‘ಮನಕ್ಕೆ ಮುದ ನೀಡುವ ಮದ್ದು; ಸಂಗೀತ’

7

‘ಮನಕ್ಕೆ ಮುದ ನೀಡುವ ಮದ್ದು; ಸಂಗೀತ’

Published:
Updated:
Deccan Herald

ಸಂಗೀತವೆಂಬ ಕಲೆಯು ದೇವರು ಕೊಟ್ಟ ವರ. ಎಲ್ಲರಿಗೂ ಆ ಭಾಗ್ಯ ಸಿಗದು. ಅದು ದೈವಾನುಗ್ರಹದಿಂದ ಬಂದಿದ್ದರೂ ಪರಿಣತಿ ಹೊಂದಲು ಬೆವರು ಹರಿಸಲೇಬೇಕು ಎಂಬ ಮಾತನ್ನು ನಂಬಿರುವ ನಗರದ ವಿಶಾಲ್ ನೇದ್ರುವ್ ಉದಯೋನ್ಮುಖ ಹಾಡುಗಾರ, ಸಂಗೀತ ಸಂಯೋಜಕ, ಕೀ ಬೋರ್ಡ್ ಪರಿಣಿತ, ಗೀಟಾರ್ ವಾದಕ.

‘ಸಂಗೀತವು, ನನ್ನ ಒತ್ತಡ ನಿವಾರಿಸಿ ಮನಕ್ಕೆ ಮುದ ನೀಡುವ ಮದ್ದು’ ಎನ್ನುವ ವಿಶಾಲ್‌ಗೆ ಸಂಗೀತವೇ ಸರ್ವಸ್ವ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳಿಸಿದ ಅವರು ಎಲ್ಲರಂತೆ ಉದ್ಯೋಗದ ಬೆನ್ನತ್ತದೆ, ಸಂಗೀತದ ಹಿಂದೆ ಬಿದ್ದವರು. ತನ್ನಿಷ್ಟದ ಹಾದಿ ಆಯ್ದುಕೊಂಡು, ಆಲ್ಬಂ ಮೂಲಕ ಮೆಲೋಡಿಯಸ್ ಹಾಡು ಹೊರತಂದು ಮೋಡಿ ಮಾಡುತ್ತಿದ್ದಾರೆ.

ಈಚೆಗೆ ಅವರು ಗಾಯನ ಮಾಡಿ, ಸಂಗೀತ ಸಂಯೋಜಿಸಿರುವ ‘ಏನೊ ಏಕೋ ಹೀಗೋ’ ಹಾಡನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. 1.11 ಲಕ್ಷ ಮಂದಿ ಆ ಹಾಡನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಿಂದಾಗಿಯೇ, ವಿಶಾಲ್‌ ಮತ್ತಷ್ಟು ಉತ್ಸಾಹಭರಿತರಾಗಿದ್ದಾರೆ. ಮೊದಲ ಪ್ರಯತ್ನದಲ್ಲೇ ಯಶಸ್ವಿಗೊಂಡ ಖುಷಿಯಲ್ಲಿರುವ ಅವರು ಈ ವರ್ಷಾಂತ್ಯಕ್ಕೆ ಇನ್ನೂ ಆರು ಹಾಡುಗಳನ್ನು ಹೊರತರಲಿದ್ದಾರಂತೆ. 

‘ನಮ್ಮದು ಸಂಗೀತ ಹಿನ್ನೆಲೆಯ ಕುಟುಂಬ. ಅಜ್ಜಿ, 1960ರ ಕಾಲದಲ್ಲಿ ಸಂಗೀತ ಕಛೇರಿಗಳನ್ನು ನೀಡುತ್ತಿದ್ದರಂತೆ. ತಂದೆ ಕೆಎಂಎಫ್ ಜಂಟಿ ನಿರ್ದೇಶಕ ಸಿ.ಕೆ.ನರೇಂದ್ರ, ಅವರಿಗೂ ಸಂಗೀತವೆಂದರೆ ಅಚ್ಚು
ಮೆಚ್ಚು. ಅವರೂ ಸಂಗೀತ ಅಭ್ಯಾಸ ಮಾಡಿದ್ದಾರೆ. ಹೀಗಾಗಿ, ಆ ಗುಣ ನನಗೂ ಬಂದುಬಿಟ್ಟಿದೆ’ ಎನ್ನುತ್ತಾರೆ.

‘ಸಂಗೀತ ಕಿವಿಗೆ ಬಿದ್ದ ಕೂಡಲೇ ಬಾಲ್ಯದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದೆ, ತೊದಲುತ್ತಾ ಹಾಡುವುದು, ಕುಣಿಯುವುದು ಮಾಡುತ್ತಿದ್ದೆ ಅಂತೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದ ತಂದೆ ನನ್ನ ಸುತ್ತಲೂ ಸಂಗೀತದ ವಾತಾವರಣ ನಿರ್ಮಿಸಿದರು. ಮನೆಯಲ್ಲಿಯೇ ನನಗೆ ಸಂಗೀತ ಕಲಿಸುತ್ತಿದ್ದರು. ಕ್ರಮೇಣ ಸಂಗೀತ ಶಾಲೆಗೆ ಸೇರಿಸಿದ್ದರು’ ಎನ್ನುತ್ತಲೇ ತನ್ನಲ್ಲಿ ಸಂಗೀತದ ಅಭಿರುಚಿ ಬೆಳೆದ ಬಗೆಯನ್ನು ವಿವರಿಸಿದರು.

‘ಐದನೇ ವರ್ಷದಲ್ಲಿದ್ದಾಗಲೇ ಸಂಗೀತ ಕಲಿಯಲು ಪ್ರಾರಂಭಿಸಿದೆ. ಸಂಗೀತ ಸಂಯೋಜಕ ಅರ್ಜುನ್ ಜನ್ಯ ಬಳಿ ಸಂಗಿತ ಕಲಿಯಲು ಸೇರಿಕೊಂಡೆ. ಅಲ್ಲಿಯೇ ಸಂಗೀತದ ‘ಬೇಸಿಕ್ ಇಂಟರ್‌ಮಿಡಿಯೇಟೆಡ್ ಅಡ್ವಾನ್ಸ್ ಕೋರ್ಸ್‌’ ಪೂರ್ಣಗೊಳಿಸಿದೆ. ಶಾಲಾ–ಕಾಲೇಜು ಸೇರಿದಂತೆ ಅವಕಾಶ ಸಿಕ್ಕ ಕಡೆಯೆಲ್ಲಾ, ಸಂಗೀತ ಪ್ರದರ್ಶನ ನೀಡುತ್ತಿದ್ದೆ. ಕ್ರಮೇಣ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಹಂತವನ್ನೂ ಪೂರ್ಣಗೊಳಿಸಿದೆ.’

‘ಅದ್ಯಾಕೋ ಏನೋ ಗೊತ್ತಿಲ್ಲ. 8ನೇ ತರಗತಿ ಇದ್ದಾಗ ಗಿಟಾರ್ ಮೇಲೆ ಆಸಕ್ತಿ ಹುಟ್ಟಿಕೊಂಡಿತು. ಅದನ್ನೂ ಕಲಿತೆ. ಟ್ರಿನಿಟಿ ಕಾಲೇಜಿನಲ್ಲಿ 8 ಹಂತದ ಕೀಬೋರ್ಡ್ ಕಲಿಕೆಯನ್ನು ಪೂರ್ಣಗೊಳಿಸಿರುವೆ. ಅದರ ನಡುವೆಯೇ ವಿದ್ಯಾಭ್ಯಾಸ ಸಾಗುತ್ತಿತ್ತು. ವಿದ್ಯಾಭ್ಯಾಸ ಮುಗಿದ ಬಳಿಕ ಕೆಲಸಕ್ಕೆ ಹೋಗುವ ಅಥವಾ ಇನ್ನೂ ಹೆಚ್ಚು ಓದುವ ಆಸಕ್ತಿ ಇರಲಿಲ್ಲ. ಮನೆಯಲ್ಲಿ ಕೊಂಚ ಒತ್ತಡವಿತ್ತು. ಆದರೂ, ಮನಸೆಲ್ಲ ಸಂಗೀತದೆಡೆಗೆ ಆಯಸ್ಕಾಂತದಂತೆ ಸೆಳೆಯುತ್ತಿತ್ತು. ಹೀಗಾಗಿ, ಸಂಪೂರ್ಣವಾಗಿ ಸಂಗೀತದಲ್ಲಿ ತೊಡಗಿಕೊಂಡೆ’ ಎನ್ನುತ್ತಲೇ ತನ್ನ ಪ್ರತಿಭೆ ಅನಾವರಣದ ಬಗ್ಗೆ ವಿವರಿಸುತ್ತಾರೆ ಅವರು.

ತಾನು ಕಲಿತದ್ದನ್ನು ಇನ್ನೊಬ್ಬರಿಗೆ ಕಲಿಸಬೇಕು ಎಂಬ ಹಂಬಲದಿಂದ ಸ್ನೇಹಿತನ ಜೊತೆಗೂಡಿ ವಿದ್ಯಾರಣ್ಯಪುರದಲ್ಲಿ ಸಿಗ್ನೇಚರ್ ಮ್ಯೂಸಿಕ್ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ ಆಸಕ್ತರಿಗೆ ಸಂಗೀತ ಪರಿಕರಗಳ ನುಡಿಸುವಿಕೆ ಹಾಗೂ ಹಾಡುವಿಕೆ  ಕಲಿಸುತ್ತಿದ್ದಾರೆ. ಮನೆಯಲ್ಲೂ ಹೋಮ್ ಸ್ಟುಡಿಯೊ ಹೊಂದಿರುವ ವಿಶಾಲ್, ಅಲ್ಲಿಯೂ ಸಂಗೀತ ಹೇಳಿಕೊಡುತ್ತಿದ್ದಾರೆ.

ಕೆಲ ಬ್ಯಾಂಡ್‌ಗಳಿಗೆ ಕೀ ಬೋರ್ಡ್‌ ನುಡಿಸುವ ಮೂಲಕ ವಿಶಾಲ್ ಅಲ್ಲೂ ಮೋಡಿ ಮಾಡಿದ್ದಾರೆ. ಇನ್ನೂ ಹೆಸರಿಡದ, ಮಹಿಳಾ ಸಬಲೀಕರಣದ ಧ್ಯೇಯವಿಟ್ಟುಕೊಂಡು ನಿರ್ಮಾಣಗೊಳ್ಳುತ್ತಿರುವ ಕನ್ನಡದ ವೆಬ್‌ಸೀರಿಸ್‌ಗೆ ಸಂಗೀತ ಸಂಯೋಜನೆಯನ್ನೂ ಅವರು ಮಾಡಿದ್ದಾರೆ.

ಸಂಗೀತ ಸಂಯೋಜಿಸುವುದಾಗಲಿ, ಹಾಡುವುದಾಗಲಿ ಅಥವಾ ಸಂಗೀತ ಕಲಿಸುವುದಾಗಲಿ ನನ್ನ ಜೀವನದಲ್ಲಿ ಸಂಗೀತ ಒಂದು ಭಾಗವಾಗಿರಬೇಕು. ಅದು ದಿನನಿತ್ಯದ ಭಾಗವಾಗಿರಬೇಕಷ್ಟೇ. ಸಂಗೀತ ನನಗೆ ದೊಡ್ಡ ಸ್ಟ್ರೆಸ್ ಬಸ್ಟರ್. ಮನಸ್ಸಿಗೆ ಮುದ ನೀಡುವ ಅದು ನನ್ನ ನಿತ್ಯದ ಭಾಗವಾಗಿರಬೇಕಷ್ಟೇ ಎನ್ನುವುದು ಅವರ ಅಭಿಲಾಷೆ.

ವಿಶಾಲ್ ಅವರ ‘ಏನೊ ಏಕೋ ಹೀಗೋ’ ಹಾಡಿನ ಲಿಂಕ್: https://youtu.be/GpLwH2UEneg

***

ನನಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಹೆಚ್ಚು ಒಲವು. ಆಗಂತ ಅದಷ್ಟಕ್ಕೆ ಮಾತ್ರ ನಾನು ಸೀಮಿತವಾಗಿಲ್ಲ. ಪಾಶ್ಚಾತ್ಯ ಸಂಗೀತ ಸೇರಿದಂತೆ ಎಲ್ಲ ಮಾದರಿಯ ಸಂಗೀತಕ್ಕೆ ಒಗ್ಗಿಕೊಂಡಿದ್ದೇನೆ
ವಿಶಾಲ್

************

ದಿಕ್ಕು ಬದಲಿಸಿದ ಯಾನಿ ಸಂಗೀತ

ಗ್ರೀಕ್ ಸಂಗೀತಗಾರ ಯಾನಿ ಅಂತರರಾಷ್ಟ್ರೀಯ ಮಟ್ಟದ ಅದ್ಭುತ ಸಂಗೀತಗಾರ. ಕಾಲೇಜಿನಲ್ಲಿ ಓದುತ್ತಿರುವಾಗ ನಾನೊಮ್ಮೆ ಅವರ ಸಂಗೀತವನ್ನು ಆಲಿಸಿದ್ದೆ. ಅದು ನನ್ನನ್ನು ಮಂತ್ರಮುಗ್ದನಾಗಿಸಿತ್ತು. ನೆಲೆಕಂಡುಕೊಂಡರೆ ಅದು ಸಂಗೀತದಲ್ಲೇ ಕಾಣಬೇಕು ಎಂದು ತೀರ್ಮಾನಿಸಿದೆ. ಅಷ್ಟರ ಮಟ್ಟಿಗೆ ಆ ಸಂಗೀತ ನನ್ನನ್ನು ಪ್ರಭಾವಿತಗೊಳಿಸಿತು. ಇಲ್ಲವಾಗಿದ್ದರೆ, ವಿದ್ಯಾಭ್ಯಾಸ ಮುಗಿದ ಮೇಲೆ ಕೆಲಸಕ್ಕೆ ಹೋಗುತ್ತಿದ್ದೆ ಎನ್ನುವ ವಿಶಾಲ್‌ ಅವರಿಗೆ ಅರ್ಜುನ್ ಜನ್ಯ ಸ್ಪೂರ್ತಿ, ಎ.ಆರ್.ರೇಹಮಾನ್ ಅವರ ಸಂಗೀತ ಇಷ್ಟವಂತೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !