ರಾಷ್ಟ್ರಗೀತೆ ಜಾಗೃತಿ

7

ರಾಷ್ಟ್ರಗೀತೆ ಜಾಗೃತಿ

Published:
Updated:
Deccan Herald

72 ನೇ ಸ್ವಾತಂತ್ರೋತ್ಸವದ ವಿನೂತನ ಪ್ರಯತ್ನ ‘ಜನ ಗಣ ಮನ ಗಾನ: ರಾಷ್ಟ್ರಗೀತೆ ಜಾಗೃತಿ’ ಅಭಿಯಾನ ದೇಶದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಇದು ಒಂದು ವಿನೂತನ ಪ್ರಯತ್ನ. ಎಪ್ಪತ್ತೆರಡನೆಯ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿಸುವ, ಅರ್ಥಪೂರ್ಣವಾಗಿಸುವ ಪ್ರಯತ್ನ. ಈ ರೀತಿಯ ಪ್ರಯತ್ನ ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬೆಂಗಳೂರಿನ ದಾಸರಹಳ್ಳಿಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯ್ದ ಎಪ್ಪತ್ತೆರಡು ಸ್ಥಳಗಳಲ್ಲಿ ಭಾರತದ ರಾಷ್ಟ್ರಗೀತೆಯನ್ನು ಸರಿಯಾದ ಉಚ್ಚಾರದೊಂದಿಗೆ 52 ಸೆಕೆಂಡುಗಳಲ್ಲಿ ಸಾವಿರಾರು ಜನರೊಂದಿಗೆ ಸೇರಿ ಹಾಡುವ ಪ್ರಯತ್ನ.

ಈ ಪ್ರಯತ್ನ ಇಂದಿರಾ ಫೌಂಡೇಶನ್ ಅಧ್ಯಕ್ಷರಾದ ಲೋಕೇಶ್‍ಗೌಡ ಅವರ ಕನಸಿನ ಕೂಸು. ಈ ಪ್ರಯತ್ನಕ್ಕೆ ನೂರಾರು ಸಂಘ ಸಂಸ್ಥೆಗಳ, ಯುವಕರ, ಸಾಹಿತಿಗಳ ಹಾಗೂ ಸಾಧಕರ ಬೆಂಬಲ ಹಾಗೂ ಆಶೀರ್ವಾದವಿದೆ. ಈ ಆಚರಣೆಗೆ ಇಡಲಾದ ಹೆಸರು ‘ಜನ ಗಣ ಮನ ಗಾನ: ರಾಷ್ಟ್ರಗೀತೆ ಜಾಗೃತಿ’ ಅಭಿಯಾನ.

‘ರಾಷ್ಟ್ರಗೀತೆಯನ್ನು ಅನೇಕರು ತಪ್ಪು-ತಪ್ಪಾಗಿ ಹಾಡುತ್ತಾರೆ. ಅದರಲ್ಲಿನ ಶಬ್ದಗಳನ್ನು ಸರಿಯಾಗಿ ಉಚ್ಚರಿಸುವುದಿಲ್ಲ. ಕೆಲವಬ್ಬರಿಗೆ ರಾಷ್ಟ್ರಗೀತೆಯ ಮಹತ್ವವೇ ತಿಳಿದಿಲ್ಲ. ರಾಷ್ಟ್ರಗೀತೆಯನ್ನು ಸರಿಯಾಗಿ ಹಾಡದಿದ್ದರೇ ಅದರ ಮಹತ್ವ ಹೇಗೆ ತಾನೆ ತಿಳಿದೀತು? ಹೀಗಾಗಿ ನಮ್ಮದು ರಾಷ್ಟ್ರಗೀತೆಯನ್ನು ಸರಿಯಾಗಿ ಹಾಡುವ ಹಾಗೂ ಅದರ ಮಹತ್ವವನ್ನು ತಿಳಿಯುವ, ತಿಳಿಸುವುದು ಒಂದು ಸಣ್ಣ ಪ್ರಯತ್ನ’ ಎಂಬುದು ಲೋಕೇಶ್‍ಗೌಡ ಅವರ ವಿವರಣೆ.

ಈ ಅಭಿಯಾನಕ್ಕಾಗಿಯೇ ಒಂದು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಸದಸ್ಯರು ಅಭಿಯಾನದ ರೂಪರೇಷೆಗಳನ್ನು ಅಂತಿಮಗೊಳಿಸಿ ಇದರ ಯಶಸ್ಸಿಗೆ ಟೊಂಕಕಟ್ಟಿ ನಿಂತಿದ್ದಾರೆ.

‘ನಮ್ಮ ಜೊತೆ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳು ಕೈ ಜೋಡಿಸುತ್ತಿವೆ. ಎಲ್ಲಾ 72 ಸ್ಥಳಗಳನ್ನು ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಅಭಿಯಾನ ಚಿರಕಾಲ ನೆನಪಿನಲ್ಲಿ ಉಳಿಯುವುದು ದಿಟ’ ಎಂದು ಸಂಗೀತ ನಿರ್ದೇಶಕ ಕೆ.ಎಂ.ಇಂದ್ರ ಅವರು ಹೇಳುತ್ತಾರೆ.

ಅಭಿಯಾನದ ಬಗೆ
ಅಭಿಯಾನಕ್ಕಾಗಿಯೇ ಒಂದು ವಿಶಿಷ್ಟ ರಥವನ್ನು ಸಜ್ಜುಗೊಳಿಸಲಾಗಿದೆ. ರಥದ ಮೇಲೆ ಸಂಗೀತ ವಾದ್ಯ ನುಡಿಸುವವರ ಹಾಗೂ ಮೂರು ಪುರುಷ ಹಾಗೂ ಗಾಯಕರ ಹಾಗೂ ಗಾಯಕಿಯರ ಮೂರು ತಂಡಗಳಿರುತ್ತವೆ. ಅವರ ಜೊತೆಗೆ ಮುಖ್ಯ ಅತಿಥಿಗಳಿರುತ್ತಾರೆ. ಈ ರಥ ಚಲಿಸಿದಂತೆ ಅದನ್ನು ಹಿಂಬಾಲಿಸಿಕೊಂಡು ಹಿಂದೆ ಬೈಕ್ ರ್‍ಯಾಲಿಯಲ್ಲಿ ನೂರಾರು ಯುವಕರು ಸಾಗುತ್ತಾರೆ.

ನಿಗದಿಪಡಿಸಿದ ಸ್ಥಳದಲ್ಲಿ ರಥವನ್ನು ಅಲ್ಲಿನ ಸಂಘಟನೆಯ ಸದಸ್ಯರು ಸ್ವಾಗತಿಸುತ್ತಾರೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಅನುವಾದಿಸಲಾದ ರಾಷ್ಟ್ರಗೀತೆಯ ಕರಪತ್ರವನ್ನು ಅಲ್ಲಿ ನೆರೆದ ಜನರಿಗೆ ಹಂಚಲಾಗುತ್ತದೆ. ಮುಖ್ಯ ಅತಿಥಿಗಳು ರಾಷ್ಟ್ರಗೀತೆಯ ಮಹತ್ವದ ಬಗ್ಗೆ ಒಂದೆರಡು ನಿಮಿಷ ಮಾತನಾಡುತ್ತಾರೆ.

ನಂತರ ಗಾಯಕ, ಗಾಯಕಿಯರ ತಂಡ ಒಂದು ಸಲ ಶಬ್ದಗಳನ್ನು ಸರಿಯಾಗಿ ಉಚ್ಚರಿಸಿ ಹಾಡುತ್ತಾರೆ. ನಂತರ ಅಂತಿಮವಾಗಿ ವಾದ್ಯದ ತಂಡದೊಂದಿಗೆ ಸೇರಿ ಹಾಡುತ್ತಾರೆ. ಅವರ ಹಾಡಿಗೆ ಅಲ್ಲಿ ನೆರೆದ ಜನರೂ ದನಿಗೂಡಿಸುತ್ತಾರೆ. 

ಅಭಿಯಾನದ ರೂವಾರಿಗಳು
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ, ಸಂಗೀತ ನಿರ್ದೇಶಕರಾದ ಹಂಸಲೇಖ, ವಿ.ಮನೋಹರ್, ಸಾಹಿತಿಗಳಾದ ದೊಡ್ಡರಂಗೇಗೌಡ, ಕಮಲಾ ಹಂಪನಾ, ಹಂಪ ನಾಗರಾಜಯ್ಯ, ಬರಗೂರು ರಾಮಚಂದ್ರಪ್ಪ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ, ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟರಾದ ಸಿಹಿಕಹಿ ಚಂದ್ರು, ಸಂಚಾರಿ ವಿಜಯ್, ಲಹರಿ ಆಡಿಯೊ ಸಂಸ್ಥೆಯ ಲಹರಿ ವೇಲು, ಬಿಜೆಪಿ ಮುಖಂಡ ನೆ.ಲ.ನರೇಂದ್ರ ಬಾಬು, ನಿವೃತ್ತ ಎಸಿಪಿ ಎಸ್.ಪಿ.ಚಬ್ಬಿ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ನೂರಾರು ಗಣ್ಯರು ಅಭಿಯಾನಕ್ಕೆ ಬಂಬಲ ಸೂಚಿಸಿ ಅಗತ್ಯ ಸಲಹೆಗಳನ್ನು ನೀಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !