ಭಾನುವಾರ, ಜುಲೈ 25, 2021
25 °C

ಗಾನ ಸುಧೆ ಹರಿಸುವ ಕಲಾವಿದ ಕುಟುಂಬ

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

Ravi Bhat Kavya Bhat Navya Bhat Uma Bhat

ಸಂಗೀತವೆಂಬುದೇ ಉಸಿರಾದಾಗ ಅಲ್ಲೊಂದು ಸುಮವೇ ಅರಳಿ, ಲೋಕಕ್ಕೆ ಅದರ ಘಮ ಪಸರಿಸುತ್ತದೆ. ಹಲವು ದಶಕಗಳಿಂದ ಸಂಗೀತವನ್ನೇ ಬದುಕಾಗಿಸಿಕೊಂಡ ದಂಪತಿ ಡ್ಯುಯಟ್ ಹಾಡಿಗೆ ಇನ್ನೂ ಎರಡು ಸ್ವರಗಳು ಸೇರಿಕೊಂಡು, ಇಡೀ ಕುಟುಂಬವೇ ಸಂಗೀತದ ಗಾನ ಸುಧೆ ಹರಿಸುತ್ತಿದೆ. ಈ ರೀತಿಯಾಗಿ ದೇಶ-ವಿದೇಶಗಳ ಸಂಗೀತಪ್ರಿಯ ಸುಮನಸ್ಕರನ್ನು ರಂಜಿಸುತ್ತಿದೆ ಹರಿಹರದ ರವಿ ಭಟ್, ಉಮಾ ಭಟ್ ದಂಪತಿ ಹಾಗೂ ಅವರ ಪುತ್ರಿಯರಾದ ಕಾವ್ಯಾ, ನವ್ಯಾ ಅವರನ್ನೊಳಗೊಂಡ ಸಂಗೀತ ಕುಟುಂಬ.

ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾದ ರವಿ ಭಟ್, ಹೆತ್ತವರ ಉದ್ಯೋಗದ ಹಿನ್ನೆಲೆಯಲ್ಲಿ ಹರಿಹರದ ಸಂಗೀತಮಯ ವಾತಾವರಣದಲ್ಲಿ ಬೆಳೆದವರು. ಬಾಲ್ಯದಲ್ಲಿ ಈ ಬಾಲಕ ಅಳುತ್ತಿದ್ದರೆ, 'ಏ ಅಳಲಿ ಬಿಡು, ಮುಂದೆ ದೊಡ್ಡ ಸಂಗೀತಗಾರನಾಗುತ್ತಾನೆ' ಅಂತ ಕೆಲವರು ತಮಾಷೆಗೆ ಅಂದಿದ್ದರಂತೆ. ಆದರೆ ಅದುವೇ ನಿಜವಾಗಲು ಅಲ್ಲೊಂದು ವೇದಿಕೆ ಸಿದ್ಧವಾಗಿತ್ತು. ಆ ಸಮಯದಲ್ಲಿ ರೇಡಿಯೋ ಕೇಳುತ್ತಾ, ಅದರಲ್ಲಿ ಬರುತ್ತಿದ್ದ ಹಾಡುಗಳನ್ನು ಗುನುಗುನಿಸುತ್ತಿದ್ದ ರವಿ ಅವರ ಸಂಗೀತ ವಾಂಛೆಗೆ ಬೆನ್ನೆಲುಬಾದರು ತಂದೆ. ತಮ್ಮ ಹೋಟೆಲ್‌ಗೆ ಬರುತ್ತಿದ್ದ ತಿರುಮಲಾಚಾರ್ ಎಂಬವರಲ್ಲಿ ಮಾತನಾಡಿ ಮಗ ರವಿಗೆ ಶಾಸ್ತ್ರೀಯ ಸಂಗೀತಾಭ್ಯಾಸದ ಹಾದಿ ತೋರಿದರು. ಕೆಲ ಕಾಲದ ಬಳಿಕ ತಂದೆಗಾದ ಅಪಘಾತದಿಂದಾಗಿ ಅನಿವಾರ್ಯವಾಗಿ ಡಿ.ಫಾರ್ಮ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಕೆಲವು ಕಾಲ ಹೋಟೆಲ್ ಚುಕ್ಕಾಣಿ ಹಿಡಿಯಬೇಕಾಯಿತು. ಆದರೆ, ಕಲಿಕೆ ಮುಂದುವರಿಸುವ ಆಸಕ್ತಿ ಇಲ್ಲದ ಅವರು, ಸಂಗೀತವೇ ತಮ್ಮ ಗಮ್ಯ ಎಂಬುದನ್ನು ಕಂಡುಕೊಂಡಿದ್ದರು. ತತ್ಪರಿಣಾಮವಾಗಿ ಕೊಳಲು ಕಲಿತರು, ಆರ್ಕೆಸ್ಟ್ರಾ ನೋಡುತ್ತಾ ಕಾಂಗೋ, ತಬಲಾ ಕರಗತ ಮಾಡಿಕೊಂಡರು, ಬುಲ್ ಬುಲ್ ಸಿತಾರ್ ಕೂಡ ಆಕರ್ಷಿಸಿದಾಗ, ಎಡಗೈಯಲ್ಲಿ ನುಡಿಸುವ ಅಭ್ಯಾಸವಾಗಿ, ಆನಂತರದಲ್ಲಿ ಕೀಬೋರ್ಡ್ ಕೂಡ ಎಡಗೈಯಲ್ಲಿಯೇ ನುಡಿಸಲು ಆರಂಭಿಸಿದರು. ಹೀಗೆ ಗಾಯನದೊಂದಿಗೆ ವಾದನವೂ ಅವರಿಗೆ ಒಲಿಯಿತು. ಎಸ್ಪಿ ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್ ಗಾಯನವನ್ನು ಹೆಚ್ಚು ಇಷ್ಟಪಡುವ ರವಿ, ಅವರಿಬ್ಬರ ಧ್ವನಿಯ ಅನುಕರಣೆಯನ್ನೂ ಮಾಡಬಲ್ಲರು.

ತಂದೆಯ ಕಾಲಾನಂತರ ಹೋಟೆಲನ್ನೇ ಪ್ರಧಾನ ಉದ್ಯೋಗವಾಗಿಸಿ, ಸಂಗೀತವನ್ನೇ ಉಸಿರಾಗಿಸಿಕೊಂಡರು ರವಿ. ಹರಿಹರದಲ್ಲೇ ಇದ್ದ ಉಮಾ ಭಟ್ ಪರಿಚಯ, ಪ್ರೇಮಕ್ಕೆ ತಿರುಗಿತು. ಅವರಿಬ್ಬರ ಶ್ರುತಿ ಸೇರಿತು. ಪ್ರೇಮಾ ಅವರೂ ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಮಾತ್ರವಲ್ಲದೆ ಗಮಕದಲ್ಲೂ ಅತ್ಯುಚ್ಚ ಪದವಿಯಾದ ಕಾಜಾಣ, ಪಾರೀಣ ಪದವಿಗಳನ್ನು ಪಡೆದುಕೊಂಡವರು. ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಮನೆಯವರಿಗೆಲ್ಲ ಭಜನೆ, ಸಂಗೀತ - ಹೀಗೆ ಮನವರಳಿಸುವ ವಿದ್ಯೆಯನ್ನು ಧಾರೆಯೆರೆಯುತ್ತಿದ್ದರು.

ರವಿ ಭಟ್ ಅವರೂ ಹೋಟೆಲ್ ಕೆಲಸದ ನಡುವೆ ಸಮಯಾವಕಾಶ ಸಿಕ್ಕಾಗಲೆಲ್ಲಾ ಹಾಡಿದರು, ಸಂಗೀತ ವಾದ್ಯಗಳನ್ನು ನುಡಿಸಿದರು. ಮಧ್ಯೆ 2012ರಲ್ಲಿ ಅಪಘಾತವಾದಾಗ ಅವರಿಗೊಂದು ಆಘಾತ ಕಾದಿತ್ತು. ಗಂಟಲು ಆಪರೇಶನ್ ಬಳಿಕ ಹಿಂದಿನ ಮಾದರಿಯಲ್ಲೇ ಹಾಡುವುದು ಕಷ್ಟವಾಗಬಹುದೆಂಬ ವೈದ್ಯರ ಮಾತಿನಿಂದ ನೊಂದುಕೊಂಡರು. ಆದರೂ, ಸತತ ಪರಿಶ್ರಮ, ಪ್ರತಿದಿನ ಅಭ್ಯಾಸದ ಮೂಲಕ ಶಾರೀರವನ್ನು ಮರಳಿ ತಮ್ಮ ತೆಕ್ಕೆಗೆ ಎಳೆದುಕೊಂಡರು.

ಈ ದಂಪತಿಯ ಸಂಗೀತ ಗಾನಯಾನದ ಶ್ರುತಿಯ ಫಲಶ್ರುತಿಯಾಗಿ ಅವರ ಬಾಳಲ್ಲಿ ಕಾವ್ಯಾ, ನವ್ಯಾ ಜೊತೆಗೂಡಿದರು. ಈ ಇಬ್ಬರು ಮಕ್ಕಳಿಗೂ ಸಂಗೀತವೆಂದರೆ ಪಂಚಪ್ರಾಣ. ಮನೆಯಲ್ಲಿ ಬೇರೆಯವರಿಗೆ ಕಲಿಸುತ್ತಿದ್ದ ಅಮ್ಮ ಉಮಾ ಭಟ್ ಅವರನ್ನೇ ಕೇಳುತ್ತಾ ಬೆಳೆದ ಈ ಮಕ್ಕಳು, ಕೇಳು-ಕೇಳುತ್ತಲೇ ಶಾಸ್ತ್ರೀಯ ಸಂಗೀತದ ಜೂನಿಯರ್ ಪೂರೈಸಿದ್ದಾರೆ. ಹಿರಿಯ ಪುತ್ರಿ ಕಾವ್ಯಾ ಬೆಂಗಳೂರಲ್ಲೀಗ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರೆ, ಕಿರಿಯ ಪುತ್ರಿ ನವ್ಯಾ ಕೂಡ ಬಿಸಿಎ ಮುಗಿಸಿ ಉದ್ಯೋಗಕ್ಕೆ ಸೇರಿದ್ದಾರೆ. ನವ್ಯಾ ಚಿಕ್ಕಂದಿನಿಂದಲೇ ಹಾಡಿನ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರಲ್ಲದೆ, ಸರಿಗಮಪ ಲಿಟ್ಲ್ ಚಾಂಪಿಯನ್ಸ್ ಸೀಸನ್-6ರ ರನ್ನರ್ ಅಪ್ ಆಗಿಯೂ ಬೆಳಕಿಗೆ ಬಂದಿದ್ದರು. ಕಾವ್ಯ ಕೂಡಾ ಎದೆ ತುಂಬಿ ಹಾಡುವೆನು, ಸಪ್ತಸ್ವರ ಹಾಗೂ ಸಂಗೀತ ಮಹಾಯುದ್ಧ ಮುಂತಾದ ಹಲವಾರು ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ್ದಾರೆ. ಈ ಇಬ್ಬರೂ ಶಾಲಾ ಕಾಲೇಜು ದಿನಗಳಲ್ಲಿ ಜಿಲ್ಲೆ, ರಾಜ್ಯ ಮಟ್ಟದ ಸಂಗೀತದ ಎಲ್ಲ ಸ್ಫರ್ಧೆಗಳಲ್ಲಿ ಭಾಗವಹಿಸಿ ಸೈ ಅನ್ನಿಸಿಕೊಂಡವರು. ಈ ಸಹೋದರಿಯರ ಸುಮಧುರ ಕಂಠಕ್ಕೆ ಮನಸೋತಿರುವ ಕನ್ನಡ ಚಿತ್ರೋದ್ಯಮವೂ ಈಗ ಕೈಬೀಸಿ ಕರೆದಿದೆ ಎಂಬ ವಿಚಾರವೇ ಇವರ ಪ್ರತಿಭೆಗೆ ಸಿಕ್ಕ ಮನ್ನಣೆ.

ಈ ಸಂಗೀತ ಕುಟುಂಬವು ಅಲ್ಲಲ್ಲಿ ಗಾಯನ ಕಾರ್ಯಕ್ರಮಗಳನ್ನು ನೀಡುತ್ತಾ ಜನಮೆಚ್ಚುಗೆ ಪಡೆದಿದೆ, ಹಲವೆಡೆ ಸನ್ಮಾನಗಳೂ ಸಂದಿವೆ. ಈಗ ಕೋವಿಡ್ ದಿನಗಳಲ್ಲಿ ಆನ್‌ಲೈನ್‌ನಲ್ಲೂ ಸಂಗೀತ ಶಿಕ್ಷಣ ನೀಡುವ ಕಾಯಕಕ್ಕೆ ಮುಂದಾಗಿದ್ದಾರೆ ಉಮಾ ಭಟ್. ಪ್ರಜಾವಾಣಿ ಕಳೆದ ಭಾನುವಾರ ನಡೆಸಿದ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಈ ಸಂಗೀತ ಕುಟುಂಬ ನೀಡಿದ ಸುಮಧುರ ಗಾಯನ ಸುಧೆಗೆ, ವೀಕ್ಷಕರಿಂದ ದೊರೆತ ಅದ್ಭುತವಾದ ಪ್ರತಿಕ್ರಿಯೆಗಳು, ಶ್ಲಾಘನೆಗಳು ಈ ಕುಟುಂಬದ ಸಂಗೀತ ಪ್ರತಿಭೆಗೆ ಸಾಕ್ಷಿ. (ವಿಡಿಯೋ ನೋಡಲು Fb.com/Prajavani.net ನೋಡಿ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.