ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಂಗೀತ ದಿಗ್ಗಜ ಪಂ. ಭೀಮಸೇನರನ್ನು ಸ್ಮರಿಸುತ್ತಾ...

Last Updated 24 ಜನವರಿ 2021, 10:48 IST
ಅಕ್ಷರ ಗಾತ್ರ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಧ್ರುವತಾರೆಯಂತೆ ಮೆರೆದು ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಅಪ್ರತಿಮ ಗಾಯಕ, ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಹತ್ತನೇ ವರ್ಷದ ಪುಣ್ಯತಿಥಿ ಇಂದು. ಅವರ ಗಾಯನ ಕ್ರಮವನ್ನು ಸ್ಮರಿಸುತ್ತಾ ಅಕ್ಷರ ಶ್ರದ್ದಾಂಜಲಿ ಸಲ್ಲಿಸಲು ಇದು ಸಂದರ್ಭವೂ ಹೌದು.

ಗಾಯನದ ಮಟ್ಟಿಗೆ ಪಂ. ಜೋಶಿ ಅವರದು ಕಿರಾಣಾ ‘ಗಾಯಕಿ’ಯಾದರೂ ಅವರು ಎಲ್ಲ ಘರಾಣೆಗಳ ಶೈಲಿಗಳ ರಸಹೀರಿ ಅವರದೇ ಒಂದು ಅದ್ಭುತ ‘ಭೀಮಸೇನ ಶೈಲಿ’ ರೂಢಿಸಿಕೊಂಡು ಹಾಡುತ್ತಿದ್ದರು. ಇದರಿಂದಾಗಿ ಭೀಮಸೇನ ಅವರ ಕಛೇರಿ ಉಳಿದೆಲ್ಲ ಕಲಾವಿದರ ಕಛೇರಿಗಳಿಗಿಂತ ಭಿನ್ನವಾಗಿ ಗಾನರಸಿಕರ ಮನಸೆಳೆಯುತ್ತಿತ್ತು.

ಶಾಸ್ತ್ರೀಯ ಸಂಗೀತದ ಖಯಾಲ್‌ ಗಾಯನದಷ್ಟೇ ಲಘುಸಂಗೀತ, ದಾಸರ ಪದ, ಮರಾಠಿ ಅಭಂಗ, ಹಿಂದಿ ಭಜನ್‌ಗಳಲ್ಲಿ ಪಂ. ಜೋಶಿ ಅವರು ಹೆಸರುವಾಸಿಯಾಗಿದ್ದರು. ಅವರು ಹಾಡುತ್ತಿದ್ದ ‘ಭಾಗ್ಯದ ಲಕ್ಷ್ಮೀ ಬಾರಮ್ಮ, ಕೈಲಾಸವಾಸ ಗೌರೀಶ ಈಶ, ಯಾಕೆ ಮೂಕನಾದೆಯೋ ಗುರುವೇ, ತುಂಗಾ ತೀರದಿ ನಿಂತಸು ಯತಿವರ..’ ಮುಂತಾದ ಹಾಡುಗಳ ಜೊತೆಗೆ ‘ಪೂರಿಯ ಕಲ್ಯಾಣ್‌’ ರಾಗದ ‘ನಂಬಿದೆ ನಿನ್ನ ನಾದದೇವತೆಯೇ’ (ಚಿತ್ರ: ಸಂಧ್ಯಾರಾಗ) ಗೀತೆ ಇಂದಿಗೂ ಕೇಳುಗರ ಅಚ್ಚುಮೆಚ್ಚಿನ ಗೀತೆಯಾಗಿ ಮನರಂಜಿಸುತ್ತಿದೆ. ಜನಪ್ರಿಯ ರಾಗಗಳಾದ ಶುದ್ಧ ಕಲ್ಯಾಣ್‌, ಮಿಯಾಕಿ ತೋಡಿ, ಪೂರಿಯ ಧನಾಶ್ರೀ, ಮುಲ್ತಾನಿ, ಭೀಮಪಲಾಸಿ, ದರ್ಬಾರಿ ಮುಂತಾದ ಸುಮಧುರ ರಾಗಗಳನ್ನು ಪಂ. ಜೋಶಿ ಅವರ ದನಿಯಲ್ಲೇ ಕೇಳಬೇಕು ಎನ್ನುವಷ್ಟು ಜನಪ್ರಿಯಗೊಳಿಸಿದ್ದರು.

ಗಾಯನ ವೈಶಿಷ್ಟ್ಯ

ಸುಮಾರು 50–60ರ ದಶಕಗಳಲ್ಲಿ ಸಂಗೀತದ ಅತ್ಯಂತ ಎತ್ತರದ ಶ್ರುತಿ (ಎಫ್‌ ಮತ್ತು ಎಫ್‌ ಶಾರ್ಪ್‌)ಯಲ್ಲಿ ಹಾಡುತ್ತಿದ್ದ ಈ ಅಪ್ರತಿಮ ಗಾಯಕನ ವೇಗದ ‘ಆಕಾರ್ ತಾನ್‌’ಗಳು ಜೊತೆಗೆ ಬೋಲ್‌ ತಾನ್‌ಗಳು ನುರಿತ ಸಂಗೀತಗಾರರನ್ನೇ ದಿಗ್ಭ್ರಮೆ ಹುಟ್ಟಿಸುವಂತಿದ್ದವು. ಸಂಗೀತದಲ್ಲಿ ಬರುವ ಸಾಹಿತ್ಯ ಮತ್ತು ತಾನ್‌ ಎರಡನ್ನೂ ಕಲಾತ್ಮಕವಾಗಿ ಮಿಕ್ಸ್‌ ಮಾಡಿ ವೇದಿಕೆಯಲ್ಲಿ ಪರಿಪೂರ್ಣ ಶೈಲಿಯಲ್ಲಿ ಪ್ರಸ್ತುತಪಡಿಸುವುದು ಯಾವುದೇ ಗಾಯನಕನಿಗೆ ಸುಲಭದ ಕೆಲಸವಲ್ಲ. ತಮ್ಮ ಅಮೋಘ ಶಾರೀರದಿಂದ ಈ ಬೋಲ್‌ತಾನ್‌ಗಳನ್ನು ಹಾಡುತ್ತಿದ್ದುದು ಪಂ. ಜೋಶಿ ಅವರ ಗಾಯನ ವೈಶಿಷ್ಟ್ಯವಾಗಿತ್ತು.

ಲಯಕಾರಿ ಅಂಶ

ಶಾಸ್ತ್ರೀಯ ಸಂಗೀತದ ಲಯಕಾರಿ ಅಂಶಗಳನ್ನುಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಿದ್ಧಿಸಿಕೊಂಡದ್ದು ಪಂಡಿತ್‌ಜಿ ಅವರ ಮತ್ತೊಂದು ಅದ್ಭುತ ಸಾಧನೆಯಾಗಿತ್ತು. ಲಯದ ಮೇಲಿನ ಪ್ರಭುತ್ವ ಹಾಗೂ ಗಾಯನದಲ್ಲಿ ವಿಲಂಬಿತ್‌ ಗತಿಯಲ್ಲಿ ಹಾಡುವಾಗ ಪ್ರಬುದ್ಧ ತಬಲಾ ವಾದಕರನ್ನೇ ತಬ್ಬಿಬ್ಬುಗೊಳಿಸುತ್ತಿದ್ದ ಪರಿ ಅನನ್ಯವಾಗಿತ್ತು.

ಇಂಥ ಅದ್ಭುತ ಗಾಯಕರು ಜನವರಿ 24, 2011ರಂದು ನಾದಲೋಕವನ್ನು ಸ್ತಬ್ಧಗೊಳಿಸಿದ್ದರು. ಇಂಥ ದಿಗ್ಗಜರ ಸ್ಮರಣೆ ಮಾಡುವುದೇ ಅವರಿಗೆ ನಾವೆಲ್ಲ ನೀಡುವ ನಿಜವಾದ ಶ್ರದ್ಧಾಂಜಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT