ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟು ಹಿಡಿದ ಪಟ್ಟಮ್ಮಾಳ್

Last Updated 16 ಮಾರ್ಚ್ 2019, 19:30 IST
ಅಕ್ಷರ ಗಾತ್ರ

‘ಹೆಣ್ಣು ಇಂಥದ್ದೇ ರಚನೆಗಳನ್ನು ಹಾಡಬೇಕು, ಉಳಿದದ್ದನ್ನು ಹಾಡಬಾರದು ಎಂದು ಹೇಳುವುದಕ್ಕೆ ಇವರು ಯಾರು? ಇಂತಹ ವಿಚಾರಗಳಲ್ಲಿ ಹೆಂಗಸರು ಯಾರ ಮಾತಿನಿಂದಲೂ ಎದೆಗುಂದಬಾರದು. ಹೆಂಗಸರಿಗೂ ಗಂಡಸರಿಗಿರುವಷ್ಟೇ ಬುದ್ಧಿ ಇದೆ. ಅವರು ತಮಗನ್ನಿಸಿದ್ದನ್ನು ಮುಕ್ತವಾಗಿ ಹಾಡಬೇಕು’– ಹೀಗೆಂದವರು ಕರ್ನಾಟಕ ಸಂಗೀತದ ಮಹಾನ್ ಕಲಾವಿದೆ ಡಿ.ಕೆ. ಪಟ್ಟಮ್ಮಾಳ್.

ಅಪರೂಪದ ಈ ಮಹಿಳೆ ಸಂಪ್ರದಾಯದೊಳಗಿಂದಲೇ ಮೌನವಾಗಿ, ತಮ್ಮ ಕಲೆಯ ಮೂಲಕ ನಮ್ಮ ಸಮಾಜ, ಸಂಸ್ಕೃತಿ, ಸಂಗೀತ ಇವುಗಳಲ್ಲಿದ್ದ ಪೂರ್ವಗ್ರಹಗಳು, ಅಲಿಖಿತ ನಿಯಮಗಳನ್ನು ಧಿಕ್ಕರಿಸಿ, ಸಂಗೀತ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗಿರುವ ಅವಕಾಶಗಳನ್ನು ವಿಸ್ತರಿಸಿದರು. ಹಾಗೆಯೇ ಹೆಣ್ಣು ತನ್ನ ಆಯ್ಕೆಯ ಕ್ಷೇತ್ರವೊಂದರಲ್ಲಿ ತೀವ್ರವಾಗಿ ತೊಡಗಿಕೊಳ್ಳಬೇಕಾದರೆ ‘ಸೂಪರ್ ವುಮನ್’ ಆಗಿ, ಸಮರ್ಥ ಗೃಹಿಣಿಯೆಂದು ಸಾಬೀತು ಪಡಿಸಲೇಬೇಕಾದ ದುರಂತಕ್ಕೂ ಸಾಕ್ಷಿಯಾದರು.

ಕಾಂಚೀಪುರದ ದಮಾಲ್ ಕೃಷ್ಣಸ್ವಾಮಿ ದೀಕ್ಷಿತರು ಮತ್ತು ರಾಜಮ್ಮಾಳ್ ಅವರ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸಂಗೀತದ ಪರಂಪರೆ ಇರಲಿಲ್ಲವಾದರೂ ಅಲ್ಲಿ ಸಂಗೀತದ ವಾತಾವರಣವಿತ್ತು. 1919ರ ಮಾರ್ಚ್‌ 28ರಂದು ಪಟ್ಟಮ್ಮಾಳ್ ಅಲ್ಲಿ ಜನಿಸಿದರು. ಕಾಂಚೀಪುರದ ಸಂಗೀತಮಯ ಪರಿಸರದಲ್ಲಿ ಸದಾ ಉತ್ಕೃಷ್ಟ ಸಂಗೀತ ಕೇಳುತ್ತಾ ಅದರ ರುಚಿಯನ್ನು ಸವಿಯುತ್ತಾ ಬೆಳೆದರು. ಸಂಗೀತಪ್ರೇಮಿ ಸಹೋದರ ಡಿ.ಕೆ ಜಯರಾಮನ್ನರ ಒಡನಾಟ ಅದಕ್ಕೆ ಪೂರಕವಾಗಿತ್ತು.

ಪಟ್ಟಮ್ಮಾಳರ ಬದುಕಿಗೆ ತಿರುವು ನೀಡಿದವರು ಅವರ ಶಾಲೆಯ ಮುಖ್ಯೋಪಾಧ್ಯಾಯಿನಿ ಅಮ್ಮುಕುಟ್ಟಿ ಅಮ್ಮಾಳ್ ಮತ್ತು ತಮಿಳಿನ ಖ್ಯಾತ ಕಾದಂಬರಿಕಾರ್ತಿ ವೈ.ಮು. ಕೋದೈನಾಯಕಿ. ಶಾಲಾ ನಾಟಕದಲ್ಲಿ ಪಟ್ಟಮ್ಮಾಳ್ ಹಾಡಿದ ಫೋಟೊ ಮತ್ತು ವಿವರ ‘ಸ್ವದೇಶೀಮಿತ್ರ’ ಪತ್ರಿಕೆಯಲ್ಲಿ ಪ್ರಕಟವಾದಾಗ ಹೊಸ ಪ್ರತಿಭೆಯ ಹುಡುಕಾಟದಲ್ಲಿದ್ದ ಕೊಲಂಬಿಯಾ ಗ್ರಾಮಾಫೋನ್ ಕಂಪನಿಯು ಹಾಡನ್ನು ಧ್ವನಿಮುದ್ರಿಸಲು ಅವಳನ್ನರಸಿ ಅವಳ ಶಾಲೆಗೇ ಬಂದಿತು. ಇದು ಕೃಷ್ಣಸ್ವಾಮಿಯವರ ನಿದ್ದೆ ಕೆಡಿಸಿತ್ತು. ಜನರ ಕಣ್ಣಿಗೆ ಬಿದ್ದ ಮಗಳಿಗೆ ಮದುವೆ ಮಾಡುವುದು ಹೇಗಪ್ಪಾ ಎಂದು ಅವರು ಒದ್ದಾಡಿ ಹೋದರು.

ಹಾಗಿದ್ದರೂ ಕೋದೈನಾಯಕಿಯ ಸಲಹೆಯ ಮೇರೆಗೆ ಮದ್ರಾಸಿಗೆ (ಇಂದಿನ ಚೆನ್ನೈಗೆ) ಬಂದು ನೆಲೆಸಿದರು. ಸಂಗೀತಪ್ರೇಮಿ ಸೋದರಳಿಯ ಈಶ್ವರನ್ ಜೊತೆ ಮಗಳ ಮದುವೆ ಮಾಡಿದರು. ತಂದೆ ಮತ್ತು ಪತಿ ಇವರಿಂದಾಗಿ ಸ್ವಾತಂತ್ರ್ಯ ಚಳವಳಿ ಮತ್ತು ಗಾಂಧೀಜಿಯವರ ಗಾಢ ಪ್ರಭಾವ ಪಟ್ಟಮ್ಮಾಳರ ಮೇಲಾಗಿತ್ತು. ದೇಶಭಕ್ತಿಗೀತೆಗಳನ್ನು ತಮ್ಮ ಎಂಟನೇ ವಯಸ್ಸಿನಿಂದಲೇ ಹಾಡುತ್ತಿದ್ದರು. ಸುಬ್ರಹ್ಮಣ್ಯ ಭಾರತಿಯವರ ಕೃತಿಗಳನ್ನೇ ಹಾಡಿ, ಅದರ ಒಂದು ಸಾಲನ್ನೇ ಪಲ್ಲವಿ ಮಾಡಿ ಪೂರ್ಣ ಪ್ರಮಾಣದ ಕಛೇರಿ ಮಾಡಿದ್ದರು. ಮನೆಯಲ್ಲಿ ಬಹಳ ವರ್ಷಗಳ ಕಾಲ ಖಾದಿ ಸೀರೆಯನ್ನೇ ಉಡುತ್ತಿದ್ದರು. ಗಾಂಧಿಯ ಸಾವಿನಿಂದ ಒಟ್ಟಾರೆ ಪರಿಸ್ಥಿತಿ ತೀರಾ ಪ್ರಕ್ಷುಬ್ಧವಾಗಿದ್ದಾಗ ಅವರು ಶಾಂತಿ ಸ್ಥಾಪನೆಗಾಗಿ ‘ಶಾಂತಿ ನಿಲವ ವೇಂಡುಂ’ ಎನ್ನುವ ಕೃತಿಯನ್ನು ಕಛೇರಿಗಳಲ್ಲಿ ಹಾಡುತ್ತಿದ್ದರು.

ಅಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಹೊರಗೆ ಹೋಗಿ ಸಂಗೀತ ಕಲಿಯುವುದಂತೂ ಸಾಧ್ಯವಿರಲಿಲ್ಲ. ಹಾಗಾಗಿ ಮನೆಗೆ ಬರುತ್ತಿದ್ದ ವಿಭಿನ್ನ ವಿದ್ವಾಂಸರಿಂದ ಒಂದಿಷ್ಟು ಕಲಿತರು. 1931ರಲ್ಲಿ ಸಂಗೀತದ ಪರೀಕ್ಷೆಯಲ್ಲಿ ಇವರ ಪರೀಕ್ಷಕರಾಗಿದ್ದ ಪ್ರೊ.ಪಿ. ಸಾಂಬಮೂರ್ತಿ, ಟೈಗರ್ ವರದಾಚಾರ್ ಮತ್ತು ಅಂಬಿ ದೀಕ್ಷಿತರು ಇವರು ಹಾಡಿದ ದೀಕ್ಷಿತರ ಕಾಂಭೋಜಿ ರಾಗದ ‘ಶ್ರೀ ಸುಬ್ರಹ್ಮಣ್ಯಾಯ ನಮಸ್ತೆ’ ಕೃತಿಯನ್ನು ಕೇಳಿ ಬೆರಗಾದರು. ಅಂಬಿ ಇವರಿಗೆ ದೀಕ್ಷಿತರ ಹಲವು ಕೃತಿಗಳನ್ನು ಕಲಿಸಿದರು. ದೀಕ್ಷಿತರ ಕೃತಿಗಳ ಸೂಕ್ಷ್ಮತೆ, ಸಂಕೀರ್ಣತೆಗಳನ್ನು ಸೊಗಸಾಗಿ ಮನನ ಮಾಡಿಕೊಂಡು ಪಟ್ಟಮ್ಮಾಳ್ ಅವುಗಳಲ್ಲಿ ಪರಿಣತರೆನಿಸಿಕೊಂಡರು. ಟೈಗರ್ ವರದಾಚಾರ್ ಇವರನ್ನು ‘ಗಾನ ಸರಸ್ವತಿ’ ಎಂದು ಕರೆದರು. ಅದು ಪಟ್ಟಮ್ಮಾಳರ ಅಚ್ಚುಮೆಚ್ಚಿನ ಬಿರುದಾಗಿತ್ತು.

‘ಹೆಂಗಸರಿಗೆ ಲಯದ ಗೊಡವೆಯೇಕೆ? ಕಿವಿಗಿಂಪಾಗಿ ಹಾಡಿದರೆ ಸಾಲದೇ, ಬುದ್ಧಿಗೆ ಕೆಲಸ ಕೊಡುವಂಥ ಕ್ಲಿಷ್ಟತೆ ಅವರಿಗೇಕೆ?’ ಎಂಬ ಸಿದ್ಧ ಚೌಕಟ್ಟುಗಳನ್ನೆಲ್ಲಾ ಪಟ್ಟಮ್ಮಾಳ್ ಸದ್ದಿಲ್ಲದೆಯೇ ಕೆಡಹಿದರು. ತೀರಾ ಕ್ಲಿಷ್ಟವಾದ ತಾಳಗಳನ್ನು ನಿರಾಯಾಸವಾಗಿ ನಿರ್ವಹಿಸುತ್ತಿದ್ದರು. ಅತ್ಯಂತ ನಿಖರವಾದ ತಾಳಜ್ಞಾನ ಬೇಡುತ್ತಿದ್ದ ತಿರುಪ್ಪುಗಳನ್ನು ಮೂಲ ತಾಳಗಳಲ್ಲಿ ಹಾಡುತ್ತಿದ್ದರು. ಸಂಗೀತದಲ್ಲೇ ಅತ್ಯಂತ ಸಂಕೀರ್ಣ ಪ್ರಕಾರವೆನಿಸಿಕೊಂಡಿದ್ದ ರಾಗ– ತಾನ– ಪಲ್ಲವಿಯನ್ನು ತಮ್ಮ ಪರಿಣತಿಯ ಕ್ಷೇತ್ರವಾಗಿಸಿಕೊಂಡು ಪುರುಷರ ಬೌದ್ಧಿಕ ಏಕಸ್ವಾಮ್ಯವನ್ನು ಒಡೆದರು. ವಿಪರ್ಯಾಸವೆಂದರೆ, ಆಕಾಶವಾಣಿಯಲ್ಲಿ ರಾಗ-ತಾನ-ಪಲ್ಲವಿಗೆಂದೇ ಪ್ರತಿ ಗುರುವಾರ ಸಂಜೆ ಸಮಯ ನಿಗದಿಗೊಳಿಸಿದ್ದರೂ ಅಲ್ಲಿ ಹೆಂಗಸರಿಗೆ ಅವಕಾಶವಿರಲಿಲ್ಲ.

ಹಂತಹಂತವಾಗಿ ರಾಗವನ್ನು ಬೆಳೆಸುತ್ತಿದ್ದ ಪಟ್ಟಮ್ಮಾಳರ ಗಾಯನದ ಉತ್ಕೃಷ್ಟತೆ ಮತ್ತು ಭಾವೋತ್ಕಟತೆ ದೀಕ್ಷಿತರ ಕೃತಿಗಳ ಪ್ರಸ್ತುತಿಯಲ್ಲಿ ವ್ಯಕ್ತವಾಗುತ್ತಿತ್ತು. ದೀಕ್ಷಿತರ ದ್ವಿಜಾವಂತಿ ರಾಗದ ಚೇತಶ್ರೀ ಕೃತಿಯನ್ನು ಕೇಳಿ ಭಾವಪರವಶರಾದ ಡಾ. ರಾಜೇಂದ್ರ ಪ್ರಸಾದ್ ಅದರ ಸಾಹಿತ್ಯವನ್ನು ಕೇಳಿ ಪಡೆದು ಹಲವು ವರ್ಷಗಳ ನಂತರ ಮದ್ರಾಸಿಗೆ ಬಂದಾಗ, ಅವರನ್ನು ಕರೆಸಿ, ಅದನ್ನು ಹಾಡಿಸಿ, ಕಂಬನಿ ಮಿಡಿದರಂತೆ. ಸಂಗೀತ ತನ್ನ ಆತ್ಮವನ್ನು ಕಲಕಿದಾಗ ಮಾತ್ರ ಅದು ಶ್ರೋತೃವನ್ನು ಕಲಕುತ್ತದೆ ಎಂದು ನಂಬಿದ್ದ ಪಟ್ಟಮ್ಮಾಳರಿಗೆ ಸಂಗೀತ ಒಂದು ತಪಸ್ಸಾಗಿತ್ತು.

‘ತ್ಯಾಗಭೂಮಿ’ ಸಿನಿಮಾದಲ್ಲಿ ‘ದೇಶ ಸೇವೈ ಸೈಯ್ಯವಾರಿರ್’ ಹಾಡನ್ನು ಪಟ್ಟಮ್ಮಾಳ್‌ ಕೈಲಿ ಹಾಡಿಸಿ ಅವರನ್ನು ಸಿನಿಮಾ ಲೋಕಕ್ಕೆ ಪರಿಚಯಿಸಿದವರು ವಾಗ್ಗೇಯಕಾರ ಪಾಪನಾಶಂ ಶಿವನ್. ಆದರೆ ಆ ದೃಶ್ಯ ಮತ್ತು ಹಾಡನ್ನು ಬ್ರಿಟಿಷರು ನಿಷೇಧಿಸಿದರು. ಆ ಹಾಡು ಮಾತ್ರ ಅಭೂತಪೂರ್ವ ಜನಪ್ರಿಯತೆ ಗಳಿಸಿತು.

ಪ್ರೇಕ್ಷಕರ ರಂಜನೆ, ಜನಪ್ರಿಯತೆಗೆ ಹಾಡುವುದನ್ನು ಅವರು ತೀವ್ರವಾಗಿ ವಿರೋಧಿಸುತ್ತಿದ್ದರು. ಸಂಗೀತಗಾರರು ತಮ್ಮ ಸಂಗೀತದ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಾರದು. ‘ನಮ್ಮ ಕೌಶಲ ಮತ್ತು ಸೃಜನಶೀಲತೆಯಿಂದ ಸಾರ್ವಜನಿಕರನ್ನೇ ಮೇಲ್ಮಟ್ಟಕ್ಕೆ ಕರೆದೊಯ್ಯಬೇಕು’ ಎನ್ನುತ್ತಿದ್ದರು. ಇಂಥವರಷ್ಟೇ ನಮ್ಮ ಸಂಗೀತವನ್ನು ಕಾಪಾಡಬಲ್ಲರು. ಇಂಥವರಷ್ಟೇ ಸಂಗೀತವನ್ನು ಉಳಿಸಬಲ್ಲರು, ಬೆಳೆಸಬಲ್ಲರು.

* ಹೆಂಗಸರಿಗೆ ಲಯದ ಗೊಡವೆಯೇಕೆ? ಕಿವಿಗಿಂಪಾಗಿ ಹಾಡಿದರೆ ಸಾಲದೇ, ಬುದ್ಧಿಗೆ ಕೆಲಸ ಕೊಡುವಂಥ ಕ್ಲಿಷ್ಟತೆ ಅವರಿಗೇಕೆ?’ ಎಂಬ ಸಿದ್ಧ ಚೌಕಟ್ಟುಗಳನ್ನೆಲ್ಲಾ ಪಟ್ಟಮ್ಮಾಳ್ ಸದ್ದಿಲ್ಲದೆಯೇ ಕೆಡಹಿದರು.

* ಬೆಂಗಳೂರಿನ ದಿ ಮಿಥಿಕ್‌ ಸೊಸೈಟಿ ಸಭಾಂಗಣದಲ್ಲಿ ಭಾನುವಾರ (ಮಾರ್ಚ್‌ 17) ಪಟ್ಟಮ್ಮಾಳ್‌ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT