ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಸಂಗೀತ ಸಮಯ: ‘ಲಯ ತಪಸ್ವಿ’ಯನ್ನು ನೆನೆಯುತ್ತಾ...

Last Updated 7 ಅಕ್ಟೋಬರ್ 2020, 4:43 IST
ಅಕ್ಷರ ಗಾತ್ರ
ADVERTISEMENT
""
""

ತಬಲಾದ ಶ್ರುತಿ, ಲಯ ತಾಳಗಳಲ್ಲಿ ಅಪ್ರತಿಮ ಕೌಶಲ ಬೆಳೆಸಿಕೊಂಡವರು ಧಾರವಾಡದ ಪಂ. ಶೇಷಗಿರಿ ಹಾನಗಲ್‌ ಅವರು. ತಬಲಾ ನುಡಿಸುವಾಗ ಬೋಲ್‌ಗಳಲ್ಲಿ ಸ್ಪಷ್ಟತೆ, ಮೃದುತ್ವ ಹಾಗೂ ಲಯಗಳನ್ನು ರೂಢಿಸಿಕೊಂಡವರು. ತಬಲಾದ ಎಲ್ಲ ಬಾಜುಗಳೂ ಇವರಿಗೆ ಸಂಪೂರ್ಣ ಕರಗತ. ನುಡಿಸಾಣಿಯ ವಿವಿಧ ಭಾಗಗಳಾದ ಕಾಯ್ದಾ, ಪೇಶ್‌ಕಾರ್‌, ಗತ್‌ಮುಕಡಾ, ಚಕ್ರಧಾರ್‌, ಪರಾಣ... ಹೀಗೆ ಯಾವುದೇ ನುಡಿಸಲಿ..ಕಷ್ಟವಾದವುಗಳನ್ನೇ ಆಯ್ಕೆ ಮಾಡಿಕೊಂಡು ನುಡಿಸುವುದು ಇವರ ನುಡಿಸಾಣಿಕೆಯ ವೈಶಿಷ್ಟ್ಯ.

ಅಕ್ಟೋಬರ್‌ 10, 1922ರಲ್ಲಿ ಧಾರವಾಡದಲ್ಲಿ ಜನಿಸಿದ ಪಂ. ಶೇಷಗಿರಿ ಹಾನಗಲ್‌ ಅವರಿಗೆ ಪೋಲಿಯೊ ಬಾಧೆಯಿಂದಾಗಿ ಕಾಲುಗಳು ಕೊಂಚ ಊನವಾಗಿದ್ದವು. ಇದನ್ನು ನ್ಯೂನತೆ ಎಂದೇ ಭಾವಿಸದ ಪಂ. ಶೇಷಗಿರಿ, ತಬಲಾ ವಾದನದಲ್ಲಿ ಮೇರು ಶಿಖರವಾಗಿ ನಿಂತರು. ಈ ಅವನದ್ಧ ವಾದ್ಯದ ಮೇಲೆ ಬಿರಬಿರನೆ ಬೆರಳುಗಳನ್ನು ಕುಣಿಸಿ ನುಡಿಸುವುದನ್ನೇ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.

ತಬಲಾದಲ್ಲಿ ಸ್ವತಂತ್ರ ಶೈಲಿ ರೂಢಿಸಿಕೊಂಡಿದ್ದ ತಮ್ಮ ತಂದೆಯ ನುಡಿಸಾಣಿಕೆ ಹಾಗೂ ವೈಯಕ್ತಿಕ ಬದುಕಿನ ಕಷ್ಟದ ಕ್ಷಣಗಳ ಜೊತೆಗೆ ತಬಲಾ ನುಡಿಸುವ ಮಧುರ ಕ್ಷಣಗಳನ್ನು ಅವರ ಪುತ್ರ ಪಂ. ಅಜಯ್‌ ಹಾನಗಲ್‌ ಅವರು ನೆನಪಿಸಿಕೊಂಡಿದ್ದು ಹೀಗೆ...

‘ನಮ್ಮ ತಂದೆ ಬಹಳ ಮೃದು ಸ್ವಭಾವದವರು. ತಾಳ್ಮೆಗೆ ಇನ್ನೊಂದು ಹೆಸರೇ ನನ್ನ ತಂದೆ. ಅವರೆಂದೂ ನನಗೆ ತಬಲಾ ಕಲಿ, ಸಂಗೀತ ಅಭ್ಯಾಸ ಮಾಡು ಎಂದು ಒತ್ತಾಯ ಮಾಡಿದ್ದೇ ಇಲ್ಲ. ಒಂದೇ ಒಂದು ದಿನ ಬೈದದ್ದೂ ನನಗೆ ನೆನಪಿಲ್ಲ. ಆದರೆ ಪಕ್ಕದಲ್ಲಿ ಕೂರಿಸಿಕೊಂಡು ಅಭ್ಯಾಸ ಮಾಡಿಸುತ್ತಿದ್ರು. ಆಗಿನ ಕಾಲದಲ್ಲಿ ಕಲಾವಿದರಿಗೆ ಸಂಭಾವನೆ ಬಹಳ ಕಡಿಮೆ ಇತ್ತು. ಆದರೂ ಅವರು ಸಂಭಾವನೆಗಾಗಿ ಆಸೆಪಟ್ಟವರಲ್ಲ. ದುಡ್ಡಿಗಿಂತ ಜನರ, ಕೇಳುಗರ ಪ್ರೀತಿ, ಆದರ, ಅಭಿಮಾನ ಮುಖ್ಯ ಎಂಬುದನ್ನು ನಮಗೂ ಹೇಳಿಕೊಡುತ್ತಿದ್ದರು. ಹೀಗಾಗಿ ಬಡತನದಲ್ಲೇ ಬದುಕು ಸವೆಸಿದರು.

ವಿದುಷಿ ಗಂಗೂಬಾಯಿ ಹಾನಗಲ್‌ ಅವರಿಗೆ ತಬಲಾ ಸಾಥಿ ಕೊಡ್ತಾ ಇದ್ರು. ಆಗ ನಾನೂ ಅವರೊಂದಿಗೆ ಹೋಗುತ್ತಿದ್ದೆ. ಕಾಲುಗಳೆರಡೂ ಊನವಾಗಿದ್ದರಿಂದ ವಾಕಿಂಗ್‌ ಸ್ಟಿಕ್‌ ಹಿಡಿದು ನಡೆಯುತ್ತಿದ್ದರು. ಇದನ್ನು ಬಳಸಿಯೇ ಜಗತ್ತನ್ನೂ ಸುತ್ತಿ ಬಂದರು. ನನಗಿನ್ನೂ ಚೆನ್ನಾಗಿ ನೆನಪಿದೆ. ಧಾರವಾಡದ ನಮ್ಮ ಮನೆಯಿಂದ ಆಕಾಶವಾಣಿಯಲ್ಲಿ ಕೆಲಸ ಮಾಡುವುದಕ್ಕಾಗಿ ಊರುಗೋಲು ಹಿಡಿದು ಮೂರು ಕಿಲೋಮೀಟರ್‌ ನಡೆದುಕೊಂಡೇ ಹೋಗುತ್ತಿದ್ದರು. ಬೇರೆ ಊರುಗಳಲ್ಲಿ ಸಂಗೀತ ಕಛೇರಿ ನೀಡುವ ಸಂದರ್ಭ ಬಂದಾಗ ತಬಲಾವನ್ನೂ ಹೊತ್ತುಕೊಂಡು ರೈಲು ನಿಲ್ದಾಣದವರೆಗೂ ನಡೆದುಹೋಗುತ್ತಿದ್ದರು.

ಈ ಒಂದು ಸಂದರ್ಭ ನೆನಪಿಸಿಕೊಂಡರೆ ನನಗೆ ಈಗಲೂ ಸಂಕಟವಾಗುತ್ತೆ. ಒಮ್ಮೆ ಪುಣೆಯಲ್ಲಿ ಸಂಗೀತೋತ್ಸವಕ್ಕೆ ಹೋಗಬೇಕಾಗಿತ್ತು. ಆಗ ಆಟೊರಿಕ್ಷಾಗಳಿಗಿಂತಲೂ ಟಾಂಗಾಗಳೇ ಹೆಚ್ಚು ಪ್ರಚಲಿತದಲ್ಲಿತ್ತು. ತಂದೆಯವರು ಟಾಂಗಾದವನಿಗೆ ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋಗುವಂತೆ ಕೇಳಿದರು. ಆಗ ಟಾಂಗಾವಾಲ ಹೆಚ್ಚು ಹಣ ಕೇಳಿದ. ಇದಕ್ಕಾಗಿ ತಂದೆಯವರು ತಬಲಾಬ್ಯಾಗ್‌ ಸಹಿತ ನಡೆದುಕೊಂಡೇ ರೈಲು ನಿಲ್ದಾಣಕ್ಕೆ ಹೋದರು.

ಹಲವಾರು ಉತ್ತಮ ತಬಲಾವಾದಕರನ್ನು ತಯಾರು ಮಾಡಿದ್ದರು. ಸದ್ಯ ಸಂಗೀತಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹಿರಿಯ ತಬಲಾ ವಾದಕ ಪಂ. ರವೀಂದ್ರ ಯಾವಗಲ್‌ ತಂದೆಯವರ ಶಿಷ್ಯರೇ. ಜೊತೆಗೆ ಸೂರಜ್‌ ಪುರಂದರೆ, ವಿನಾಯಕ ಪಾಟೀಲ್‌. ಗೋಪಾಲಕೃಷ್ಣ ಹೆಗಡೆ ಮುಂತಾದವರು ತಂದೆಯ ಶಿಷ್ಯತ್ವ ಪಡೆದವರೇ. ಅಲ್ಲದೆ ಪಂ. ಉದಯರಾಜ ಕರ್ಪೂರ, ವಿಕಾಸ ನರೇಗಲ್‌ ಅವರೂ ತಂದೆಯವರಿಂದ ಮಾರ್ಗದರ್ಶನ ಪಡೆದಿದ್ದರು. ನಾನೂ ತಬಲಾ ವಾದಕನಾಗಿ, ತಬಲಾ ಶಿಕ್ಷಕನಾಗಿ ರೂಪುಗೊಂಡದ್ದು ತಂದೆಯವರ ತರಬೇತಿಯಿಂದಲೇ...’

ಹೀಗೆ ಪಂ. ಶೇಷಗಿರಿ ಹಾನಗಲ್‌ ಬದುಕಿನುದ್ದಕ್ಕೂ ಕಷ್ಟಪಟ್ಟು ಸಾಧನೆ ಮಾಡಿ ಹಿಂದೂಸ್ತಾನಿ ಸಂಗೀತದಲ್ಲಿ ಹೆಸರುವಾಸಿಯಾಗಿ ಬಾಳಿದವರು.

ಮನೆತನವೇ ಸಂಗೀತ

ಪಂ. ಶೇಷಗಿರಿ ಹಾನಗಲ್‌ ಅವರಿಗೆ ಸಂಗೀತ ಮನೆತನದಿಂದ ಬಂದ ಬಳುವಳಿ. ತಂದೆ ಕೃಷ್ಣಪ್ಪ, ಚಿಕ್ಕಪ್ಪ ರಾಮರಾಯರು ತಬಲಾ ವಿದ್ವಾಂಸರು. ಅತ್ತೆ ತಾರಾಬಾಯಿ ಹಿಂದೂಸ್ತಾನಿ ಸಂಗೀತ ವಿದುಷಿಯಾದರೆ ಅತ್ತಿಗೆ ಗಂಗೂಬಾಯಿ ಸಂಗೀತ ಸಾಮ್ರಾಜ್ಞಿ. ಪೋಲಿಯೊ ಬಾಧೆಯಿಂದಾಗಿ ಶಾಲೆಗೆ ಹೋಗಲು ಕಷ್ಟವಾಗಿ ತಾಯಿಯ ಆಸರೆಯಲ್ಲೇ ಹೋಗಿ ಬಂದು ನಾಲ್ಕನೇ ತರಗತಿಗೇ ಶಾಲೆಗೆ ವಿದಾಯ ಹೇಳಬೇಕಾಯಿತು. ಆದರೆ ಸಂಗೀತ ಕಲಿಯಲು ಬೇಕಾದಷ್ಟು ಸಮಯಾವಕಾಶ ಸಿಕ್ಕಿ ಹಾರ್ಮೋನಿಯಂ, ಪಿಟೀಲು ಕೈಗೆತ್ತಿಕೊಂಡರು. ಒಂದು ದಿನ ತಬಲಾದ ಕಡೆ ಮನಸ್ಸು ಹೊರಳಿ ಇದನ್ನೂ ಕಲಿಯಲಾರಂಭಿಸಿದರು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಪಂ. ಲಾಲಜಿ ಗೋಖಲೆ ಅವರಿಂದ ತರಬೇತಿ ಪಡೆದರು. ಮುಂದೆ ಮುಂಬಯಿಯ ಪಂ. ನಾರಾಯಣ ರಾವ್‌ ಇಂದೂರಕರ ಅವರಿಂದ ಹೆಚ್ಚಿನ ನುಡಿಸಾಣಿಕೆಯ ತಂತ್ರಗಾರಿಕೆ, ಲಯಕಾರಿ ಅಂಶಗಳನ್ನು ಕಲಿತುಕೊಂಡು ಬಹುಬೇಗ ಕರಗತಮಾಡಿಕೊಂಡರು.

1949ರಲ್ಲಿ ಇವರ ಮೊದಲ ಸೋಲೊ ತಬಲಾ ಕಛೇರಿಯನ್ನು ಮುಂಬಯಿ ಆಕಾಶವಾಣಿ ಪ್ರಸಾರ ಮಾಡಿತು. ಮುಂದೆ ಆಕಾಶವಾಣಿಯ ಗ್ರೇಡೆಡ್‌ ಕಲಾವಿದರಾಗಿದ್ದಲ್ಲದೆ ನಿಲಯ ಕಲಾವಿದರಾಗಿಯೂ ಸೇವಾ ವೃತ್ತಿ ಆರಂಭಿಸಿದರು. ಅದಾಗಿ ದೆಹಲಿಯಲ್ಲಿ ನಡೆದ ಆಕಾಶವಾಣಿ ರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿದರು. ಆಕಾಶವಾಣಿಯ ಎ ಶ್ರೇಣಿ ಕಲಾವಿದರಾಗಿ ಪರಿಪೂರ್ಣ ಕಲಾವಿದರೆನಿಸಿಕೊಂಡರು.

ಜಾಕೀರ್ ಹುಸೇನ್ ಜತೆ

ಪ್ರಯೋಗಶೀಲ ಮನಸ್ಸು

ತಬಲಾದಲ್ಲಿ ಸದಾ ಪ್ರಯೋಗಶೀಲತೆಗೆ ಮನ ಹಾತೊರೆಯುತ್ತಿತ್ತು. ತಬಲಾದಲ್ಲಿ ಹಲವು ಚಕ್ರಧಾರ, ಕಾಯ್ದಾಗಳನ್ನು ಸ್ವತಃ ರಚಿಸಿದ್ದಾರೆ. ಗಂಗೂಬಾಯಿ ಹೆಸರಿನಲ್ಲಿ ‘ಗಂಗಾಚಲನ’ ಎಂಬ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಆಗ ಕೇಂದ್ರದಲ್ಲಿ ಇಂದಿರಾಗಾಂಧಿ ಅವರ ಕಾಲ. ಆಕಾಶವಾಣಿ ಕಲಾವಿದರನ್ನು ಹುದ್ದೆಯಲ್ಲಿ ಖಾಯಂಗೊಳಿಸುವ ನಿರ್ಧಾರ ಇಂದಿರಾಗಾಂಧಿ ಅವರು ಕೈಗೊಂಡಾಗ ಖುಷಿಯಾದ ಪಂ. ಶೇಷಗಿರಿ ಅವರ ಹೆಸರಿನಲ್ಲೇ ‘ಇಂದಿರಾ ತಾಳ’ ಎಂಬ ತಾಳ ರಚಿಸಿ ಅದನ್ನು ಪುಣೆಯಲ್ಲಿ ಸಂಗೀತ ಸಮ್ಮೇಳನವೊಂದರಲ್ಲಿ ನುಡಿಸಿ ಕೇಳುಗರಿಂದ ಪ್ರಶಂಸೆ ಗಿಟ್ಟಿಸಿಕೊಂಡದ್ದು ಹಿಂದೂಸ್ತಾನಿ ಸಂಗೀತ ಚರಿತ್ರೆಯಲ್ಲಿ ದಾಖಲಾರ್ಹ ಮೈಲಿಗಲ್ಲಾಯಿತು.
ಸೋಲೊ ಕಛೇರಿಗೂ ಸೈ, ಸಾಥಿಗೂ ಸೈ...!

ತಬಲಾ ಸೋಲೊದಲ್ಲಿ ವಿಭಿನ್ನ, ವಿನೂತನ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡು, ಸಾಥಿಯಲ್ಲೂ ನುರಿತ, ನಿಷ್ಣಾತ, ಘಟಾನುಘಟಿ ಕಲಾವಿದರಿಂದ ಜೈ ಎನಿಸಿಕೊಂಡ ಹೆಗ್ಗಳಿಕೆ ಇವರದು. ಸವಾಯ್‌ ಗಂಧರ್ವರು, ಉಸ್ತಾದ ರೆಹಮತಖಾನ, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್‌, ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್‌, ಮಾಧವ ಗುಡಿ, ಬಾಲೇಖಾನ್ ಮುಂತಾದ ದಿಗ್ಗಜರಿಗೆ ತಬಲಾ ಸಾಥಿ ನೀಡಿದ ಹೆಗ್ಗಳಿಕೆ ಇವರದು.

ಆಕಾಶವಾಣಿಯಲ್ಲಿ ಸುದೀರ್ಘ 33 ವರ್ಷ ಸೇವೆ ಸಲ್ಲಿಸಿ 1983ರಲ್ಲಿ ನಿವೃತ್ತರಾದವರು. ವಿದೇಶದಲ್ಲೂ ತಬಲಾ ವಾದನದ ಮೂಲಕ ಮೋಡಿ ಮಾಡಿದವರಿವರು. ಗಂಗೂಬಾಯಿ ಹಾನಗಲ್‌ ಜೊತೆಗೆ ಅಮೆರಿಕ, ಕೆನಡ. ಫ್ರಾನ್ಸ್‌, ಜರ್ಮನಿ, ಲಂಡನ್‌ ಮುಂತಾದ ಕಡೆಗಳಲ್ಲಿ ತಬಲಾ ನುಡಿಸಿದ್ದಾರೆ. ಇವರ ಸಂಗೀತ ಸಾಧನೆ ಪರಿಗಣಿಸಿ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾತಿಲಕ ಬಿರುದು, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಕಲಾಕಾರ, ನಾದಶ್ರೀ ಪ್ರಶಸ್ತಿಗಳು ಇವರಿಗೆ ಸಂದಿವೆ. ಅಲ್ಲದೆ ಪ್ರತಿಷ್ಠಿತ ಕನಕ ಪುರಂದರ ಪ್ರಶಸ್ತಿಯೂ ಇವರ ಮುಡಿಗೇರಿದೆ.

2016ರಲ್ಲಿ ನಾದಲೋಕವನ್ನು ಸ್ತಬ್ಧಗೊಳಿಸಿದ ಈ ಮಹಾನ್‌ ವಾದಕ ಈಗ ಇದ್ದಿದ್ದರೆ 98ನೇ ಹರೆಯದಲ್ಲಿರುತ್ತಿದ್ದರು. ಈ ನಾದ–ಲಯ ತಪಸ್ವಿ ಹಲವಾರು ಶಿಷ್ಯಂದಿರನ್ನು ತಯಾರು ಮಾಡಿ ತಬಲಾ ಕ್ಷೇತ್ರಕ್ಕೆ ಅದ್ಭುತ ಕೊಡುಗೆಯನ್ನೇ ನೀಡಿದ್ದಾರೆ. ಈ ನಾದ, ಲಯ ತಪಸ್ವಿಯನ್ನು ಈ ಹೊತ್ತಿನಲ್ಲಿ ನೆನೆಯುವುದು ಸ್ತುತ್ಯರ್ಹವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT