ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಸಂಗೀತ ಈಗಲೂ ಸ್ವಚ್ಛಂದ

Last Updated 16 ಆಗಸ್ಟ್ 2020, 6:36 IST
ಅಕ್ಷರ ಗಾತ್ರ
ADVERTISEMENT
""
""
""

ಕೊರೊನಾದ ಈ ಕಾಲದಲ್ಲಿ ಕಛೇರಿ ಇಲ್ಲದೆ, ಗುರು ಸಮ್ಮುಖದಲ್ಲಿ ರಿಯಾಜ್‌ ಇಲ್ಲದೆ ಬಂದಿಯಾಗಿರುವ ಸಂಗೀತ, ಹೇಗೆ ಸ್ವಾತಂತ್ರ್ಯದ ಹಾದಿಯನ್ನು ಹುಡುಕಿಕೊಳ್ಳುತ್ತಿದೆ? ಸಂಗೀತ ಹೆಜ್ಜೆಹಾಕಿದ ಅಂತಹ ಹಾದಿಯ ಮೇಲೆ ಬೆಳಕು ಚೆಲ್ಲಿದ್ದಾರೆ ಹಿಂದೂಸ್ತಾನಿ ಕಲಾವಿದ ಓಂಕಾರನಾಥ ಹವಾಲ್ದಾರ್

ಕೊರೊನಾದಿಂದ ಎಲ್ಲ ವೃತ್ತಿಪರರಂತೆಯೇ ಕಲಾವಿದರಿಗೂ ತೊಂದರೆಯಾಗಿರುವುದು ನಿಜ. ಇದು ದೊಡ್ಡ ಸಮಸ್ಯೆ ಅಂತ ಯೋಚಿಸುತ್ತಲೇ ಇದ್ದರೆ ಬದುಕು ಮುಂದೆ ಸಾಗಬೇಕಲ್ಲ? ಆದಷ್ಟು ಬೇಗ ಈ ಪಿಡುಗು ನಿವಾರಣೆಯಾಗಲಿ ಅಂತ ಪ್ರಾರ್ಥಿಸಿ ಮುಂದಿನ ಜೀವನ ರೂಪಿಸಿಕೊಳ್ಳಲು ಹೊರಡಬೇಕು. ಅವಕಾಶಗಳನ್ನೂ ಕಂಡುಕೊಳ್ಳಬೇಕು. ಹೌದು, ಸಂಗೀತ ಕಲಾವಿದರ ಬದುಕಿನಲ್ಲಿ ಕೊರೊನಾ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಕಛೇರಿಗಳು ಮತ್ತು ರಿಯಾಲಿಟಿ ಷೋಗಳನ್ನು ಜೀವನಾಧಾರವಾಗಿ ಮಾಡಿಕೊಂಡಿದ್ದವರ ಸಂಕಟ ಹೆಚ್ಚಾಗಿದೆ. ಪಾಠ ಹೇಳುವುದನ್ನು ಮೊದಲಿನಿಂದ ರೂಢಿಸಿಕೊಂಡಿದ್ದವರಿಗೆ ಆ ಸಂಕಟದ ತೀವ್ರತೆ ಕಡಿಮೆ.

ಗುರುಮುಖೇನ ಸಂಗೀತ ಕಲಿಯುವ ಮಹತ್ವ ಎಲ್ಲರಿಗೂ ಗೊತ್ತಿದೆ. ಅದನ್ನು ನಾನೇನು ಹೊಸದಾಗಿ ಹೇಳಬೇಕಿಲ್ಲ. ಆದರೆ, ಗುರುವನ್ನು ಭೇಟಿಯಾಗುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಕಲಿಕೆ ನಿಲ್ಲಬೇಕೇ? ಆಪ್ಷನ್ ‘ಎ’ ಸಾಧ್ಯವಾಗದಿದ್ದರೆ, ಆಪ್ಷನ್ ‘ಬಿ’ ಬಗ್ಗೆ ಯೋಚಿಸಬೇಕಲ್ಲವೇ? ಆನ್‌ಲೈನ್ ಕಲಿಕೆ ಎನ್ನುವುದು ಇಂಥ ಆಪ್ಷನ್ ‘ಬಿ’.

ಕೋವಿಡ್ ಕಾಣಿಸಿಕೊಳ್ಳುವ ಮೊದಲೂ ನಾನು ಹತ್ತಾರು ದೇಶಗಳ ಶಿಷ್ಯರಿಗೆ ಆನ್‌ಲೈನ್ ಪಾಠ ಮಾಡ್ತಿದ್ದೆ. ಈಗ ಬೆಂಗಳೂರಿನ ಶಿಷ್ಯರಿಗೂ ಇದು ವಿಸ್ತರಣೆಯಾಗಿದೆ. ಗುರು ಮತ್ತು ಶಿಷ್ಯರ ಮಧ್ಯೆ ಈ ಮೊದಲೇ ಉತ್ತಮ ಸಂಬಂಧ ನಿರ್ಮಾಣವಾಗಿದ್ದರೆ ಆನ್‌ಲೈನ್ ಕಲಿಕೆ ಚೆನ್ನಾಗಿ ಸಾಗುತ್ತೆ. ನಾನು ನಿಮ್ಮಲ್ಲಿ ಈ ಹಿಂದೆ ಐದು ವರ್ಷ ಕಲಿಯೋಕೆ ಬಂದಿದ್ದೆ ಅಂದುಕೊಳ್ಳಿ. ನನ್ನ ಎಲ್ಲ ಶಕ್ತಿ ಮತ್ತು ದೌರ್ಬಲ್ಯ ನಿಮಗೆ ಗೊತ್ತಿರುತ್ತೆ. ಹೀಗಾಗಿ ಆನ್‌ಲೈನ್‌ ಶಿಕ್ಷಣದಲ್ಲಿ ಅಂಥ ಲೋಪಗಳನ್ನು ತಿದ್ದಲು ಅವಕಾಶವಿರುತ್ತೆ.

ಆನ್‌ಲೈನ್‌ನಲ್ಲಿ ಸಂಗೀತ ಪಾಠಕ್ಕೆ ಇರುವ ದೊಡ್ಡ ತಡೆ ಎಂದರೆ ಕಾಲದ ಅಂತರ. ಅತ್ಯುತ್ತಮ ಇಂಟರ್ನೆಟ್ ಸಂಪರ್ಕದೊಂದಿಗೆ ಸ್ಕೈಪ್, ಜೂಮ್‌ ಸೇರಿದಂತೆ ಎಂಥದ್ದೇ ವೇದಿಕೆ ಬಳಸಿದರೂ ಹೇಳುವವರು ಮತ್ತು ಕೇಳುವವರ ನಡುವೆ ಕನಿಷ್ಠ ಅರ್ಧದಿಂದ ಒಂದು ಸೆಕೆಂಡ್‌ ಅಂತರ ಬಂದೇ ಬರುತ್ತದೆ. ಇದರ ಜೊತೆಗೆ ನಾವು ಬಳಸುವ ಹೆಡ್‌ಫೋನ್ ಸ್ಪೀಕರ್‌ಗಳ ಗುಣಮಟ್ಟವೂ ಪಾಠದ ಮೇಲೆ ಪರಿಣಾಮ ಬೀರುತ್ತದೆ. ಕೆಲ ಅತ್ಯುತ್ತಮ ಕಲಾವಿದರಿಗೆ ಹೆಡ್‌ಫೋನ್ ಹಾಕಿಕೊಂಡು ಹಾಡಲು, ಹೇಳಿಕೊಡಲು ಕಷ್ಟವಾಗುತ್ತೆ. ಆದರೆ ಈಗಿನ ಅನಿವಾರ್ಯ ಪರಿಸ್ಥಿತಿಯಲ್ಲಿ ಇಂಥದ್ದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ.

ಸಂಗೀತ ಕಲಿಯಬೇಕು ಎನ್ನುವ ಹಲವರ ಆಸೆ ಆನ್‌ಲೈನ್ ಶಿಕ್ಷಣ ಕ್ರಮದಿಂದ ಈಡೇರಿದೆ. ಎಷ್ಟೋ ಕುಟುಂಬಗಳು ಜಾಸ್ತಿ ಸಂಗೀತ ಕೇಳಲು ಶುರು ಮಾಡಿವೆ. ಈ ಮೊದಲು ಒಂದು ಮನೆಯ ವಿದ್ಯಾರ್ಥಿ ಸಂಗೀತ ಪಾಠಕ್ಕೆ ಬರುವಾಗ ತಾಯಿ ಅಥವಾ ತಂದೆಯನ್ನು ಕರೆದುಕೊಂಡು ಬರ್ತಿದ್ದ. ಅಜ್ಜಿ-ತಾತ ಬರ್ತಾ ಇರ್ಲಿಲ್ಲ. ಈಗ ಮನೆಯಲ್ಲಿ ಕೂತು ಪಾಠ ಕಲಿಯುವುದರಿಂದ ಇಡೀ ಕುಟುಂಬ ಪಾಠದ ವೇಳೆ ಕುಳಿತಿರುತ್ತೆ. ಮನೆಗಳಲ್ಲಿ ಹೆಚ್ಚು ಜನರು ಸಂಗೀತ ಆಸ್ವಾದಿಸ್ತಾ ಇದ್ದಾರೆ. ಮೇಷ್ಟ್ರು ಹೇಗೆ ಕಲಿಸ್ತಾರೆ, ಮಕ್ಕಳು ಹೇಗೆ ಕಲೀತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಾಗ್ತಿದೆ.

ಸಂಗೀತ ಕಲಿಕೆಯ ಆಸಕ್ತಿಗೆ ಸಂಬಂಧಿಸಿದಂತೆ ಕೋವಿಡ್‌ಗೆ ಮೊದಲು-ನಂತರ ಎಂದೆಲ್ಲಾ ವಿಂಗಡಿಸಲು ಆಗುವುದಿಲ್ಲ. ಕೋವಿಡ್ ನಂತರವೂ ಹೊಸಬರು ಸಂಗೀತ ಕಲಿಕೆಗೆ ಮೊದಲಿನಂತೆಯೇ ಆಸಕ್ತಿ ತೋರಿಸುತ್ತಿದ್ದಾರೆ. ನನಗೆ ಇಂದಿಗೂ ಆನ್‌ಲೈನ್ ಪಾಠಕ್ಕಾಗಿ ಪ್ರತಿದಿನ ಎರಡುಮೂರು ಕರೆಗಳು ಬರ್ತಿವೆ. ನನ್ನದೇ ಬದುಕಿನ ಬಗ್ಗೆ ಮಾತನಾಡುವುದಾದರೆ, ನನ್ನ ಶೆಡ್ಯೂಲ್ ಜಾಸ್ತಿಯಾಗಿದೆ. ಆನ್‌ಲೈನ್‌ ಪಾಠ ಮಾಡುವ ಹಲವರಿಗೆ ಅವಕಾಶಗಳು ಹೆಚ್ಚಾಗಿವೆ.

ಕೋವಿಡ್ ಅಥವಾ ಯಾವುದೇ ಕಾರಣದಿಂದ ಸಮಾಜದಲ್ಲಿ ಸಂಗೀತದ ಆಸಕ್ತಿ ಕಡಿಮೆಯಾಗುತ್ತೆ ಅಂತ ನಾನು ನಂಬಲ್ಲ. ಕಲಿಕೆಯ ಆಸಕ್ತಿಯಿರುವವರು ಎಂಥದ್ದೇ ಕಾಲ ಮತ್ತು ಪರಿಸ್ಥಿತಿಯಲ್ಲಿಯೂ ಪರಿಶ್ರಮ ಹಾಕ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಗುರುಗಳನ್ನು ಪ್ರತ್ಯಕ್ಷವಾಗಿ ನೋಡಿ ಕಲಿಯಲು ಆಗಲ್ಲ ಅನ್ನೋದು ಬಿಟ್ರೆ, ತಂತ್ರಜ್ಞಾನವು ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ. ಅದನ್ನು ಬಳಸಿಕೊಳ್ಳಲು ನಾವು ಮನಸ್ಸು ಮಾಡಬೇಕಷ್ಟೇ.

ಭಾವನೆ ಮತ್ತು ಸಂಭಾವನೆ

ಕೊರೊನಾ ಕಾಣಿಸಿಕೊಳ್ಳುವ ಮೊದಲೇ ಆನ್‌ಲೈನ್ ಗಾಳಿ ಸಂಗೀತ ಕ್ಷೇತ್ರದಲ್ಲಿ ಬೀಸಿತ್ತು. ಕಲಾವಿದರ ಗಳಿಕೆ ಮೇಲೆ ಕೆಟ್ಟ ಪರಿಣಾಮಗಳನ್ನೂ ಬೀರಿತ್ತು. ಕಛೇರಿಯಲ್ಲಿ ಹಾಡಿದಾಗ ಸಂಭಾವನೆ ಸಹಜ ಎನ್ನುವಂತೆ ಸಿಗ್ತಿತ್ತು. ಆದರೆ, ಮನೆಯಲ್ಲಿ ಹಾಡಿದಾಗ ಸಂಭಾವನೆ ಸಿಗುವ ಸಾಧ್ಯತೆಗಳು ಅತ್ಯಂತ ಕಡಿಮೆಯಾಗಿದ್ದವು. ಕೊರೊನಾ ನಂತರ ಕಛೇರಿಗಳು ಇಲ್ಲವೇ ಇಲ್ಲ ಎನ್ನುವ ಸನ್ನಿವೇಶ ಸೃಷ್ಟಿಯಾಗಿದೆ. ‘ನಾವು ಮನೆಯಲ್ಲೇ ಹಾಡಿ, ರೆಕಾರ್ಡ್ ಮಾಡಿ, ಅಪ್‌ಲೋಡ್‌ ಮಾಡ್ತೀವಿ.ಆಸ್ವಾದಿಸಿದವರುಹಣ ಕೊಟ್ಟು ಸಪೋರ್ಟ್ ಮಾಡಿ’ ಅಂತ ಕೆಲ ಕಲಾವಿದರು ಕೇಳ್ತಿದ್ದಾರೆ. ಇದಕ್ಕೂ ಪಾಸಿಟಿವ್ ರೆಸ್ಪಾನ್ಸ್ ಬರ್ತಿದೆ. ಆದರೆ, ಅದು ಒಂದು ಪರಿಪಾಟವಾಗಿ ಬೆಳೆಯಲು ಸಮಯ ಬೇಕು.

ಕಳೆದ ಮೂರ್ನಾಲ್ಕು ತಿಂಗಳುಗಳಿಂದಭಾರತದ ಎಲ್ಲೆಡೆಯೂ ಸಂಗೀತ ಕಲಾವಿದರ ಪರಿಸ್ಥಿತಿ ಹೆಚ್ಚುಕಡಿಮೆ ಒಂದೇ ಥರ ಇದೆ. ಮನೆ ಬಾಡಿಗೆ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಎಷ್ಟೋ ಕಲಾವಿದರಿದ್ದಾರೆ. ಫೇಸ್‌ಬುಕ್, ಯುಟ್ಯೂಬ್‌ನಲ್ಲಿ ಕೋವಿಡ್‌ಗೆ ಮುಂಚೆ ಲೈವ್ ಕಛೇರಿಗಳ ರೆಕಾರ್ಡಿಂಗ್ ಹೆಚ್ಚಾಗಿ ಸಿಗ್ತಿತ್ತು. ಆದರೆ, ಈಗ ಮನೆಯಲ್ಲಿಯೇ ರೆಕಾರ್ಡ್‌ ಮಾಡಿ, ಆನ್‌ಲೈನ್ ವೇದಿಕೆಗಳಿಗೆ ಅಪ್‌ಲೋಡ್ ಮಾಡುವ ಪರಿಪಾಟ ಹೆಚ್ಚಾಗಿದೆ. ಸೆಲ್‌ಫೋನ್ ಕ್ಯಾಮೆರಾಗಳೇ ವೇದಿಕೆಯಾಗುತ್ತಿವೆ.

ನಾನು ಮುಂಚೆ ಕಛೇರಿಯ ವಿಡಿಯೊ ಯುಟ್ಯೂಬ್‌ಗೆ ಅಪ್‌ಲೋಡ್ ಮಾಡ್ತಿದ್ದೆ. ಈಗ ಪ್ರತ್ಯೇಕವಾಗಿ ಮನೆಯಲ್ಲಿ ರೆಕಾರ್ಡ್ ಮಾಡಿ ಅಪ್‌ಲೋಡ್ ಮಾಡ್ತೀನಿ. ನಾನೊಬ್ಬನೇ ಅಲ್ಲ, ನನ್ನಂಥ ಎಷ್ಟೋ ಕಲಾವಿದರು ಹೀಗೆಯೇ ಮಾಡ್ತಿದ್ದಾರೆ. ಸ್ಟೇಡಿಯಂಗೆ ಹೋಗಲು ಆಗದಿದ್ದಾಗ ಮನೆಯಲ್ಲಿಯೇ ಕ್ರಿಕೆಟ್ ಮ್ಯಾಚ್ ಆಸ್ವಾದಿಸುವಂತೆ ಶ್ರೋತೃಗಳೂ ಇದನ್ನು ಮೆಚ್ಚುತ್ತಿದ್ದಾರೆ. ಫೇಸ್‌ಬುಕ್, ಯುಟ್ಯೂಬ್‌ಗಳಲ್ಲಿರುವ ಲೈವ್ ಆಯ್ಕೆಗಳು ಶ್ರೋತೃಗಳ ಜೊತೆಗೆ ನೇರವಾಗಿ ಸಂಪರ್ಕದಲ್ಲಿರುವ ಭಾವನೆ ತರಿಸುತ್ತವೆ.

ಆನ್‌ಲೈನ್ ಮಾಧ್ಯಮ ಇಂದು ಸ್ವತಂತ್ರವಾಗಿ ಬೆಳೆಯುತ್ತಿದೆ. ಅದೇ ರೀತಿ ಕಲಾವಿದರಿಗೂ ಒಂದು ಸಪೋರ್ಟ್‌ ಸಿಸ್ಟಂ ನಿಧಾನವಾಗಿ ವಿಕಾಸವಾಗ್ತಿದೆ. ‘ಮುಂಚೆ ಸಿ.ಡಿ, ಕ್ಯಾಸೆಟ್‌ಗಾಗಿ ಹಣ ವ್ಯಯಿಸುತ್ತಿದ್ದಿರಿ. ಈಗ ಕಲಾವಿದರಿಗೆ ನೇರವಾಗಿ ಹಣ ಕೊಟ್ಟು ಆರ್ಥಿಕವಾಗಿ ಸಹಕರಿಸಿ’ ಎಂಬ ವಿನಂತಿಗಳು ಕೇಳಿಬರುತ್ತಿವೆ. ಕೆಲ ಕಲಾವಿದರಿಗೆ ಅಭಿಮಾನಿಗಳ ಸಮೂಹವೂ ದೊಡ್ಡದಿದೆ. ನಿಮ್ಮ ಮೊಬೈಲ್ ಸಂಖ್ಯೆ ಸಹಜವಾಗಿಯೇ ಯುಪಿಐಗೆ (ಪೇಮೆಂಟ್ ಗೇಟ್‌ವೇ) ಲಿಂಕ್ ಆಗಿರುತ್ತೆ. ಇಂಥವರು ಹಾಡ್ತಾರೆ ಅಥವಾ ಅವರಿಗೆ ಹಣದ ಅಗತ್ಯವಿದೆ ಅಂತ ಗೊತ್ತಾದ್ರೆ ಸಾಕು, ಅವರ ಅಕೌಂಟ್‌ಗೆ ಸುಲಭವಾಗಿ ಹಣ ಕಳಿಸಬಹುದು. ಇದನ್ನು ಸಾಕಷ್ಟು ಕಲಾವಿದರು ಬಳಸಿಕೊಂಡಿದ್ದಾರೆ.

ಸಹೃದಯ ಸಹಸ್ಪಂದನ

ಕಛೇರಿಗಳಲ್ಲಿ ಹಾಡುವಾಗ ಶ್ರೋತೃಗಳ ಕಣ್ಣುಗಳನ್ನು ಗಮನಿಸಿಯೇ ಸಹಸ್ಪಂದನೆಯನ್ನು ಕಲಾವಿದರು ಆಸ್ವಾದಿಸುತ್ತಿದ್ದರು. ಶ್ರೋತೃಗಳು ಎದುರಿಗೆ ಇಲ್ಲದಿದ್ದರೆ ಹಾಡುವುದು ಕಷ್ಟ. ಆನ್‌ಲೈನ್ ಕಛೇರಿಗಳಲ್ಲಿ ಸಹೃದಯರ ಸಹಸ್ಪಂದನದ (ಆಡಿಯನ್ಸ್ ಇಂಟರ‍್ಯಾಕ್ಷನ್) ತಂತು ಹಿಡಿಯುವುದೂ ಕಷ್ಟ. ಈಚೆಗೆ ಎರಡು-ಮೂರು ಆನ್‌ಲೈನ್ ವೇದಿಕೆಗಳನ್ನು ಒಟ್ಟೊಟ್ಟಿಗೆ ಬಳಸುವ ಸಾಧ್ಯತೆಗಳೂ ಮುಕ್ತವಾಗಿವೆ. ಫೇಸ್‌ಬುಕ್ ಅಥವಾ ಯುಟ್ಯೂಬ್‌ ಲೈವ್‌ಗಳಲ್ಲಿ ಕ್ಯಾಮೆರಾ ಒಂದೇ ನಮ್ಮ ಸಹಸ್ಪಂದಿಯಾಗಿರುತ್ತದೆ. ಆದರೆ, ಇದನ್ನು ಜೂಮ್‌ನಂಥ ವೇದಿಕೆಗಳಿಗೆ ವಿಸ್ತರಿಸಿಕೊಂಡಾಗ ಹಾಡುವ ಕಲಾವಿದರ ಕಣ್ಣಿಗೂ ಶ್ರೋತೃಗಳು ಕಾಣಿಸುತ್ತಾರೆ. ನಮ್ಮ ಉತ್ಸಾಹ ಹೆಚ್ಚುತ್ತದೆ. ನನಗೆ ಈ ಪ್ರಯೋಗ ಒಂದುಮಟ್ಟಕ್ಕೆ ಮುದ ನೀಡುತ್ತೆ. ಆನ್‌ಲೈನ್ ವೇದಿಕೆಗಳಲ್ಲಿ ನಾವು ಇರುವ ಸ್ಥಳ ಮತ್ತು ನಮ್ಮ ಶ್ರೋತೃಗಳು ಇರುವ ಸ್ಥಳಗಳ ಇಂಟರ್ನೆಟ್ ವೇಗವು ಕಛೇರಿಯ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಇದೇ ಕಾರಣಕ್ಕೆ ಶ್ರೋತೃಗಳ ಪ್ರತಿಕ್ರಿಯೆ ಸುಮಾರು 30 ಸೆಕೆಂಡ್‌ಗಳಷ್ಟು ತಡವಾಗುತ್ತೆ. ಹೊಂದಿಕೊಳ್ಳುವುದು ಬಿಟ್ಟರೆ ನಾವು ಇನ್ನೇನು ತಾನೆ ಮಾಡಲು ಸಾಧ್ಯ?

ಸಂಕಷ್ಟದಲ್ಲಿ ಅವಕಾಶ

ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವುದನ್ನೇ ಆದಾಯ ಗಳಿಕೆಯ ಮುಖ್ಯ ಮಾರ್ಗವಾಗಿ ಸ್ವೀಕರಿಸಿದ್ದ ಕಲಾವಿದರು ತೊಂದರೆಯಲ್ಲಿದ್ದಾರೆ. ರಿಯಾಲಿಟಿ ಷೋ, ರೆಕಾರ್ಡಿಂಗ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಸೇರಿದಂತೆ ಸಂಗೀತ ಲೋಕದ ವಿಭಿನ್ನ ಕಾರ್ಯಕ್ರಮಗಳ ಮೂಲಧಾತು ಒಂದೇ ಆದರೂ ನಿರ್ವಹಿಸಲು ಬೇಕಾದ ಕೌಶಲಗಳು ಭಿನ್ನ. ಈ ಅಂಶವನ್ನು ಆಧರಿಸಿಯೇ ನಾನು ರಿಯಾಲಿಟಿ ಷೋ ಕಲಾವಿದರಿಗೆ ತೊಂದರೆಯಾಗಿದೆ ಎಂದು ಹೇಳಿದ್ದು. ಈ ಬೆಳವಣಿಗೆಯಲ್ಲಿ ಒಂದು ಪಾಸಿಟಿವ್ ಅಂಶವೂ ಇದೆ. ಕಲಾವಿದರು ಧೃತಿಗೆಡಬೇಕಿಲ್ಲ. ಲಭ್ಯ ಸಮಯಾವಕಾಶವನ್ನು ತಮ್ಮ ಸಾಮರ್ಥ್ಯವೃದ್ಧಿಗೆ ಬಳಸಿಕೊಳ್ಳಬೇಕು. ಇಂದಲ್ಲ ನಾಳೆ ಎಲ್ಲವೂ ಸರಿಯಾಗುತ್ತೆ. ಶುರುವಾದ ಯಾವುದೇ ಸಮಸ್ಯೆ ಮುಕ್ತಾಯ ಕಾಣಲೇಬೇಕು. ಇಂದಿನ ಪರಿಶ್ರಮಕ್ಕೆ ಅಂದು ಖಂಡಿತ ಪ್ರತಿಫಲ ಸಿಗಲಿದೆ.

ನಿರೂಪಣೆ: ಡಿ.ಎಂ.ಘನಶ್ಯಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT