ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನಕಲಾ ಸಮ್ಮೇಳನ: ಬಿರುದು ಸಮ್ಮಾನ!

Last Updated 27 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ನಮ್ಮಲ್ಲಿ ಕೆಲವು ಕಲಾವಿದರಿದ್ದಾರೆ. ಸದಾ ಪ್ರಶಸ್ತಿ, ಪ್ರಸಿದ್ಧಿಗಾಗಿ ಹಾತೊರೆಯುತ್ತಲೇ, ಶಿಫಾರಸು ಮಾಡಿಸುತ್ತಾ ಅದೇ ಗುಂಗಿನಲ್ಲಿರುತ್ತಾರೆ. ಇನ್ನೂ ಕೆಲವು ಕಲಾವಿದರು ಸಂಗೀತದೊಂದಿಗೇ ದಶಕಗಳಿಂದ ಆತುಕೊಂಡು ಬಂದರೂ ಪ್ರಶಸ್ತಿ, ಪುರಸ್ಕಾರಗಳತ್ತ ಮುಖ ಮಾಡದೆ ನಿರ್ಲಿಪ್ತರಾಗಿ ಸಂಗೀತ, ಕಛೇರಿ, ಶಿಷ್ಯಂದಿರು.. ಇದೇ ಲೋಕದಲ್ಲಿದ್ದು ಸದಾ ನಿರ್ಲಿಪ್ತರಾಗಿಯೇ ಇರುತ್ತಾರೆ. ಈ ಇಬ್ಬಗೆಯ ಮನಸ್ಸಿನವರಲ್ಲಿ ಎರಡನೆಯ ಸಾಲಿಗೆ ಸೇರುವವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಹಿರಿಯ ಕಲಾವಿದ ವಿದ್ವಾನ್‌ ಎಂ.ಟಿ. ಸೆಲ್ವನಾರಾಯಣ.

60ರ ದಶಕದಿಂದಲೂ ಆಕಾಶವಾಣಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುತ್ತಿದ್ದವರಿಗೆ ಹಿರಿಯ ಗಾಯಕ ಎಂ.ಟಿ. ಸೆಲ್ವನಾರಾಯಣ ಅವರ ಗಾನಮಾಧುರ್ಯ ಚಿರಪರಿಚಿತ. ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಅತ್ಯಂತ ಪರಿಪಕ್ವವಾಗಿರುವ ಈ ಹಾಡುಗಾರ 65 ವರ್ಷಗಳ ಕಾಲ ಗಾಯನದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು. ಒಬ್ಬ ಸಂಗೀತಗಾರನ ಜೀವನ ಪಯಣದಲ್ಲಿ ಸದಾ ನಿರಂತರತೆ ಇರುತ್ತದೆ ಎಂದರೆ ಅದಕ್ಕೆ ತಾಜಾ ಉದಾಹರಣೆ ಸೆಲ್ವನಾರಾಯಣ. ತಮ್ಮ ಹನ್ನೊಂದನೇ ವಯಸ್ಸಿನಿಂದ ಹಾಡುತ್ತಲೇ ಬಂದ ಈ ಹಿರಿಯ ಕಲಾವಿದರಿಗೆ ಈಗ 74ರ ಹರೆಯ.

‘ತಮಿಳುನಾಡಿನ ತಿರುವೈಯ್ಯಾರ್‌ನಲ್ಲಿ ನಡೆಯುವ ತ್ಯಾಗರಾಜರ ಆರಾಧನೆಯಲ್ಲಿ ಸತತ 50 ವರ್ಷ ಕಾಲ ಹಾಡಿದ್ದೇನೆ. ಬೆಂಗಳೂರಿನ ಗಾಯನ ಸಮಾಜದಲ್ಲಿ ಸತತವಾಗಿ ಕಛೇರಿ ಕೊಟ್ಟಿದ್ದೇನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೋಟೆ ಹೈಸ್ಕೂಲ್‌ ಮೈದಾನದ ವಿಶೇಷ ಚಪ್ಪರದಲ್ಲಿ ಪ್ರತಿವರ್ಷ ನಡೆಯುವ ರಾಮನವಮಿ ಸಂಗೀತೋತ್ಸವದಲ್ಲಿ ಸತತ 25 ವರ್ಷ (1976–2001ರವರೆಗೆ) ಕಛೇರಿ ನೀಡಿದ್ದೇನೆ. ಶೇಷಾದ್ರಿಪುರಂ ಸಂಗೀತೋತ್ಸವದಲ್ಲಿ ಹಾಡಿದ್ದೇನೆ. ಆಕಾಶವಾಣಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಪ್ರತಿವರ್ಷವೂ ತಪ್ಪದೇ ಹಾಡಿದ್ದೇನೆ..’– ಇದು ಸೆಲ್ವನಾರಾಯಣ ಅವರೇ ಹೇಳುವ ‘ನಿರಂತರ ಸಂಗೀತ ಕಛೇರಿ’ಗಳ ವಿವರಣೆ.

ಸಂಗೀತದಲ್ಲಿ ಇಷ್ಟೊಂದು ಸುದೀರ್ಘವಾಗಿ ತೊಡಗಿಸಿಕೊಂಡ ವಿರಳಾತಿ ವಿರಳ ಕಲಾವಿದ ಸೆಲ್ವನಾರಾಯಣ ಆಕಾಶವಾಣಿಯಲ್ಲಿ ‘ನಿಲಯ ಕಲಾವಿದ’ರಾಗಿ 25 ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯ ಟಾಪ್‌ ಗ್ರೇಡ್‌ ಕಲಾವಿದರು ಅಲ್ಲದೆ ಆಕಾಶವಾಣಿ ಸಂಗೀತ ಆಡಿಷನ್‌ ಸಮಿತಿಯಲ್ಲಿ ಸಕ್ರಿಯ ಸದಸ್ಯರೂ ಹೌದು.

‘ಗಾನಕಲಾಭೂಷಣ ಬಿರುದು’ ಈ ಬಾರಿ ನಿಮಗೆ ಸಂದಿದೆ ಎಂದು ಕರ್ನಾಟಕ ಗಾನಕಲಾ ಪರಿಷತ್ತಿನ ಅಧ್ಯಕ್ಷ ವಿದ್ವಾನ್‌ ಆರ್‌.ಕೆ. ಪದ್ಮನಾಭ ಅವರು ಸುಮಾರು ಮೂರು ತಿಂಗಳ ಹಿಂದೆ ಫೋನ್‌ ಮಾಡಿ ತಿಳಿಸಿದಾಗ ನನಗೆ ನಿಜಕ್ಕೂ ನಂಬಲಾಗಲಿಲ್ಲ. ಕನಸು ಮನಸ್ಸಿನಲ್ಲೂ ಈ ಪ್ರತಿಷ್ಠಿತ ಗೌರವದ ಬಗ್ಗೆ ಕಣ್ಣಿಟ್ಟಿರದ ನಾನು ಅವರ ಫೋನ್‌ ಇಟ್ಟ ಕೂಡಲೇ ಒಮ್ಮೆ ನನ್ನನ್ನೇ ನಾನು ಜಿಗುಟಿಕೊಂಡೆ. ಇದು ಹೌದಾ, ಯಾರಿಗೋ ಫೋನ್‌ ಮಾಡಲು ಹೋಗಿ ನನಗೆ ಮಾಡಿ ಬಿಟ್ಟಿದ್ದಾರಾ.. ಎನ್ನುವಷ್ಟು ಅಚ್ಚರಿಯಾಯಿತು’ ಎಂದು ಅದೇ ಭಾವುಕತೆಯಲ್ಲಿ ಹೇಳುತ್ತಾರೆ.

‘ಗಾನ ಕಲಾಭೂಷಣ’ ಬಿರುದು ತಮಗೆ ಅವರಿವಿಲ್ಲದೇ ಅರಸಿಕೊಂಡು ಬಂದಂತೆ 2010ರಲ್ಲಿ ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್‌ ಬಿರುದು, 1988ರಲ್ಲಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ನೀಡುವ ‘ಕರ್ನಾಟಕ ಕಲಾಶ್ರೀ’, 1994ರಲ್ಲಿ ತ್ಯಾಗರಾಜ ಗಾನಸಭಾ ನೀಡುವ ‘ಕಲಾ ಭೂಷಣ’, ಅನನ್ಯ ಪುರಸ್ಕಾರ– ಇವರನ್ನು ಅರಸಿಕೊಂಡು ಬಂದಿವೆ.

ಸೆಲ್ವನಾರಾಯಣ ಸಂಗೀತದ ಶಾಸ್ತ್ರಭಾಗ, ಗಾಯನ, ಬೋಧನೆ ಎಲ್ಲದರಲ್ಲೂ ಪರಿಣತರು. ಸಂಗೀತದ ಎಲ್ಲ ಸ್ತರಗಳಲ್ಲೂ ಪಾಂಡಿತ್ಯ ಸಾಧಿಸಿರುವ ಇವರದು ಪಾರಂಪರಿಕ ಸಂಗೀತ. ಉತ್ತಮ ಕಂಠ, ಶುದ್ಧ ಸಾಹಿತ್ಯ, ಗಮನಸೆಳೆಯುವ ಮನೋಧರ್ಮ, ರಾಗ, ಭಾವ, ತಾಳಗಳಲ್ಲಿ ಪರಿಪೂರ್ಣತೆ, ಆಲಾಪನೆ, ನೆರವಲ್‌, ಸ್ವರಪ್ರಸ್ತಾರಗಳಲ್ಲಿ ವೈವಿಧ್ಯ... ಇವರ ಗಾಯನ ವೈಶಿಷ್ಟ್ಯ.

ಮಂಡ್ಯ ಜಿಲ್ಲೆ ತೊಂದನೂರಿನವರಾದ ಸೆಲ್ವನಾರಾಯಣ ಅವರ ತಂದೆ ಸಿಂಗಳಾಚಾರ್‌ ಹಾಗೂ ತಾಯಿ ವೇದವಲ್ಲಿ ಹಾಡುತ್ತಿದ್ದರು. ಸಂಗೀತದ ಆರಂಭಿಕ ಶಿಕ್ಷಣವನ್ನು ತಮ್ಮ ತಾಯಿಯ ಸಂಬಂಧಿ ವಿದುಷಿ ತಂಗಮ್ಮ ಅವರ ಬಳಿ ಕಲಿತವರು. ಬಳಿಕ ಹೆಚ್ಚಿನ ಅಭ್ಯಾಸವನ್ನು ಮೈಸೂರಿನ ಆಸ್ಥಾನ ವಿದ್ವಾನ್‌ ಚಿಂತಲಪಲ್ಲಿ ರಾಮಚಂದ್ರರಾವ್‌ ಅವರ ಬಳಿ ಮಾಡಿದರು. ಸುಮಾರು 15 ವರ್ಷ ಸಂಗೀತ ಕಲಿತ ಬಳಿಕ ತಮ್ಮದೇ ಆದ ಗಾಯನ ಶೈಲಿಯನ್ನು ರೂಢಿಸಿಕೊಂಡರು. 1968ರಲ್ಲಿ ನಡೆದ ಸಂಗೀತ ವಿದ್ವತ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಪಡೆದರು.

‘ಆಕಾಶವಾಣಿಯಲ್ಲಿ ಹಿರಿಯ ಗಾಯಕ ಆರ್‌.ಕೆ. ಶ್ರೀಕಂಠನ್‌ ಜತೆಯಲ್ಲಿ ಅನೇಕ ವರ್ಷ ಕೆಲಸ ಮಾಡಿದೆ. ಆಗ ‘ಗಾನ ವಿಹಾರ’ ಎಂಬ ಸಂಗೀತ ಪಾಠ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀಕಂಠನ್‌ ಜತೆಗೂಡಿ 400 ಕೀರ್ತನೆಗಳನ್ನು ಕೇಳುಗರಿಗೆ ಕಲಿಸಿದ್ದೇನೆ. ಜತೆಗೆ ದಾಸರ ಪದಗಳನ್ನೂ. ಶ್ರೀಕಂಠನ್‌ ಅವರು ನಿವೃತ್ತರಾದ ಬಳಿಕ ನಾನೊಬ್ಬನೇ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದೆ. ಕರ್ನಾಟಕ ಸಂಗೀತದ ಎಲ್ಲ ರಾಗಗಳೂ ಇಷ್ಟ. ಒಂದೊಂದು ರಾಗದಲ್ಲಿ, ಒಂದೊಂದು ಕೀರ್ತನೆಯಲ್ಲಿ, ಒಂದೊಂದು ತರದ ಭಾವಗಳಿರುತ್ತವೆ. ಅದನ್ನು ಅನುಭವಿಸಿಕೊಂಡು ಹಾಡಿದಾಗ ನಿಜಕ್ಕೂ ಮನಸ್ಸಿಗಾನಂದವಾಗುತ್ತದೆ’ ಎನ್ನುತ್ತಾರೆ ಸೆಲ್ವನಾರಾಯಣ.

ಸಾಮಾನ್ಯವಾಗಿ ಗಾಯಕರಿಗೆ ಸರಿಸಮನಾದ ಪಕ್ಕವಾದ್ಯಗಾರರೇ ಇರಬೇಕು. ಸೆಲ್ವನಾರಾಯಣ ಅವರ ಗಾಯನಕ್ಕೆ ಎಂ.ಎಸ್‌. ಗೋಪಾಲಕೃಷ್ಣನ್‌, ಟಿ.ಎನ್‌. ಕೃಷ್ಣನ್‌, ದೆಹಲಿ ಸುಂದರರಾಜನ್‌, ಟಿ. ರುಕ್ಮಿಣಿ, ವಿ.ವಿ. ಸುಬ್ರಹ್ಮಣ್ಯಂ ಪಿಟೀಲು ನುಡಿಸಿದ್ದಾರೆ.

ಪಾಲ್ಘಾಟ್‌ ರಘು, ಉಮಿಯಾಳಪುರಂ ಶಿವರಾಮನ್‌, ಟಿ.ಕೆ. ಮೂರ್ತಿ, ತಂಜಾವೂರ್‌ ಉಪೇಂದ್ರಂ, ಶ್ರೀಮುಷ್ಣಂ ರಾಜಾರಾವ್‌ ಮೃದಂಗ ನುಡಿಸಿದ್ದಾರೆ. ಈಗ ಸಂಗೀತದಲ್ಲಿ ಪ್ರತಿಭಾನ್ವಿತ ಹಾಡುಗಾರರಾದ ಅಮೃತಾ ವೆಂಕಟೇಶ್‌, ಶ್ರೀನಿವಾಸ ಪ್ರಸನ್ನ, ಅಭಿಷೇಕ್‌ ಭಗವಾನ್‌, ಮೈಥಿಲಿ ಅನಂತರಾಮನ್‌ ಉತ್ತಮ ಹೆಸರು ಗಳಿಸಿ ಮುಂಚೂಣಿಯಲ್ಲಿ ಇದ್ದಾರೆ.

ಈ ಹಿರಿಯ ಸಂಗೀತ ವಿದ್ವಾಂಸರಿಗೆ ಇದೀಗ ಕರ್ನಾಟಕ ರಾಜ್ಯದ ಪ್ರತಿಷ್ಠಿತ ‘ಗಾನಕಲಾಭೂಷಣ’ ಬಿರುದು!

ಗಾನಕಲಾಶ್ರೀ ಚಂದನ್‌ಕುಮಾರ್‌

ಚಂದನ್‌ಕುಮಾರ್‌
ಚಂದನ್‌ಕುಮಾರ್‌

ಈ ಸಲದ ‘ಗಾನಕಲಾಶ್ರೀ’ ಬಿರುದು ಉದಯೋನ್ಮುಖ ಕೊಳಲು ವಾದಕ ಮೈಸೂರು ಎ. ಚಂದನ್‌ ಕುಮಾರ್‌ ಅವರಿಗೆ ಸಂದಿದೆ. ಮೈಸೂರಿನ ಸಂಗೀತ ಮನೆತನದಲ್ಲಿ ಜನಿಸಿದ ಚಂದನ್‌ಕುಮಾರ್‌, ಕೊಳಲು ವಾದನವನ್ನು ವಿದ್ವಾನ್‌ ಎಂ. ಗೋಪಾಲಕೃಷ್ಣ ಅವರ ಬಳಿ ಕಲಿತರು. ಉನ್ನತ ಅಭ್ಯಾಸವನ್ನು ಚೆನ್ನೈನ ಪಿ.ಎಸ್‌. ನಾರಾಯಣಸ್ವಾಮಿ ಅವರ ಬಳಿ ಕಲಿಯುತ್ತಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದ ಟಾಪ್‌ ಗ್ರೇಡ್‌ ಕಲಾವಿದ. ಚಂದನ್‌ ಅವರ ಕೊಳಲು ಕಛೇರಿ ಹಾಗೂ ಸಂದರ್ಶನ ಬಿಬಿಸಿ, ರೇಡಿಯೊ ಮ್ಯೂನಿಚ್‌ (ಜರ್ಮನಿ) ಏಷ್ಯಾನೆಟ್‌ ಚಾನೆಲ್‌, ಜೀ ಟಿ.ವಿ, ಈ ಟಿ.ವಿಯಲ್ಲಿ ಪ್ರಸಾರವಾಗಿವೆ. ಹೈದರಾಬಾದ್‌, ಕೋಲ್ಕತ್ತ, ಚೆನ್ನೈ, ದೆಹಲಿ, ತಿರುವೈಯಾರ್‌, ಮುಂಬೈ ಮುಂತಾದ ಕಡೆಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಕೊಳಲು ನುಡಿಸಿ ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಾಗರದಾಚೆಗೂ ಇವರ ಕೊಳಲ ನಾದ ಅನುರಣಿಸಿದೆ. ಅಮೆರಿಕ, ಇಂಗ್ಲೆಂಡ್‌, ಯೂರೋಪ್‌, ಪೋಲೆಂಡ್‌, ಕೆನಡಾ, ಜರ್ಮನಿ, ಮಲೇಷ್ಯಾದಲ್ಲಿಯೂ ಇವರ ಸುಷಿರ ವಾದ್ಯ ಮೋಡಿ ಮಾಡಿದೆ. ಅಮೆರಿಕದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕೊಳಲು ವಾದನದ ವಿಧಾನ ತಿಳಿಸಿಕೊಡುವ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದ್ದಾರೆ.

2009ರ ಉಸ್ತಾದ್‌ ಬಿಸ್ಮಿಲ್ಲಾಖಾನ್‌ ಯುವ ಪುರಸ್ಕಾರ, ಅನನ್ಯ ಯುವ ಪುರಸ್ಕಾರ, ಯುವ ಕಲಾಭಾರತಿ ಪುರಸ್ಕಾರಗಳು ಚಂದನ್‌ ಕುಮಾರ್‌ ಅವರ ಮುಡಿಗೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT