ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಆರ್.ರೆಹಮಾನ್ ಎಂಬ ನಾದ ಗಾರುಡಿಗನ ಮನದ ಮಾತುಗಳಿಗೆ ಅಕ್ಷರರೂಪ

Last Updated 7 ಜನವರಿ 2019, 7:04 IST
ಅಕ್ಷರ ಗಾತ್ರ

ನಾದಲೋಕದ ಗಾರುಡಿಗ ಎ.ಆರ್.ರೆಹಮಾನ್‌ ಅವರ ಹುಟ್ಟುಹಬ್ಬ ಇಂದು (ಬರ್ಡ್‌ಡೇ 6ನೇ ಜನವರಿ 1967) (#HappyBirthdayARRahman). ದೇಶದ ಕೋಟ್ಯಂತರ ಜನರು ಈ ನಾದಗಾರುಡಿಗನ ಸಂಗೀತ ನಿರ್ದೇಶನದಲ್ಲಿ ಅರಳಿದ ನೆಚ್ಚಿನ ಗೀತೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮವೊಂದಕ್ಕಾಗಿ ಈಚೆಗೆ ಬೆಂಗಳೂರಿಗೆ ಬಂದಿದ್ದ ರೆಹಮಾನ್ ‘ಪ್ರಜಾವಾಣಿ ’ಪ್ರತಿನಿಧಿ ರಶ್ಮಿ ಎಸ್. ಅವರೊಂದಿಗೆ ಮನದ ಮಾತು ಹಂಚಿಕೊಂಡರು.

––

ಸಂಗೀತವನ್ನು ನನ್ನೊಳಗೆ ತುಂಬಿಕೊಳ್ಳುತ್ತಿದ್ದೇನೆ. ಇನ್ನೂ ಎಷ್ಟೆಲ್ಲ ಮಾಡಲಿದೆ. ಅದಾಗಲೇ ಈ ಕ್ಷೇತ್ರಕ್ಕೆ ಬಂದು 25 ವರ್ಷಗಳಾದವು. ಅದರ ಸಂಭ್ರಮಾಚರಣೆ ನಡೆದಿದೆ. ಆದರೆ ಇನ್ನೂ ಎಷ್ಟೆಲ್ಲ ಮಾಡಲಿದೆ, ಏನೆಲ್ಲ ಮಾಡಲಿದೆ ಎಂದು ಯೋಚಿಸಿದಾಗ ಕ್ರಮಿಸುವ ದಾರಿ ಇನ್ನೂ ದೂರವಿದೆ ಎಂದೆನಿಸದೇ ಇರದು.

ಆರಾಧನೆ, ಸೂಫಿತನಕ್ಕೆ ಬರುವುದಾದರೆ ಅದು ನನಗಿಷ್ಟ. ಹಾಡುವುದು, ಸ್ವರ ಸಂಯೋಜನೆ ಇವೆಲ್ಲ ನಾನು ಮಾಡುವುದಲ್ಲವೆ ಅಲ್ಲ, ಅವು ನನ್ನಿಂದ ಸೇವೆಯನ್ನು ಅಪೇಕ್ಷಿಸುತ್ತವೆ. ನನ್ನಿಂದಾಚೆ ತಾನೇ ತಾನಾಗಿ ಹೊಮ್ಮುತ್ತವೆ. ಅದ್ಹೇಗೆ ನನ್ನ ನಾಭಿಯಾಳದಿಂದ ಇಡೀ ಅಂತರಿಕ್ಷದ ಕಣಕಣದೊಳಗೂ ಈ ನಾದ ಹೊಮ್ಮಲಿ ಎಂಬಂತೆ ಹಾಡು ಬರುತ್ತವೆ. ಇದು ಅಂಥ ಹಾಡುಗಳನ್ನು ಹಾಡುವಾಗಲೇ ಅನುಭೂತಿಗೆ ಬರುವಂಥದ್ದು. ಅದು ಪರಿಪೂರ್ಣ ಹಾಡು ಅಂತ ಮಾತ್ರ ಹೇಳಲಾರೆ. ಆಗ ಹಾಗೆಲ್ಲ ಅನುಭವಿಸಿದರೂ ಅದು ನನ್ನನ್ನು ಸಂಪೂರ್ಣವಾಗಿ ಬಳಸಿಕೊಂಡಿತು ಎಂದೆನಿಸುವುದೇ ಇಲ್ಲ. ಇನ್ನಷ್ಟು ಸಾಮರ್ಥ್ಯವನ್ನು ಬೇಡುತ್ತಿತ್ತು ಎಂದೆನಿಸುತ್ತದೆ.

ಉಳಿದ ಬಗೆಯ ಸಂಗೀತ ಅದು ನನ್ನ ವೃತ್ತಿ. ನನ್ನ ಬದ್ಧತೆ. ಕೆಲವರ ಅಗತ್ಯ, ಕೆಲವು ಸನ್ನಿವೇಶಗಳ ಅನಿವಾರ್ಯ. ಆದರೆ ಸಂಗೀತವೆನ್ನುವುದು ಒಂದು ದೈವಿಕ ಯಾನ. ಈ ಯಾನದಲ್ಲಿ ನಾನೆಷ್ಟು ದೂರ ನಡೆದಿರುವೆ ಎನ್ನುವುದು ನಿಜವಾಗಿಯೂ ನನಗೆ ಗೊತ್ತಿಲ್ಲ. ಸಂದೇಶವಾಹಕನಂತೆ ನಾದ ಲೋಕದಿಂದ ಈಚೆಗೆ ಅವನ್ನು ವ್ಯಕ್ತಪಡಿಸುವ ಕೆಲಸವನ್ನಷ್ಟೇ ನಾನು ಮಾಡುತ್ತಿರುವೆ. ಅದೆಷ್ಟೆರ ಮಟ್ಟಿಗೆ ಸಾರ್ಥಕವಾಗುತ್ತಿದೆಯೆನ್ನುವುದೂ ನನಗೆ ಗೊತ್ತಿಲ್ಲ.

ಕುನ್‌ ಫಯಾ ಕುನ್‌ ಹಾಡಿಗೆ ಒಂದು ಬಗೆಯ ಹಿಂಜರಿಕೆ ಇತ್ತು. ಅದು ಧಾರ್ಮಿಕವಾಗಿದ್ದು, ಆಧ್ಯಾತ್ಮಿಕವಾಗಿದ್ದು. ನಿರ್ದೇಶಕ ಇಮ್ತಿಯಾಜ್‌ ಅಲಿಗೆ ಅದನ್ನು ಬಳಸಲೇಬೇಕಾಗಿತ್ತು. ಆದರೆ ಆ ಹಾಡು ಸಂಯೋಜನೆಗೆ ಕುಳಿತಾಗ ಎಲ್ಲ ಹಿಂಜರಿಕೆ, ಆತಂಕವೂ ದೂರವಾಯಿತು. ಪದಗಳೂ ಅಷ್ಟೇ ಪರಿಣಾಮಕಾರಿಯಾಗಿದ್ದವು. ನನ್ನನ್ನೇ ಮರೆತೆ. ನನ್ನೊಳಗೆ ಆ ಹಾಡಿತ್ತು. ಆ ಹಾಡು ನಾನಾದೆ.

ಈ ಗೊತ್ತಿಲ್ಲ ಎನ್ನುವ ಪದ ನನಗೆ ಬಲು ಇಷ್ಟವಾದುದು. ಹಾಗೆಂದುಕೊಂಡಾಗಲೆಲ್ಲ ಹೊಸತನ್ನು ಕಲಿತಿದ್ದೇನೆ. ಸಿಕ್ಕಿಮ್‌ ರಾಜ್ಯಕ್ಕೆ ಹೋಗಿದ್ದೆ. ಅಲ್ಲಿ ಎಲ್ಲವೂ ಸಂಗೀತಮಯ ಎನಿಸತೊಡಗಿತು. ಜುಳುಜುಳು ನದಿ, ಸೂರ್ಯನ ಕಿರಣ, ಎಲೆ ಬೀಳುವ ಸದ್ದು.. ಎಲ್ಲವೂ.. ಹೀಗೆ ಇನ್ನೂ ಎಷ್ಟೆಲ್ಲ ಅರಿಯಬೇಕಿದೆ. ವಿಶ್ವ ಪರ್ಯಟನೆ ಮಾಡುವಾಗಲೆಲ್ಲ ನಾನಿನ್ನೂ ತೊಟ್ಟಿಲಲ್ಲಿ ಮಲಗಿ ಆಚೆ ಇಣುಕುವಷ್ಟೇ ನೋಡಿದ್ದೇನೆ ಅಂತ ಹಲವಾರು ಸಲ ಎನಿಸಿದ್ದಿದೆ.

ಹಾಡು, ಪ್ರಶಸ್ತಿ, ನಿರ್ದೇಶನ, ಅಮೇಜಾನ್‌ ಪ್ರೈಮ್‌ನಲ್ಲಿ ಡಾಕ್ಯುಮೆಂಟ್ರಿ, ವಿಶ್ವಪರ್ಯಟನೆ ಎಲ್ಲ ಆಯ್ತಲ್ಲ ಎನಿಸುವಾಗಲೇ ಇನ್ನೂ ಏನೆಲ್ಲ ಮಾಡಲಿದೆ ಎಂದೆನಿಸತೊಡಗುತ್ತದೆ. ಹಾಗೆ ಅನಿಸುವುದರಿಂದಲೇ ವಯಸ್ಸೆನ್ನುವುದು ಸಂಖ್ಯೆಗಳಾಗುತ್ತ ಬದಲಾಗುತ್ತದೆ. ಜಗವೆಲ್ಲ ನಾನು ಸಂಗೀತ ಕ್ಷೇತ್ರಕ್ಕೆ ಬಂದು ಬೆಳ್ಳಿಹಬ್ಬ ಆಚರಿಸುತ್ತಿರುವೆ ಎಂದೆನಿಸುತ್ತಿರಬಹುದು. ನನಗಿದು ಇನ್ನೂ ಅಂಬೆಗಾಲಿಡುತ್ತಿರುವ ಕ್ಷೇತ್ರವೆಂದೇ ಎನಿಸುತ್ತಿದೆ. ಪ್ರಯಾಣ ದೊಡ್ಡದು. ಜೀವನ ಸಣ್ಣದು... ಅಲ್ವಾ?

ಬೆಂಗಳೂರೆಂದರೆ ನನಗಿಷ್ಟ

ರಂಗೀಲಾ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಒಮ್ಮೆ ಬೆಂಗಳೂರಿಗೆ ಬಂದಿದ್ದೆ. ಮಧ್ಯರಾತ್ರಿ ಎಂ.ಜಿ ರಸ್ತೆಯಲ್ಲಿ, ಬ್ರಿಗೇಡ್ಸ್‌ನಲ್ಲಿ ಎಲ್ಲೆಡೆಯೂ ಯಾಯಿರೇ ಅನುರಣಿಸುತ್ತಿತ್ತು. ರಾತ್ರಿಯ ನೀರವವನ್ನು ಸಂಗೀತ ಬಡಿದೆಬ್ಬಿಸುತ್ತಿತ್ತು. ಆಗಲೇ ಅನಿಸಿದ್ದು, ಈ ಊರಿನವರಿಗಾಗಿ ಹಾಡಬೇಕು, ನಾದನಿಧಿಯಲ್ಲಿ ಮೀಯುವಂತಾಗಬೇಕು ಎಂದು. ಇನ್ನೊಂದು, ಸಂಗೀತ ಸಮಾರಂಭಕ್ಕೆ ಬಂದಿದ್ದೆ. ನನ್ನ ಬ್ಯಾಂಡ್‌ ಇಲ್ಲಿಯ ಉತ್ಸಾಹ ನೋಡಿ ದಂಗು ಬಡಿದಿದ್ದೆವು. ದಣಿವೆಂಬುದು ಇಲ್ಲಿಯವರಿಗಿಲ್ಲವೇ ಇಲ್ಲ... ಮಳೆ ಬಂದು ನಡುವೆ ಬಿಡುವು ತೊಗೊಬೇಕಾಯ್ತು. ಒಬ್ಬನೇ ಒಬ್ಬ ಅಭಿಮಾನಿಯೂ ಆ ಮೈದಾನದಿಂದ ಆಚೆ ನಡೆದಿರಲಿಲ್ಲ. ಮಳೆ ಕೆಲ ನಿಮಿಷಗಳಲ್ಲಿಯೇ ನಿಂತು ಹೋಯಿತು. ಇಲ್ಲದಿದ್ದರೆ ಇಡೀ ಬ್ಯಾಂಡ್ ಮಳೆಯಲ್ಲಿಯೇ ಪ್ರದರ್ಶನ ನೀಡುವುದೆಂದೂ ನಿರ್ಧರಿಸಿದ್ದೆವು. ಅಂಥ ಹುಚ್ಚುತನ ಇಲ್ಲಿಯವರಿಗಿದೆ. ಹುಚ್ಚುತನದ ಹೊಳೆಯಲ್ಲಿ ಮಿಂದೇಳುವುದೇ ಸಂಗೀತ. ಅದಕ್ಕೆ ನಂಗಿಲ್ಲಿ ಬರುವುದೆಂದರೆ ಖುಷಿ.

ದ್ವಾರಕೀಶ್‌, ವಿಜಯ್‌ ಭಾಸ್ಕರ್‌ ಮರೆಯಲಾದೀತೆ?

ಕನ್ನಡದ ನಂಟು ನನಗೆ ಮೊದಲಿನಿಂದಲೂ ಇದೆ. ಒಂದು ಓಮ್ನಿಯಲ್ಲಿ ಬರುತ್ತಿದ್ದೆ. ವಿಜಯ್‌ ಭಾಸ್ಕರ್‌ ಅವರಿಗೆ ಕೆಲಸ ಮಾಡಿದ್ದೆ. ಅವರು, ದ್ವಾರಕೀಶ್‌ ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ಆ ಆರಂಭಿಕ ದಿನಗಳಲ್ಲಿ ಸಿಕ್ಕ ಮೆಚ್ಚುಗೆಯನ್ನು ಮರೆಯಲಾದೀತೇ? ಈಗಲೂ ನನಗೆ ಅವರ ಆ ಆಪ್ತ ಬಿಸುಪು ಅಪ್ಯಾಯಮಾನವೆನಿಸುತ್ತದೆ.

ಇಡ್ಲಿ, ಸಾಂಬಾರ್‌ ಇಷ್ಟ

ವಿಶ್ವವೆಲ್ಲ ಸುತ್ತಿ ಮನೆಗೆ ಬಂದರೆ ಏನುಣ್ಣಬೇಕೆನಿಸುತ್ತದೆ? ಯಾವತ್ತಿದ್ದರೂ ಬೆಳಗ್ಗೆಗೆ ಮಾತ್ರ ಇಡ್ಲಿ, ಸಾಂಬರ್‌ ಹಾಗೂ ಚಟ್ನಿ ಸೇವಿಸುವ ಸುಖವೆ ಬೇರೆ. ವಯಸ್ಸು 50 ದಾಟಿದ ಮೇಲೆ ಇಷ್ಟಪಟ್ಟು ತಿನ್ನಬೇಕು ಎನಿಸುವಂಥದ್ದೇನೂ ಇರುವುದಿಲ್ಲ. ಪಥ್ಯದಿಂದಾಗಿ ನಿಮ್ಮ ತಟ್ಟೆಯಿಂದಾಚೆ ಉಳಿಯುವ ಖಾದ್ಯಗಳೇ ಹೆಚ್ಚಾಗುತ್ತವೆ. ಡೇರಿ ಉತ್ಪನ್ನಗಳು, ಗೋದಿ ಉತ್ಪನ್ನಗಳು, ಸಿಟ್ರಸ್‌ ಅಲರ್ಜಿ ಹೀಗೆ ಹಲವಾರು ಖಾದ್ಯಗಳು ತಟ್ಟೆಯಿಂದಾಚೆಯೇ ಉಳಿಯುತ್ತವೆ. ಲಂಡನ್‌ನಲ್ಲಿದ್ದರೆ ಅಲ್ಲಿ ಲೆಬನಾನ್‌ ಖಾದ್ಯ ಸೇವಿಸಲು ಇಷ್ಟ ಪಡುತ್ತೇನೆ. ಉಳಿದಂತೆ ಸರಳವಾಗಿದ್ದಷ್ಟೂ, ಹೊಟ್ಟೆ ತುಂಬುತ್ತದೆ. ಉಣ್ಣಬೇಕೆನ್ನುವುದು ಆಸೆಯಾಗಿ ಉಳಿಯುವುದಿಲ್ಲ, ಅದು ಅಗತ್ಯವಾಗಿ ಬದಲಾಗಿದೆ ಎಂದೆನಿಸುತ್ತಿದೆ. ಆದರೂ ಬೆಳಗ್ಗೆ ಇಡ್ಲಿ ಸಾಂಬರ್‌ ಇಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT