ಬೆರಳು ಯಮನ್ ರಾಗ ಮರೆತಿಲ್ಲ!

ಬುಧವಾರ, ಏಪ್ರಿಲ್ 24, 2019
27 °C

ಬೆರಳು ಯಮನ್ ರಾಗ ಮರೆತಿಲ್ಲ!

Published:
Updated:
Prajavani

ಶ್ರೇಷ್ಠ ಸರೋದ್‍ವಾದಕರಾದ ಪಂಡಿತ್‌ ರಾಜೀವ ತಾರಾನಾಥರಿಗೆ ಈ ಬಾರಿ 'ಪದ್ಮಶ್ರೀ ಪ್ರಶಸ್ತಿ'ಯ ಗೌರವ. ಉಪನ್ಯಾಸಕ ವೃತ್ತಿ ಕೈಬಿಟ್ಟು ಸರೋದ್ ನಾದ ಬೆನ್ನುಹತ್ತಿ ಉಸ್ತಾದ್ ಅಲಿ ಅಕ್ಬರ್‌ಖಾನರನ್ನು ಹುಡುಕಿಕೊಂಡು ಮುಂಬೈಗೆ ಹೋದಾಗ ರಾಜೀವರಿಗೆ 23ರ ಹರೆಯ. ಆರು ವರ್ಷಗಳ ಕಲಿಕೆ ನಂತರ ಮೈಸೂರಿಗೆ ಹಿಂದಿರುಗಿ, ಎಂಎ, ಪಿಎಚ್‍.ಡಿ ಮಾಡಿ, ಸರೋದ್ ಜೊತೆಗೆ ಹಲವಾರು ಕಡೆ ಉಪನ್ಯಾಸಕರಾಗಿದ್ದರು. ಹೈದರಾಬಾದಿನ ಸಿಐಇಎಫ್‍ಎಲ್‍ನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದವರು ಮತ್ತೆ ಆರಾಮದಾಯಕ ವೃತ್ತಿಯನ್ನು ತ್ಯಜಿಸಿ, ಸರೋದ್‍ಗೆ ಪೂರ್ಣವಾಗಿ ಕೊಟ್ಟುಕೊಂಡಾಗ ರಾಜೀವರಿಗೆ 50ರ ನಡುವಯಸ್ಸು.

ಎರಡು ಸಲ ಹೀಗೆ ಇದ್ದುದೆಲ್ಲವ ಬಿಟ್ಟೆದ್ದು ನಡೆಯಬೇಕೆಂದರೆ ಸರೋದ್ ಮಾಯೆ ಅವರನ್ನು ಎಷ್ಟರಮಟ್ಟಿಗೆ ಆವರಿಸಿರಬಹುದು! 86ರ ಇಳಿವಯಸ್ಸಿನಲ್ಲಿಯೂ ‘ನಾಳೆಗಳನ್ನು ಎದುರು ನೋಡುವ’ ಹರಿತನೋಟಗಳ ವಿಚಾರವಾದಿ ರಾಜೀವರು ‘ಕಾಲು ಕುಂಟುತ್ತೆ, ಆದರೆ ಸರೋದ್ ಮೇಲಾಡುವ ಬೆರಳು ಕುಂಟೋದಿಲ್ಲ. ಮಗನ ಹೆಸರು ಮರೆತುಹೋಗುತ್ತೆ, ಆದರೆ ಬೆರಳುಗಳು ಯಮನ್ ರಾಗ ಮರೆತಿಲ್ಲ’ ಎನ್ನುತ್ತಾರೆ.

* ನಿಮ್ಮ ತಂದೆ ಪಂಡಿತ್‌ ತಾರಾನಾಥರು ಆ ಕಾಲದಲ್ಲಿ ಕಲಾವಿದರಾಗಿ, ಕ್ರಾಂತಿಕಾರಿಯಾಗಿ ಹೆಸರಾದವರು, ತಾಯಿ ಸುಮತೀಬಾಯಿವರು ಆ ಕಾಲಘಟ್ಟದಲ್ಲಿಯೇ ಅಪ್ಪಟ ಸ್ತ್ರೀವಾದಿಯಾಗಿದ್ದರು. ಅವರ ಪ್ರಭಾವೀ ವರ್ಚಸ್ಸು ನಿಮ್ಮ ವ್ಯಕ್ತಿತ್ವವನ್ನು ಹೇಗೆ ಗಟ್ಟಿಗೊಳಿಸಿತು? ಅವರ ಪ್ರಖರ ಪ್ರಭಾವಳಿಯಿಂದ ತಪ್ಪಿಸಿಕೊಂಡು ಸಾಧಿಸಬೇಕು ಎನ್ನಿಸಿತ್ತೆ?

ನಮ್ಮ ತಂದೆ ನಾ ಹುಟ್ಟೋದಕ್ಕಿಂತ ಎಷ್ಟೋ ಮೊದಲೇ ಕ್ರಾಂತಿಕಾರಿ ಅಂತ ಹೆಸರಾಗಿದ್ದವರು. ಅಪ್ಪನ ಕುರಿತು ಅಭಿಮಾನ, ಗೌರವ, ಹೆಮ್ಮೆ ನನಗೆ. ಅಂತಹ ಔದಾರ್ಯ ಮತ್ತೆ ಯಾರಲ್ಲೂ ಕಂಡಿಲ್ಲ. ಬಹಳ ತೂಕದ ವ್ಯಕ್ತಿ. ಅಮ್ಮ ಆಗಿನ ಕಾಲದಲ್ಲಿಯೇ ‘ವೈ ನಾಟ್ ಡೈವೋರ್ಸ್’ ಅಂತ ಲೇಖನ ಬರೆದಿದ್ದಳು. ಅವಳಲ್ಲಿ ಹಳೆಯ ನಂಬಿಕೆಗಳನ್ನು ಪ್ರಶ್ನಿಸುವ, ಎದುರಿಸುವ ಶಕ್ತಿ ಇತ್ತು. ಎರಡು ಕ್ರಾಂತಿಕಾರ ವಿಚಾರಧಾರೆಗಳು ಒಂದುಗೂಡಿದ ಹಾಗಿದ್ದರವರು. ಅಮ್ಮ ತಾಳಿ ಹಾಕಿಕೊಳ್ತಿರಲಿಲ್ಲ, ಅವರಿಬ್ಬರ ಪ್ರಕಾರ ಅದು ದಾಸ್ಯದ ಹೆಗ್ಗುರುತು. ಆಗ ಹೈಸ್ಕೂಲಿಗೆ ಮೈಸೂರು ಎಲೆಮೆಂಟರಿ ಚರಿತ್ರೆ ಅಂತ ಪುಸ್ತಕ ಇತ್ತು, ಅದನ್ನು ನಂಗೆ 7-8 ವರ್ಷದವನಿದ್ದಾಗಲೇ ಓದಿಸಿದರು. ಅದರಲ್ಲಿ ಗ್ರೀಕ್ ಮಹಾಪುರುಷರು, ಮಾರ್ಕ್ಸ್, ಅಕ್ಬರ್, ಬುದ್ಧ, ಪರಮಹಂಸ ಇಂತಹ ವಿಶ್ವದ ಮಹಾಪುರುಷರ ಕುರಿತ ಪಾಠ. ಎರಡನೇ ಮಹಾಯುದ್ಧ ಶುರುವಾಗಿತ್ತು, ಆ ಹಿನ್ನೆಲೆಯಲ್ಲಿ ಶಾಲೆಗೆ ಹೋಗದ ನನಗೆ ಆ ಪುಸ್ತಕ ಓದಿಸಿದ್ದು ಎಷ್ಟು ಸಂಗತವಾಗಿತ್ತು ಅಂತ ಈಗ ಅನ್ನಿಸ್ತದೆ. ಅಪ್ಪ ಉರ್ದು, ಸಂಸ್ಕೃತ, ತಬಲಾ, ಆಯುರ್ವೇದ ಕಲಿಸ್ತಿದ್ದರೆ ಅಮ್ಮ ಹಿಸ್ಟರಿ, ಇಂಗ್ಲಿಷ್‌ ಇತ್ಯಾದಿ ವಿಷಯಗಳನ್ನು ಕಲಿಸ್ತಾ ಇದ್ದರು. ಜೊತೆಗೆ ಅಮ್ಮನಿಂದ ಓದುವ ಗೀಳು ಬೆಳೆಯಿತು. ಶಾಲೆಗೆ ಹೋಗದೆ ಮನೆಯಲ್ಲೇ ಇದ್ದಿದ್ದರಿಂದ, ಅವರಿಬ್ಬರ ದೊಡ್ಡತನಕ್ಕೆ ಒಡ್ಡಿಕೊಳ್ತಾ ಹೋದೆ. ಸಂಗೀತದಲ್ಲಿ ಅರಿವು, ಜೀವನದಲ್ಲಿ ಅರಿವು ಎಲ್ಲವೂ ಚಿಕ್ಕವಯಸ್ಸಿನಲ್ಲಿಯೇ ಬೆಳೆಯುತ್ತ ಹೋಯಿತು.

ಅಪ್ಪ ಎಲ್ಲ ಸಂಗೀತಗಾರರಲ್ಲಿಯೂ ತಪ್ಪು ಕಂಡುಹಿಡೀತಾ ಇದ್ದರು. ಅದು ಒಳ್ಳೆಯದಲ್ಲ ಅಂತ ಆಮೇಲೆ ಅರಿವಾಯಿತು ನನಗೆ. ಅಪ್ಪನ ಶಿಷ್ಯರೆಲ್ಲ ಆತನ ಅದ್ಭುತರಮ್ಯಗಳ ಬಗ್ಗೆಯೇ ಮಾತಾಡ್ತಾರೆ. ನಾನು ಬೆಳೀತಾ ಹೋದಂತೆ ಅಪ್ಪನ ಬಗ್ಗೆ ಗೌರವ, ಹೆಮ್ಮೆ ಉಳಿಸಿಕೊಂಡೇ ಅದನ್ನು ಪ್ರಶ್ನಿಸಿದೆ. ನನಗೆ ಗೊತ್ತಿದ್ದ ನನ್ನ ತಂದೆ ಆ ಒಂದು ಭೀಮಕಾಯನಲ್ಲ. ಎಲ್ಲ ಸೇರಿಸಿ ನೋಡಿದರೆ ಆತನೂ ಒಬ್ಬ ಮನುಷ್ಯನೇ. ಹೀಗಾಗಿ ನ್ಯೂನತೆಗಳಿರೋದು ಸಹಜ. ಆದರೆ ಆತನ ಹಾಗಿನ ಸರ್ವತೋಮುಖ ಪ್ರತಿಭೆ ಎಲ್ಲೂ ಕಂಡಿಲ್ಲ. ಭಾಷೆಗಳು, ಸಂಗೀತ, ಗ್ರಹಣ ಶಕ್ತಿ ಹೀಗೆ ಅಪಾರ ಪ್ರತಿಭೆ ಆತನದು. ನನ್ನನ್ನೂ ಎಳೆವೆಯಲ್ಲಿಯೇ ಎಲ್ಲದಕ್ಕೆ ಹಾಕಿದ್ರು. ತಬಲಾ, ಹಾಡುಗಾರಿಕೆ, ಭಾಷೆಗಳು, ಆಯುರ್ವೇದ ಹೀಗೆ. ಅವರ ಪ್ರಭಾವಳಿಯಿಂದ ತಪ್ಪಿಸಿಕೊಳ್ಳುವುದು ಅಂತಲ್ಲ. ಆದರೆ ಎಲ್ಲದರಲ್ಲಿ ಕೈಹಾಕದೆ, ಒಂದರಲ್ಲಿಯೇ ಸಾಧನೆ ಮಾಡಬೇಕು ಅನ್ನಿಸಿ, ಸರೋದಕ್ಕೆ ಪೂರ್ಣ ಕೊಟ್ಟುಕೊಂಡೆ. ಖಾನ್ ಸಾಹೇಬರು ನನ್ನ ಕೇಂದ್ರವಾದರು. ಅದರಿಂದಾಗಿ ಉಳಿದವರಲ್ಲಿ ಅಂದರೆ ರವಿಶಂಕರ್ ಮತ್ತು ದೀದಿಯವರಲ್ಲಿ (ಅನ್ನಪೂರ್ಣದೇವಿ) ಕಲಿಯುವ ಸುಯೋಗ ಒದಗಿತು.

* ಕಲೆ ಮತ್ತು ಕ್ರೀಡೆಗೆ ಯುದ್ಧೋನ್ಮಾದ ರಾಜಕಾರಣದ ಬಣ್ಣ ಬಳಿಯುವುದರ ಬಗ್ಗೆ ಏನೆನ್ನಿಸುತ್ತದೆ?

ಕಲಾವಿದರಿಗೆ ರಾಜಕೀಯದ ಬಣ್ಣ ಹಚ್ಚಬಾರದು. ಯಾಕೆಂದರೆ ಕಲಾವಿದರಿಗೆ ದೇಶ ಯಾವುದು? ಅವರ ಕಲೆಯೇ ದೇಶ. ಸಂಗೀತವೇ ದೇಶ. ಆ ಸರಹದ್ದು, ಈ ಸರಹದ್ದು ಅಲ್ಲ. ಅವರ ಸರಹದ್ದುಗಳೆಲ್ಲ ಆ ಕಲೆ ಒಳಗೆ. ಈ ಕ್ಷಣದವರೆಗೂ, ಮುಂದೂ ಹಂಗೆ ಇರ್ತದ. ಅದೆಲ್ಲೂ ಬದಲಾಗೋದಿಲ್ಲ, ನಮ್ಮ ಸಂಗೀತ ಕಲಾವಿದರಲ್ಲಿ ಅಂವ ಆ ದೇಶದವ, ಇಂವ ಈ ದೇಶದವ, ನಮ್ಮ ಶತ್ರು ಅಂವ ಎಂಬ ಭಾವನೆ ಬಂದೇ ಇಲ್ಲ. ಒಂದು ಘಟನೆ ಹೇಳ್ತೀನಿ. ಪಾಕಿಸ್ತಾನದ ಪ್ರಸಿದ್ಧ ಗಜಲ್ ಗಾಯಕ ಗುಲಾಂ ಅಲಿಯವರು ಬಾಂಬೇಗೆ ಬಂದಿದ್ರು. ಆಗ ಬೆಂಗಳೂರಿನಲ್ಲಿ ಪಾಕ್ ಕಲಾವಿದರಿಗೆ ಹಾಡು ಕಷ್ಟವಿತ್ತು. ನಾ ಮನೇಲಿದ್ದೆ. ಫೋನು ಬಂತು. ‘ನನ್ನ ಗುಲಾಂ ಅಲಿ ಅಂತಾರೆ, ಏನೋ ಸ್ವಲ್ಪ ಹಾಡ್ತೀನಿ. ನಿಮ್ಮ ಬಗ್ಗೆ ಕೇಳಿದೀನಿ. ಬೆಂಗಳೂರಿನಲ್ಲಿ ನನ್ನದೊಂದು ಕಾರ್ಯಕ್ರಮ ಇದೆ. ನನ್ನ ಅಸಿಸ್ಟಂಟ್ ಜನರ ಹತ್ರ ದುಡ್ಡು ಸಂಗ್ರಹಿಸ್ತಾ ಇದ್ದಾರೆ. ಅವನ ಮೇಲೆ ನೀವು ನಿಗರಾನಿ ಇಡ್ರಿ. ನೀವು ಬಾ ಅಂದ್ರೆ ಬರ್ತೀನಿ’ ಅಂದ್ರು. 1987-88 ಇರಬೇಕು. ಅವರು ಕೇಳಿದಷ್ಟು ಹಣ ಇಲ್ಲಿ ಸಂಗ್ರಹವಾಗಿರಲಿಲ್ಲ. ‘ವಿಷಯ ಹೀಗಿದೆ, ಆದರೆ ನೀವು ಬರ್ರಿ’ ಅಂದೆ. ಆತ ಭಾಳ ದೊಡ್ಡ ಮನುಷ್ಯ, ಇಡೀ ದುನಿಯಾದಾಗೆ ಪ್ರಸಿದ್ಧ. ನಾನು ಆಗ ಏನೂ ಅಲ್ಲ. ಆದರೆ ನನ್ನ ಮಾತಿಗೆ ಬೆಲೆಕೊಟ್ಟು ಬಂದರು, ಅದ್ಭುತ ಕಾರ್ಯಕ್ರಮ ಕೊಟ್ಟರು.

ಕಲಾಕಾರರು ಜೀವನಕ್ಕೆ ಇನ್ನೊಬ್ಬರ ಮೇಲೆ ಅವಲಂಬಿಸಿರ್ತಾರೆ. ಅಲ್ಲಿ ಯಾಕೆ ಹೋಗ್ತೀರಿ, ಹೀಗೆ ಯಾಕೆ ಮಾಡ್ತೀರಿ ಅಂದ್ರೆ ಹ್ಯಾಗೆ? ಈಗ ಏನಾಗಿದೆ ಅಂದರೆ ನಾನು ಭಿನ್ನ ಹೇಳಿಕೆ ಕೊಟ್ಟರೆ ನನಗೇ ಏಟು ಬೀಳುತ್ತೆ. ಇದು ಸರಿಯಲ್ಲವೆಂದು ಜಗಳಾ ಮಾಡ್ತಾ ಕೂತರೆ ನಮ್ಮ ಕಲೆಗೆ ಹೊಡೆತ ಬೀಳುತ್ತೆ. ಸಮಾಜಕ್ಕೆ ಕಲಾಕಾರರ ಮೇಲೆ ಪ್ರೀತಿ, ಸ್ವಲ್ಪಮಟ್ಟಿಗೆ ಸಹನೆ ಇರಬೇಕು. ಅದು ಇಲ್ಲದಿದ್ದಾಗ ಬಹಳ ಕಷ್ಟವಾಗುತ್ತೆ.

* ಕಲಾವಿದರು ಸುತ್ತಲಿನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸದೇ ತಮ್ಮ ಕಲೆಯಲ್ಲಿ ಮುಳುಗಿರಲಿ ಎಂದು ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ನೀವು ಇದನ್ನು ಹೇಗೆ ನೋಡುವಿರಿ?

ನೋಡಿ, Wilfred Owen ಅನ್ನೋ ಒಬ್ಬ ಕವಿ pity of war ಬಗ್ಗೆ ಬರೀತಾನೆ. ಯುದ್ಧ ಅಂದ್ರೆ ನಾವೆಲ್ಲ ಉತ್ಪ್ರೇಕ್ಷೆ ಮಾಡೋ ದೇಶಭಕ್ತಿ ಅಲ್ಲ, ಕಾದಾಡುತ್ತ ವೀರಮರಣ ಹೊಂದೋದು ಅಲ್ಲ. ಯುದ್ಧದ ‘ಅಯ್ಯೋತನ’ದ ಬಗ್ಗೆ ಆತ ಬರೀತಾನೆ.

ಇವತ್ತು ಇರೋ ಪರಿಸ್ಥಿತಿಯಲ್ಲಿ ಕಲಾಕಾರ ಎಲ್ಲಿ ನಿಲ್ಲಬೇಕು ಅಂತ ಹೇಳೋದು ಕಷ್ಟ. ಇದಲ್ಲ ಅಂದ್ರೆ ಘಾತುಕ, ದೇಶದ ಶತ್ರು ಅಂತಾರೆ. ಇದು ಸರಿ ಅಂದ್ರೆ ಅವನಿಗೇ ತೋಚ್ತಾ ಇರುತ್ತೆ, ಅದು ಹಾಗೆ ಇರಲಿಕ್ಕಿಲ್ಲ ಅಂತ. ಕಲಾವಿದರು ಕೂಡ ವ್ಯಕ್ತಿಗಳಾಗಿದ್ದರಿಂದ ಅವರದೇ ರೀತಿಯಲ್ಲಿ ಪ್ರತಿಕ್ರಿಯಿಸ್ತಾರೆ. ನಾವೇನು ಬುದ್ಧರಲ್ಲ. ಆದ್ರೆ ಬುದ್ಧತನ ನಮ್ಮೆಲ್ಲರಲ್ಲಿ ಸ್ವಲ್ಪ ಇರಬೇಕು. ನಾವ್ಯಾರೂ ಅಶೋಕರಲ್ಲ, ಆದರೆ ಅಶೋಕತನ ಇರಬೇಕು. ಅದೇ ನಮ್ಮನ್ನು ಮನುಷ್ಯರಾಗಿ ಮಾಡೋದು.

* ಜನಪದ ಸಂಗೀತದ ಜೊತೆ ಶಾಸ್ತ್ರೀಯ ಸಂಗೀತ ಯಾವ ಬಗೆಯ ಸಂಬಂಧ ಹೊಂದಿರ್ತದೆ?

ಎಲ್ಲರೂ ಹಾಡ್ತಾರೆ. ಹಾಡಿಲ್ಲದ ಜಾಗವಿಲ್ಲ, ಬೇರೆಬೇರೆ ತರಹದ ಹಾಡುಗಳು ಇದ್ದೇ ಇರ್ತವೆ. ಜನಪದದ ಆ ಧಾಟಿ, ಆ ಮಟ್ಟುಗಳು ಕೆಲವು ರಾಗದಲ್ಲಿ ಬರ್ತವೆ. ಒಂದಕ್ಕೊಂದು ಪ್ರಭಾವಿತವಾಗ್ತಿರ್ತದೆ. ಉದಾಹರಣೆಗೆ ಮಾಂಡ್ ರಾಗ. ನಮ್ಮ ಮಾಂಡ್ ರಾಗದಲ್ಲಿ ರಾಜಾಸ್ತಾನದ ಜಾನಪದ ಮಾಂಡ್‍ನ ಛಾಯೆ ಕಾಣುತ್ತೆ. ಅದು ಹಳೇದು. ಈ ಮಾಂಡ್ ಅಷ್ಟು ಹಳೆಯದಲ್ಲ. ಅಲ್ಲಿಂದ ಕೆಲ ಅಂಶಗಳನ್ನು ತೆಗೆದುಕೊಂಡು ಇದು ನಿರ್ಮಾಣಗೊಂಡಿದೆ. ಜನಪದ ಸಂಗೀತ ಜನರಲ್ಲಿ ಇರ್ತದೆ, ಅದು ಎಲ್ಲಿ ಹ್ಯಾಗೆ ಇರ್ತದೆ ಹೇಳಕ್ಕಾಗಲ್ಲ. ಸಾಂಘಿಕ ಜೀವನದಲ್ಲಿ ಸಂಗೀತ ಇದ್ದೇ ಇರುತ್ತೆ. ನಾವು ಆ ಅಂಶಗಳನ್ನು ತಗಂಡು ಅದಕ್ಕೊಂದು ಚೌಕಟ್ಟು ಹಾಕಿಕೊಂಡು ರಾಗ ಅಂತ ಮಾಡಿರ್ತೇವೆ ಅಷ್ಟೆ.

* ನೀವು ಸರೋದ್ ಕಲಿತಿದ್ದು ಮೈಹರ್ ಘರಾನೆಯ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಲ್ಲಿ. ಮೈಹರ್ ಘರಾನೆಯು ಇನ್ನುಳಿದ ಘರಾನೆಗಳಿಗಿಂತ ಹೇಗೆ ವಿಭಿನ್ನವಾಗಿದೆ?

ಈ ಪ್ರಶ್ನೆಗೆ ಉತ್ತರ ಹೇಳಕ್ಕೆ ನಾಲ್ಕು ದಿನ ಬೇಕು! ಸರಳವಾಗಿ ಹೇಳಬೇಕಂದ್ರೆ... ಉಳಿದ ಘರಾನೆಗಳಲ್ಲಿ ಹೆಚ್ಚಾಗಿ ಕುಟುಂಬದವರಿಗೆ, ಅದೇ ಜಾತಿಯವರಿಗೆ, ಅದರಲ್ಲೂ ಗಂಡು ಮಕ್ಕಳಿಗೆ ಕಲಿಸುತ್ತಿದ್ದರು. ಇದನ್ನೆಲ್ಲ ಒಡೆದು ಹೊರಬಂದವರು ಬಾಬಾ ಅಲಾವುದ್ದೀನ್ ಖಾನರು. ಮೈಹರ್ ಘರಾನೆಯ ಮೂಲಕ ಸಂಗೀತವನ್ನು ಬಿತ್ತೋದಕ್ಕೆ ಶುರುಮಾಡಿದ್ರು. ಅವರು ಯಾವ ಘರಾನೆಗೂ ಹುಟ್ಟಿದವರಲ್ಲ. ಅವರಿಗೆ ಸಂಗೀತ ಕಲಿಯುವ ಕಷ್ಟ ಅನುಭವಿಸಿ ಗೊತ್ತಿತ್ತು. ಬೇರೆ ಜಾತಿಯವರಿಗೆ ಕಲಿಸಲು ಶುರು ಮಾಡಿದರು, ಅವರ ಶಿಷ್ಯರಲ್ಲಿ ಅನೇಕರು, ಶೇಕಡಾ 90ರಷ್ಟು ಅವರ ಜಾತಿಯವರಲ್ಲ. ಮಗಳಿಗೆ ಅಂದರೆ ಹೆಣ್ಣುಮಕ್ಕಳಿಗೆ ಕಲಿಸಲಿಕ್ಕೆ ಶುರು ಮಾಡಿದರು. ಬಡವರಿಗೆ ಕಲಿಸಿದರು. ಲಿಂಗ, ಜಾತಿ, ವರ್ಗ ಎಲ್ಲ ಬಗೆಯ ಭೇದ ಮೀರಿ ಗಂಭೀರವಾಗಿ ಕಲಿಯುವವರನ್ನು ಗುರುತಿಸಿ ಸಂಗೀತಕ್ಕೆ ಹಚ್ಚಿದರು. ಇದು ಸಾಮಾಜಿಕವಾಗಿ ಬಹುಮುಖ್ಯವಾದ ಚಲನೆ. ಬಾಗಿಲೊಳಗೆ ಬಂದಿಯಾಗಿದ್ದಲ್ಲ, ತೆರೆದ ಬಾಗಿಲಿನ ಘರಾನೆ ಇದು.

* ಕಾರ್ಪೊರೇಟ್ ಸಂಸ್ಕೃತಿ, ಜಾಗತೀಕರಣ, ಸೋಶಿಯಲ್ ಮೀಡಿಯಾದ ಅಬ್ಬರ, ಈ ಧಾವಂತದ ಕಾಲದಲ್ಲಿ ರಸಗ್ರಾಹಿ ಕೇಳುಗ ಕಳೆದುಹೋಗ್ತಿದ್ದಾರೆ ಅನ್ನಿಸುತ್ತಾ?

ಕೇಳುಗರು ಇದ್ದೇ ಇದ್ದಾರೆ. ಆ ರುಚಿಯನ್ನು ಹುಟ್ಟಿಸುವ, ಅಭಿಜಾತತೆಯಲ್ಲಿ ಅಭಿರುಚಿಯನ್ನು ಹುಟ್ಟಿಸುವ ಜವಾಬ್ದಾರಿ ನಮ್ಮದು. ಎಲ್ಲ ಕಲೆಗಳೂ ಆರ್ಟಿಫಿಶಿಯಲ್, ಹೀಗಾಗಿ ಒಬ್ಬರಿಂದ ಕಲಿಯಬೇಕಾಗುತ್ತದೆ. ಎಲ್ಲರಿಗೂ ಕಲಿಯಲು ಆಗಲಿಕ್ಕಿಲ್ಲ. ಹಾಗೆ ಕಲಿಸುವ ಜವಾಬ್ದಾರಿ ಕಲಿತವರ ಮೇಲೆ ಇರುತ್ತೆ. ಕಲೆ ಅನ್ನೋದೆ ಕಲಿಕೆಯಲ್ಲಿ ಹುಟ್ಟುವಂಥದು. ಟಿ.ಎಂ. ಕೃಷ್ಣ ಚೆನ್ನೈನಲ್ಲಿ ಬೆಸ್ತರ ಕಾಲನಿಗೆ, ಸ್ಲಂಗೆ ಹೋಗಿ ಕಲಿಸಿದರು, ಸಂಗೀತ ಕೇಳಿಸಿದರು. ಅವರು ಅಂಥದೊಂದು ವಾತಾವರಣ ಅಲ್ಲಿ ಸೃಷ್ಟಿ ಮಾಡಿದಾರೆ. ಕಲ್ಕತ್ತೆಯ ಸಂಗೀತಗಾರರು ಹಾಗೆ ಕೇಳುವ ವಾತಾವರಣ ಸೃಷ್ಟಿಮಾಡಿದಾರೆ. ಮುಂಬೈನಲ್ಲೂ ಸ್ವಲ್ಪಮಟ್ಟಿಗೆ ಇದೆ. ಆ ರುಚಿಯನ್ನು ಹುಟ್ಟಿಸಬೇಕಷ್ಟೆ

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !