನ್ ಪ್ರತಿಭೆ ಹಂಸಲೇಖ ಅವರೊಂದಿಗೆ ಆಕಸ್ಮಿಕವಾಗಿ ಪ್ರಯಾಣಿಸುವುದೆಂದರೆ ಇದು ಸುಯೋಗ ಅಲ್ಲದೇ ಮತ್ತೇನು? ಇಂಥದ್ದೊಂದು ಅನಿರೀಕ್ಷಿತ ಅದೃಷ್ಟ ತಂದ ಸಂತೋಷವನ್ನು ಮಾತಿನಲ್ಲಿ ಹೇಳಲಾಗದು.

ಮದ್ರಾಸಿನಲ್ಲಿ ಇಳಿದು ಹಂಸಲೇಖ ಅವರು ಅವರ ಕೆಲಸದ ನಿಮಿತ್ತ ಮತ್ತೆಲ್ಲೋ ಹೊರಟರು. ನಾನು ಪ್ರಸಾದ್ ಸ್ಟುಡಿಯೊಗೆ ಹೊರಟೆ. ಸ್ಟುಡಿಯೊದ ಕಂಪೋಸಿಂಗ್ ಕೋಣೆಯೊಳಗೆ ಹೋದೆ. ಅಚ್ಚ ಬಿಳಿ ದಿರಿಸಿನಲ್ಲಿ ಬಿಳಿ ಹಾಸಿಗೆಯ ಮೇಲೆ ಹಾರ್ಮೋನಿಯಂ ಮುಂದೆ ಕುಳಿತಿದ್ದರು ಇಳಯರಾಜ. ಅವರ ಕಾಲಿಗೆರಗಿ ಎದುರಿಗೆ ಕುಳಿತೆ. ನನ್ನನ್ನು ಪರಿಚಯಿಸಿದ ನಿರ್ದೇಶಕ ಶ್ರೀನಿವಾಸ್ ನಾನು ಅಲ್ಲಿಗೆ ಹೋಗುವ ಮುನ್ನ ನನ್ನ ಬಗ್ಗೆ ಹೇಳಿದ್ದರು. ಇಳಯರಾಜ ಅವರು ‘ಏನಪ್ಪ ಮ್ಯೂಸಿಕ್ ಕೂಡ ಮಾಡ್ತೀಯಂತೆ’ ಅಂದರು. ನಾನು ನಕ್ಕು ‘ನಮ್ಮ ಕಡೆ ಸಂಗೀತದ ಮೇಷ್ಟ್ರು ಅಂತಾರೆ. ನೀವು ಸಂಗೀತಕ್ಕೇ ಮೇಷ್ಟ್ರು. ನನ್ನ ಸಂಗೀತ ಜ್ಞಾನ ನಿಮ್ಮ ಒಂದು ಮ್ಯೂಸಿಕ್ ಬಿಟ್‌ಗೂ ಸಮ ಅಲ್ಲ’ ಅಂದೆ. ನಕ್ಕರು. ಅವರೊಡನೆ ಮಾತನಾಡಿದ್ದು ಭಕ್ತಿಭಾವಗಳ ವಿದ್ಯುದಾಲಿಂಗನದ ಅನುಭವ.

ಒಂದು ಟ್ಯೂನ್ ಹಾಕಿದರು. ಇದನ್ನು ರೆಕಾರ್ಡ್ ಮಾಡಿಕೋ ಅಂದರು. ಅವರು ಟ್ಯೂನ್ ಗುನುಗುತ್ತಿದ್ದ ಹಾಗೆ ‘ಮೊದಲನೇ ಬಾರಿ ನಂಗೇನೂ ಆಗಿದೆ ನಿನ್ನದೇ ಧ್ಯಾನ ಗುಂಗಾಗಿ ಹೋಗಿದೆ’ ಎಂದು ಆ ಟ್ಯೂನ್‌ಗೆ ಎರಡು ಸಾಲು ಹೇಳಿದೆ. ಅದನ್ನು ಹಾಡಿಕೊಂಡು ‘ಟ್ಯೂನ್‌ಗೆ ಸರಿಯಾಗಿದೆ. ಇಂಪಾಗಿದೆ. ಸಂದರ್ಭಕ್ಕೂ ಸರಿಯಾಗಿದೆ’ ಎಂದು ಆಶ್ಚರ್ಯಗೊಂಡು ತಕ್ಷಣ ನಿರ್ದೇಶಕರನ್ನು ಕೇಳಿದರು, ‘ಉಳಿದ ಹಾಡುಗಳನ್ನು ಯಾರು ಬರೆಯುತ್ತಾರೆ?’. ನಿರ್ದೇಶಕರು ‘ಸಾರ್ ಇನ್ನೂ ಮೂರು ಜನ ಗೀತ ರಚನೆಕಾರರನ್ನು ಬರೋಕೆ ಹೇಳಿದ್ದೇನೆ’. ತಕ್ಷಣ ಇಳಯರಾಜ ಅವರು, ‘ಬೇಡ ಬೇಡ. ಬೇರೆ ಯಾರೂ ಬರೋದು ಬೇಡ. ಇಷ್ಟು ಪರ್ಫೆಕ್ಟ್ ಆಗಿ ಬರೀತಾನೆ ಈತ. ಎಲ್ಲಾ ಹಾಡುಗಳನ್ನು ಇವನೇ ಬರೆಯಲಿ’ ಅಂದುಬಿಟ್ಟರು. ನನಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಸಂತೋಷವಾಗಿದ್ದು ನಿಜ. ಅದು ಹೇಗೆ ತಕ್ಷಣ ಹೀಗೆ ಸಾಲುಗಳು ಹೊಳೀತು ಎಂದು ಕೇಳಿದರು. ನಿಮ್ಮನ್ನು ನೋಡಿದ ಧನ್ಯತಾ ಭಾವವೇ ಈ ಸಾಲುಗಳು ಸಾರ್ ಅಂದೆ.

ಎರಡು ದಿನ ಅಲ್ಲೇ ಇದ್ದು ಒಟ್ಟು ಏಳು ಹಾಡುಗಳನ್ನು ಬರೆದೆ. ಹಾಡುಗಳನ್ನು ಹಾಡಿಸುವಾಗ ಗೀತ ರಚನೆಕಾರ ಇರಬೇಕೆಂಬ ಹಳೆಯ ಪದ್ಧತಿಯನ್ನು ಅವರು ಕೈಬಿಟ್ಟಿಲ್ಲ. ಬೆಳಿಗ್ಗೆ ಆರು ಗಂಟೆಗೆ ಸ್ಟುಡಿಯೊಗೆ ಬಂದು ಕೆಲಸ ಮಾಡುವ ಉತ್ಸಾಹ ಮತ್ತು ಅಭ್ಯಾಸ ಇಂದಿಗೂ ಇದೆ. ಹೊಸ ತಲೆಮಾರಿನವರು ಅವರಿಂದ ಕಲಿಯುವುದು ಬೆಟ್ಟದಷ್ಟಿದೆ.

ಅಲ್ಲೊಂದು ಭಾವನಾತ್ಮಕ ಪ್ರಸಂಗ ನಡೆಯಿತು. ಒಂದು ಹಾಡಿನ ಕಂಪೋಸಿಂಗ್, ಗೀತರಚನೆ ಮುಗಿದಾಗ ‘ಈ ಹಾಡು ಯಾರು ಹಾಡಿದರೆ ಚೆಂದ?’ ಎಂದು ನನ್ನನ್ನು ಕೇಳಿದರು. ‘ಈ ಮೂರು ಹಾಡುಗಳಿಗೆ ಎಸ್ಪಿಬಿ ಅವರಲ್ಲದೆ ಇನ್ಯಾರೂ ಹಾಡಿದರೂ ಚೆನ್ನಾಗಿರೊಲ್ಲ ಸಾರ್’ ಅಂದು ಬಿಟ್ಟೆ. ಎಸ್ಪಿಬಿ ಮತ್ತು ಇಳಯರಾಜ ಅವರ ನಡುವೆ ಅಗಾಧವಾದ ಸ್ನೇಹವಿದೆ. ಆಗಾಗ ಮುನಿಸು ಕೂಡಾ ಎನ್ನುವುದು ಅನೇಕರು ಬಲ್ಲರು. ನಾನು ಹೇಳಿದ ಸಂದರ್ಭ ಮುನಿಸಿನ ದಿನಗಳದ್ದು.

ತಕ್ಷಣ ನನ್ನ ಕಡೆ ನೋಡಿ, ‘ಯಾಕೆ ಅವನೇ ಹಾಡಬೇಕು. ಬೇರೆಯವರು ಹಾಡಿದರೆ ಚೆನ್ನಾಗಿರೊಲ್ಲವಾ?’ ಅಂದರು. ‘ಇಲ್ಲಾ ಸಾರ್ ಈ ಕಂಪೋಸಿಷನ್‌ಗೆ ಬಾಲು ಸರ್ ವಾಯ್ಸ್ ಬಿಟ್ಟು ಬೇರೆ ವಾಯ್ಸು ಊಹೆ ಮಾಡ್ಕೊಳ್ಳೋಕೆ ಆಗ್ತಿಲ್ಲ’ ಅಂದೆ. ಒಂದು ಕ್ಷಣ ನನ್ನನ್ನೇ ದುರುಗುಟ್ಟಿ ನೋಡಿ ಸರಿ ಎಂದು ತಲೆಯಾಡಿಸಿ ಮ್ಯಾನೇಜರ್‌ ಅವರನ್ನು ಕರೆದು ಬಾಲುನ ಬರೋಕೆ ಹೇಳು ಅಂದರು. ಸಂಜೆ ಹೊತ್ತಿಗೆ ಬಾಲು ಸರ್ ಆಗಮನವಾಯಿತು.

ಪ್ರಸಾದ್ ಸ್ಟುಡಿಯೊ ಭಾರತದ ಬಹುವಿಶಾಲ ಹಾಗೂ ಹಳೆಯ ಸ್ಟುಡಿಯೊ. ಅದು ಒಂದು ಸಿನಿಮಾ ಥಿಯೇಟರ್‌ನಷ್ಟೇ ದೊಡ್ಡದು. ಕಂಪೋಸಿಂಗ್ ರೂಂ, ರೆಕಾರ್ಡಿಂಗ್ ರೂಂ, ರೆಕಾರ್ಡಿಂಗ್ ಹಾಲ್ ಹೀಗೆ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗಲು ಕನಿಷ್ಠ ಎರಡು ನಿಮಿಷ ಬೇಕು. ಅಷ್ಟು ವಿಶಾಲ. ಎಸ್ಪಿಬಿಯವರು ರೆಕಾರ್ಡಿಂಗ್ ರೂಂಗೆ ಬಂದು ಕುಳಿತರು. ಇಳಯರಾಜ ಅವರು ಕಂಪೋಸಿಂಗ್ ರೂಂನಲ್ಲಿದ್ದರು. ಎಸ್ಪಿಬಿ ಅವರು ಬಂದಿದ್ದಾರೆಂದು ರಾಜಾ ಸರ್‌ಗೆ ಹೇಳಿದೆ. ಅವನನ್ನು ಕರಿ ಅಂದರು. ಹೋಗಿ ಹೇಳಿದೆ. ಅವನನ್ನೇ ಇಲ್ಲಿಗೆ ಕರಿ ಅಂದರು ಎಸ್ಪಿಬಿ. ಇವರಿಬ್ಬರ ಏಕವಚನದ ಪ್ರೀತಿಯಲ್ಲಿ ನಾನು ಭಾಗವಹಿಸಿದ್ದು ಒಂಥರಾ ಖುಷಿ.

ಆದರೆ, ಯಾಕೋ ಇಬ್ಬರೂ ಒಬ್ಬರನ್ನೊಬ್ಬರು ಸಂಧಿಸಲು ಸಿದ್ಧರಿರಲಿಲ್ಲ. ಸುಮಾರು ನಾಲ್ಕೈದು ಸಲ ಅವರಿಬ್ಬರ ಮಾತುಗಳಿಗೆ ದೂತನಾಗಿ ಅಲ್ಲಿಂದಿಲ್ಲಿಗೆ ಓಡಾಡಿ ಬಿಟ್ಟೆ. ವಿಚಿತ್ರ ಅನ್ನಿಸಿತ್ತು. ಕೊನೆಗೆ ಎಸ್ಪಿಬಿಯವರೆ ಇಳಯರಾಜ ಅವರ ಕೋಣೆಗೆ ಬಂದರು. ಇಬ್ಬರು ಆಜನ್ಮ ಮಿತ್ರರಂತೆ ಸರಿಸುಮಾರು ಎರಡು ತಾಸು ಮಾತನಾಡಿದರು. ಇಲ್ಲಿಯ ತನಕ ನಾನು ನೋಡಿದ ಆ ಇಬ್ಬರು ಬೇರೆ ಈ ಇಬ್ಬರೇ ಬೇರೆ ಅನ್ನಿಸಿಬಿಟ್ಟಿತು. ಅವಾಕ್ಕಾದೆ. ಹಾಡುಗಳನ್ನು ಅಲ್ಲೇ ತಾಲೀಮು ಮಾಡಿಕೊಂಡ ಎಸ್ಪಿಬಿಯವರು ಅದೆಷ್ಟೋ ಹಳೆಯ ಹಾಡುಗಳನ್ನು ಹಾಡಿದರು. ಇಬ್ಬರ ಜುಗಲ್‌ಬಂದಿಯಾಯಿತು. ನಾನೇ ಅದೃಷ್ಟವಂತ. ಮಾತು, ಹಾಡು ಎಲ್ಲಾ ಮುಗಿದು ಹಾಡುಗಳನ್ನು ಹಾಡಲು ಎಸ್ಪಿಬಿ ರೆಕಾರ್ಡಿಂಗ್ ರೂಂಗೆ ಬಂದರು.

ನನ್ನನ್ನು ಕರೆದು ‘ನಾನು ರಾಜಾಗೆ ಹಾಡಿ ಏಳು ವರ್ಷ ಆಗಿತ್ತು. ಈ ಪುನರ್ ಮಿಲನಕ್ಕೆ ನೀನು ಸಾಕ್ಷಿಯಾದೆ’ ಎಂದು ಭಾವುಕರಾಗಿ ಹೇಳಿದಾಗ, ನನಗೆ ಮಾತೇ ನಿಂತು ಹೋಗಿತ್ತು. ನಮ್ಮ ನಡುವಿನ ಸಂಗೀತ ಸಂತ ಇಳಯರಾಜ ಅವರೊಂದಿಗೆ ಕಳೆದ ಅವೆಷ್ಟೋ ಕ್ಷಣಗಳು, ದಿನಗಳು ನೆನಪಿಗೆ ಬರುತ್ತವೆ. ನೀವು ಮೈಕಲ್ ಜಾಕ್ಸನ್ ವಿಡಿಯೊವನ್ನು ನೋಡಿದ್ದರೆ ಅದರಲ್ಲಿ ಅಭಿಮಾನಿಗಳು ಜಾಕ್ಸನ್ ಮುಟ್ಟಿದ್ದಕ್ಕೆ ಅಭಿಮಾನಿಗಳು ಮೂರ್ಛೆ ಹೋದಂತಹ ದೃಶ್ಯಗಳನ್ನು ನೋಡಿರುತ್ತೀರಿ. ಇಳಯರಾಜ ಅವರನ್ನು ಕಾಣಲು ಸ್ಟುಡಿಯೊಗೆ ಬಂದಿದ್ದ ಅಭಿಮಾನಿಯೊಬ್ಬಾಕೆ ಅವರನ್ನು ಕಂಡ ಆನಂದಕ್ಕೆ ಮೂರ್ಛೆ ಹೋದದ್ದನ್ನು ನಾನು ಕಣ್ಣಾರೆ ಕಂಡೆ. ಇಂಥ ಸಂತನಿಗೆ ಈಗ ಎಪ್ಪತ್ತೇಳರ ವಸಂತ. ಇನ್ನೂ ನೂರ್ಕಾಲ ನಮ್ಮೊಂದಿಗಿದ್ದು ದಾಖಲೆಗಳನ್ನು ಮಾಡುತ್ತಲೇ ಇರಲೆಂದು ಹಾರೈಸೋಣ.

ಹ್ಯಾಪಿ ಬರ್ತ್ ಡೇ ರಾಜಾ ಸಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT