ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟೇಶ್‌ಕುಮಾರ್‌ ‘ಸಾಮಗಾನ ಮಾತಂಗ’

Last Updated 27 ಜನವರಿ 2019, 20:00 IST
ಅಕ್ಷರ ಗಾತ್ರ

* ಹಿಂದೂಸ್ತಾನಿ ಸಂಗೀತದಲ್ಲಿ ನೀವು ಬಹು ಎತ್ತರಕ್ಕೆ ಏರಿದ್ದೀರಿ. ಶಾಸ್ತ್ರೀಯ ಸಂಗೀತ ಬಿಟ್ಟು ಸಂಗೀತ ಇತರ ಯಾವ ಪ್ರಕಾರಗಳನ್ನು ನೀವು ಬಹುವಾಗಿ ಮೆಚ್ಚುತ್ತೀರಿ?

ಗದಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ನಾನು ಸೇರಿದಾಗ 13 ವರ್ಷದವನಾಗಿದ್ದೆ. ಅಲ್ಲಿ 11 ವರ್ಷಗಳ ಕಾಲ ಅಭ್ಯಾಸ ಮಾಡಿದ್ದೆ. ಶಾಸ್ತ್ರೀಯ ಸಂಗೀತದ ಅಲಂಕಾರ, ಸರಳೆ, ಜಂಟಿ ಸರಳೆ, ಸರ್ಗಮ್‌ಗೀತೆ, ವಚನ ದಾಸರ ಪದಗಳನ್ನು ಕಲಿಸುತ್ತಿದ್ದರು. ಶಾಸ್ತ್ರೀಯ ಸಂಗೀತ ಅಲ್ಲದೆ ದಾಸವಾಣಿ, ಸಂತವಾಣಿ, ಮರಾಠಿ ಅಭಂಗ, ವಚನ, ಠುಮ್ರಿ, ತರಾನ ಮುಂತಾದ ಸಂಗೀತ ಪ್ರಕಾರಗಳನ್ನೂ ಬಹಳ ಪ್ರೀತಿಸುತ್ತೇನೆ. ಅಲ್ಲದೆ ಯಾವುದೇ ಕಛೇರಿಯಲ್ಲೂ ರಾಗದ ಜತೆಗೆ ದೇವರನಾಮ, ವಚನಗಳನ್ನೂ ಹಾಡುತ್ತೇನೆ. ಇದು ಕೇಳುಗರಿಗೂ ಇಷ್ಟವಾಗುತ್ತದೆ. ಇದು ಶಾಸ್ತ್ರೀಯ ಸಂಗೀತದ ಏಕತಾನತೆ ಮರೆಸಲು ಸಹಾಯಕವಾಗುತ್ತದೆ. ಹೀಗಾಗಿ ನನ್ನ ಇಡೀ ಜೀವನವೇ ಸಂಗೀತ ಎನ್ನುವಂತಾಗಿದೆ. ಸಂಗೀತ ಬಿಟ್ಟು ನನಗೆ ಬೇರೇನೂ ಗೊತ್ತಿಲ್ಲ.

* ಸಂಗೀತದಿಂದ ಜೀವನ ನಿರ್ವಹಣೆ ಕಷ್ಟ. ಇಲ್ಲಿ ಪ್ರತಿಭೆ, ಸಾಧನೆ ಇದ್ದರೂ ಅದೃಷ್ಟವೂ ಬೇಕು ಎನ್ನುತ್ತಾರೆ. ನಿಮ್ಮ ಅನಿಸಿಕೆ?

ಇದು ಸತ್ಯವಾದ ಮಾತು. ಸಂಗೀತ ಕ್ಷೇತ್ರದಲ್ಲಿ ಎಷ್ಟೇ ಪ್ರತಿಭೆ ಇದ್ದರೂ ನಸೀಬು (ಅದೃಷ್ಟ) ಕೂಡ ಬೇಕು. ಅದು ಇಲ್ಲದಿದ್ದರೆ ಗಾಯಕ ಎತ್ತರಕ್ಕೇರಲು ಸಾಧ್ಯವಿಲ್ಲ. ಅದೃಷ್ಟ ಇದ್ದರೆ ಅವಕಾಶ. ಅವಕಾಶ ಇದ್ದರೆ ಮಾತ್ರ ಹಣ, ಸಂಭಾವನೆ. ಬರೀ ಸಂಗೀತವನ್ನೇ ನೆಚ್ಚಿಕೊಂಡ ಅನೇಕ ಸಂಗೀತಗಾರರು ಇಂದು ಜೀವನ ನಿರ್ವಹಣೆಗೂ ಕಷ್ಟಪಡುವುದನ್ನು ನಾನು ಬಲ್ಲೆ. ನನಗೂ ಸಂಗೀತದಿಂದ ಜೀವನ ನಿರ್ವಹಣೆ ಕಷ್ಟ ಎನ್ನುವುದು ಮೊದಲೇ ಚೆನ್ನಾಗಿ ಅರಿವಿಗೆ ಬಂದಿತ್ತು. ಅಲ್ಲದೆ ಆಗಿನ ಕಾಲದಲ್ಲಿ ಸಂಗೀತಗಾರರನ್ನು ಜನ ನೋಡುವ ದೃಷ್ಟಿಕೋನ ಬೇರೆ ಇತ್ತು. ಸಂಗೀತಗಾರರೆಂದರೆ ಅತ್ಯಂತ ಬಡಪಾಯಿಗಳು ಎಂಬುದು ಜನರ ಭಾವನೆಯಾಗಿತ್ತು. ಹೀಗಾಗಿ ಮಕ್ಕಳಿಗೂ ಸಂಗೀತ ಕಲಿಸಲಿಲ್ಲ. ಮಕ್ಕಳಾದ ಸಿದ್ಧಲಿಂಗೇಶ, ಪಂಚಾಕ್ಷರಿ ಹಾಗೂ ಮಗಳು ನೀರಜ ಮೂವರು ಚೆನ್ನಾಗಿ ಓದಿ ಶಿಕ್ಷಕರಾಗಿದ್ದಾರೆ. ಅವರ ಕುಟುಂಬವನ್ನು ಚೆನ್ನಾಗಿ ನಿರ್ವಹಣೆ ಮಾಡಿಕೊಂಡು ಹೋಗುವಷ್ಟು ಸ್ಥಿತಿವಂತರಾಗಿದ್ದಾರೆ.

* ‘ಪ್ರಹರ ರಾಗ’ಗಳನ್ನು ಕೇಳುವ ಸುಯೋಗ ಈಗೀಗ ಸಹೃದಯರಿಗೆ ಸಿಗುತ್ತಿದೆ. ಆಯಾಯ ಸಮಯಕ್ಕೆ ತಕ್ಕಂತೆ ರಾಗಗಳನ್ನು ಹಾಡುವುದರಲ್ಲಿ ನೀವು ನಿಸ್ಸೀಮರು. ನೀವು ಯಾವ್ಯಾವ ರಾಗಗಳನ್ನು ಬಹುವಾಗಿ ಪ್ರೀತಿಸುತ್ತೀರಿ?

ರಾಗಗಳು ನೂರಾರು ಇದ್ದರೂ ನಾನು ಕೆಲವೇ ರಾಗಗಳನ್ನು ಹೆಚ್ಚು ಪ್ರೀತಿಸುತ್ತೇನೆ. ಅವುಗಳನ್ನೇ ಕಛೇರಿಗಳಲ್ಲೂ ಹಾಡ್ತೇನೆ. ಬೆಳಗ್ಗಿನ ರಾಗಗಳಾದ ಆಹಿರ್‌ ಭೈರವ್‌, ಅಲಿಯಾ ಬಿಲಾವಲ್‌, ಭೈರವ್‌, ಕೋಮಲ ರಿಷಭ ಅಸಾವರಿ, ಮಧ್ಯಾಹ್ನದ ರಾಗಗಳಾದ ಭೀಮಪಲಾಸಿ, ಬೃಂದಾವನಿ ಸಾರಂಗ್‌, ಗೌಡ ಸಾರಂಗ್‌.. ಸಾಯಂಕಾಲದ ಪೂರಿಯ, ಮಾರ್ವ, ಇಳಿಸಂಜೆಯ ರಾಗಗಳಾದ ಕಲ್ಯಾಣ್‌ ಥಾಟ್‌ನ ಯಮನ್‌, ಕೇದಾರ, ರಾತ್ರಿಯ ರಾಗಗಳಾದ ಬಿಹಾಗ್‌, ಮಾರೊಬಿಹಾಗ್‌, ಕಂಸಿ ಕಾನಡ.. ಇವುಗಳನ್ನು ಹಾಡ್ತೀನಿ. ಜತೆಗೆ ದೇವರನಾಮ, ವಚನ, ಅಭಂಗ್‌ಗಳನ್ನೂ ಹಾಡ್ತೀನಿ.

* ಅನೇಕ ವರ್ಷಗಳಿಂದ ಬೆಂಗಳೂರಿಗೆ ಬಂದು ಹಾಡುತ್ತಿದ್ದೀರಿ. ಸಂಗೀತ ವಾತಾವರಣದಲ್ಲಿ ಬದಲಾವಣೆ ಗಮನಿಸಿದ್ದೀರಾ?

ಸಾಕಷ್ಟು ಬದಲಾವಣೆ ಆಗಿದೆ. 20 ವರ್ಷಗಳ ಹಿಂದಿನ ಬೆಂಗಳೂರಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸ ಆಗಿದೆ. ಆಗ ಹಿಂದೂಸ್ತಾನಿ ಸಂಗೀತ ಕೇಳುವವರ ಸಂಖ್ಯೆ ಬಹಳ ಕಡಿಮೆ ಇತ್ತು, ಸಂಘಟಕರೂ ಬಹಳ ಕಡಿಮೆ ಇದ್ದರು. ಆದರೆ ಈಗ ಬಹಳಷ್ಟು ಬೆಳೆದಿದೆ. ಸಂಗೀತ, ಕಲಿಯುವವರ, ಕೇಳುವವರ ಸಂಖ್ಯೆ ಹೆಚ್ಚಿದೆ. ಇದನ್ನು ನೋಡಿ ಬಹಳ ಆನಂದ, ಅಭಿಮಾನ ಆಗ್ತಿದೆ. ಸಂಗೀತಗಾರರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ.

* ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸುವ ಸಂತಸದ ಕ್ಷಣದಲ್ಲಿ ಏನು ಹೇಳಲು ಇಷ್ಟಪಡುತ್ತೀರಿ?

ಮೊದಲಿಗೆ ಸಾಮಗಾನ ಸಂಗೀತ ಸಭಾಕ್ಕೆ ಧನ್ಯವಾದಗಳು. ನನ್ನಂತಹ ಅನೇಕ ಕಲಾವಿದರಿದ್ದಾರೆ. ಆದರೂ ಅವರು ನನ್ನನ್ನು ಆಯ್ಕೆ ಮಾಡಿರುವುದು ಗುರುಗಳ ಕೃಪೆ ಮತ್ತು ಆಶೀರ್ವಾದ ಎಂದೇ ಭಾವಿಸುತ್ತೇನೆ.

**

ಭಾರತೀಯ ಸಾಮಗಾನ ಸಭಾ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಶತಮಾನೋತ್ಸವ ಸ್ಮರಣಾಂಜಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದೆ. ಜ.30ರಂದು ಸಂಜೆ 5 ಗಂಟೆಗೆ ನಡೆವ ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಕೆ.ಜೆ. ರಾವ್‌ ಅತಿಥಿಗಳಾಗಿ ಭಾಗವಹಿಸುವರು. ಸಂಜೆ 6.30ಕ್ಕೆ ರಾಹುಲ್‌ ವೆಲ್ಲಾಲ್‌ ಅವರಿಂದ ಕರ್ನಾಟಕ ಶಾಸ್ತ್ರೀಯ ಮತ್ತು ಪಂ. ವೆಂಕಟೇಶ್‌ ಕುಮಾರ್‌ ಅವರಿಂದ ಹಿಂದೂಸ್ತಾನಿ ಗಾಯನ.

ಜ. 31ರಂದು ಸಂಜೆ 5 ಗಂಟೆಗೆ ಗಾಯತ್ರಿ ವೆಂಕಟರಾಘವನ್‌ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, 6.30ಕ್ಕೆ ಕುಮರೇಶ್‌–ಗಣೇಶ್‌ ಅವರಿಂದ ವಯೊಲಿನ್‌ ಜುಗಲ್‌ಬಂದಿ, ಫೆ.1ರಂದು ಸಂಜೆ 5ಕ್ಕೆ ಎಸ್‌. ಮಾಲತಿ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, 6.30ಕ್ಕೆ ರಾಹುಲ್‌ ದೇಶಪಾಂಡೆ ಹಾಗೂ ಅಭಿಷೇಕ್‌ ರಘುರಾಮ್‌ ಅವರಿಂದ ಬಾನ್ಸುರಿ–ಕೊಳಲು ಜುಗಲ್‌ಬಂದಿ, ಫೆ.2ರಂದು ಬೆಳಿಗ್ಗೆ 11 ಗಂಟೆಗೆ ಹೇರಂಬ–ಹೇಮಂತ ಅವರಿಂದ ಕೊಳಲು ವಾದನ, 11.30ಕ್ಕೆ ವಿನಯ ಶರ್ಮ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನವಿದೆ. ಮಧ್ಯಾಹ್ನ 12 ಗಂಟೆಗೆ ಸಹನಾ ಎಸ್‌.ವಿ. ಅವರಿಂದ ವೀಣಾ ವಾದನ, 12.30 ಕ್ಕೆ ಬೆಂಗಳೂರು ಬ್ರದರ್ಸ್‌ ರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, 1 ಗಂಟೆಗೆ ಹಂಸಿಕಾ ವೆಂಕಟರಾಘವನ್‌ ನೇತೃತ್ವದಲ್ಲಿ ಗೋಷ್ಠಿ ಗಾಯನ. ಸಂಜೆ 5 ಗಂಟೆಗೆ ವಿದ್ವಾನ್‌ ಆರ್‌.ಕೆ. ಪ್ರಕಾಶ್‌ ಅವರಿಂದ ವೀಣಾವಾದನ, ಸಂಜೆ 6.30ಕ್ಕೆ ಮಹೇಶ್‌ ಕಾಳೆ ಅವರಿಂದ ಹಿಂದೂಸ್ತಾನಿ ಗಾಯನವಿದೆ.

ಫೆ.3ರಂದು ಬೆಳಿಗ್ಗೆ 10 ಗಂಟೆಗೆ ಜಯತೀರ್ಥ ಮೇವುಂಡಿ ಅವರಿಂದ ಹಿಂದೂಸ್ತಾನಿ ಗಾಯನ, 1 ಗಂಟೆಗೆ ರಾಜೇಶ್‌ ವೈದ್ಯ– ಯು ರಾಜೇಶ್‌ ಅವರಿಂದ ವೀಣೆ–ಮ್ಯಾಂಡೊಲಿನ್‌ ಜುಗಲ್‌ಬಂದಿ, ಸಂಜೆ 6.30ಕ್ಕೆ ರಂಜನಿ–ಗಾಯತ್ರಿ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನವಿದೆ. ಸ್ಥಳ; ಚೌಡಯ್ಯ ಸ್ಮಾರಕ ಭವನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT