ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಾಗಿ ಇಬ್ಬರು ಹಳೆವಿದ್ಯಾರ್ಥಿಗಳ ಕೋಟಿ ವೆಚ್ಚ

ರಾಜ್ಯಕ್ಕೆ ಮಾದರಿಯಾದ ವಿಟ್ಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Last Updated 11 ಫೆಬ್ರುವರಿ 2018, 12:09 IST
ಅಕ್ಷರ ಗಾತ್ರ

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಎಲಿಮೆಂಟರಿ ಶಾಲೆ ಎಂದೇ ಖ್ಯಾತವಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಹಳೆ ವಿದ್ಯಾರ್ಥಿಗಳು ಬಹಳ ಕಾಲ ನೆನಪಲ್ಲಿ ಉಳಿಯುವಂತಹ ಕೋಟಿ ವೆಚ್ಚದ ಕೊಡುಗೆ ನೀಡಿದ್ದಾರೆ.

ಒಂದು ಕಾಲಕ್ಕೆ 1,300 ವಿದ್ಯಾರ್ಥಿಗಳಿದ್ದ ಶಾಲೆ ಇದು. ಎರಡು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ 400ಕ್ಕೆ ಇಳಿಯುತ್ತಿದ್ದಂತೆಯೇ ತೀವ್ರ ಆತಂಕ ಎದುರಾಯಿತು. ಇಲ್ಲಿನ ಖ್ಯಾತ ಉದ್ಯಮಿ ಜನಾರ್ದನ ಪೈ ಅವರ ಪುತ್ರ ಯುವ ಉದ್ಯಮಿ ಸುಬ್ರಾಯ ಪೈ ಅವರು ಭಾರತಿ ಜನಾರ್ದನ್ ಸೇವಾ ಟ್ರಸ್ಟ್ ಮೂಲಕ ಈ ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಗೆ ಕಾಯಕಲ್ಪ ನೀಡಿದರು.

ರಂಗಮಂದಿರ, ಶತಮಾನೋತ್ಸವ ಕಟ್ಟಡದ ಕೋಣೆಗೆ ಟೈಲ್ಸ್ ಅಳವಡಿಕೆ, ಕಟ್ಟಡಗಳ ದುರಸ್ತಿ, ವಿಜ್ಞಾನ ಪ್ರಯೋಗಾಲಯಕ್ಕೆ ಸಾಮಗ್ರಿಗಳ ಪೂರೈಕೆ, ಕ್ರೀಡಾ ಉಪಕರಣಗಳು, ಪುಸ್ತಕ ಕೊಡುಗೆ, ಆರು ಗೌರವ ಶಿಕ್ಷಕರ ನೇಮಿಸಿ, ಅವರಿಗೆ ವೇತನ ನೀಡಲಾಗುತ್ತಿದೆ. 6ರಿಂದ 8ನೇ ತರಗತಿ ವರೆಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ. ಅಡುಗೆ ಕೋಣೆ ವಿಸ್ತರಣೆ, ಆವರಣಗೋಡೆ, ಸ್ಮಾರ್ಟ್ ಬಾಲವಾಡಿ ಕೇಂದ್ರ ಪ್ರಾರಂಭಿಸಿದ್ದು, 64 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕೊಳವೆ ಬಾವಿ ದುರಸ್ತಿಗೊಳಿಸಿ ವರ್ಷವಿಡಿ ನೀರಿನ ಸಮಸ್ಯೆ ಎದುರಾಗದಂತೆ ಮಾಡಿದ್ದಾರೆ. ಕನಿಷ್ಠ  ದರದಲ್ಲಿ ವಿಟ್ಲ ಸುತ್ತಮುತ್ತಲಿನ ಹಳ್ಳಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಬಸ್‌ಗಳ ವ್ಯವಸ್ಥೆ ಮಾಡಿದರು. ಈ ಕೊಡುಗೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 570ಕ್ಕೇರಿದೆ.

ಈ ಶಾಲೆಯ ಸುತ್ತ 5 ಖಾಸಗಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿದ್ದರೂ, ಈ ಸರ್ಕಾರಿ ಶಾಲೆಗೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿದ್ದಾರೆ.

ಕೋಟಿ ನೆರವು: ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಸುಪ್ರಜಿತ್ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ, ಇಲ್ಲಿನ ಖ್ಯಾತ ವೈದ್ಯ ದಿ.ಡಾ. ಮಂಜುನಾಥ ರೈ ಅವರ ಪುತ್ರ ಅಜಿತ್ ಕುಮಾರ್ ರೈ ಅವರು ಶಾಲೆಗೆ ₹ 1.25 ಕೋಟಿ ವೆಚ್ಚದ ಮೂರು ಮಹಡಿಯ 10 ತರಗತಿ ಕೋಣೆಗಳ ಸುಸಜ್ಜಿತ ಕಟ್ಟಡ ಮತ್ತು ಸಭಾ ಮಂದಿರದ ಬೃಹತ್ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಗ್ರಾನೈಟ್ ನೆಲದಿಂದ ಶೊಭಿಸುವ ನೆಲದ ‘ಶ್ರೀಮತಿ ಮತ್ತು ಡಾ. ಕೆ ಮಂಜುನಾಥ ರೈ ವಿದ್ಯಾಸೌಧ’ ಇದೀಗ ಲೋಕಾರ್ಪಣೆಗೆ ಸಿದ್ದವಾಗಿದೆ. ಈ ಹಿಂದೆ 2.50 ಲಕ್ಷ ವೆಚ್ಚದಲ್ಲಿ ಬಾಲಕಿಯರ ಶೌಚಾಲಯ ನಿರ್ಮಿಸಿದ್ದಾರೆ. ಅಜಿತ್ ಕುಮಾರ್ ರೈ ಅವರು ಪ್ರತಿವರ್ಷವೂ ಸಾವಿರಾರು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ.
***
* 570
ಈಗಿನ ವಿದ್ಯಾರ್ಥಿಗಳ ಸಂಖ್ಯೆ
***
ಶಾಲೆ ಉಳಿಸುವ ಪಣ: ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕುಸಿಯುತ್ತಿರುವುದನ್ನು ಕಂಡ ಈ ಇಬ್ಬರು ಹಳೆ ವಿದ್ಯಾರ್ಥಿಗಳು ಶಾಲೆ ಉಳಿಸುವ ಪಣ ತೊಟ್ಟರು. ಅದರ ಫಲವಾಗಿಯೇ ಮುಂದೆ ಹಲವಾರು ವರ್ಷ ಅದೆಷ್ಟೋ ಸಾವಿರ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ದೊರೆತಿದೆ.
ಹಳೆವಿದ್ಯಾರ್ಥಿಗಳ ಸಹಕಾರ: ಪ್ರತಿ ಊರಿನ ಹಳೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಉನ್ನತೀಕರಣದ ಅಗತ್ಯತೆಯನ್ನು ಕಂಡುಕೊಂಡಲ್ಲಿ ಇಡೀ ದೇಶದ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಯನ್ನು ಮೀರಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ಸಾಧ್ಯವಿದೆ ಎಂದು ಸುಬ್ರಾಯ ಪೈ ಹೇಳುತ್ತಾರೆ.
ಮಾದರಿ ಕಾರ್ಯ: ಸರ್ಕಾರಿ ಶಾಲೆಯನ್ನು ಉಳಿಸುವ ಉದ್ದೇಶದಿಂದ ಇಂತಹ ಕಾರ್ಯ ಮಾಡುತ್ತಿರುವ ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳ ಈ ಕಾರ್ಯ ಶ್ಲಾಘನೀಯ. ಸರ್ಕಾರಿ ಶಾಲೆಗಳ ಹಿರಿಯ ವಿದ್ಯಾರ್ಥಿಗಳು ಇದೇ ರೀತಿ ಮಾಡುವಂತಾಗಬೇಕು ಎಂದು ಹೇಳುತ್ತಾರೆ ಶಾಲೆಯ ಮುಖ್ಯಗುರು ವಿಶ್ವನಾಥ ಕುಳಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT