ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ಕಂಠದ ಮಧುರ ಗಾಯಕ ಭೂಪಿಂದರ್ ಸಿಂಗ್

Last Updated 23 ಜುಲೈ 2022, 23:30 IST
ಅಕ್ಷರ ಗಾತ್ರ

ಮೂರು ದಶಕಗಳ ಕಾಲ ಬಾಲಿವುಡ್‌ ಮತ್ತು ಗಝಲ್‌ ಸಂಗೀತ ಲೋಕದಲ್ಲಿ ಸಾಮ್ರಾಟನಂತೆ ಮೆರೆದ ಈ ಗಾಯಕ, ತಮ್ಮ ಶಾಸ್ತ್ರೀಯ ಸಂಗೀತದ ಸ್ಪರ್ಶವನ್ನು ಉಳಿಸಿಕೊಂಡೇ ಜನಪ್ರಿಯತೆಯ ಶಿಖರಕ್ಕೇರಿದವರು. ಸಂಗೀತ ಪ್ರಿಯರಿಗೆ ಈ ಮಹಾನ್‌ ಗಾಯಕ ಭೂಪಿಂದರ್‌ ಸಿಂಗ್‌ ಎಂದರೆ ನೆನಪಾಗುವುದು ಅವರ ಮೆಲುದನಿಯ ಮಧುರ ಗಝಲ್‌ಗಳು. ಆದರೆ, ಹಿಂದಿ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ಗಿಟಾರ್‌ ವಾದಕರಲ್ಲಿ ಭೂಪಿಂದರ್‌ ಒಬ್ಬರಾಗಿದ್ದರು ಎನ್ನುವುದು ಈಗಿನ ಪೀಳಿಗೆಯವರಿಗೆ ಅಚ್ಚರಿಯ ಸಂಗತಿಯಾಗಿ ತೋರಬಹುದು.

‘ಹರೇರಾಮ ಹರೇಕೃಷ್ಣ’ ಚಿತ್ರದ ‘ದಮ್‌ ಮಾರೋ ದಮ್‌’ ಹಾಡಿನ ಗಿಟಾರ್‌ ಇಂಪನ್ನು, ‘ಯಾದೋಂಕಿ ಬಾರಾತ್‌’ ಚಿತ್ರದ ‘ಚುರಾಲಿಯಾ ಹೈ’ ಹಾಡಿನ ಆರಂಭದ ಗಿಟಾರ್‌ ಸ್ವರವನ್ನು, ‘ಶೋಲೆ’ ಚಿತ್ರದ ‘ಮೆಹಬೂಬಾ ಮೆಹಬೂಬಾ’ ಹಾಡಿನ ಹಿನ್ನೆಲೆಯ ಸ್ವರವನ್ನು, ‘ಚಲ್ತೇ ಚಲ್ತೇ’ ಹಾಡಿನ ನೇಪಥ್ಯದ ಮಾಧುರ್ಯವನ್ನು ಯಾರಿಂದಲಾದರೂ ಮರೆಯಲು ಸಾಧ್ಯವೇ? ಈ ಗಿಟಾರ್‌ ವಾದನಕ್ಕೆ ಜೀವ ಕೊಟ್ಟವರು ಭೂಪಿಂದರ್. ಖಯ್ಯಾಂ, ಆರ್‌.ಡಿ.ಬರ್ಮನ್‌ ಮತ್ತು ಲಕ್ಷ್ಮೀಕಾಂತ್‌ ಪ್ಯಾರೇಲಾಲ್‌ ಅವರೊಡನೆ ಸಹಾಯಕರಾಗಿ, ಗಿಟಾರ್‌ ವಾದಕರಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದವರು ಅವರು. 12 ತಂತಿಗಳ ಗಿಟಾರ್‌ ಪರಿಚಯಿಸಿದ ಕೀರ್ತಿಯೂ ಭೂಪಿಂದರ್‌ಗೇ ಸಲ್ಲಬೇಕು.

1940ರ ಫೆಬ್ರುವರಿ 6ರಂದು ಪಂಜಾಬ್‌ನ ಅಮೃತಸರದಲ್ಲಿ, ಸಂಗೀತಗಾರ ನಾಥಾ ಸಿಂಘ್‌ಜಿ ದಂಪತಿಗೆ ಜನಿಸಿದ ಭೂಪಿಂದರ್‌, ತಂದೆಯಿಂದಲೇ ಸಂಗೀತ ಶಿಕ್ಷಣ ಮತ್ತು ದೀಕ್ಷೆಯನ್ನು ಪಡೆದವರು. ಆಕಾಶವಾಣಿಯಲ್ಲಿ ಸತೀಶ್‌ ಭಾಟಿಯಾ ಅವರ ನಿರ್ದೇಶನದಲ್ಲಿ ತಾತ್ಕಾಲಿಕ ಕಲಾವಿದರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಭೂಪಿಂದರ್‌, ಮುಂದೆ ದೂರದರ್ಶನದಲ್ಲಿಯೂ ಸೇವೆ ಸಲ್ಲಿಸಿದವರು. ಹಿಂದಿ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಮದನ್‌ ಮೋಹನ್‌ ಅವರನ್ನು ಸನ್ಮಾನಿಸಲು 1962ರಲ್ಲಿ ಸತೀಶ್‌ ಭಾಟಿಯಾ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಭೂಪಿಂದರ್‌ ಅವರ ಗಿಟಾರ್‌ ವಾದವನ್ನು ಕೇಳಿದ ಮದನ್‌ ಮೋಹನ್‌, ಅವರನ್ನು ಮುಂಬೈಗೆ ಆಹ್ವಾನಿಸಿದ್ದರು. ಚೇತನ್‌ ಆನಂದ್‌ ನಿರ್ಮಿಸಿದ ‘ಹಖೀಕತ್‌’ ಚಿತ್ರದಲ್ಲಿ ಮೊಹಮ್ಮದ್‌ ರಫಿ, ತಲತ್‌ ಮೆಹಮೂದ್‌, ಮನ್ನಾ ಡೇ ಅವರ ಜೊತೆಯಲ್ಲಿ ಹಾಡುವ ಭಾಗ್ಯ ಭೂಪಿಂದರ್‌ಗೆ ಒದಗಿಬಂತು. ‘ಹೋಕೆ ಮಜಬೂರ್‌ ಮುಝೆ ಉಸ್ನೆ ಬುಲಾಯಾ ಹೋಗಾ’ ಎಂಬ ಈ ಹಾಡು ಇಂದಿಗೂ ಸಂಗೀತಪ್ರಿಯರ ನಡುವೆ ಗುನುಗುತ್ತಲೇ ಇರುತ್ತದೆ.

ಗಿಟಾರ್‌ ವಾದನದಲ್ಲಿ ಭೂಪಿಂದರ್‌ಗೆ ಸರಿಸಾಟಿಯಾದವರು ಇರಲು ಸಾಧ್ಯವೇ ಇಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ನೌಷಾದ್‌ ಅಭಿಮಾನದಿಂದ ಹೇಳುತ್ತಿದ್ದರು. ‘ಕಾದಂಬರಿ’ ಚಿತ್ರದಲ್ಲಿ ಉಸ್ತಾದ್‌ ವಿಲಾಯತ್‌ ಖಾನ್‌ (ಇವರು ಸಂಗೀತ ನಿರ್ದೇಶನ ನೀಡಿದ ಏಕೈಕ ಚಿತ್ರ) ಸಂಗೀತ ನಿರ್ದೇಶನದಲ್ಲಿ ಭೂಪಿಂದರ್‌ ಅವರು ಹಾಡಿದ ‘ಅಂಬರ್‌ ಕಿ ಏಕ್‌ ಪಾಕ್‌ ಸುರಾಹಿ’ ಹಾಡು ಸಾರ್ವಕಾಲಿಕ ಶ್ರೇಷ್ಠ ಗಾಯನ ಎಂದೇ ನೌಷಾದ್‌ ಪ್ರಶಂಸೆ ವ್ಯಕ್ತಪಡಿಸಿದ್ದರು. ಭೂಪಿಂದರ್‌ ಅವರ ಗಿಟಾರ್‌ ವಾದನಕ್ಕೆ ಮತ್ತೊಂದು ಗರಿ ಮೂಡಿದ್ದು ಮದನ್‌ ಮೋಹನ್‌ ನಿರ್ದೇಶನದ ‘ಹಸ್ತೇ ಜಖಂ’ ಚಿತ್ರದಲ್ಲಿನ ‘ತುಂ ಜೋ ಮಿಲ್‌ಗಯೇ ಹೋ...’ ಹಾಡಿನ ಮೂಲಕ. ತಲತ್‌, ರಫಿ, ಮುಖೇಶ್‌, ಕಿಶೋರ್‌, ಮನ್ನಾ ಡೇ ಇಂತಹ ದಿಗ್ಗಜರ ನಡುವೆ ಬಾಲಿವುಡ್‌ನಲ್ಲಿ ಗಾಯಕರಾಗಿ ತಮ್ಮದೇ ಆದ ಸ್ಥಾನ ಪಡೆಯಬೇಕಾದ ಸಂದರ್ಭದಲ್ಲಿ ಭೂಪಿಂದರ್‌ ತಮ್ಮ ಸ್ವರ ಮಾಧುರ್ಯ ಮತ್ತು ಶಾಸ್ತ್ರೀಯ ಧಾಟಿಯನ್ನು ಎಲ್ಲಿಯೂ ಬಿಟ್ಟುಕೊಡದೆ, ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನೂರಾರು ಮಧುರ ಗೀತೆಗಳನ್ನು ಸಂಗೀತ ಪ್ರೇಮಿಗಳಿಗೆ ಉಣಬಡಿಸಿದವರು. ಆರ್‌.ಡಿ. ಬರ್ಮನ್‌ ಅವರಿಗೆ ಸಹಾಯಕರಾಗಿ, ಗಿಟಾರ್‌ಗೆ ಹಿನ್ನೆಲೆ ವಾದ್ಯವಾಗಿ ಒಂದು ಪ್ರತಿಷ್ಠಿತ ಸ್ಥಾನವನ್ನು ಕಲ್ಪಿಸುವಲ್ಲಿ ಭೂಪಿಂದರ್‌ ಕೊಡುಗೆ ಹೆಚ್ಚಿದೆ. ಆರ್‌.ಡಿ.ಬರ್ಮನ್‌ ಗಿಟಾರ್‌ ವಾದ್ಯಕ್ಕೆ ಶಾಶ್ವತವಾದ ಒಂದು ಸ್ಥಾನ ಕಲ್ಪಿಸಿದ್ದರೆ, ಅದರ ಶ್ರೇಯ ಭೂಪಿಂದರ್‌ಗೆ ಸಲ್ಲಬೇಕು.

ಗಾಯನ ಸಾಮ್ರಾಜ್ಯದಲ್ಲಿ ತಮ್ಮದೇ ಆದ ಸ್ಥಾನ ಪಡೆಯಲು ಎಂದಿಗೂ ಸ್ಪರ್ಧಿಸದ ಭೂಪಿಂದರ್‌ ಸಂಗೀತದ ಶಾಸ್ತ್ರೀಯತೆ ಮತ್ತು ಮಾಧುರ್ಯದ ಗೆರೆಯನ್ನು ದಾಟಲೇ ಇಲ್ಲ ಎನ್ನುವುದು ವಿಶೇಷ. ಸಂಗೀತ ನಿರ್ದೇಶಕರು ಕೆಲವು ಸಂದರ್ಭಗಳಲ್ಲಿ ಹಾಡಿನಲ್ಲಿ ತಮ್ಮದೇ ಆದ ಹೊಸ ಸ್ವರಾನ್ವೇಷಣೆಯನ್ನು ತರಲು ಇಚ್ಛಿಸಿದರೂ ಭೂಪಿಂದರ್‌ ಅಂತಹ ಹಾಡುಗಳನ್ನು ನಿರಾಕರಿಸಿದ್ದಿದೆ. ಗಾಯನದಲ್ಲಿ ಶಾಸ್ತ್ರೀಯ ರಾಗಸ್ಪರ್ಶ ಮತ್ತು ಸಾಹಿತ್ಯದಲ್ಲಿ ಕಾವ್ಯಸ್ಪರ್ಶ ಇಲ್ಲದೆ ಹಾಡಲು ನಿರಾಕರಿಸುತ್ತಿದ್ದರು ಭೂಪಿಂದರ್‌. ಅವರ ಎಲ್ಲ ಹಾಡುಗಳಲ್ಲೂ ಈ ಛಾಪನ್ನು ಕಾಣಬಹುದು. ಕವಿ ಗುಲ್ಜಾರ್‌ ಅವರನ್ನು ತಮ್ಮ ಮಾರ್ಗದರ್ಶಕರೆಂದೇ ಭಾವಿಸಿದ್ದ ಭೂಪಿಂದರ್‌, ಗುಲ್ಜಾರ್‌ ಅವರ ಕವಿತೆಗಳ ಗುಚ್ಛವನ್ನೂ ‘ಕುಚ್‌ ಇಂತಿಜಾರ್‌ ಹೈ’ ಹೆಸರಿನ ಆಲ್ಬಂ ಮೂಲಕ ಪ್ರಸ್ತುತಪಡಿಸಿದ್ದರು. ಸಂಗೀತ ಆಲ್ಬಂಗಳಲ್ಲಿ ವಿಡಿಯೊ ಜೋಡಿಸುವಾಗ ಕಂಪನಿಗಳು ಅಸಂಬದ್ಧ ರೀತಿಯಲ್ಲಿ ಚಿತ್ರಗಳನ್ನು ಅಳವಡಿಸುವುದಕ್ಕೂ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದ ಭೂಪಿಂದರ್‌, ಇದರಿಂದ ಹಾಡಿನಲ್ಲಿರುವ ಸಾಹಿತ್ಯ ಮತ್ತು ಕಾವ್ಯಾಭಿವ್ಯಕ್ತಿಗೆ ಕುಂದುಬರುತ್ತದೆ ಎಂದು ಹೇಳುತ್ತಿದ್ದರು. ಒಂದು ಹಂತದ ನಂತರ ಆಲ್ಬಂಗಳಿಗೆ ಹಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು.

ಭೂಪಿಂದರ್‌ ಅವರ ಕೆಲವು ಬಾಲಿವುಡ್‌ ಗೀತೆಗಳೇ ಅವರ ಈ ಶಿಸ್ತುಬದ್ಧ ಗಾಯನಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಪರಿಚಯ್‌ ಚಿತ್ರದ ‘ಬೀತಿ ನಾ ಬಿತಾಯಿ ರೈನಾ’ (ಆರ್‌.ಡಿ. ಬರ್ಮನ್‌), ಮೌಸಮ್‌ ಚಿತ್ರದ ‘ದಿಲ್‌ ಢೂಂಡ್ತಾ ಹೈ’ (ಮದನ್‌ ಮೋಹನ್), ಕಿನಾರಾ ಚಿತ್ರದ ‘ನಾಮ್‌ ಗುಮ್‌ ಜಾಯೇಗಾ’ (ಆರ್‌. ಡಿ. ಬರ್ಮನ್‌), ಘರೋಂಡಾ ಚಿತ್ರದ ‘ಏಕ್‌ ಅಖೇಲಾ ಇಸ್‌ ಶಹರ್‌ ಮೇ’ ‘ದೋ ದಿವಾನೆ ಶಹರ್‌ ಮೇ’ (ಜೈದೇವ್), ಮಾಸೂಮ್‌ ಚಿತ್ರದ ‘ಹುಝೂರ್‌ ಇಸ್‌ ಕದರ್‌ ಭೀ ನ ಇತ್ರಾ ಕೆ ಚಲಿಯೇ’ (ಆರ್‌.ಡಿ.ಬರ್ಮನ್), ಏತ್‌ಬಾರ್‌ ಚಿತ್ರದ ‘ಕಿಸೀ ನಝರ್‌ ಕೊ ತೆರಾ ಇಂತ್‌ಜಾರ್‌ ಆಜ್‌ ಭಿ ಹೈ’ ಮತ್ತು ‘ಆವಾಜ್‌ ದೀ ಹೈ ಆಜ್‌ ಏಕ್‌ ನಜರ್‌ ನೆ’ (ಬಪ್ಪಿ ಲಹರಿ), ‘ಬಾಝಾರ್‌’ ಚಿತ್ರದ ‘ಕರೋಗೆ ಯಾದ್‌ ತೊ ಹರ್‌ ಬಾತ್‌ ಯಾದ್‌ ಆಯೇಗಿ’ (ಖಯ್ಯಾಂ), ‘ದೂರಿಯಾ’ ಚಿತ್ರದ ‘ಜಿಂದಗಿ, ಜಿಂದಗಿ ಮೇರೆ ಘರ್‌ ಆನಾ’ (ಜೈದೇವ್)... ಹಾಡುಗಳ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ. ಈ ಹಾಡುಗಳು ಇಂದಿಗೂ ಸಂಗೀತಪ್ರಿಯರಿಗೆ ರುಚಿಸುವುದಷ್ಟೇ ಅಲ್ಲದೆ, ಈ ಹಾಡುಗಳಲ್ಲಿರುವ ಧ್ವನಿಯ ಆಳ, ಮಾಧುರ್ಯ, ಸಾಹಿತ್ಯಕ ಗುಣ ಮತ್ತು ಗಾಂಭೀರ್ಯ ಇವು ಸಾರ್ವಕಾಲಿಕವಾಗಿ ಮನ್ನಣೆ ಗಳಿಸುವಂತಿವೆ.

1980ರ ದಶಕದಲ್ಲಿ ಬಾಂಗ್ಲಾದೇಶದ ಗಾಯಕಿ ಮಿತಾಲಿ ಮುಖರ್ಜಿ ಅವರನ್ನು ವಿವಾಹವಾದ ನಂತರ ಚಲನಚಿತ್ರಗಳಿಗೆ ಹಾಡುವುದನ್ನು ಬಹುತೇಕವಾಗಿ ನಿಲ್ಲಿಸಿದ ಭೂಪಿಂದರ್‌ ಹಲವು ಸಂಗೀತ ಗುಚ್ಛಗಳನ್ನು ತಮ್ಮ ಆಲ್ಬಂಗಳ ಮೂಲಕ ಪರಿಚಯಿಸಿದ್ದರು. ಈ ಹಂತದಲ್ಲಿ ಬಾಲಿವುಡ್‌ ಹಾಡುಗಳು ಚಿತ್ರದ ಮೂಲ ಕತೆಯಿಂದ ವಿಮುಖವಾಗಿ, ಅಪ್ರಸ್ತುತವಾಗತೊಡಗಿದ್ದನ್ನು ವಿಶ್ಲೇಷಿಸುತ್ತಿದ್ದ ಭೂಪಿಂದರ್‌, 1980ರ ದಶಕದ ನಂತರ ಸಿನಿಮಾ ಹಾಡುಗಳು ಚಿತ್ರದ ಮತ್ತೊಂದು ಭಾಗವಾಗಿದ್ದವೇ ಹೊರತು, ಸತ್ವಯುತವಾಗಿರಲಿಲ್ಲ ಎಂದು ವಿಷಾದಿಸುತ್ತಿದ್ದರು. ರಾಮ್‌ಗೋಪಾಲ್‌ ವರ್ಮಾ ಅವರ ‘ಸತ್ಯ’ ಚಿತ್ರದ ನಂತರ ಭೂಪಿಂದರ್‌ ಸಿನಿಮಾ ಹಾಡುಗಳನ್ನು ಹಾಡಲಿಲ್ಲ. ತಮ್ಮ ಗಾಯನಶೈಲಿಗೆ ತಕ್ಕಂತೆ ಹಿಂದಿ ಚಿತ್ರದ ಹಾಡುಗಳು ಇಲ್ಲದಿರುವುದೇ ತಾವು ಹಿಂಜರಿಯಲು ಕಾರಣ ಎಂದು ಹೇಳುವ ಭೂಪಿಂದರ್‌, ಬಾಲಿವುಡ್‌ ಗೀತೆಗಳ ಹಿನ್ನೆಲೆಯಲ್ಲಿ ಕೇಳಿಬರುವ ಗಿಟಾರ್‌ ತಂತಿಯ ಸ್ವರದಿಂದಲೇ ಚಿತ್ರರಸಿಕರನ್ನು ರಂಜಿಸಿರುವುದನ್ನು ಮರೆಯುವಂತಿಲ್ಲ. ಯಾದೋಂಕಿ ಬಾರಾತ್‌ ಚಿತ್ರದ ‘ಚುರಾಲಿಯಾ ಹೈ ತುಮ್‌ ನೆ ಜೊ ದಿಲ್‌ ಕೋ’ ಹಾಡಿನ ಆರಂಭದ ಗಿಟಾರ್‌ ಸ್ವರ ಇತರ ಭಾಷೆಯ ಹಲವು ಹಾಡುಗಳಿಗೆ ಸ್ಫೂರ್ತಿ ನೀಡಿದೆ. ಹಾಗೆಯೇ ಶೋಲೆ ಚಿತ್ರದ ‘ಮೆಹಬೂಬಾ ಮೆಹಬೂಬಾ’ ಹಾಡಿನ ಆರಂಭಿಕ ಗಿಟಾರ್‌ ವಾದನ ಕೂಡ.

1980–90ರ ದಶಕದಲ್ಲಿ ಪಂಕಜ್‌ ಉದಾಸ್‌, ಮನ್ಹರ್‌ ಉದಾಸ್‌, ಜಗಜೀತ್‌ ಸಿಂಗ್‌, ಚಿತ್ರಾ ಸಿಂಗ್‌ ಮುಂತಾದ ಗಝಲ್ ದಿಗ್ಗಜರ ನಡುವೆಯೇ ತಮ್ಮ ವಿಶಿಷ್ಟ ಗಾಯನ ಶೈಲಿಯಿಂದ ಛಾಪು ಮೂಡಿಸಿದ್ದರು ಭೂಪಿಂದರ್‌. ಸಂಗೀತದಲ್ಲಿ ಭಾರತೀಯತೆ ಮತ್ತು ಭಾರತದ ಶಾಸ್ತ್ರೀಯ ಸಂಗೀತದ ಛಾಪನ್ನು ಉಳಿಸಿಕೊಂಡೇ, ಆರ್‌.ಡಿ.ಬರ್ಮನ್‌ ಅವರೊಡನೆ ಪಾಶ್ಚಿಮಾತ್ಯ ಸಂಗೀತಕ್ಕೆ ತಕ್ಕಂತೆ ಗಿಟಾರ್‌ ನುಡಿಸುತ್ತಿದ್ದ ಭೂಪಿಂದರ್‌, ತಮ್ಮ ಬೆಳವಣಿಗೆಯಲ್ಲಿ ಬರ್ಮನ್‌ ಅವರ ಕೊಡುಗೆ ಇರುವುದನ್ನೂ ಹೆಮ್ಮೆಯಿಂದ ಸ್ಮರಿಸುತ್ತಿದ್ದರು. ಪತ್ನಿ ಮಿತಾಲಿ ಸಿಂಗ್‌ ಜೊತೆಗೂಡಿ ‘ಆರ್ಝೂ’, ‘ಚಾಂದ್‌ನಿ ರಾತ್‌’, ‘ಗುಲ್‌ಮೊಹರ್‌’, ‘ಗಝಲ್‌ ಕೆ ಫೂಲ್‌’, ‘ಏಕ್‌ ಆರ್ಝೂ’, ‘ಆನಂದ್‌ ಲೋಕ್‌ ಮೇ’ ಮುಂತಾದ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದರು. ಗುಲ್ಜಾರ್‌ ಅವರೊಡನೆ ಸುರ್ಮಯಿ ರಾತ್‌ ಎಂಬ ಆಲ್ಪಂ ಕೂಡ ನೀಡಿದ್ದರು. ಸಿನಿಮಾ ಹಾಡುಗಾರಿಕೆಯನ್ನು ನಿಲ್ಲಿಸಿದರೂ ಮೂರು ದಶಕಗಳ ಕಾಲ ಗಝಲ್‌ ಗಾಯನದ ಮೂಲಕ ಸಂಗೀತ ಪ್ರಿಯರ ಹೃದಯ ಸಾಮ್ರಾಜ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಗಳಿಸಿದ್ದರು.

ಭೂಪಿಂದರ್‌ ಅವರ ಹೃದಯ ಬಡಿತವೇನೋ ಸ್ಥಗಿತಗೊಂಡಿದೆ. ಆದರೆ, ಅವರ ಗಿಟಾರ್‌ ತಂತಿಯ ಮಧುರ ಧ್ವನಿ ಸಂಗೀತ ಪ್ರಿಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದೆ. ಅವರ ಕಂಠ ಮಾಧುರ್ಯ ಶ್ರೋತೃಗಳ ಎದೆಯಲ್ಲಿ ಆಳವಾಗಿ ನಾಟಿ ಕಾಯಂ ಆಗಿ ಉಳಿದಿರುತ್ತದೆ. ಅವರದೇ ಒಂದು ಹಾಡಿನಲ್ಲಿ ‘ನಾಮ್‌ ಗುಮ್‌ ಜಾಯೇಗಾ, ಚೆಹರಾ ಏ ಬದಲ್‌ ಜಾಯೇಗಾ, ಮೇರಿ ಆವಾಜ್‌ ಹೀ ಪೆಹಚಾನ್‌ ಹೈ’ ಎಂದು ಹೇಳುವಂತೆ ಭೂಪಿಂದರ್‌ ಅವರ ಹೆಸರು ಕಾಲ ಕಳೆದಂತೆ ವಿಸ್ಮೃತಿಗೆ ಜಾರಿದರೂ ಅವರ ಮುಖಚಹರೆ ಮರೆತುಹೋದರೂ ಅವರ ಮಧುರ ಧ್ವನಿ ಗುನುಗುನಿಸುತ್ತಲೇ ಇರುತ್ತದೆ, ಶಾಶ್ವತವಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT