‌ನಾದದ ಅಮೂರ್ತ ಸಾಂಗತ್ಯ

7

‌ನಾದದ ಅಮೂರ್ತ ಸಾಂಗತ್ಯ

Published:
Updated:

ನಮ್ಮ ದೇಶದ ಸುಪ್ರಸಿದ್ಧ ಹಾಡುಗಾರರಲ್ಲಿ ಒಬ್ಬರು ಎಸ್. ಪಿ. ಬಾಲಸುಬ್ರಹ್ಮಣ್ಯಂ. ಅವರು ಟೀವಿಯಲ್ಲಿ ದೀರ್ಘ ಕಾಲ ನೀಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಎಂಬ ಕನ್ನಡ ಹಾಡುಗಳ ಕಾರ್ಯಕ್ರಮದ ಮೂಲಕ ಕನ್ನಡದಲ್ಲಿ ಹಾಡಬಲ್ಲ ಕೆಲವು ಸಾವಿರ ಬಾಲಕ ಬಾಲಕಿಯರನ್ನು ಉತ್ತಮ ಹಾಡುಗಾರರನ್ನಾಗಿಸಿದರು. ಹಾಡು ಮತ್ತು ನಾದಕ್ಕಷ್ಟೇ ಅಲ್ಲ, ಸ್ಫುಟವಾದ ಸ್ಪಷ್ಟ ಉಚ್ಚಾರಕ್ಕೆ ನಾದದಷ್ಟೇ ಪ್ರಾಧಾನ್ಯವನ್ನು ನೀಡಿ ಎಸ್ಪಿ ಹಾಡುಗಾರರ ಲಕ್ಷ್ಯವನ್ನು ಹಾಡಿನ ಸಾಹಿತ್ಯದ ಕಡೆಗೆ ಸೆಳೆಯುತ್ತಿದ್ದರು.

ಹಾಡಿನ ಭಾಷೆ ಕೂಡ ಹಾಡಿನ ನಾದದಷ್ಟೇ ಮುಖ್ಯ, ಇನಿದನಿ ಮತ್ತು ನಾದ ಹಾಡಿನಿಂದ ಬರುವುದಿಲ್ಲ. ಸಾಹಿತ್ಯ(ಭಾಷೆ) ಕೂಡ ಅದರ ಜೊತೆಗಿರುತ್ತದೆ. ನಾದ ಮತ್ತು ಭಾಷೆ ಎರಡೂ ಸೇರಿ ಹಾಡಾಗುತ್ತದೆ ಎಂದು ಎಸ್ಪಿ ಒತ್ತಿ ಒತ್ತಿ ಹೇಳುತ್ತಿದ್ದರು.

ತಮಗೆ ಗೊತ್ತಿಲ್ಲದ ಭಾಷೆಯಲ್ಲಿನ ಹಾಡಿನ ನಾದಕ್ಕೆ ಕೇಳುಗರು ತಲೆಯಾಡಿಸುವುದಿದೆ. ಆದರೆ ಹಾಡಿನಲ್ಲಿ ಏನಿದೆ, ಹಾಡು ಏನು ಹೇಳುತ್ತಿದೆ ಎಂದು ಅವರಿಗೆ ತಿಳಿದಿರುವುದಿಲ್ಲ. ಹಾಡಿನೊಳಗಿನ ಭಾಷೆಯ, ಅಂದರೆ ಮಾತಿನ ಸೌಂದರ್ಯವನ್ನು ಅರ್ಥ ಮಾಡಿಕೊಂಡು ಸವಿಯುವುದು ಹೇಗೆ ಎಂದು ತಿಳಿಯಬೇಕಾದರೆ, ಹಿಂದಿ ಭಾಷೆಯಲ್ಲಿರುವ ಗಜಲ್ ದೋಹೆ ಕವಾಲಿ ಮುಂತಾದ್ದನ್ನು ಆಲಿಸಬೇಕು. ಅದನ್ನು ಕೇಳಿ ಆಹಾ ಆಹಾ ಎಂದು ಉದ್ಗರಿಸುವ ಕೇಳುಗರು ಅದರ ನಾದ ಮತ್ತು ಶಬ್ದಾರ್ಥ ತಿಳಿದುಕೊಂಡಿರುತ್ತಾರೆ.

ತೆಲುಗು ಭಾಷೆಯ ಹಾಡುಗಳನ್ನು ಅದರ ನಾದ ಮಾಧುರ್ಯಕ್ಕಾಗಿ ಕನ್ನಡಿಗರು ಕೂಡ ಆಲಿಸುತ್ತಾರೆ. ತೆಲುಗು ಗೊತ್ತಿರುವ ಕನ್ನಡಿಗರಿಗೆ ಎಂದುಡೋ ಮಹಾನುಭಾವಲು ಎಂದರೆ ಬಹುಮಟ್ಟಿಗೆ ಅರ್ಥವಾಗುತ್ತದೆ. ಇತರರು ತಲೆಯಾಡಿಸುತ್ತಾರೆ ಅಷ್ಟೆ. ಹಾಡಿನ ಶಬ್ದಗಳ ಅರ್ಥ ಆಗುವುದಿಲ್ಲವಲ್ಲಾ ಎಂಬ ಖೇದ ಕೆಲವರಿಗಾದರೂ ಇರುತ್ತದೆ. ಹಿಂದಿ ಭಾಷೆಯ ಚಲನಚಿತ್ರದ ಹಾಡುಗಳು ಗಳಿಸಿರುವ ಜನಪ್ರಿಯತೆಗೆ ಆ ಭಾಷೆಯ ಸಾಹಿತ್ಯ, ಆ ಭಾಷೆ ಮತ್ತು ಅದರ ಜೊತೆಗಿನ ನಾದದ ಸಾಂಗತ್ಯ ಕಾರಣ.

ಸಂಗೀತದಲ್ಲಿರುವ ನಾದ ಬೇರೆ, ಶಬ್ದದ ಅರ್ಥದಲ್ಲಿರುವ ನಾದ ಬೇರೆ. ಒಂದಿಲ್ಲದೆ ಇನ್ನೊಂದಿರಲು ಸಾಧ್ಯವೆ?; ಎರಡೂ ಸೇರಿದ್ದು ಕಾವ್ಯ ಎನಿಸಿಕೊಳ್ಳುತ್ತದೆ. ಬರೀ ಸರಿಗಮ ಪದನಿಸ ಹಾಡಾಗಬಹುದು. ಭೀಮಸೇನ ಜೋಷಿ ಐದು ನಿಮಿಷ ಬರೀ ವಿಠ್ಠಲ ಎಂಬ ಶಬ್ದವನ್ನೇ ಹಾಡಾಗಿಸಿ ಕೇಳುಗರ ಮೈಮರೆಸುತ್ತಾರೆ. ನಮಗೆ ಗೊತ್ತಿಲ್ಲದ ಒಂದು ಭಾಷೆಯಲ್ಲಿನ ಒಂದು ಶ್ರೇಷ್ಠವಾದ ಕವಿತೆಯನ್ನು ಉತ್ಕೃಷ್ಟವಾಗಿ ಹಾಡಿದ್ದು ನಮಗೆ ಕೇವಲ ಹಾಡಾಗಿರುತ್ತದೆ. ಅದು ನಮಗೆ ಕಾವ್ಯವಾಗದು.

ಭಾಷಾ ಶಬ್ದಗಳ ಮಹತ್ವದ ಕುರಿತು ಆನ ಎಂಬ ಆಂಗ್ಲ ಕವಯಿತ್ರಿ ತನ್ನ “ಹರ್ ವರ್ಡ್ಸ್” ಎಂಬ ಕವನದಲ್ಲಿ ಹೀಗೆ ಹೇಳುತ್ತಾಳೆ:

ತಾರೆ ಮುಗಿಲು ಹಕ್ಕಿಗಳದೊಂದು
ಸೌಂದರ್ಯ ಜಾಲವನು ದೇವ ನೇದ;
ಆದರೆ ಅವುಗಳಿಗಿಂತ ಸುಂದರ ಶಬ್ದಗಳು;
ಅವುಗಳನವನು ಮಾಡದೆ ಹೋದ.

ಅದನ್ನೇ ನಾವು ಶಬ್ದಗಳನ್ನು ಸೃಷ್ಟಿಸುವ ಕೆಲಸವನ್ನು ದೇವ ಮನುಷ್ಯನಿಗೆ ಬಿಟ್ಟುಹೋದ ಎಂದು ಹೇಳಬಹುದು.

ಸಪ್ತ ಧ್ವನಿಗಳ ನಾದದಿಂದ ಸಂಗೀತವಾಗುತ್ತದೆ. ಸಪ್ತವರ್ಣಗಳ ನಾದದಿಂದ ಚಿತ್ರವಾಗುತ್ತದೆ. ಶಬ್ದದಲ್ಲಿ ನಾವು ಕಾಣುವ ಅರ್ಥ ಕಾವ್ಯ. ನಾದ ಅದರ ದೇಹ. ಕಾವ್ಯವನ್ನು ಅರ್ಥ ಮಾಡಿಸುವುದು ಕಷ್ಟ. ಕಾವ್ಯ ಅರ್ಥ ಆಗಬೇಕು. ಅರ್ಥವಾಗುವಿಕೆ ನಮ್ಮ ಅಂತರಾಳದಲ್ಲಿ ನಡೆಯುವ ಕ್ರಿಯೆ. ಅದು ಭಾಷೆಯ ಅಕ್ಷರ ಶಬ್ದ ಮತ್ತು ದನಿ ಶಬ್ದ ಎರಡೂ ಸೇರಿ ಆಗುತ್ತದೆ ಎಂದರೆ ಹೆಚ್ಚು ಸರಿ. ಅದನ್ನೇ ಅನುಭೂತಿ ಎನ್ನುವುದು. ಅದೇ ಕವಿ ಡಿ.ವಿ ಗುಂಡಪ್ಪ ಡಿ.ವಿ ಗುಂಡಪ್ಪ ‘ಅಭಿರಾಮತರವೆಂದು ಹೇಳಿರುವ ಅಶ್ರುತ ನಾದ. ಶ್ರುತವಾದ ಅಭಿರಾಮ ಸಂಗೀತ ನಮ್ಮ ಶ್ರವಣೇಂದ್ರಿಯಗಳಿಗೆ ಗಮ್ಯವಾದ, ಅಂದರೆ, ಒಂದರ್ಥದಲ್ಲಿ ಮೂರ್ತವಾದ ಅನುಭವವನ್ನು ನೀಡುವ ಕ್ರಿಯೆ. ಅದು ಮತ್ತು ಇದು ಒಂದಕ್ಕೊಂದು ಪೂರಕವಾಗಬಹುದು.

ಕವಿಶ್ರೇಷ್ಠ ಬೈರನನ “ಡಾನ್ ಜುವಾನ್” ಕವಿತೆಯಲ್ಲಿ ಈ ಸಾಲುಗಳಿವೆ:

ಸಂಗೀತವಿದೆ ಹುಲ್ಲುಕಡ್ಡಿಗಳ ನಿಟ್ಟುಸಿರಿನಲ್ಲಿ.
ಸಂಗೀತವಿದೆ ಝರಿಯ ಚಿಮ್ಮುವಿಕೆಯಲ್ಲಿ
ಸಂಗೀತವಿದೆ ಕಿವಿಯಿದ್ದರೆ ಮನುಷ್ಯರಿಗೆ;
ಅವರ ಬುವಿ ಕೂಡ ಅಂತರಿಕ್ಷಕಾಯಾಕಾಯಗಳ
ಪರಿಭ್ರಮಣ ಸಂಗೀತದೊಂದು ಪ್ರತಿಧ್ವನಿ ಮಾತ್ರ.

ಒಬ್ಬಳು ಹುಡುಗಿ ಬಾರಿಸು ಕನ್ನಡ ಡಿಂಡಿಮವ ಎಂಬ ಹಾಡನ್ನು ಅದ್ಭುತವಾಗಿ ಹಾಡುತ್ತಾಳೆ. ಕೇಳಿದವರು ರೋಮಾಂಚನಗೊಳ್ಳುತ್ತಾರೆ. ಒಬ್ಬರು ತಮ್ಮ ಪಕ್ಕದಲ್ಲಿ ಕುಳಿತವರೊಡನೆ ಹೇಳುತ್ತಾರೆ, “ಎಷ್ಟು ಚೆನ್ನಾಗಿ ಹಾಡಿದ್ದಾಳೆ ಹುಡುಗಿ! ಏನು ತಾದಾತ್ಮ್ಯ!” ಅವರ ಪಕ್ಕದಲ್ಲಿ ಕುಳಿತವರು ಕೂಡ ಹಾಡನ್ನು ಸವಿದಿದ್ದಾರೆ. ಆದರೆ ಅವರಿಗೇಕೋ ರೋಮಾಂಚನವಾಗಿಲ್ಲ. ಅವರು ಹೇಳುತ್ತಾರೆ, “ಅವಳಿಗೆ ಕನ್ನಡ ಸರಿಯಾಗಿ ಬಾರದು. ಸುಮ್ಮನೆ ಹಾಡಿದ್ದಾಳೆ. ಹಾಡಿನ ಅರ್ಥ ಅವಳಿಗೆ ಗೊತ್ತಿಲ್ಲ’.

ಗಾಯಕ ನಾದದೊಂದಿಗೆ ತಾದಾತ್ಮ್ಯ ಹೊಂದಬಹುದು. ಆದರೆ ಅವನಿಗೆ ತಾನು ಆಡುವ ಪದಗಳ ಅರ್ಥ ಗೊತ್ತಿದ್ದರೆ ಆ ತಾದಾತ್ಮ್ಯ ಇನ್ನೂ ಮೇಲಿನ ಮಜಲು ಮುಟ್ಟಬಹುದು. ಆ ತಾದಾತ್ಮ್ಯ ಕೇಳುಗನನ್ನು ಕೂಡ ತಟ್ಟಬಹುದು. ಭಾಷಾ ಶಬ್ದಗಳು ಕೇವಲ ಶಬ್ದಗಳಲ್ಲ. ಶಬ್ದಗಳು ಪ್ರತೀಕಗಳು. ಅವುಗಳ ಹಿಂದೆ ಒಂದು ಜಗತ್ತು ಇದೆ. ಆ ಜಗತ್ತನ್ನು ತಿಳಿಯಲು ನಮ್ಮ ಎಲ್ಲಾ ಜ್ಞಾನೇಂದ್ರಿಯಗಳೂ ಬೇಕು. ಎಲ್ಲ ಜ್ಞಾನೇಂದ್ರಿಯಗಳಿಗೂ ಒಳ್ಳೆಯ ಸಂವೇದನಾಶಕ್ತಿಯಿರಬೇಕು. ಎಲ್ಲವೂ ಸಮರ್ಪಕವಾಗಿ ಕೆಲಸ ಮಾಡಬೇಕು. ಹಾಗಿದ್ದರೆ ಮಾತ್ರ ಅರ್ಥ ಮತ್ತು ನಾದ ಎರಡೂ ಕಾಣಿಸುತ್ತದೆ.

ಚುಕ್ಕಿಗಳಲ್ಲಿ ಚಿತ್ರವಿದೆ. ಆದರೆ ಚುಕ್ಕಿಯೇ ಚಿತ್ರವಲ್ಲ. ಚುಕ್ಕಿಗಳು ನಾದಜಾಲವಾಗಿ ಚಿತ್ರವಾಗುತ್ತದೆ. ಚಿತ್ರವಾದ ಮೇಲೆ ಚುಕ್ಕಿಗಳು ಕಾಣಿಸುವುದಿಲ್ಲ, ಚಿತ್ರ ಮಾತ್ರ ಕಾಣಿಸುತ್ತದೆ. ಆದರೆ ಚುಕ್ಕಿಗಳು ಚಿತ್ರವಾಗುವ ಪರಿ ಕಾಣಿಸುವುದಿಲ್ಲವೆ? ಕಾಣಿಸುತ್ತದೆ ಕಣ್ಣುಗಳಿದ್ದರೆ, ಕೇಳಿಸುತ್ತದೆ ಕಿವಿಗಳಿದ್ದರೆ, ಎನ್ನುತ್ತಾನೆ ಕವಿ.

ಸಿಂಫನಿ ಎಂಬ ಗ್ರೀಕ್ ರೋಮನರ ಸಂಗೀತ ಪರಿಪೂರ್ಣವಾದ ವಾದ್ಯ ಸಂಗೀತ. ಅದರಲ್ಲಿ ಮುಖ್ಯವಾದ ವಾದ್ಯ ವಯಲಿನ್. ಸಿಂಫನಿಯ ಅಂತರಂಗವನ್ನು ಅರಿತವರು ಅದನ್ನು ಗಂಟೆ ಗಂಟೆಗಳ ಕಾಲ ಆಲಿಸುತ್ತಿರುತ್ತಾರೆ. ಅದರಲ್ಲಿ ಭಾಷಾ ಶಬ್ದವಿಲ್ಲ; ನಾದ ಶಬ್ದ ಮಾತ್ರ ಇರುತ್ತದೆ. ಅದು ವಯಲಿನ್ ಸಂಗೀತ ಸಾಗರ.

ಟೆನಿಸನ್ ಹೇಳುತ್ತಾನೆ, “ಮೆಲಡಿ ಹರ್ಡ್ ಈಸ್ ಸ್ವೀಟ್, ಮೆಲಡಿ ಅನ್‌ಹರ್ಡ್ ಈಸ್ ಸ್ವೀಟರ್”. ಕವಿ ಡಿ.ವಿ. ಗುಂಡಪ್ಪಗೆ ಬೇಲೂರಿನ ಶಿಲಾಬಾಲಿಕೆ- ಸರಸ್ವತಿಯ ಕೈಯಲ್ಲಿರುವ ವೀಣೆಯ ನಾದ ಕೇಳಿಸುತ್ತದೆ, “ಶ್ರುತಗಾನಮಭಿರಾಮಮಾದೊಡಶ್ರುಗಾನಮಭಿರಾಮತರ ”ಎನ್ನುತ್ತಾರೆ ಗುಂಡಪ್ಪ. ಕನಕದಾಸರಿಗೆ ಇದು “ಕಲ್ಲುಸಕ್ಕರೆಯೊಳಗಿನ ಸವಿ”ಯಾಗಿ ಕಾಣಿಸುತ್ತದೆ. ಆ ಕಲ್ಲುಸಕ್ಕರೆ ಸವಿ ಇರುವುದು ಅವರ ಕಾವ್ಯದ ಶಬ್ದಗಳಲ್ಲಿ.

ಅಪರಿಮಿತ ಸಂಖ್ಯೆಯ ಚುಕ್ಕಿಗಳು ಸೇರಿ ಒಂದು ಚಿತ್ರವಾಗುತ್ತದೆ. ಕಣ್ಣಿಗೆ ಕಾಣಿಸಿದ್ದು ಸುಂದರವೆನಿಸುವುದು ಅದು ಕಣ್ಣಿಗೆ ನಿಲುಕುವ ಅಳತೆಯಲ್ಲಿದ್ದಾಗ ಮಾತ್ರ. ಹಾಗೆಯೇ, ಕಿವಿಗೆ ಕೇಳಿಸಿದ್ದು ಮಧುರವೆನಿಸುವುದು, ನಾಲಿಗೆ ಸವಿದದ್ದು ರುಚಿಕರವೆನಿಸುವುದು, ಸ್ಪರ್ಶಿಸಿದ್ದು ಹಿತಕರವೆನಿಸುವುದು ಎಲ್ಲವೂ ಒಂದು ನಿರ್ದಿಷ್ಟ ಅಳತೆಯಲ್ಲಿದ್ದಾಗ ಮಾತ್ರ.

ಕವಿತೆ ಏನು? ಮಗುವಿನ ಅಳು, ಜನಪದರ ಹಾಡಿನ ಹುಟ್ಟಿನ ಮೂಲದಲ್ಲಿರುವ ನೋವು; ಬಣ್ಣ ಮತ್ತು ಕುಂಚ ಹುಟ್ಟುವ ಮೊದಲು ಮನಸ್ಸಿನಲ್ಲಿದ್ದ ಚಿತ್ರ, ಶಿಲ್ಪಿಯ ಮನಸ್ಸಿನಲ್ಲಿದ್ದ ಶಿಲ್ಪದ ಸ್ವರೂಪ, ವರ್ಣಾಕ್ಷರಗಳು ಹುಟ್ಟುವ ಮೊದಲಿದ್ದ ಸ್ವರಾಕ್ಷರಗಳು. ಭಾಷೆ ಭಾಷೆಯೆನಿಸಿಕೊಳ್ಳುವ ಮೊದಲು, ಭಾಷೆಯ ಉಗಮ ಕಾಲದಲ್ಲಿ ಇದ್ದಂಥ ಕೇವಲ ಧ್ವನಿಗಳು. ಎಲ್ಲವೂ ಕವಿತೆ. ಅವೆಲ್ಲ ಮತ್ತೆ ಕವಿತೆಯಾಳದ ಅಗೋಚರ ಬಿಂದುಗಳು. ಯಾವುದೂ ಎಲ್ಲಿಗೂ ಹೋಗುವುದಿಲ್ಲ. ಎಲ್ಲವೂ ಇರುತ್ತದೆ.

ಜೀವ ಏನು, ಜೀವ ಎಲ್ಲಿರುತ್ತದೆ? ಜೀವ ಒಂದು ಚುಕ್ಕಿ. ಅದು ಎಲ್ಲಿರುತ್ತದೆ? ನಮ್ಮ ಉಸಿರಿನಲ್ಲಿ? ರಕ್ತದಲ್ಲಿ? 
ಮನಸ್ಸು ಎಲ್ಲಿರುತ್ತದೆ? ಮನಸ್ಸು ತಲೆಚಿಪ್ಪಿನೊಳಗಿರುತ್ತದೆಯೇ? ಮನಸ್ಸು ಒಳಗೇ ಇರುವುದಿಲ್ಲ ಅಥವಾ ಹೊರಗೇ ಇರುವುದಿಲ್ಲ. ನಾನು ಎಂಬ ಭಾವ ಮನಸ್ಸಿನಲ್ಲಿರುತ್ತದೇನೊ ನಿಜ. ಆದರೆ, ಪಂಚೇಂದ್ರಿಯಗಳು ನಿರಂತರವಾಗಿ ಗ್ರಹಿಸುತ್ತಿರುವುದು ಮತ್ತು ಮಿದುಳಿನಲ್ಲಿ ನಡೆಯುವ ಚಲನೆ ಎಲ್ಲವೂ ಒಟ್ಟು ಸೇರಿ ಮನಸ್ಸು ಎನಿಸಿಕೊಳ್ಳುತ್ತದೆ. ಅದು ಒಳಗೂ ಇರುತ್ತದೆ, ಹೊರಗೂ ಇರುತ್ತದೆ‌.

ಎಲ್ಲಿಯೋ ಹುಟ್ಟಿದ ಎರಡು ಮನಸ್ಸುಗಳು ಒಂದಾಗುವುದು ವಿಚಿತ್ರವೆನಿಸುವುದಿಲ್ಲವೆ? ಆ ಎರಡು ಮನಸ್ಸಿನಲ್ಲಿ ಹುಟ್ಟುವ ಸಮರಸದ ನಾದದ ಸ್ವರೂಪ ಏನು? ಆಕರ್ಷಣೆ ಏನು?

ಹಾಗೆ ಒಂದಾದ ಮನಸ್ಸುಗಳು ಮತ್ತೆ ಬೇರೆ ಬೇರೆಯಾಗುವುದು ಕೂಡ ವಿಚಿತ್ರವೇ ಅಲ್ಲವೆ? ಸ್ನೇಹಿತರೇಕೆ ಅಗಲುತ್ತಾರೆ? ಸತಿ– ಪತಿಯರೇಕೆ ವಿಚ್ಛೇದನ ಬಯಸುತ್ತಾರೆ? ಸಾಮರಸ್ಯ ಉಂಟು ಮಾಡುವುದು ಏನು? ಸಂಘರ್ಷ ಉಂಟು ಮಾಡುವುದು ಏನು?

ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಬಗ್ಗೆ ಮನಸ್ಸಿನಲ್ಲಿ ಧರಿಸುವ ಭಾವನೆ ಒಂದು ನಿರ್ದಿಷ್ಟ ಸ್ವರೂಪದ ಚಿತ್ರ. ಸಾಮರಸ್ಯವೆಂದರೆ ಎರಡು ನಿರ್ದಿಷ್ಟ ಸ್ವರೂಪದ ಚಿತ್ರಗಳು ಒಂದನ್ನೊಂದು ನೀನಿಲ್ಲದಿದ್ದರೆ ನಾನಿಲ್ಲ ಎಂಬಂತೆ ಅಂಟಿಕೊಳ್ಳುವುದು. ಇಬ್ಬರ ನಡುವೆ ತಿಕ್ಕಾಟ ಅಂದರೆ ಈ ಚಿತ್ರಗಳ ನಡುವಿನ ತಿಕ್ಕಾಟ. ಹೀಗಲ್ಲದೆ, ನಿರ್ದಿಷ್ಟ ಸ್ವರೂಪವಿಲ್ಲದೆ, ಅಂಟಿಕೊಳ್ಳದೆ ಕೇವಲ ಎರಡು ಮನುಷ್ಯರ ನಡುವೆ ಸಹಸ್ಪಂದನ ಸಾಧ್ಯವಿದೆ. ಆಕಾಶದಲ್ಲಿರುವ ನಕ್ಷತ್ರಗಳಂತೆ ನಡುವೆ ಸಾವಿರಾರು ಮೈಲಿಗಳ ಅಂತರವಿದ್ದೂ ಒಂದನ್ನೊಂದು ಹಿಡಿದುಕೊಂಡು ಇರಲು ಸಾಧ್ಯವಿಲ್ಲವೆ? ವಿಶ್ವದಲ್ಲಿರುವ ಎಲ್ಲಾ ಆಕಾಶಕಾಯಗಳು ಇರುವುದು ಹೀಗೆಯೇ ಅಲ್ಲವೆ? ಗಾಳಿ, ನೀರು, ಕಲ್ಲು, ಮಣ್ಣು ಮುಂತಾದ ಸಕಲ ವಸ್ತುಗಳೂ ಅವುಗಳಿರುವಂತೆ ಇರುವುದು ಹೀಗೆಯೇ ಅಲ್ಲವೆ?

ಆಕಾಶಕಾಯಗಳು ಈಗ ಹಿಡಿದುಕೊಂಡಿರುವಂತೆ ನಿರಂತರ ಒಂದನ್ನೊಂದು ಹಿಡಿದುಕೊಳ್ಳದಿರುತ್ತಿದ್ದರೆ ನಾವು ಹೇಳುವ ವಿಶ್ವ ಎನ್ನುವುದು ಏನಿದೆಯೋ ಅದು ಇರುತ್ತಿರಲಿಲ್ಲ. ಇದ್ದರೂ ಅದು ಏನಾಗಿರುತ್ತಿತ್ತು ಎನ್ನುವುದು ಮಾನವನ ಊಹೆಗೆ ನಿಲುಕದ್ದು. ಅಮೂರ್ತವಾಗಿದ್ದೂ ನಮಗೆ ಇವತ್ತು ಗಮ್ಯವಾಗಿರುವಂಥದು ಭಾಷೆ, ಸಾಹಿತ್ಯ ಮತ್ತು ಸಂಗೀತ ಮಾತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !