ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಸಂಗೀತ ಸೇವೆ ಮಾಡಿದ ತೃಪ್ತಿ ನನಗೆ -ಜಿ.ಎಸ್‌. ಹೆಗಡೆ

Last Updated 18 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಭಾರತೀಯ ಶಾಸ್ತ್ರೀಯ ಸಂಗೀತದ ಸಂಘಟನೆಯ ಕ್ಷೇತ್ರದಲ್ಲಿ ಬೆಂಗಳೂರಿನ ‘ಸಪ್ತಕ’ ಸಂಸ್ಥೆಯ ಕೊಡುಗೆ ಬಹಳ ಮಹತ್ವದ್ದು. ಇಲ್ಲಿಯವರೆಗೆ ಸಪ್ತಕ 1800ಕ್ಕೂ ಹೆಚ್ಚು ಕಲಾವಿದರಿಗೆ ವೇದಿಕೆ ಕಲ್ಪಿಸಿದೆ. ಅಷ್ಟೇ ಅಲ್ಲದೆ, ಸಂಗೀತ ಶಾಲೆಗಳಿಗೆ ಸಂಗೀತ ಉಪಕರಣ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಕಲಾವಿದರಿಗೆ ಆರ್ಥಿಕ ನೆರವನ್ನೂ ನೀಡಿದೆ. ಜಿ.ಎಸ್. ಹೆಗಡೆಯವರೇ ಸಪ್ತಕದ ಈ ದೊಡ್ಡ ಸಾಹಸದ ಹಿಂದಿನ ಶಕ್ತಿ. ಅವರೊಂದಿಗೆ ಒಂದು ಮಾತುಕತೆ ಇಲ್ಲಿದೆ:

ಸಂಗೀತದ ಒಲವು ನಿಮ್ಮಲ್ಲಿ ಬೆಳೆದಿದ್ದು ಹೇಗೆ?
ಬಾಲ್ಯದಲ್ಲಿಯೇ ನನಗೆ ಸಂಗೀತದ ಪರಿಚಯವಾಯಿತು. ಭಜನಾ ಕಾರ್ಯಕ್ರಮಗಳು ಅದಕ್ಕೆ ನೆರವಾದವು. ಅಂದು ನಮ್ಮ ಇಡೀ ಜಿಲ್ಲೆಯಲ್ಲಿ ಯಕ್ಷಗಾನ ಬಿಟ್ಟರೆ ಸಾಂಸ್ಕೃತಿಕವಾಗಿ ಒಗ್ಗೂಡುವಂತಹ, ಸಂತೋಷ ಕೊಡುವಂತಹ ಇನ್ನೊಂದು ವೇದಿಕೆ ಅಂದರೆ ಭಜನೆ ಸಪ್ತಾಹ. ಕೆರೆಮನೆ ಮಹಾಬಲ ಹೆಗಡೆ, ಗಜಾನನ ಹೆಗಡೆ, ಗಜಾನನ ಯಾಜಿ ಇಡಗುಂಜಿ, ಕೋಣಾರ ರಾಮ ಮಾಸ್ತರ ಹೀಗೆ ಹಲವಾರು ವಿಶೇಷ ವ್ಯಕ್ತಿಗಳು ಬಂದು ಹಾಡುವಾಗ ನಮಗೆ ತುಂಬಾ ಸುಖ ಅನಿಸುತ್ತಿತ್ತು. ಅದೆಲ್ಲಾ ಕೇಳ್ತಾ ಕೇಳ್ತಾ ಬೆಳೀತಾ ಇರುವಾಗ್ಲೇ ನನಗೆ ಶಾಸ್ತ್ರೀಯ ಸಂಗೀತದ ರಾಗದ ಚಲನೆ, ಸ್ವರದ ಆಟ ಎಲ್ಲ ತುಂಬಾ ಗುಂಗು ಹಿಡಿಸಿದವು. ಹಾಗೇ ಆ ಹುಚ್ಚು ಬೆಳೀತಾ ಹೋಯಿತು.

ಸಪ್ತಕ ಹೇಗೆ ಪ್ರಾರಂಭ ಆಯಿತು? ಸಂಗೀತ ಸಂಘಟನೆಯ ಅನುಭವದ ಕುರಿತು ಹೇಳುವಿರಾ?

ನಾನು ಕರ್ನಾಟಕ ಬ್ಯಾಂಕ್‌ ಉದ್ಯೋಗಿಯಾಗಿದ್ದೆ. ಗೋಕರ್ಣ, ಹುಬ್ಬಳ್ಳಿ–ಧಾರವಾಡ, ಹಾವೇರಿಯಲ್ಲಿ ಕೆಲಸ ಮಾಡಿದೆ. ಬೆಂಗಳೂರಿಗೆ ನಾನು ಬಂದಿದ್ದು 1989ನೇ ಇಸವಿಯಲ್ಲಿ. ಆಗ ವಿನಾಯಕ ತೊರವಿಯವರು ಗುರುರಾವ ದೇಶಪಾಂಡೆ ಸಂಗೀತ ಸಭಾ ಅಂತ ಒಂದು ಸಂಸ್ಥೆ ಆರಂಭಿಸಿದ್ದರು. ವರ್ಷಕ್ಕೊಂದು ಅಹೋರಾತ್ರಿ ಕಾರ್ಯಕ್ರಮ ಮಾಡ್ತಿದ್ರು. ತೊರವಿಯವರು ಸಂಸ್ಥೆಯನ್ನು ನೋಂದಣಿ ಮಾಡಿ ಒಂದು ಟ್ರಸ್ಟ್‌ ಮಾಡಬೇಕು ಅಂತ ಹೇಳಿದರು. ನಾನೇ ಆ ಟ್ರಸ್ಟ್‌ನ ಡೀಡ್ ತಯಾರು ಮಾಡಿದ್ದೆ. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತಿದ್ದೆ. ಅನಿವಾರ್ಯ ಕಾರಣದಿಂದ ಸಂಘಟನೆ ಬಿಟ್ಟು ಹೊರಬರಬೇಕಾಯಿತು.

ನೀವು ಇಷ್ಟು ವರ್ಷ ಕೆಲಸ ಮಾಡಿದಿರಿ, ಒಂದು ಸಂಘಟನೆ ಮಾಡ್ಬಿಡಿ ಅಂತ ಎಲ್ಲರೂ ಹೇಳತೊಡಗಿದರು. ಹಾಗೇ ನಾನು ಈ ಸಪ್ತಕವನ್ನು 2006ರ ಮೇ 5ನೇ ತಾರೀಖಿಗೆ ಪ್ರಾರಂಭ ಮಾಡಿದೆ. ಸಪ್ತಕ ಶುರು ಮಾಡುವಾಗ ನನಗೆ 55 ವರ್ಷ. ನನಗೀಗ 70. ಅಷ್ಟೂ ವರ್ಷದ ಅನುಭವದ ಒಂದು ಗಟ್ಟಿ ಆಧಾರದ ಮೇಲೆ ಸಂಸ್ಥೆ ಬೆಳೆದಿದೆ.

ನನ್ನ ಒಂದು ಸಂಘಟನಾತ್ಮಕ ಶಕ್ತಿಗೆ ಮೆಚ್ಚಿಯೇ ಇರಬೇಕು ಬೇರೆ ರಾಜ್ಯದಿಂದ ಬಂದಂತಹ ಕಲಾವಿದರು ಮತ್ತು ಅವರ ತಂಡ ಅಥವಾ ಬೇರೆ ರಾಜ್ಯದ ಸಂಸ್ಥೆಗಳು ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡಬೇಕೆಂದರೆ ಸಪ್ತಕದೊಟ್ಟಿಗೆ ಮಾಡಬೇಕೆಂದು ಬಂದವು. ಉತ್ತರ ಕನ್ನಡದಲ್ಲೂ ಕಾರ್ಯಕ್ರಮ ಮಾಡಿದೆ. ಆಮೇಲೆ ದಕ್ಷಿಣ ಕನ್ನಡ, ಉಡುಪಿ, ಧಾರವಾಡ ಹೀಗೆ ಬೆಳೀತಾ ಹೋಯಿತು. ಮುಂಬೈಗೆ ಹೋಗಿನೂ ಕಾರ್ಯಕ್ರಮ ಆಯಿತು. ನಂತರ ಹೈದರಾಬಾದಿನಲ್ಲೂ ಕಾರ್ಯಕ್ರಮ ಆಯಿತು. ಸಪ್ತಕದ ಕಾರ್ಯಕ್ರಮದ ಪ್ರಾರಂಭದಲ್ಲಿ ಮೊದಲು ಒಬ್ಬ ಕಿರಿಯ ಕಲಾವಿದರಿಗೆ ಅವಕಾಶ ನಂತರ ಹಿರಿಯರಿಗೆ. ಇದರಿಂದ ಎಲ್ಲರೂ ಬೆಳೆಯಲು ಸಾಧ್ಯವಾಯಿತು ಎನ್ನುವ ಸಮಾಧಾನ ನನಗೆ.

ಕಾಲ ಕಳೆದಂತೆ ಶ್ರೋತೃವಿನ ಜವಾಬ್ದಾರಿ ಕಡಿಮೆ ಆಯಿತೇ?
ಉಚಿತ ಕಛೇರಿಗಳ ಕಾರಣಕ್ಕಾಗಿ ಶ್ರೋತೃವಿನ ಜವಾಬ್ದಾರಿ ಖಂಡಿತ ಕಡಿಮೆ ಆಗಿರಬಹುದು, ಆದರೆ ನನ್ನ ತಿಳಿವಳಿಕೆಯ ಮಟ್ಟಿಗೆ ಪ್ರೇಕ್ಷಕ ಯಾವ ಊರಿನವನು, ಯಾವ ಕ್ಷೇತ್ರದವನು ಎನ್ನುವುದರ ಮೇಲೆ ಹೋಗುತ್ತದೆ. ಮಹಾರಾಷ್ಟ್ರ ಹಾಗೂ ಬಹಳ ಕಡೆ ಟಿಕೆಟ್‌ ಇಟ್ಟೇ ಕಾರ್ಯಕ್ರಮ ನಡೆಸಲಾಗುತ್ತದೆ. ನಮ್ಮಲ್ಲಿ ಯಾಕೆ ತಪ್ಪಿಹೋಯಿತು? ದೊಡ್ಡ ಕಾರ್ಯಕ್ರಮಗಳಿಗೆ ಮಾತ್ರ ಟಿಕೆಟ್‌ ಇರುತ್ತದೆ. ತೊರವಿಯವರ ಸಂಗಡ ಮಾಡಿದ ಅಹೋರಾತ್ರಿ ಕಾರ್ಯಕ್ರಮದಲ್ಲಿ ಶ್ರೋತೃಗಳಿಗೆ ಒಮ್ಮೆ ಮೂರು ಸಲ ಚಹಾ ಕೊಟ್ಟಿದ್ವಿ. ನಿದ್ದೆಯನ್ನು ಓಡಿಸಲು ಈ ವ್ಯವಸ್ಥೆ ಮಾಡಿದ್ದೆವು. ಶ್ರೋತೃಗಳು ಕಾರ್ಯಕ್ರಮ ಆಯೋಜನೆಯ ಹೊಣೆ ಹೊತ್ತರೆ ಸಂಘಟಕರ ಕೆಲಸ ಸಲೀಸಾಗುತ್ತದೆ.

ಸಂಗೀತದ ಗುಣಮಟ್ಟದಲ್ಲಿ ಯಾವ ರೀತಿಯ ಬದಲಾವಣೆ ಕಂಡಿದ್ದೀರಿ?
ಸಂಗೀತದ ಗುಣಮಟ್ಟದ ಬಗ್ಗೆ ನಾನು ಹೆಚ್ಚು ವಿಮರ್ಶೆಗೆ ಹೋಗುವುದಿಲ್ಲ. ಶುದ್ಧ ಶಾಸ್ತ್ರೀಯ ಸಂಗೀತ, ರಾಗಬದ್ಧ ಸಂಗೀತ, ರಾಗದಾರ ಸಂಗೀತ, ಸ್ವರ, ಲಯ, ತಾಳ ಇವೆಲ್ಲ ಇರಲೇಬೇಕು. ಒಂದು ರಾಗದ ಹಾಡುವಿಕೆಯೂ ಒಬ್ಬ ಕಲಾವಿದನಿಂದ ಇನ್ನೊಬ್ಬ ಕಲಾವಿದನಿಗೆ ಬೇರೆ ಆಗುತ್ತದೆ. ಇನ್ನು ಬೆಳವಣಿಗೆಯ ಬಗ್ಗೆ ಹೇಳುವುದಿದ್ದರೆ ಈಗಿನ ಯುವಕಲಾವಿದರು ಸ್ವಲ್ಪ ಹಿಂದೆ ಅಂತ ಹೇಳಬಹುದು.

ಶಾಸ್ತ್ರೀಯ ಸಂಗೀತಕ್ಕೆ ಸಿಗುವಂತಹ ಅವಕಾಶಗಳೂ ತುಂಬಾ ಕಡಿಮೆ. ಈಗಿನ ಹೊಸಬರಿಗೆ ಪ್ರೋಗ್ರಾಮುಗಳೂ ಅಷ್ಟು ಸಿಗುವುದಿಲ್ಲ. ಶಾಸ್ತ್ರೀಯ ಸಂಗೀತ ಬೆಳೆಯಲು ಬೇಕಾಗುವಂತಹ ಪೂರಕವಾದ ವಾತಾವರಣ ಬಹಳ ಕಡಿಮೆಯಿದೆ. ಏಕೆಂದರೆ ಅವರಿಗೆ ಬೇಕಾಗುವಂತಹ ಪ್ರೋತ್ಸಾಹ, ಸ್ಕಾಲರ್‌ಶಿಪ್, ಸಂಗೀತದ ಉಪಕರಣ, ಯಾವುದೋ ರೀತಿಯಲ್ಲಿ ಸಮಾಜದಿಂದಲೋ ಸರ್ಕಾರದಿಂದಲೋ ಅವರಿಗೆ ನಿಗದಿತವಾಗಿ ಸಿಗುತ್ತದೆ ಅಂತಾದರೆ ಆಗ ತೊಡಗಿಸಿಕೊಳ್ಳಲು ಹೆಚ್ಚಿನ ಕಷ್ಟವಾಗುವುದಿಲ್ಲ.

ಸಂಗೀತ ಕಲಾವಿದರಿಗೆ ಆದಾಯ ಸಿಗುತ್ತಿದೆಯೇ?
ಸಂಗೀತಗಾರ ಆರ್ಥಿಕವಾಗಿ ಒಂದು ಥರ ಸಬಲನಾಗುತ್ತಾ ಇರುವುದು ಹೌದು, ಅದು ಅವಶ್ಯವೂ ಹೌದು. ಏಕೆಂದರೆ ಅವನಿಗೆ ಒಂದು ಕಡೆಯಿಂದ ಸಮಾಧಾನ ಬೇಕಾಗುತ್ತದಲ್ಲ. ಒಂದು ಕಾಲದಲ್ಲಿ ಸಂಗೀತಗಾರ ಸಂಗೀತದ ಒಂದು ವೈಶಿಷ್ಟ್ಯಕ್ಕೆ ಮಾರುಹೋಗಿ ಹಾಡಿದ್ದೇ ಬಿಟ್ಟರೆ ತನಗೆ ಬಡತನ ಇದೆ, ಹಾಡಲು ಬರುತ್ತದೆ, ಹಾಡಿದರೆ ಹಣ ಮಾಡಬಹುದು ಎಂದು ಹಾಡುವುದಿಲ್ಲವಾಗಿತ್ತು. ಈಗ ಹಾಡಿದ್ದಕ್ಕೆ ದುಡ್ಡು ಬರುತ್ತದೆ ಎನ್ನುವುದು ಒಂದು ಪ್ಲಸ್ ಪಾಯಿಂಟ್‌ ಆಗಿದೆಯೇ ವಿನಾ ಸಾಧನೆಗೆ ಅದು ಅಡ್ಡಿ ಬರುವುದಿಲ್ಲ. ಆದರೆ, ಸಂಗೀತಗಾರ ಏನಾದರೂ ಹಾಡಿ ದುಡ್ಡು ಮಾಡುತ್ತಾನೆ ಎನ್ನುವುದು ಶಾಸ್ತ್ರೀಯ ಸಂಗೀತದಲ್ಲಿ ಇವತ್ತಿಗೂ ಸಾಧ್ಯವಿಲ್ಲ.

‘ಗೋಕರ್ಣದಲ್ಲಿ ಮನ್ಸೂರರಿಂದ ಹಾಡಿಸಿದ್ದೆವು’
ನಾನು ಗೋಕರ್ಣದಲ್ಲಿದ್ದಾಗ ಆದ ಒಂದೆರಡು ಕಥೆ ಹೇಳುತ್ತೇನೆ. ಅಂದರೆ ಆ ಸಂಗೀತ ನಡೆಯಬೇಕು ಎನ್ನುವ ಉದ್ದೇಶ ಹೇಗಿತ್ತು ಅಂದರೆ ಅಲ್ಲಿದ್ದಂತಹ ಇತಿಮಿತಿಯಲ್ಲಿ, ನಾವು ಗೋಕರ್ಣದಲ್ಲಿದ್ದಾಗಲೇ ಮಲ್ಲಿಕಾರ್ಜುನ ಮನ್ಸೂರರು ಯಾವುದೋ ಪೂಜೆಯ ಸಲುವಾಗಿ ಅಲ್ಲಿಗೆ ಬರುತ್ತಾರೆ ಎಂದು ತಿಳಿದು, ಕಮಲಾಕರ ಭಟ್ಟರಿಗೆ ಹೇಳಿ, ಹಿರೇಮಠ ಅವರಿಗೆ ದಮ್ಮಯ್ಯ ಹಾಕಿ, ಆ ದಿನ ಸಂಜೆ ಗೋಕರ್ಣದ ದೇವಸ್ಥಾನದ ಪೌಳಿಯ ಮೇಲೆ ಒಂದು ಕಾರ್ಯಕ್ರಮ ಮಾಡಿಸಿದ್ದೆವು. ಅಂದು ಗೌರೀಶ ಕಾಯ್ಕಿಣಿ ಅವರೆಲ್ಲ ಇದ್ದರು. ಅಂದರೆ ಗೋಕರ್ಣದಂತಹ ಏನೂ ಇಲ್ಲದೇ ಇದ್ದಲ್ಲೂ ಮಲ್ಲಿಕಾರ್ಜುನ ಮನ್ಸೂರರ ಕಾರ್ಯಕ್ರಮ ಮಾಡಿಸಿದ್ದು ನನ್ನ ಇಡೀ ಜೀವನದಲ್ಲಿ ಮರೆಯುವ ಹಾಗಿಲ್ಲ.

ಬಸವರಾಜ ರಾಜಗುರು ಹಾಗೆಯೇ ಬಂದಿದ್ದರು. ಅವರ ಕಾರ್ಯಕ್ರಮವನ್ನೂ ಹೀಗೆಯೇ ಮಾಡಿಸಿದ್ದೆ. ಆಮೇಲೆ ಗಂಗೂಬಾಯಿ ಹಾನಗಲ್‌, ಮಾಧವ ಗುಡಿ ಅವರಿಂದ ಕಛೇರಿ ಏರ್ಪಡಿಸಿದ್ದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT