ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರಾರು ಗಿಡಗಳ ಎದುರು ಸಂಗೀತ ಕಾರ್ಯಕ್ರಮ!

ಅಕ್ಷರ ಗಾತ್ರ

ಸ್ಪೇನ್‌ನ ಬಾರ್ಸಿಲೋನಾದ ಲೈಸ್ಯೂ ಒಪೆರಾ ಹೌಸ್ ಈ ವಾರ ತೆರೆದಿದೆ. ವಿಶ್ವವಿಖ್ಯಾತ ಸಂಗೀತ ಒಪೆರಾ ನಡೆಯುತ್ತಿದ್ದ ಈ ಸಭಾಂಗಣ ಕೊರೊನಾಲಾಕ್‌ಡೌನ್‌ನಿಂದಾಗಿ ಮೂರು ತಿಂಗಳಿನಿಂದ ಮುಚ್ಚಿತ್ತು.ನಿಯಾನ್ ಕ್ಲಾಸಿಕ್ ಒಪೆರಾಗಳ ಈ ರಸಮಂದಿರ‌ ಆರಂಭವಾದ ದಿನದಿಂದ ಇದೇ ಮೊದಲ ಬಾರಿ ಮುಚ್ಚಿದ್ದು ಇತಿಹಾಸ.

ಸುದ್ದಿ ಅದಲ್ಲ, ಲಾಕ್‌ಡೌನ್‌ ನಂತರ ಮೊದಲ ಸಂಗೀತ ಒಪೆರಾ ನಡೆದಿದ್ದು ಸಾವಿರಾರು ಸಸ್ಯಗಳ ಎದುರು!

ಕಳೆದ ವಾರ ಸ್ಪೇನ್‌ನಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಅಂತ್ಯವಾದ ಹಿನ್ನೆಲೆಯಲ್ಲಿ ’ಕಾನ್ಸರ್ಟ್‌ ಫಾರ್ ಬಯೊಸೀನ್‘ (ಸಸಿಗಳಿಗೆ ಸಂಗೀತ ಒಪೆರಾ) ಆಯೋಜಿಸಲಾಗಿತ್ತು. ಅಲ್ಲಿ ಪ್ರೇಕ್ಷಕರಿರಲಿಲ್ಲ. ಒಪೆರಾದ ಕುರ್ಚಿಗಳಲ್ಲಿ ಆಸೀನರಾಗಿದ್ದು ಕುಂಡದಲ್ಲಿದ್ದ 2,300 ಸಸ್ಯಗಳು.

ಯುರೋಪ್‌ನ ಜನಪ್ರಿಯ ಒಪೆರಾ ಹೌಸ್‌ಗಳಲ್ಲಿ ಒಂದಾದ 19ನೇ ಶತಮಾನದ‌ ಲೈಸ್ಯೂದಲ್ಲಿ ಲಾಕ್‌ಡೌನ್‌ ನಂತರ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಬೇಕು ಎಂದು ಆಲೋಚಿಸುತ್ತಿದ್ದ ಸಂಘಟಕರಿಗೆ ತಲೆಗೆ ಹೊಳೆದದ್ದೇ ಈ ವಿಭಿನ್ನ ಐಡಿಯಾ!

ಕೋವಿಡ್‌ –19 ಹಿನ್ನೆಲೆಯಲ್ಲಿ ಪ್ರೇಕ್ಷಕರ ಬದಲು ಅವರ ಸ್ಥಾನದಲ್ಲಿ 2,300 ಸಸಿಗಳನ್ನು ಇಟ್ಟು ಸಂಗೀತ ಒಪೆರಾ ಆರಂಭಿಸಿದರು.’ನಮ್ಮ ಕಾರ್ಯಕ್ರಮದಲ್ಲಿ ಪ್ರಕೃತಿಗೆ ಮೊದಲ ಆಹ್ವಾನ‘ ಎಂದು ಸಂಘಟಕರು ಹೇಳಿದರು. ಕಾರ್ಯಕ್ರಮದ ನಂತರ ಸಂಗೀತದ ಮಾಧುರ್ಯ ತುಂಬಿದ ಈ ಗಿಡಗಳನ್ನು ಕೊರೊನಾ ವಾರಿಯರ್ಸ್‌ಗೆ ಉಡುಗೊರೆಯಾಗಿ ನೀಡಲಾಯಿತು.

ಇಟಲಿಯ ಸಂಗೀತ ನಿರ್ದೇಶಕ ಜಿಯಾಕೊಮೊ ಪುಸ್ಸಿನಿ ನಡೆಸಿಕೊಟ್ಟ ಸಂಗೀತ ಒಪೆರಾದಲ್ಲಿ ’ಕ್ರೈಸಾಂಥೆಮಮ್‘ ಎಂಬ ಶೋಕ ಸ್ವರವನ್ನು ಪ್ರಸ್ತುತಪಡಿಸಲಾಯಿತು. ಪ್ರೇಕ್ಷಕರ ಸಾಲಿನಲ್ಲಿದ್ದ ಗಿಡಗಳಿಗೆ ದೊಡ್ಡ ಮಟ್ಟದಲ್ಲಿ ಗೌರವ ಸೂಚಿಸಿ, ಚಪ್ಪಾಳೆ ತಟ್ಟಿ ಸ್ವಾಗತಿಸಿ ಕಾರ್ಯಕ್ರಮ ಆರಂಭಿಸಿದ್ದು ವಿಶೇಷವಾಗಿತ್ತು. ಆರು ನಿಮಿಷದ ಪ್ರದರ್ಶನದ ನಂತರ ಸಂಗೀತಕಾರರು ಸಂಪ್ರದಾಯದಂತೆ ಎದ್ದು ನಿಂತು ಪ್ರೇಕ್ಷಕರಿಗೆ ತಲೆಬಾಗಿದ್ದು ಕಾರ್ಯಕ್ರಮದ ಹೈಲೈಟ್‌!

ಸಂಗೀತಗಾರರನ್ನು ಬಿಟ್ಟರೆಇಡೀ ಸಭಾಂಗಣದಲ್ಲಿ ಇದ್ದದ್ದು ಕುಂಡದಲ್ಲಿದ್ದ ಈ ಗಿಡಗಳು. ಇದರಿಂದ ಬಾಲ್ಕನಿ ಮತ್ತು ಕೆಳಗಿನ ಕೆಂಪು ಕುರ್ಚಿಗಳಿಗೆ ಹಸಿರು ಹೊದಿಕೆ ಹೊದಿಸಿದಂತೆ ಕಾಣುತ್ತಿತ್ತು.

‘ಕೊರೊನಾ ವೈರಸ್‌ನ ಈ ಕಾಲಘಟ್ಟ ಮನುಷ್ಯನ ಅವಸಾನದ ಹಾದಿಯಂತೆ ಭಾಸವಾಗುತ್ತಿದೆ. ಈ ಕಷ್ಟದ ಪರಿಸ್ಥಿತಿಯ ಜತೆ ಜತೆಗೆ ಕಲೆಯನ್ನೂ ಕರೆದೊಯ್ಯಬೇಕಿದೆ. ಮನುಷ್ಯ ಕಿತ್ತುಕೊಂಡಿದ್ದ ಸ್ಥಳವನ್ನು ಪ್ರಕೃತಿ ಮರಳಿ ಪಡೆಯುತ್ತಿರುವ ಸಂಕೇತವಿದು‘ ಎಂದು ಕಾರ್ಯಕ್ರಮದ ಕೊನೆಗೆ ಸಂಗೀತ ಸಂಜೆಯ ನಿರ್ಮಾಪಕ ಯುಜೆನಿಯೊ ಆಂಪೂಡಿಯೊ ಅರ್ಥಪೂರ್ಣ ಷರಾ ಬರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT