ಪಕ್ವತೆಯ ಪ್ರತಿರೂಪ

7

ಪಕ್ವತೆಯ ಪ್ರತಿರೂಪ

Published:
Updated:
Deccan Herald

ವಿದ್ವಾನ್ ರಾ.ವಿಶ್ವೇಶ್ವರನ್ ಅವರ ಕಛೇರಿ ಎಂದರೆ, ಅಲ್ಲಿ ಹೊಸತನ್ನು ಕಲಿಯುವರಿಗೆ, ಸಂಗೀತದ ಇತಿಹಾಸದಲ್ಲಿ ಆಸಕ್ತಿ ಉಳ್ಳವರಿಗೆ ಸುಗ್ರಾಸ ಭೋಜನವಿದ್ದಂತೆ. ಏಕೆಂದರೆ ಅವರ ಪ್ರತಿಯೊಂದು ಪ್ರಸ್ತುತಿಯೂ ಅದರ ಹಿನ್ನೆಲೆಯೊಂದಿಗೇ ಇರುತ್ತದೆ. ಕರತಲಾಮಲಕದಂತೆ ಇರುವ ಸಂಗೀತದ ಸಾವಿರಾರು ವರುಷಗಳ ಚರಿತ್ರೆಯ ಜ್ಞಾನನಿಧಿಯನ್ನು ಅವರಿಗೆ ಕೇಳುಗರೊಡನೆ ಹಂಚಿಕೊಳ್ಳುವ ಅದಮ್ಯ ಬಯಕೆ. ಮೂಲಕ್ಕೇ ಹೋಗಿ, ಅಮೂಲಾಗ್ರವಾಗಿ ಶೋಧಿಸುವ, ಅರಿಯುವ ಅವರ ಸ್ವಭಾವಜನ್ಯ ಗುಣ ಅದರ ಬೆಂಬಲಕ್ಕೆ ಇರುತ್ತದೆ. ಈಚೆಗೆ ತ್ಯಾಗರಾಜ ಸಂಗೀತ ಸಭೆಯು ನಗರದ ವಾಸುದೇವಾಚಾರ್ಯ ಭವನದಲ್ಲಿ ಏರ್ಪಡಿಸಿದ್ದ ವೀಣಾ ವಾದನವೂ ಇದಕ್ಕೆ ಹೊರತಾಗಿರಲಿಲ್ಲ.

ವಿದ್ವಾಂಸರಾದ ಆನೂರು ಅನಂತಕೃಷ್ಣ ಶರ್ಮರವರು ಮೃದಂಗದಲ್ಲಿ, ಜಿ.ಎಸ್.ರಾಮಾನುಜಮ್ ಅವರು ಘಟದಲ್ಲಿ ಮತ್ತು ವಿ.ಎಸ್.ರಮೇಶ್ ಅವರು ಮೋರ್ಚಿಂಗ್‌ನಲ್ಲಿ ಸಹಕರಿಸಿದರು. ಯಾವ ‘ಮಾನುಷ ಗುರು’ವಿನ ನೆರವಿಲ್ಲದೇ ಅವರಿಗೆ ಒಲಿದಿರುವ ವೀಣಾ ವಾದನವು ಅವರ ಬೆರಳ ನುಡಿತದಲ್ಲಿ ಯಾವುದೇ ಅವಸರವಿಲ್ಲದೆ, ಪ್ರಶಾಂತವಾಗಿ ರಾಗ ಭಾವವನ್ನು ಸಂಪೂರ್ಣ ಅನಾವರಣಗೊಳಿಸುತ್ತದೆ. ಸ್ವತಃ ವಾಗ್ಗೇಯಕಾರರೂ ಆಗಿರುವ ಪ್ರೊ.ವಿಶ್ವೇಶ್ವರನ್ ಅವರು ಅಂದು ತಮ್ಮ ಸ್ವರಚನೆಗಳನ್ನೂ ಪ್ರಸ್ತುತ ಪಡಿಸಿದರು. ದೇವಕ್ರಿಯ ರಾಗದ ಮುತ್ತುಸ್ವಾಮಿ ದೀಕ್ಷಿತರ ರಚನೆ ‘ಸರಸ್ವತಿ ವಿಧಿಯುವತಿ’ಯಿಂದ ಆರಂಭಿಸಿ, 600 ವರ್ಷಗಳ ಹಿಂದೆ ವೆಂಕಟಮಖಿ ರಚಿಸಿದ ಶ್ರೀರಂಗ ಪ್ರಬಂಧದ ಭೌಳಿ ರಾಗದ ಒಂದು ರಚನೆಯನ್ನು ಅವರು ನುಡಿಸಿದರು. ಸಂಗೀತ ಪ್ರಪಂಚಕ್ಕೆ ಕೃತಿಗಳು ಕಾಲಿಡುವ ಮೊದಲು ಇದ್ದ ರಚನೆಗಳೇ ಪ್ರಬಂಧ. ಈ ಪ್ರಬಂಧಗಳಿಗೂ ಕೃತಿಗಳಿಗೂ ಮಧ್ಯದ ಸೇತುವಾಗಿದ್ದಾನೆ ವೆಂಕಟಮಖಿ ಎಂದ ಅವರು, ಅದರ ರಚನಾ ಕೌಶಲವನ್ನು ವಿಷದ ಪಡಿಸಿದರು.

ರವಿಚಂದ್ರಿಕೆ ರಾಗದ ಸೊಬಗನ್ನು ಕೇಳುಗರಿಗೆ ಉಣಬಡಿಸಿ, ತ್ಯಾಗರಾಜರ ‘ಮಾಕೇಲರಾ ವಿಚಾರಮು?’ ಎಂಬ ಕೀರ್ತನೆಯನ್ನು ನುಡಿಸಿ, ಅಸಾವೇರಿ ರಾಗದಲ್ಲಿ ದೇವಿ ಸರಸ್ವತಿಯನ್ನು ಕುರಿತು ಇರುವ ‘ತೆಲಿಯಲೇರು ನಿನ್ನು’ ಎಂಬ ಸ್ವರಚನೆಯನ್ನು ಆಲಾಪನೆ ಮತ್ತು ಸ್ವರ ಕಲ್ಪನೆಯೊಡನೆ ಪ್ರಸ್ತುತಪಡಿಸಿದರು. ಅಂದು ಕೇಳುಗರಿಗೆ ವಿಶೇಷ ಅನುಭವ ನೀಡಿದ ಬೆಹಾಗ್ ರಾಗಾಲಾಪನೆಯು ಮುಂದಿನ ಪ್ರಸ್ತುತಿ ಆಗಿತ್ತು. ಸಾಮಾನ್ಯವಾಗಿ ಕೊನೆಯ ದೇವರನಾಮ-ತಿಲ್ಲಾನಗಳಲ್ಲಿ ಮಾತ್ರ ಕೇಳಿಬರುವ ಈ ರಾಗದ ಸೊಬಗು ಅಂದು ಅವರ ಬೆರಳ ನುಡಿತದಲ್ಲಿ ಹೊಸ–ಹೊಸ ರೂಪಗಳಲ್ಲಿ ತನ್ನ ಚೆಲುವನ್ನು ತೋರಿತ್ತು. ಸಾಮಾನ್ಯವಾಗಿ ರಂಜನೀಯವಾಗಿಯೇ ಕೇಳಿಬರುವ ಈ ರಾಗವು ಅಂದು ಗಾಂಭೀರ್ಯಕ್ಕೇ ಒತ್ತು ಕೊಡುತ್ತಾ ವಿಶಿಷ್ಟ ಪ್ರಯೋಗಗಳನ್ನು ಹೊತ್ತು ಸಾಗಿತು.

ತಾರಷಡ್ಜದಿಂದ ಅವರೋಹಣ ಕ್ರಮದಲ್ಲಿ ಗಂಭೀರ ಚಾಲನೆಯನ್ನು ಪಡೆದು, ಕೆಲವು ಅಪರೂಪದ ಸಂಗತಿಗಳು, ಅದು ಆಕ್ಷೇಪಾರ್ಹ ಅಲ್ಲವೇ ಅಲ್ಲ, ಇದು ಅತೀ ಸಹಜ ಎಂಬ ಅನಿಸಿಕೆಯನ್ನು ಉಂಟುಮಾಡಿದ್ದು ಅವರ ವಾದನದ ವಿಶೇಷತೆ. ಉದಾಹರಣೆಗೆ ಆರೋಹಣದಲ್ಲಿ ಧೈವತ, (ತಾರಸ್ಥಾಯಿಯಲ್ಲಿ) ರಿಷಭಗಳ ಪ್ರಯೋಗ. (ವಕ್ರದಲ್ಲಿ-ನಿದನಿಸ ಪ್ರಯೋಗ ಮಾತ್ರ ಉಂಟು). ಅವಸರವೇ ಇಲ್ಲದ ನೆಮ್ಮದಿಯ ನಾದಭರಿತ, ರಾಗರಸವನ್ನು ಹಿಂಡಿ ತೆಗೆದಂಥ ಆಲಾಪನೆಯ ಸೊಬಗನ್ನು ಅನುಭವಿಸಿದ ರಸಿಕರಲ್ಲಿ ಧನ್ಯತೆಯ ಭಾವ. ಮೈಸೂರು ವಾಸುದೇವಾಚಾರ್ಯರ ಅಪರೂಪದ ರಚನೆ ‘ಪಾಹಿ ಕೃಷ್ಣ’ವು ತೀರಾ ವಿಭಿನ್ನವಾದ ಕಲ್ಪನಾ ಸ್ವರಗಳೊಡನೆ ಪ್ರಸ್ತುತಗೊಂಡಿತು. ಒಂದೊಂದೇ ಸ್ವರಗಳಲ್ಲಿ ಅಡಗಿರುವ ನಾದವು ಭೋರ್ಗರೆದ ಅನುಭವ ನೀಡಿತ್ತು.

ಚಾರುಕೇಶಿ ರಾಗವೂ ಅದ್ಭುತ ಸಂಚಾರಗಳಿಂದ ಅನಾವರಣಗೊಂಡಿತು. ತುಂಬು ನಾದದ ಮೀಟು, ಶುದ್ಧತೆಯೇ ಮೈವೆತ್ತ ಗಮಕ, ಅನುಭವದಿಂದ ಮಾಗಿದ ಸಂಗತಿಗಳು, ಸುಲಲಿತವಾಗಿ ಸುಸ್ಪಷ್ಟವಾಗಿ ನುಡಿವ ಧ್ರುತ ಕಾಲದ ಸಂಚಾರಗಳು ಕೇಳುಗರ ಕಿವಿಗೆ ಹಬ್ಬವಾಗಿದ್ದುವು. ‘ವ್ಯೋಮಕೇಶಿ, ಚಾರುಕೇಶಿ, ಶ್ರೀ ತ್ರಿಪುರೇಶಿ’ ಎಂಬ ಅವರ ಕೀರ್ತನೆಯು ಅರ್ಥವಿವರಣೆಯನ್ನೂ ಒಳಗೊಂಡಿತ್ತು. ಎಲ್ಲವನ್ನೂ ಮೀರಿದ ಪರಾಶಕ್ತಿಯನ್ನು ವರ್ಣಿಸುವ ಪುರುಷ ಸೂಕ್ತದ ವೇದ ಪುರುಷನ ಪರಿಕಲ್ಪನೆಯನ್ನು ವಸ್ತುವಾಗುಳ್ಳ ಮತ್ತೊಂದು ಸ್ವರಚನೆ ‘ಜಗಮೆಲ್ಲಮಿಂದಿನ ಯುಗಮೆಲ್ಲಮಿಂದಿನ’ ಉಲ್ಲಾಸಭರಿತವಾದ ಪಹಾಡಿ ರಾಗದ ಆಲಾಪನೆಯೊಂದಿಗೆ ಮೂಡಿಬಂದಿತು. ಕೊನೆಯ ಮಂಗಳವೂ ಸಹ ವಿಭಿನ್ನವಾಗಿ ತ್ಯಾಗರಾಜರ ಪ್ರಹ್ಲಾದ ಭಕ್ತ ವಿಜಯದಿಂದ ಆಯ್ದ ‘ಚಲ್ಲಲೇ ರಾಮಚಂದ್ರು ನೀ’ ಎಂಬ ಆಹಿರಿ ರಾಗದ ರಚನೆಯಾಗಿತ್ತು. ಅವರ ಮನೋಧರ್ಮವನ್ನು ಅನುಸರಿಸುತ್ತ ಕಛೇರಿಯ ಯಶಸ್ಸಿಗೆ ಭಾಗಿಯಾದ ಆನೂರು ಅನಂತಕೃಷ್ಣ ಶರ್ಮ, ಜಿ.ಎಸ್.ರಾಮಾನುಜಮ್ ಮತ್ತು ವಿ.ಎಸ್.ರಮೇಶ್ ಎಲ್ಲರೂ ಅಭಿನಂದನಾರ್ಹರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !