ಕಾಳಿಂಗರಾಯನ ಕಾವ್ಯ ಗಾಯನ!

7
ಮಳೆಗಾಗಿ ಕಾಳಿಂಗರಾಯನ ಕಾವ್ಯ ಗಾಯನ

ಕಾಳಿಂಗರಾಯನ ಕಾವ್ಯ ಗಾಯನ!

Published:
Updated:
Deccan Herald

‘ಧರ್ಮದ ಕೊಳ್ಳಿ ಕೊಟ್ಟಾರೆ ಕಾಳಿಂಗಗೆ ಆಕಾಶಕ್ಕೆ ಏಕಾಗಿ ಉರುದಾನ,

ಬಗಲಾಗ ಚನ್ನಮ್ಮ ಕುಂತಾಳೆ,

ಇಟ್ಟಗಲ್ಲಿನ ಮೇಲೆ ಹುಟ್ಯಾವ ಮಳೆ ಮೋಡ,

ಸುತ್ತಾಲ ಮಳೆ ಮೋಡದೊರಲ ಮೋಡ ಸಿಡಿಲೆರಗಿ,

ಮೋಡ ಮೊಗಲಿಲ್ಲ ಇದು ಎಲ್ಲಿಂದ ಬಂತಾ ಸೋಜಿಗೆ ಮಳೆಯೇ’...

‘ಕಾರ ಎಂಬ ಕತ್ತಲ, ಬೋರು ಎಂಬ ಜಡೆಮಳೆಯೆ ತಾಯಮ್ಮ ಬಿಡೆ ಹೆಣೆಗಾಳು. ಕಾಳಿಂಗನ ಹತ್ತಿದ ಕಿಚ್ಚು ತನುವಾಗ, ಅಲ್ಲಿ ಬಗಲಾಗ ಚನ್ನಮ್ಮ ಕುಳಿತಾಳ, ಗಂಡನ ಮೈಮೇಲೆ ಮಣ್ಣು ತಗೊಂಡು ಮಾಡ್ಯಾಳಾ ಚನ್ನಬಸವನ. ಕಂಬು ಕೊಳುವ ಚೆಲುವ, ಎಂಬತ್ತು ಭುಜ ಕಂಬಲಿ ಬಸವಣ್ಣ ಕಡಿ ಚೆಲುವ. ಬಸವನ ರೂಪ ಹೊಂದಿಸ್ಯಾಳಾ ಚನ್ನಿ ಗಳಿಗ್ಯಾಗ....’

ಇದು ಜನಪದರು ಹಾಡುವ ಕಾಳಿಂಗರಾಯನ ಕಾವ್ಯದ ಸಾಲುಗಳು. ಮಳೆ ಕೊರತೆಯಾದಾಗ ಬಳ್ಳಾರಿ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆ ಕರೆಯಲು ಈ ಕಾವ್ಯವನ್ನು ಹಾಡಿಸುವುದು ಸಂಪ್ರದಾಯ. ಅದರಂತೆ ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದ್ದು, ಕಂಪ್ಲಿ ತಾಲ್ಲೂಕಿನ ಮೆಟ್ರಿ ಗ್ರಾಮದ ಆಸುಪಾಸಿನಲ್ಲಿ ಕಾಳಿಂಗರಾಯನ ಕಾವ್ಯ ಹಾಡಿಸುತ್ತಿದ್ದಾರೆ‌.

ಕಾಳಿಂಗರಾಯನ ಕಥನಗೀತೆಗಳು ಮೌಖಿಕವಾಗಿದ್ದು, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಾಗೆ ವರ್ಗವಾಗುತ್ತಾ ಬಂದಿದೆ. ಹಿರಿಯರಿಂದ ಬಳುವಳಿ ರೂಪದಲ್ಲಿ ಸಿಕ್ಕ ಈ ಕಾವ್ಯವನ್ನು ಅನಕ್ಷರಸ್ಥ ಮಹಿಳೆಯರು ಅಷ್ಟೇ ಸೊಗಸಾಗಿ ಹಾಡುತ್ತಾರೆ. ಈ ಮೂಲಕ ಇಂದಿಗೂ ಆ ಕಾವ್ಯವನ್ನು ಜೀವಂತವಾಗಿಟ್ಟಿದ್ದಾರೆ.

ಕಾಳಿಂಗರಾಯನ ಕಾವ್ಯ ಗಾನ ಆರಂಭಿಸುವ ಮುನ್ನ ನಿಗದಿತ ಸ್ಥಳದಲ್ಲಿ ಕುಂಭ ಸ್ಥಾಪಿಸಿ ರವಿಕೆ ಕಣ, ವಿವಿಧ ಪುಷ್ಪಗಳಿಂದ ಅಲಂಕರಿಸಿ ದೀಪ ಹೊತ್ತಿಸುತ್ತಾರೆ. ಊದುಬತ್ತಿ ನಿರಂತರವಾಗಿ ಉರಿಯುತ್ತಿರುವಂತೆ ನೋಡಿಕೊಳ್ಳುತ್ತಾರೆ. ಎಲ್ಲ ಸಿದ್ಧವಾದ ಮೇಲೆ ಮಹಿಳೆಯರ ತಂಡವೊಂದು ಕಾವ್ಯವನ್ನು ಪಸ್ತುತಪಡಿಸುತ್ತದೆ. ನಾಲ್ಕು ಗಂಟೆಗಳ ಕಾಲ ನಿರರ್ಗಳವಾಗಿ ಹಾಡುವ ಈ ಮಹಿಳೆಯರ ತಂಡಕ್ಕೆ ಸಂಘಟಕರು, ಗ್ರಾಮಸ್ಥರು ಅಕ್ಕಿ ಹಾಗೂ ಕೈಲಾದಷ್ಟು ಆರ್ಥಿಕ ನೆರವು ನೀಡುತ್ತಾರೆ.

ಜನಪದರ ಕಾವ್ಯದ ಕಥೆ: ಜನಪದರ ಪ್ರಕಾರ ಕೊತ್ತಲರಾಯ ಮತ್ತು ಮದರಂಬೆ ಎಂಬ ದಂಪತಿಗೆ ಸಂತಾನ ಭಾಗ್ಯವಿರುವುದಿಲ್ಲ. ಅದಕ್ಕಾಗಿ ಅವರು ದೇವರ ಮೊರೆ ಹೋಗುತ್ತಾರೆ. ಉಪವಾಸ ವ್ರತ ಆರಂಭಿಸುತ್ತಾರೆ. ಕೊನೆಗೆ ಗಿರಿಮಲ್ಲಯ್ಯನ ಕೃಪೆಯಿಂದ ಮದರಂಬೆಗೆ ಗಂಡು ಮಗು ಜನಿಸುತ್ತದೆ. ಆ ಮಗುವಿಗೆ ಕಾಳಿಂಗರಾಯ ಎಂದು ಹೆಸರಿಡುತ್ತಾರೆ.

ಒಮ್ಮೆ ಮದರಂಬೆ ಜ್ಯೋತಿಷಿಗಳಲ್ಲಿ ತನ್ನ ಮಗುವಿನ ಭವಿಷ್ಯ ಕೇಳುತ್ತಾಳೆ. ಆ ಪ್ರಕಾರ ಕಾಳಿಂಗರಾಯ ಅಲ್ಪಾಯುಷಿ ಎಂದು ಗೊತ್ತಾಗುತ್ತದೆ. ಆದರೂ ಎದೆಗುಂದದ ಆಕೆ, ಮಗುವನ್ನು ಪ್ರೀತಿಯಿಂದ ಬೆಳೆಸುತ್ತಾಳೆ. ಕಾಳಿಂಗರಾಯ ದೊಡ್ಡವನಾಗುತ್ತಾನೆ. ಒಮ್ಮೆ ಗೆಳೆಯರೊಂದಿಗೆ ಬೇಟೆಗೆ ಹೋಗಬೇಕೆಂದು ಆತ ಹಟ ಹಿಡಿಯುತ್ತಾನೆ. ಆದರೆ ಅಲ್ಪಾಯುಷಿಯಾದ ಮಗನನ್ನು ಕಳುಹಿಸಲು ತಂದೆ, ತಾಯಿ ಒಪ್ಪುವುದಿಲ್ಲ. ಪಾಲಕರ ಮಾತನ್ನು ಧಿಕ್ಕರಿಸಿ ಕಾಳಿಂಗರಾಯ ಬೇಟೆಗೆ ಹೋಗುತ್ತಾನೆ. ಅಲ್ಲಿ ಹುಲಿ ದಾಳಿಯಿಂದ ಮರಣ ಹೊಂದುತ್ತಾನೆ. ಮನೆಗೆ ಶವವಾಗಿ ಬಂದ ಕಾಳಿಂಗರಾಯನನ್ನು ಕಂಡು ಪೋಷಕರು ತೀವ್ರವಾಗಿ ದುಃಖಿಸುತ್ತಾರೆ.

‘ವಯಸ್ಸಿಗೆ ಬಂದ ಮಗ ಮರಣವನ್ನಪ್ಪಿದರೆ ಆತನ ಜೀವನ ಅಪೂರ್ಣವಾಗಿ, ಮುಕ್ತಿ ಸಿಗಲಾರದು’ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಅದಕ್ಕಾಗಿ ಶವಕ್ಕೇ ಮದುವೆ ಮಾಡಲು ಪೋಷಕರು ನಿರ್ಧರಿಸುತ್ತಾರೆ. ಮದುವೆ ಮಾಡಿಕೊಳ್ಳುವವರಿಗೆ ಬೇಡಿದಷ್ಟು ಹಣ ಕೊಡುವುದಾಗಿ ಪ್ರಚಾರ ಮಾಡಿಸುತ್ತಾಳೆ ಮದರಂಬೆ.

ಗ್ರಾಮದಲ್ಲಿದ್ದ ಕಡುಬಡತನದ ವ್ಯಕ್ತಿಯೊಬ್ಬರು ಹಣಕ್ಕಾಗಿ ತಮ್ಮ ಮಗಳು ಚೆನ್ನಮ್ಮಳನ್ನು ಧಾರೆ ಎರೆಯಲು ನಿರ್ಧರಿಸುತ್ತಾರೆ. ಕಾಳಿಂಗರಾಯನ ಶವದೊಂದಿಗೆ ಚೆನ್ನಮ್ಮನ ವಿವಾಹ ನಡೆಯುತ್ತದೆ. ಮದುವೆ ವಿಧಿ ವಿಧಾನಗಳು ನಂತರ ನವ ವಿವಾಹಿತೆ ಚೆನ್ನಮ್ಮನಿಗೆ ಕೊಡಬೇಕಾದದ್ದನ್ನು ಕೊಟ್ಟು ತವರಿಗೆ ಕಳಿಸುತ್ತಾರೆ. ಆದರೆ ಪತಿಯೇ ಪರದೈವ ಎಂದುಕೊಂಡ ಚೆನ್ನಮ್ಮ, ಕಾಳಿಂಗರಾಯನ ಶವದ ಜತೆಗೆ ಅಗ್ನಿ ಪ್ರವೇಶಿಸುತ್ತಾಳೆ. ಈ ಸಂದರ್ಭದಲ್ಲಿ ಧೋ ಎಂದು ಮಳೆ ಸುರಿಯುತ್ತದೆ. ಇದನ್ನೆಲ್ಲ ಗಮನಿಸುತ್ತಿದ್ದ ಪರಶಿವ, ಚೆನ್ನಮ್ಮನ ಭಕ್ತಿಗೆ ಮೆಚ್ಚಿ, ಕಾಳಿಂಗರಾಯನ ಶವಕ್ಕೆ ಜೀವ ತುಂಬುತ್ತಾನೆ.

ಇದು ಜನಪದ ಕಾವ್ಯವಾಗಿ ಉಳಿದುಕೊಡಿರುವ ಕಾಳಿಂಗರಾಯನ ಕಥೆ. ಮಳೆ ಬಾರದಿದ್ದಾಗ ಈ ಕಥೆಯನ್ನೇ ಕಾವ್ಯ ರೂಪದಲ್ಲಿ ಮಹಿಳೆಯರು ಹಾಡುತ್ತಾರೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿದೆ.

ಅಧ್ಯಯನ ನಡೆಸುವ ಜರೂರು: ‘ಕಾಳಿಂಗರಾಯನ ಕಥೆ’ ಸಾರ್ವತ್ರಿಕ ಚಿಂತನೆಯಿಂದ ಕೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಆಕಾಶದಲ್ಲಿ ನಕ್ಷತ್ರ ಸಮೂಹದಲ್ಲಿ ‘ಚನ್ನಮ್ಮನ ದಂಡೆ’ ನಕ್ಷತ್ರಗಳು ಪ್ರತ್ಯೇಕವಾಗಿ ಒಂದೆಡೆ ಗೋಚರಿಸುವುದನ್ನು ಹಳೆ ತಲೆಮಾರಿನ ಜನರು ಇಂದಿಗೂ ತೋರಿಸುತ್ತಾರೆ. ಜನಪದ ಮೌಖಿಕ ಕಥನಗಳನ್ನು ಕೇವಲ ನಂಬಿಕೆ, ಆಚರಣೆ ಸಂಪ್ರದಾಯದ ನೆಲೆಯಲ್ಲಿ ನೋಡುವುದರ ಬದಲು ಅವುಗಳನ್ನು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಹಬಾಳ್ವೆಯ ಪ್ರಜ್ಞೆಯಿಂದ ಗ್ರಹಿಸಿದಾಗ ಮಾತ್ರ ಕಥನಗಳ ಅಂತಃಸತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜನಪದ ಕಥನಗಳು ಕೇವಲ ಕಥಾ ನಿರೂಪಣೆಗಳಲ್ಲ ಆರೋಗ್ಯಕರ ಸಮಾಜವನ್ನು ಕಟ್ಟಲು ರೂಪಿತಗೊಂಡ ಮೌಲ್ಯಗಳ ಕಣಜ ಎಂದು ಬಣ್ಣಿಸುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಚೆಲುವರಾಜು.

ಮಾನವೀಯ ಸಂಬಂಧಗಳು, ಧಾರ್ಮಿಕ ಸಂಘರ್ಷಗಳು ಉದ್ವಿಗ್ನಗೊಳ್ಳುತ್ತಿರುವ ಈ ಸಾಮಾಜಿಕ ಸಂದರ್ಭದಲ್ಲಿ ಇವು ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಕಿತ್ಸಕ ವರ್ಧಕಗಳಾಗಿ ಕಾರ್ಯನಿರ್ವಹಿಸುವ ಶಕ್ತಿ ಹೊಂದಿವೆ. ಹಾಗಾಗಿ ಇಂಥ ಕಥನ ಕಾವ್ಯಗಳನ್ನು ಜರೂರಾಗಿ ರಕ್ಷಿಸುವ, ಸಂಗ್ರಹಿಸುವ ಹಾಗೂ ಪರಂಪರೆಗಳನ್ನು, ಕಲಾವಿದರನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಧ್ಯಯನ ನಡೆಸುವ ಜರೂರು ಇದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

***

ಮಹಿಳೆಯರ ಜ್ಞಾಪಕಶಕ್ತಿ ಮೆಚ್ಚುವಂಥದ್ದು.

‘ಕಾಳಿಂಗರಾಯನ ಕಾವ್ಯ ಹಾಡುವವರಲ್ಲಿ ಬಹುಪಾಲು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಅನಕ್ಷರಸ್ಥ ಮಹಿಳೆಯರು. ಅದರಲ್ಲಿ ಮೆಟ್ರಿ ಗ್ರಾಮದ ಕಲ್ಲಮ್ಮ, ಕಮಲಾಪುರ ಹುಲಿಗೆಮ್ಮ, ಮೂಲೆಮನೆ ಹುಲಿಗೆಮ್ಮ, ದುರುಗಮ್ಮ, ಅಂಜಿನಮ್ಮ, ಪಕ್ಕೀರಮ್ಮ, ನಾಗಮ್ಮ, ಹೊನ್ನೂರಮ್ಮ, ಭವಾನಿ, ಲಕ್ಷ್ಮಿ, ಈರಮ್ಮ ಪ್ರಮುಖರು.

ಈ ಕಥನ ಗೀತೆಗಳು ಮೌಖಿಕವಾಗಿವೆ. ಇವರೆಲ್ಲ ಹಿರಿಯರಿಂದ ಕಲಿತಿದ್ದ ಗಾಯನವನ್ನು, ನೆನಪಿಟ್ಟುಕೊಂಡು ನಾಲ್ಕೂವರೆ ಗಂಟೆಗಳ ಕಾಲ ನಿರಂತರವಾಗಿ ಹಾಡುತ್ತಾರೆ. ಇವರ ನೆನಪಿನ ಕೌಶಲ ಮೆಚ್ಚಲೇ ಬೇಕು. ಬೆಳಿಗ್ಗೆ ಕೂಲಿ ಕೆಲಸ ಮಾಡಿಕೊಂಡು ಬಂದು, ರಾತ್ರಿ ವೇಳೆ ಈ ಕಾವ್ಯ ಗಾಯನ ಮಾಡುತ್ತಾರೆ. ಇವರೆಲ್ಲ ನಾಲ್ಕು ದಶಕಗಳಿಂದ ಹೀಗೆ ಹಾಡುತ್ತಿದ್ದಾರೆ. ಇಂತವರನ್ನು ಗುರುತಿಸುವ ಕೆಲಸವಾಗಿಲ್ಲ’ ಎಂದು ಮೆಟ್ರಿ ಗ್ರಾಮದ ಹಿರಿಯ ನಾಗರಿಕ ದೊಡ್ಡಬಸಪ್ಪ ನಿಡುಗೋಳು ಬೇಸರ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !