ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಸರ ಪದಗಳು ಸನ್ಮಾರ್ಗಕ್ಕೆ ಸ್ಫೂರ್ತಿ’

Last Updated 28 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

* ಹಲವು ಭಾಷೆಗಳಲ್ಲಿ ನೀವು ಇದುವರೆಗೆ ಹಾಡಿದ್ದೀರಿ. ಯಾವ ಭಾಷೆಯಲ್ಲಿ ಹಾಡುವುದು ನಿಮಗೆ ಹೆಚ್ಚು ಖುಷಿ ಕೊಡುತ್ತದೆ?
ವಿವಿಧ ಭಾಷೆಗಳಲ್ಲಿ 12 ಸಾವಿರ ಹಾಡುಗಳನ್ನು ಹಾಡಿದ್ದೇನೆ. 8 ಸಾವಿರ ಕನ್ನಡ ಹಾಡುಗಳನ್ನು ಹಾಡಿದ್ದೇನೆ. ಭಕ್ತಿ ಸಂಗೀತ, ಭಾವಗೀತೆ, ಜಾನಪದ ಸಂಗೀತ, ರಂಗಗೀತೆ, ದೇವಸ್ಥಾನದ ಸುಪ್ರಭಾತ. ತುಳುವಿನಲ್ಲಿ 3 ಸಾವಿರ, ಸಂಸ್ಕೃತ, ಕೊಂಕಣಿ, ತೆಲುಗು, ತಮಿಳು, ಬಂಗಾಳಿ, ಮರಾಠಿ ಭಾಷೆಗಳಲ್ಲೂ ಹಾಡಿದ್ದೇನೆ.

*ಬೇರೆ ಯಾವ ಸಂಗೀತ ‍ಪ್ರಕಾರದತ್ತ ನಿಮಗೆ ಒಲವು?
ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕನಾಗುವ ಹಂಬಲ ಹೊಂದಿದ್ದೆ. 12ನೇ ವಯಸ್ಸಿಗೆ ದಾಸರಪದ ಹಾಡಲಾರಂಭಿಸಿದೆ. ದಾಸ ಸಾಹಿತ್ಯ, ವಚನ ಸಾಹಿತ್ಯ ಹಾಡುತ್ತಾ ಚಿತ್ರಗೀತೆಗಳಲ್ಲಿ ಆಸಕ್ತಿ ಕಡಿಮೆ ಆಗಿ ಭಕ್ತಿಗೀತೆ ಹಾಡಲಾರಂಭಿಸಿದ್ದೆ. ಯಾವ ಸಂಗೀತ ಚೆನ್ನಾಗಿರುತ್ತೋ ಅವೆಲ್ಲವೂ ನನಗೆ ಇಷ್ಟವೇ. ದಾಸ ಸಾಹಿತ್ಯ, ವಚನ ಸಾಹಿತ್ಯಗಳನ್ನು ಬಹಳ ಪ್ರೀತಿಸುತ್ತೇನೆ.

*ವಿದೇಶ ಪ್ರವಾಸ ಮಾಡಿದ್ದೀರಿ. ಅಲ್ಲಿನ ಸಂಗೀತ ನಿಮ್ಮ ಮೇಲೆ ಪ್ರಭಾವ ಬೀರಿದೆಯಾ?
ಅಮೆರಿಕಕ್ಕೆ ಒಂಬತ್ತು ಸಲ, ನ್ಯೂಜಿಲೆಂಡ್‌, ಆಸ್ಟ್ರೇಲಿಯ, ದುಬೈ, ಮಸ್ಕತ್‌ ದೇಶಗಳಿಗೂ ಹೋಗಿದ್ದೇನೆ. ವಿದೇಶಗಳಲ್ಲಿ ಸಂಗೀತ ಕಲಿಕೆಯ ಕಾರ್ಯಾಗಾರಗಳನ್ನೂ ಮಾಡಿದ್ದೇನೆ. ಚೆನ್ನಾಗಿ ಕಲಿತುಕೊಳ್ಳುತ್ತಾರೆ. ಅಲ್ಲಿಯ ಶಿಸ್ತಿಗೆ ಪ್ರಭಾವಿತನಾದೆ. ಸಂಗೀತ ಕೇಳುವಾಗ ಅವರ ಆಸಕ್ತಿಯ ಜತೆಗೆ ಅವರ ಕ್ರಮ.. ಪ್ರಶ್ನೆ ಕೇಳಿ ಉತ್ತರ ಸಿಕ್ಕಿದಾಗ ಆನಂದಪಟ್ಟು, ಧನ್ಯವಾದ ಹೇಳಿ ಹೋಗುವ ಕ್ರಮ ಇಷ್ಟವಾಯಿತು. ಶಿಕಾಗೋದಲ್ಲಿ 1998ರಲ್ಲಿ ಕಾರ್ಯಕ್ರಮ ಕೊಟ್ಟಾಗ ಅಮೆರಿಕದ ಜನ ಬಂದು ಅಭಿನಂದಿಸಿದರು. ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡಿದಾಗ ಅರ್ಥ ಕೇಳಿ ತಿಳಿದುಕೊಂಡರು. ಖುಷಿಪಟ್ಟರು. ಅಲ್ಲಿ ಹೋದಾಗ ಕಲಿತುಕೊಳ್ಳುವ ವಿಚಾರ ತುಂಬ ಇದೆ.

*ಸಂಗೀತದ ವಿವಿಧ ರಾಗಗಳಲ್ಲಿ ಏನಾದರೂ ಹೊಸ ಪ್ರಯೋಗ ಮಾಡಿದ್ದೀರಾ?
ಸಂಗೀತದಲ್ಲಿ ಎಲ್ಲ ರಾಗಗಳು ತುಂಬ ಇಷ್ಟ. ಒಂದೊಂದು ರಾಗದಲ್ಲೂ ಒಂದೊಂದು ಸೌಂದರ್ಯ ಇದೆ. ರಾಗವನ್ನು ಕ್ರಮಬದ್ಧವಾಗಿ ಹಾಡಿದಾಗ ಕೇಳುಗನ ಮನಸ್ಸು ಚೇತೋಹಾರಿಯಾಗಿರುತ್ತದೆ. ಅದು ಕೊಡುವ ಅನುಭವವೇ ಬೇರೆ. ರಾಗ ಸಂಚಾರ, ಸ್ವರ ಸಂಚಾರದ ಕ್ರಮವನ್ನು ಕ್ರಮಬದ್ಧವಾಗಿ ಹಾಡಿ ಮತ್ತು ಅದರಲ್ಲಿನ ಸಾಹಿತ್ಯವನ್ನು ಪರಿಣಾಮಕಾರಿಯಾಗಿ ಪ್ರಯೋಗ ಮಾಡಿದ್ದೇನೆ. ಕೆಲವು ರಾಗಗಳಿಗೆ ಅದರಲ್ಲಿ ಇರದೇ ಇರುವ ಅನ್ಯ ಸ್ವರಗಳನ್ನು ಬಳಸಿ ರಾಗದ ಸೊಬಗನ್ನು ಹೆಚ್ಚಿಸುವ ಕೆಲಸವನ್ನು ಮಾಡಿದ್ದೇನೆ.

*ಹರಿದಾಸ ಸಾಹಿತ್ಯ–ಸಂಗೀತವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ನಿಮ್ಮ ಕೊಡುಗೆ ಏನು?
ದಾಸ ಸಾಹಿತ್ಯದ ಅರ್ಥಕ್ಕೆ ಸರಿಯಾಗಿ ಸ್ವರವನ್ನು ಹಾಕುವಂಥದ್ದು. ಅರ್ಥಕ್ಕೆ ಚ್ಯುತಿ ಬರದಂತೆ ಪರಿಣಾಮಕಾರಿಯಾಗಿ ಹಾಡುವಂಥ ಪ್ರಯತ್ನ ಮಾಡಿದ್ದೇನೆ. ಕಾರ್ಯಾಗಾರ ಮಾಡಿದ್ದೇನೆ. ವಿದೇಶಗಳಲ್ಲೂ ಅನೇಕ ಶಿಬಿರಗಳನ್ನು ಮಾಡಿದ್ದೇನೆ. ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಅನೇಕರು ದಾಸಸಾಹಿತ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸಂದೇಹ ಪರಿಹಾರ ಮಾಡಿಕೊಳ್ಳುತ್ತಾರೆ. ರಾಗದ ಅರ್ಥವನ್ನು ಕೂಡ ಮಕ್ಕಳಿಗೆ ಹೇಳಿಕೊಡುತ್ತೇನೆ. ಒಂದು ರೀತಿ ಕೊಡು–ಕೊಳ್ಳುವಿಕೆ ಬಹಳಷ್ಟು ವರ್ಷಗಳಿಂದ ನಡೆಯುತ್ತಿದೆ.

*‘ನಿರ್ಮಾಣ್‌ ಪುರಂದರ ಸಂಗೀತರತ್ನ’ ಪ್ರಶಸ್ತಿ ಪಡೆಯುತ್ತಿದ್ದೀರಿ. ನಿಮಗೆ ಏನನಿಸುತ್ತದೆ?
ಒಂದು ಪ್ರಶಸ್ತಿ ಸರ್ಕಾರದ್ದೇ ಇರಲಿ, ಖಾಸಗಿ ಸಂಸ್ಥೆಗಳು ಕೊಡುವುದೇ ಇರಲಿ, ಅದರದೇ ಆದ ಮಹತ್ವ ಇರುತ್ತದೆ. ನಿರ್ಮಾಣ್‌ ಪುರಂದರ ರತ್ನ ಆಯ್ಕೆ ಸಮಿತಿಯವರು ಮಾತನಾಡಿ, ಸಂಸ್ಥೆಯ ಮುಖ್ಯಸ್ಥರಾದವರು ವಿ.ಲಕ್ಷ್ಮೀನಾರಾಯಣ ಅವರು ಫೋನ್‌ ಮಾಡಿ ಅಭಿನಂದಿಸಿದ್ದು, ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ತಿಳಿಸಿದ್ದು ಖುಷಿಯಾಯಿತು. ಆಯ್ಕೆ ಮಾಡಿದ ರೀತಿ ಕೂಡ ಖುಷಿ ಕೊಟ್ಟಿತು.

* ಇಂದು ಪುರಂದರ ದಾಸರ ಆರಾಧನೋತ್ಸವ, ಪ್ರಶಸ್ತಿ ಪ್ರದಾನ
ಬನ್ನೇರುಘಟ್ಟ ಸಮೀಪದ ವಿಎಲ್‌ಎನ್‌–ನಿರ್ಮಾಣ್‌ ಪುರಂದರ ಪ್ರತಿಷ್ಠಾನ ಮಾರ್ಚ್ 1ರಿಂದ 3 ರವರೆಗೆ ಪುರಂದರ ದಾಸರ ಆರಾಧನಾ ಮಹೋತ್ಸವ ಹಾಗೂ 2019ರ ನಿರ್ಮಾಣ್‌ ಪುರಂದರ ಸಂಗೀತರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿದೆ. ಮಾರ್ಚ್‌ 1ರಂದು ವಿದ್ಯಾಭೂಷಣ ಹಾಗೂ ಸಂಗಡಿಗರಿಂದ ‘ದಾಸ ಗಾನಲಹರಿ’ ಕಾರ್ಯಕ್ರಮವಿದೆ.

2ರಂದು ರಾಯಚೂರು ಶೇಷಗಿರಿ ದಾಸ್‌ ಅವರಿಂದ ‘ದಾಸವಾಣಿ’ ಹಾಗೂ ಮಾರ್ಚ್‌ 3ರಂದು ಪುತ್ತೂರು ನರಸಿಂಹ ನಾಯಕ್‌ ಅವರಿಂದ ‘ದಾಸ ಗಾನಮಂಜರಿ’ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ ಪುತ್ತೂರು ನರಸಿಂಹ ನಾಯಕ್ ಅವರಿಗೆ ‘ನಿರ್ಮಾಣ್‌–ಪುರಂದರ ಸಂಗೀತ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಉಡು‍ಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶ್‌ಮೂರ್ತಿ ಅಧ್ಯಕ್ಷತೆ ವಹಿಸುವರು. ಹರಿದಾಸ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ವಿದ್ಯಾಭೂಷಣ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಪುರಂದರ ದಾಸರ ಆರಾಧನೋತ್ಸವದ ನೇತೃತ್ವವನ್ನು ನಿರ್ಮಾಣ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಲಕ್ಷ್ಮೀನಾರಾಯಣ ಅವರು ವಹಿಸುವರು. ಸ್ಥಳ– ಪುರಂದರ ಮಂಟಪ, ನಿಸರ್ಗ ಬಡಾವಣೆ ಸಂಜೆ 6 ಕ್ಕೆ.

ಪರಿಚಯ
ಪುತ್ತೂರು ನರಸಿಂಹ ನಾಯಕ್‌ ತಮ್ಮ 12ನೇ ವಯಸ್ಸಿಗೆ ಹಾಡಲಾರಂಭಿಸಿದರು. ಮೂಲತಃ ಪುತ್ತೂರಿನವರಾದ ಇವರು ಸದ್ಯ ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿ ನೆಲೆಸಿದ್ದಾರೆ.

1992ರಲ್ಲಿ ಪುತ್ತೂರು ನರಸಿಂಹ ನಾಯಕ್‌ ಕರ್ನಾಟಕ ಸರ್ಕಾರ ನೀಡುವ ‘ಬೆಸ್ಟ್ ಪ್ಲೆ ಬ್ಯಾಕ್‌ ಸಿಂಗರ್‌’ ಪ್ರಶಸ್ತಿ ಪಡೆದವರು. 2005ರಲ್ಲಿ ರಾಘವೇಂದ್ರ ಪ್ರಶಸ್ತಿ ಬಂದಿದೆ. ಈಗ ಈ ಗಾಯಕ 14 ಭಾಷೆಗಳಲ್ಲಿ ಹಾಡಬಲ್ಲವರಾಗಿದ್ದಾರೆ. ವಿಶ್ವದಾದ್ಯಂತ ಸಾವಿರಾರು ಸಂಗೀತ ಕಛೇರಿಗಳನ್ನು ನೀಡಿದ ಇವರು ಇದುವರೆಗೆ 10 ಸಾವಿರ ಭಕ್ತಿಗೀತೆ, ಜನಪದ ಗೀತೆಗಳನ್ನು ಹಾಡಿದ್ದಾರೆ.

ಅಮೆರಿಕ ಹಾಗೂ ಬಹರೇನ್‌ಗಳಲ್ಲಿ ಅನೇಕ ಕಛೇರಿಗಳು ಮೆಚ್ಚುಗೆ ಪಡೆದಿವೆ. ವಿದೇಶಗಳಲ್ಲಿ ನಡೆದ ಕನ್ನಡ ಸಮ್ಮೇಳನಗಳನ್ನು ಅನೇಕ ಬಾರಿ ಪ್ರತಿನಿಧಿಸಿದ್ದಾರೆ.

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಹಂಪಿ ಉತ್ಸವ, ಮೈಸೂರು ದಸರಾ ಸೇರಿದಂತೆ ಅನೇಕ ಪ್ರತಿಷ್ಠಿತ ಉತ್ಸವಗಳಲ್ಲಿ ಹಾಡಿದ್ದಾರೆ. ಇವರು ಆಕಾಶವಾಣಿಯ ‘ಎ’ಗ್ರೇಡ್‌ ಕಲಾವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT