ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತದ ಅಲೆ: ತುಂಗಾ ತೀರದಿ...

Last Updated 28 ಜನವರಿ 2023, 19:30 IST
ಅಕ್ಷರ ಗಾತ್ರ

‘ದಾಸರೆಂದರೆ ಪುರಂದರ ದಾಸರಯ್ಯಾ’ ಎಂದು ಅವರ ಗುರುಗಳಾದ ವ್ಯಾಸರಾಯರಿಂದಲೇ ಹೊಗಳಿಸಿಕೊಂಡ ಪುರಂದರ ದಾಸರು, ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಹೆಸರಾದವರು. ಅವರು ನಡೆದಾಡಿದ, ತಮ್ಮ ಕಾವ್ಯ ರಚನೆಗೆ ತಾಣವನ್ನಾಗಿ ಮಾಡಿಕೊಂಡ ಹಂಪಿಯ ‘ಪುರಂದರ ಮಂಟಪ’ದಲ್ಲಿ ತುಂಬಾ ವಿಶೇಷವಾಗಿ ನಡೆದ ಅವರ ಆರಾಧನೆಯಲ್ಲಿ ಪಾಲ್ಗೊಳ್ಳುವ ಅವಕಾಶವು ದೊರಕಿತು.

ಪ್ರತಿವರ್ಷ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ನಡೆಯುವ ಆಚರಣೆಯನ್ನು ಈ ಬಾರಿ ಮೊತ್ತಮೊದಲ ಬಾರಿಗೆ ಪುರಂದರ ಮಂಟಪದಲ್ಲಿ ನಡೆಯುವಂತೆ ಮಾಡಿದ್ದರ ಹಿಂದೆ, ರಾಜವಂಶಜರಾದ ಕೃಷ್ಣದೇವರಾಯರ ಹಿರಿದಾದ ಬಯಕೆ ಇತ್ತು. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಪುರಂದರ ಮಂಟಪದ ಮುಂಭಾಗದಲ್ಲಿ ಮತ್ತು ಸಂಜೆ 4ರಿಂದ ರಾತ್ರಿಯವರೆಗೆ ವಿಜಯ ವಿಠಲ ದೇವಸ್ಥಾನದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕಿ ಸಂಗೀತದೊಂದಿಗೆ ಹಿಂದೂಸ್ತಾನಿ ಸಂಗೀತವೂ ಮೇಳೈಸಿದ್ದು ತುಂಬಾ ವಿಶೇಷವಾಗಿತ್ತು.

ವಿಜಯನಗರ ಸಾಮ್ರಾಜ್ಯದ ಕಳೆದುಹೋದ ವೈಭವವನ್ನು ನೆನೆಯುತ್ತಾ ದುಃಖಿಸುವುದನ್ನು ಬದಿಗಿಟ್ಟು, ಆ ಸಂಭ್ರಮವನ್ನು ಮತ್ತೆ ನೆನಪಿಸಿಕೊಂಡು ನಾಡು-ನುಡಿ-ಸಂಸ್ಕೃತಿಗಳ ಕುರಿತು ಕೆಲಸವನ್ನು ಆರಂಭಿಸುವುದು ರಾಯರ ಉದ್ದೇಶವಾಗಿದ್ದು, ಅದಕ್ಕಾಗಿ ಅವರು ತುಂಗಭದ್ರೆಯ ತೀರದಲ್ಲಿ, ದಾಸಶ್ರೇಷ್ಠರು ಓಡಾಡಿದ ಸ್ಥಳದಲ್ಲೇ ಅವರನ್ನು ನೆನಪಿಸುವ ಕಾರ್ಯವನ್ನು ಆಯೋಜಿಸಿದ್ದರು. ಕರ್ನಾಟಕಿ ಸಂಗೀತಗಾರರೂ, ವಿದ್ವಾಂಸರೂ ಆದ ಪ್ರೊ.ಅರವಿಂದ ಹೆಬ್ಬಾರ್ ಅವರು ಕಾರ್ಯಕ್ರಮದ ರೂವಾರಿಗಳಾಗಿದ್ದರು

ಪೂರ್ವದಲ್ಲಿ ಸೂರ್ಯ ಮೂಡುತ್ತಿದ್ದಂತೆ ಬಗೆಬಗೆಯ ವಾದ್ಯಗಳೊಂದಿಗೆ, ಸಂಭ್ರಮದ ಕಲಾವಿದರ ಗಡಣವೇ ಅಲ್ಲಿ ನೆರೆದಿತ್ತು. ಮಂಟಪದ ಹೊರಗೆ ಅಲಂಕೃತವಾದ ವೇದಿಕೆಯ ಮುಂಭಾಗದಲ್ಲಿ ಪುರಂದರ ದಾಸರ ಆರಾಧನೆಯ ಕಾರ್ಯಕ್ರಮ ಆರಂಭವಾದದ್ದು ಗೋಷ್ಠಿ ಗಾಯನದೊಂದಿಗೆ. ಇದಕ್ಕಾಗಿ ಕರ್ನಾಟಕದ ವಿವಿಧ ಕಡೆಗಳಿಂದ ಕರ್ನಾಟಕಿ ಮತ್ತು ಹಿಂದೂಸ್ತಾನಿ ಹಾಡುಗಾರ/ವಾದಕರನ್ನು ಆಹ್ವಾನಿಸಲಾಗಿತ್ತು.

ಗೋಷ್ಠಿ ಗಾಯನದಲ್ಲಿ ಯಾವಾಗಲೂ ಹಾಡುವ ನವರತ್ನ ಮಾಲಿಕೆ ಎಂದು ಕರೆಯಲಾಗುವ ಹಾಡುಗಳ ಗುಚ್ಛವನ್ನು ಬಿಟ್ಟು ಹೆಚ್ಚು ಪ್ರಚಾರದಲ್ಲಿಲ್ಲದ ಆದರೆ ಅರ್ಥಗರ್ಭಿತವಾದ ಹೊಸದಾದ 10 ಹಾಡುಗಳನ್ನು ಆರಿಸಿಕೊಂದು ಅವಕ್ಕೆ ‘ದಶರತ್ನ ಮಾಲಿಕೆ’ ಎಂದು ಹೆಸರು ಕೊಡಲಾಗಿತ್ತು. ಇವುಗಳಲ್ಲಿ ನಾಮ ಸ್ಮರಣೆ, ಬೋಧನೆ, ಮುಂಡಿಗೆ, ವಿಡಂಬನೆ ಮುಂತಾದ ಹಲವು ಬಗೆಯ ವಸ್ತು ವಿಷಯವುಳ್ಳ ಹಾಡುಗಳನ್ನು ಆರಿಸಿಕೊಳ್ಳಲಾಗಿತ್ತು. ಪ್ರೊ. ಅರವಿಂದ ಹೆಬ್ಬಾರ್ ಮತ್ತು ಡಾ.ನಾಗರಾಜ್ ಹವಾಲ್ದಾರ್ ಅವರು ಈ ಹಾಡುಗಳಿಗೆ ರಾಗ ಸಂಯೋಜಿಸಿದ್ದರು.

ಆಧುನಿಕ ಸೌಲಭ್ಯದ ಝೂಮ್ ಮಾಧ್ಯಮದ ಮೂಲಕ ಜೊತೆ ಸೇರಿ ಅಭ್ಯಾಸ ಮಾಡಿಕೊಂಡ ಗಾಯಕ/ಗಾಯಕಿಯರಿಂದ ಅತ್ಯಂತ ಮನೋಜ್ಞವಾಗಿ ಈ ಗಾಯನ ಮೂಡಿಬಂತು. ವಯೋಲಿನ್, ಮೃದಂಗ, ಮೋರ್ಸಿಂಗ್ ಜೊತೆಯಲ್ಲಿ ತಬಲಾ, ಹಾರ್ಮೋನಿಯಂ ವಾದನಗಳು ಕಳೆಗಟ್ಟಿದ್ದವು. ಒಂದೂವರೆ ಗಂಟೆಯ ಈ ಕಾರ್ಯಕ್ರಮದಲ್ಲಿ ಸುಧಾ ರಘುನಾಥನ್ ಅವರೂ ಎಲ್ಲರೊಂದಿಗೆ ಸೇರಿಕೊಂಡು ಭಾಗವಹಿಸಿದ್ದು ಅಪರೂಪದ್ದಾಗಿತ್ತು. ಕೇರಳದ ತಿರುವಯ್ಯಾರ್‌ನಲ್ಲಿ ನಡೆಯುವ ತ್ಯಾಗರಾಜರ ಆರಾಧನೆ, ಎಟಿಯಾಪುರಂನಲ್ಲಿ ನಡೆಯುವ ದೀಕ್ಷಿತರ ಆರಾಧನೆ ತಾನಸೇನರ ನೆನಪಿನಲ್ಲಿ ನಡೆಯುವ ತಾನಸೇನ್ ಮಹೋತ್ಸವ, ಸ್ವಾಮಿ ಹರಿದಾಸರ ನೆನಪಿನಲ್ಲಿ ನಡೆಯುವ ಹರಿವಲ್ಲಭ ಸಂಗೀತ ಮಹೋತ್ಸವ ಮುಂತಾದವುಗಳನ್ನು ಇಲ್ಲಿ ನೆನೆಯಬಹುದು.

ರಾಜವಂಶಜರಾದ ಕೃಷ್ಣದೇವರಾಯ
ರಾಜವಂಶಜರಾದ ಕೃಷ್ಣದೇವರಾಯ

ಕಲಾವಿದರು, ಸರ್ಕಾರ, ಊರಿನ ಜನತೆ ಹೀಗೆ ಎಲ್ಲಾ ಕಡೆಯಿಂದ ಸಹಕಾರ ದೊರಕಿ ಪ್ರತಿವರ್ಷ ಈ ಬಗೆಯ ಸಂಗೀತಾರಾಧನೆ ನಡೆದಲ್ಲಿ ಅದೇ ಸಾಲಿಗೆ ಸೇರಬಲ್ಲ ಈ ಕಾಯಕ್ರಮದಲ್ಲಿ ನಮ್ಮ ಮಣ್ಣಿನ ವಿಶೇಷವಾದ ಕರ್ನಾಟಕಿ ಮತ್ತು ಹಿಂದೂಸ್ತಾನಿ ಎರಡೂ ಪದ್ಧತಿಯ ಗಾಯನ/ವಾದನ ಜೊತೆ ಸೇರುವುದು ತುಂಬಾ ಮಹತ್ವದ್ದೆನಿಸುತ್ತದೆ. ಇಲ್ಲಿ ಕೊಡು ಕೊಳ್ಳುವಿಕೆ ಸಾಧ್ಯವಾಗುತ್ತದೆ, ಪರಾಮರ್ಶೆ-ಅನುಸಂಧಾನಗಳಿಗೊಂದು ಅವಕಾಶವೂ ಆಗುತ್ತದೆ.

ಗೋಷ್ಠಿ ಗಾಯನದ ನಂತರ ಆರಂಭವಾಗಿ ಸಂಜೆಯವರೆಗೂ ನಡೆದ 15-15 ನಿಮಿಷಗಳ ಪುರಂದರ ದಾಸರ ಕೀರ್ತನೆಯ ಕಾರ್ಯಕ್ರಮದಲ್ಲಿ ಎಲ್ಲ ಸಂಗೀತಗಾರರಿಂದ ಬಗೆಬಗೆಯ ಉಗಾಭೋಗಗಳು-ಹಾಡುಗಳು ಅತ್ಯಂತ ಸುಂದರವಾಗಿ ಮೂಡಿಬಂದವು. ಕರ್ನಾಟಕಿ ಸಂಗೀತಗಾರರಾದ ಗಿರಿಜಾಶಂಕರ್, ಅದಿತಿ ಪ್ರಹ್ಲಾದ್, ಶ್ರೇಯ ಕೊಳತ್ತಾಯ, ಸ್ಮೃತಿ ಭಾಸ್ಕರ್, ಡಾ.ವಂದನಾ, ವೈ.ಜಿ. ಶ್ರೀಲತಾ, ಲಕ್ಷ್ಮೀ ವರುಣ್ ಮುಂತಾದವರು ಹಾಗೂ ಹಿಂದೂಸ್ತಾನಿ ಗಾಯಕರಾದ ದತ್ತಾತ್ರೇಯ ವೇಲಣಕರ್, ಹಿರಣ್ಮಯೀ, ಅನಿರುದ್ಧ ಐತಾಳ್, ಸಮೀರ್ ಕುಲಕರ್ಣಿ, ಜನನಿ ಕುಲಕರ್ಣಿ, ಆದಿತ್ಯ ಪಲ್ಲಕ್ಕಿ, ಶ್ರೀಮತಿ ದೇವಿ ಮುಂತಾದವರು ಭಾಗವಹಿಸಿದ್ದರು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಹೊಸಪೇಟೆ, ಬಳ್ಳಾರಿ ಕಡೆಯ ಭಜನಾ ತಂಡಗಳು ಕೊಂಬು ಕಹಳೆಗಳೊಂದಿಗೆ ನಗರ ಸಂಕೀರ್ತನೆಯನ್ನು ನಡೆಸಿಕೊಟ್ಟದ್ದು ಆಕರ್ಷಕವಾಗಿತ್ತು.

ಸಂಜೆ 4 ಗಂಟೆಯ ನಂತರದ ಕಾರ್ಯಕ್ರಮದ ಸ್ಥಳ ಅತ್ಯಂತ ಮೋಹಕವಾಗಿತ್ತು. ಸುತ್ತಮುತ್ತ ಬಂಡೆಗಳಿಂದ ಆವೃತವಾಗಿ, ಮುಕ್ತವಾದ ನೀಲಾಕಾಶ ಕಾಣುವ ವಿಜಯ ವಿಠಲ ದೇವಸ್ಥಾನದ ಹೊರ ಆವರಣ ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿತ್ತು. ನೂರಾರು ದಾಸರ ಹಾಡುಗಳಿಗೆ ರಾಗ ಸಂಯೋಜಿಸಿರುವ ಪ್ರೊ.ಅರವಿಂದ ಹೆಬ್ಬಾರ್ ಅವರು ತಮ್ಮ ಶಿಷ್ಯೆಯರಾದ ಅರ್ಚನಾ ಮತ್ತು ಸಮನ್ವಿ ಅವರೊಂದಿಗೆ ‘ದಾಸರ ಪದಗಳನ್ನು ಹೇಗೆ ಹಾಡಬೇಕು’ ಎಂಬ ವಿಷಯದ ಬಗ್ಗೆ ಸಮರ್ಪಕವಾದ ಉದಾಹರಣೆಗಳನ್ನು ನೀಡುತ್ತಾ ಮಾತನಾಡಿದರು. ಮಾತಿನ ಮಧ್ಯದಲ್ಲಿ ಹೊಮ್ಮುತ್ತಿದ್ದ ಅರ್ಚನ-ಸಮನ್ವಿಯವರ ಕಂಠದಲ್ಲಿನ ಹಾಡುಗಳಂತೂ ಕೇಳುವ ಹಸಿವನ್ನು ಇನ್ನೂ ಹೆಚ್ಚಿಸುವಂತಿದ್ದವು.

ಮಾನಕರಿ ಅಚಾರ್ ಅವರ ಉಪನ್ಯಾಸದ ಬಳಿಕ, ಖ್ಯಾತ ಹಿಂದೂಸ್ತಾನಿ ಗಾಯಕ ಡಾ.ನಾಗರಾಜ್ ಹವಾಲ್ದಾರ್ ಅವರ ಗಾಯನವಿತ್ತು. ರಾಗ ಪೂರಿಯಾಕಲ್ಯಾಣ್‌ನಲ್ಲಿ ಉಗಾಭೋಗವೊಂದನ್ನು ಝಪ್‍ತಾಲ್‌ಗೆ ಅಳವಡಿಸಿ ಹಾಡುವುದರ ಜೊತೆಗೆ ಹಲವಾರು ದಾಸರ ಪದಗಳನ್ನು ಅವರು ಹಾಡಿದರು. ಆ ನಂತರ ಸುಪ್ರಸಿದ್ಧ ಗಾಯಕಿ, ಚೆನ್ನೈನ ಸುಧಾ ರಘುನಾಥನ್ ಅವರ ಗಾಯನವಿತ್ತು. ತಮ್ಮ ಗುರು ಎಂ.ಎಲ್.ವಸಂತಕುಮಾರಿ ಅವರಿಂದ ಪಡೆದ ದಾಸರಪದಗಳನ್ನು ಹಾಡುವ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಸುಧಾ ಅವರ ಸಿರಿಕಂಠದಲ್ಲಿ, ಶುದ್ಧವಾದ ಕನ್ನಡ ಶಬ್ದೋಚ್ಛಾರದಲ್ಲಿ ಹಾಡು ಕೇಳುವುದು ಅತ್ಯಂತ ಸುಖದಾಯಕವಾದದ್ದು. ಅವರಿಗೆ ಪಕ್ಕವಾದ್ಯದಲ್ಲಿ ಸಹಕಾರವಿತ್ತ ಎಂಬಾರ್ ಕಣ್ಣನ್, ಆರ್.ಶಂಕರನಾರಾಯಣನ್, ಆರ್.ರಾಮನ್ ಅವರುಗಳೂ ಶ್ಲಾಘನೀಯರು.

ಜನ ಸಂಚಾರ, ವಾಹನ ವ್ಯವಸ್ಥೆ, ಅಂಗಡಿ-ಮುಂಗಟ್ಟುಗಳ್ಯಾವುವೂ ಇಲ್ಲದ ನಿಸರ್ಗದ ಮಡಿಲಲ್ಲಿ ಸಂಗೀತ ಕೇಳುವುದು ಆನಂದವೇ ಆದರೂ, ಇಂಥ ಕಡೆ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭದ ಕೆಲಸವಲ್ಲ. ಸಣ್ಣ-ಪುಟ್ಟ ಸಾಮಾನುಗಳನ್ನೂ ನೆನಪಿಟ್ಟು ಬಹುದೂರದಿಂದ ತಂದು ಜೋಡಿಸಿಕೊಳ್ಳುವ ಅನಿವಾರ್ಯತೆ ಇರುವಲ್ಲಿ, ಕಲಾವಿದರನ್ನು ಕರೆದೊಯ್ಯುವುದು, ಊಟ-ಉಪಚಾರ, ವೇದಿಕೆಯನ್ನು ಸಜ್ಜುಗೊಳಿಸುವುದೇ ಮೊದಲಾದ ಹಲವು ದೊಡ್ಡ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ನಗುತ್ತಾ ಮಾಡಿ ಮುಗಿಸಿದವರು ಇತಿಹಾಸದ ಸಂಶೋಧನಾ ವಿದ್ಯಾರ್ಥಿ ಪ್ರೀತ್ ಖೋನ ಮತ್ತು ಅವರ ತಂಡ. ಹಂಪಿಯ ಗಲ್ಲಿ ಗಲ್ಲಿಯನ್ನು ಬಲ್ಲ ಅವರ ಬಳಿ ಇದ್ದದ್ದು ತಮ್ಮ ಊರು-ಪರಂಪರೆಯ ಬಗ್ಗೆ, ಸಂಗೀತ ಮತ್ತು ಸಂಗೀತಗಾರರ ಬಗ್ಗೆ ಪ್ರೀತಿ ಮತ್ತು ರಾಯರ ಬಗ್ಗೆ ಗೌರವ.

ಯಾವುದೇ ಬಗೆಗಿನ ಢಂಬಾಚಾರ-ಆಡಂಬರಗಳಿಲ್ಲದೇ, ಹಿರಿ-ಕಿರಿ ತಾರತಮ್ಯವಿಲ್ಲದೇ ದಾಸರನ್ನು ಸ್ಮರಿಸಿ ದಿನವಿಡೀ ಸಂಗೀತದಲ್ಲಿ ತೊಡಗಿಕೊಳ್ಳುವ ಅವಕಾಶ ಈ ಕಾರ್ಯಕ್ರಮದ ಮೂಲಕ ಆಯಿತು ಮಾತ್ರವಲ್ಲ, ಅಳಿದುಳಿದ ಸ್ಮಾರಕಗಳ ನಡುವಿನಲ್ಲಿ ಗತ ವೈಭವದ ಒಂದು ಸಣ್ಣ ಝಲಕ್‍ನ್ನು ನೀಡಿದ ಈ ಕಾರ್ಯಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT