6

ಅಪರೂಪದ ಜುಗಲ್‌ಬಂದಿ...

Published:
Updated:

ಎಂಟರ ಹರೆಯದಲ್ಲೇ ಮೊದಲ ಸಂಗೀತ ಕಛೇರಿಯನ್ನು ನಡೆಸಿಕೊಟ್ಟವರು ಖ್ಯಾತ ಪಿಟೀಲು ವಾದಕ ಮೈಸೂರು ಎಂ. ಮಂಜುನಾಥ್. ತಂದೆ ಪ್ರೊ.ಮಹದೇವಪ್ಪ ಅವರ ಗರಡಿಯಲ್ಲಿ ಸಂಗೀತದ ಪ್ರಾಥಮಿಕ ಶಿಕ್ಷಣ ಪಡೆದ ಮಂಜುನಾಥ್ ಅವರು ಬಾಲ್ಯದಲ್ಲೇ ತಮ್ಮ ಸುತ್ತಲಿನವರು ಕಣ್ಣರಳಿಸಿ ನೋಡುವಷ್ಟು ಸಂಗೀತದಲ್ಲಿ ಪ್ರಾವೀಣ್ಯ ಗಳಿಸಿದವರು.

ಸಂಗೀತದಲ್ಲೇ ಸ್ನಾತಕೋತ್ತರ ಪದವಿ ಗಳಿಸಿದ ಮಂಜುನಾಥ್ ಅವರು ಪದವಿಯೊಂದಿಗೆ ನಾಲ್ಕು ಚಿನ್ನದ ಪದಕಗಳನ್ನೂ ಮುಡಿಗೇರಿಸಿಕೊಂಡವರು. ಚಿಕ್ಕ ವಯಸ್ಸಿನಲ್ಲೇ ವಿದೇಶಿಯರಿಗೆ ಕರ್ನಾಟಕ ಸಂಗೀತವನ್ನು ಪರಿಚಯಿಸಿದ ಕೀರ್ತಿ ಅವರದ್ದು. ಅವರ ಪಿಟೀಲು ವಾದನಕ್ಕೆ ಮನಸೋತ ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರು ‘ಮೈಸೂರಿನ ಸಂಗೀತ ರಾಜಕುಮಾರ’ ಎನ್ನುವ ವಿಶೇಷಣವನ್ನು ನೀಡಿದ್ದು ಮಂಜುನಾಥ್ ಅವರ ಸಂಗೀತಕ್ಕೆ ದಕ್ಕಿದ ಹಿರಿಮೆ.

‘ಶಾಸ್ತ್ರೀಯ ಸಂಗೀತದಲ್ಲಿ ಪಿಟೀಲಿನ ಪಾತ್ರ’ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿ ಪಡೆದಿರುವ ಮಂಜುನಾಥ್, ಅಣ್ಣ ಮೈಸೂರು ನಾಗರಾಜ್ ಅವರೊಂದಿಗೆ ನಡೆಸಿಕೊಡುವ ದ್ವಂದ್ವ ಪಿಟೀಲು ವಾದನಕ್ಕೂ ಹೆಸರುವಾಸಿ. ‘ಮೈಸೂರು ಸಹೋದರರು’ ಎಂದೇ ಪ್ರಸಿದ್ಧಿಯಾಗಿರುವ ಈ ಜೋಡಿಯ ಸಂಗೀತದ ಮೋಡಿಗೆ ಮರುಳಾಗದವರಿಲ್ಲ.

ರಾಷ್ಟ್ರಮಟ್ಟದ ಖ್ಯಾತಿಯ ಸಂಗೀತಗಾರರಾದ ವಿ.ಜಿ.ಜೋಗ್‌, ಪಂ.ವಿಶ್ವಮೋಹನ ಭಟ್‌, ಡಾ.ಎಂ.ಬಾಲಮುರಳಿ ಕೃಷ್ಣ, ತೇಜೇಂದ್ರ ನಾರಾಯಣ ಮಜುಂದಾರ್‌, ಕೋನು ಮಜುಂದಾರ್‌ ಮುಂತಾದವರಿಗೆ ನೀಡಿದ ಪಿಟೀಲು ವಾದನದ ಸಹಕಾರ ನೀಡಿದ ಖ್ಯಾತಿ ಈ ಸಹೋದರರದ್ದು.

ಅಮೆರಿಕದ ಒರೆಗಾನ್‌, ಇಂಗ್ಲೆಂಡಿನ ಸಾಂಸ್ಕೃತಿಕ ಉತ್ಸವ, ಸಿಡ್ನಿಯ ಒಪೇರಾ ಹೌಸ್‌, ಆಸ್ಟ್ರೇಲಿಯಾ, ಅಮೆರಿಕದ ಅಂತರರಾಷ್ಟ್ರೀಯ ಪಿಟೀಲು ವಾದಕರ ಸಮ್ಮೇಳನ, ಕೌಲಾಲಂಪುರ್‌, ಮಲೇಷ್ಯಾ, ಮೆಲ್ಬರ್ನ್, ನಮಿಬಿಯಾ ಅಧ್ಯಕ್ಷರ ಮುಂದೆ ವಿಶೇಷ ಕಾರ್ಯಕ್ರಮ. ಪ್ಯಾರಿಸ್‌, ಅಮೆರಿಕದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಪ್ರಾತ್ಯಕ್ಷಿಕೆ, ಕಛೇರಿ, ಕಾರ್ಯಕ್ರಮಗಳು. ಮ್ಯೂಸಿಕ್‌ ಅಕಾಡೆಮಿಯಿಂದ ಅತ್ಯುತ್ತಮ ಪಿಟೀಲು ವಾದಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅಮೆರಿಕದ ಅಂತರರಾಷ್ಟ್ರೀಯ ಸಾಂಸ್ಕೃತಿಕ ಸಂಸ್ಥೆಯಿಂದ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳಿಗೆ ಮೈಸೂರು ಮಂಜುನಾಥ್ ಅವರು ಭಾಜನರಾಗಿದ್ದಾರೆ.

ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ 

ಮೂರು ವರ್ಷದವರಿದ್ದಾಗಲೇ ಕೊಳಲಿನ ಕರೆಗೆ ಓಗೊಟ್ಟವರು ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ. ಆರು ವರ್ಷವಿದ್ದಾಗಲೇ ಮೊದಲ ಸಂಗೀತ ಕಛೇರಿ ನಡೆಸಿಕೊಟ್ಟು ಸಂಗೀತಪ್ರಿಯರ ಮನ ಗೆದ್ದವರು.

ಪಂಡಿತ್ ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ ಅವರಂಥ ಸಂಗೀತ ಮೇರುಪರ್ವತಗಳನ್ನು ನೀಡಿದ ಧಾರವಾಡದಲ್ಲಿ ಜನಿಸಿದ ಪ್ರವೀಣ್ ಬೆಳೆದದ್ದು ಅಪ್ಪಟ ಸಂಗೀತಮಯ ಪರಿಸರದಲ್ಲೇ. ತಂದೆ ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಮತ್ತು ವಿದ್ವಾನ್ ಅನೂರು ಅನಂತ ಶರ್ಮ ಅವರ ಗರಡಿಯಲ್ಲಿ ಪಳಗಿದ ಪ್ರವೀಣ್ ಆಕಾಶವಾಣಿಯಲ್ಲಿ ಅಗ್ರ ಶ್ರೇಣಿಯ ಕೊಳಲು ವಾದಕರಾಗಿ ಗುರುತಿಸಿಕೊಂಡವರು. ಓದಿದ್ದು ಎಂಜಿನಿಯರಿಂಗ್ ಆದರೆ, ಅವರನ್ನು ವೃತ್ತಿಗಿಂತ ಹೆಚ್ಚಾಗಿ ಸೆಳೆದಿದ್ದು ಪ್ರವೃತ್ತಿ ಸಂಗೀತವೇ.

ತಂದೆಯಿಂದ ಕಿರಾಣಾ ಘರಾನಾ ಗಾಯಕಿ ಶೈಲಿಯನ್ನು ಕಲಿತ ಪ್ರವೀಣ್, ನಂತರ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡವರು.  ಅರ್ಜೆಂಟೀನಾದಲ್ಲಿ ನಡೆದ ಕೊಳಲುವಾದಕರ ಪ್ರಥಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಕೊಳಲುವಾದಕ ಎನ್ನುವ ಕೀರ್ತಿಗೆ ಭಾಜನರಾಗಿರುವ ಪ್ರವೀಣ್ ಅವರ ನಾದಸುಧೆಗೆ ಮನಸೋಲದವರಿಲ್ಲ. ಸದಾ ಹೊಸತನಕ್ಕೆ ತುಡಿಯುವ ಅವರು ಕೊಳಲು ವಾದನದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಸಂಗೀತಪ್ರಿಯರನ್ನು ರಂಜಿಸುತ್ತಿದ್ದಾರೆ.

ವೆಂಕಟೇಶ್ ಗೋಡ್ಖಿಂಡಿ, ಪ್ರವೀಣ್ ಗೋಡ್ಖಿಂಡಿ ಹಾಗೂ ಷಡ್ಜ ಗೋಡ್ಖಿಂಡಿ ಹೀಗೆ ಅವರ ಕುಟುಂಬದಲ್ಲಿ ಮೂರು ತಲೆಮಾರುಗಳಿಗೆ ಈ ಸಂಗೀತ ಬಳುವಳಿಯಾಗಿ ಹರಿದು ಬಂದಿದೆ.


ಪ್ರವೀಣ್ ಗೋಡ್ಖಿಂಡಿ 

**

‘ಸ್ವರ ಸುರಚಾಪ’ ಜುಗಲ್‌ಬಂದಿ ಕಾರ್ಯಕ್ರಮ

ನಡೆಸಿಕೊಡುವವರು: ಮೈಸೂರು ಮಂಜುನಾಥ್ ಮತ್ತು ಪ್ರವೀಣ್ ಗೋಡ್ಖಿಂಡಿ.

ಆಯೋಜನೆ: ಶ್ರೀರಂಗರಾಮ ಸೇವಾ ಸಮಿತಿ,

ಸ್ಥಳ: ಚೌಡಯ್ಯ ಭವನ, ವಯಾಲಿಕಾವಲ್, ಶನಿವಾರ (ಜೂನ್ 23) ಸಮಯ ಸಂಜೆ 6.30

‘ಕೃಷ್ಣಾ’ ಎನ್ನುವ ಫ್ಯೂಷನ್ ಬ್ಯಾಂಡ್ ಅನ್ನೂ ಸ್ಥಾಪಿಸಿರುವ ಪ್ರವೀಣ್, ಇಲ್ಲಿ ಕರ್ನಾಟಕ ಶಾಸ್ತ್ರೀಯ, ಹಿಂದೂಸ್ತಾನಿ ಹಾಗೂ ಪಾಶ್ಚಾತ್ಯ ಸಂಗೀತದ ಮೂಲಕ ಹೊಸ 
ಪ್ರಯೋಗಗಳನ್ನು ಮಾಡಿದ್ದಾರೆ. ಉಸ್ತಾದ್ ಝಾಕೀರ್ ಹುಸೇನ್, ಡಾ.ಬಾಲಮುರಳಿ ಕೃಷ್ಣ, ಪಂ. ವಿಶ್ವಮೋಹನ್ ಭಟ್, ಡಾ.ಕದ್ರಿ ಗೋಪಾಲನ್, ಶಿವಮಣಿ ಹೀಗೆ ಅನೇಕ ಸಂಗೀತ ದಿಗ್ಗಜರ ಜತೆ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

‘ಬೇರು ಮತ್ತು ವಿಮುಕ್ತ’ ಸಿನಿಮಾಕ್ಕಾಗಿ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಚಲನಚಿತ್ರ ರಸಿಕರ ಸಂಘದಿಂದ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೂ ಪ್ರವೀಣ್ ಭಾಜನರಾಗಿದ್ದಾರೆ. ಸುರಮಣಿ, ನಾದನಿಧಿ, ಸುರ್ ಸಾಮ್ರಾಟ್, ಕಲಾಪ್ರವೀಣ ಮೊದಲಾದ ಬಿರುದುಗಳಿಗೆ ಭಾಜನರಾಗಿರುವ ಪ್ರವೀಣ್ ಅವರಿಗೆ ಪ್ರತಿಷ್ಠಿತ ಚೌಡಯ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ವೇಣುಗಾನ ಮಹಾರಾಜ, ಆರ್ಯಭಟ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !