ಶಿವರಾತ್ರಿ: ಕಾಡು ಮಲ್ಲೇಶ್ವರ, ಗವಿಗಂಗಾಧರೇಶ್ವರ

ಗುರುವಾರ , ಮಾರ್ಚ್ 21, 2019
25 °C

ಶಿವರಾತ್ರಿ: ಕಾಡು ಮಲ್ಲೇಶ್ವರ, ಗವಿಗಂಗಾಧರೇಶ್ವರ

Published:
Updated:

ಸುಡುಸುಡು ಬಿಸಿಲ ನಡುವೆ ತಣ್ಣನೆಯ ಶಿವಧಾನ್ಯದ ದಿನವಿಂದು. ರಾತ್ರಿಯ ಜಾಗರಣೆಗೆ ಮೆರುಗು ಬರುವುದೇ ಶಿವನ ಉಪಾಸನೆಯಿಂದ. ಶಿವೋಪಾಸನೆಗೆ ನಗರದಲ್ಲಿ ಪುರಾತನ–ಆಧುನಿಕ ದೇವಾಲಯಗಳಿಗೆ ಬರವಿಲ್ಲ. ಕೆಲ ದೇಗುಲಗಳು ವಾಸ್ತುಶಿಲ್ಪದ ಕಾರಣಕ್ಕೆ ಆಕರ್ಷಿಸಿದರೆ ಮತ್ತೆ ಕೆಲವು ಸ್ಥಳ ಮಹಿಮೆಯ ಕಾರಣಕ್ಕೆ ಶಿವಭಕ್ತರನ್ನು ಸೆಳೆಯುತ್ತವೆ. ಮಹಾಶಿವರಾತ್ರಿ ಪ್ರಯುಕ್ತ ನಗರದ ಕೆಲ ಮುಖ್ಯ ಶಿವಾಲಯಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ

ಕೋಟೆ ಜಲಕಂಠೇಶ್ವರ ದೇವಾಲಯ

ಕಲಾಸಿಪಾಳ್ಯ ಬಸ್‌ ನಿಲ್ದಾಣದ ಬಳಿ ಇರುವ ಕೋಟೆ ಜಲಕಂಠೇಶ್ವರ ದೇವಾಲಯದಲ್ಲಿ ಶಿವ–ಪಾರ್ವತಿ ಮೂರ್ತಿಯನ್ನು ಪೂಜಿಸಲಾಗುತ್ತದೆ. ಧಾರ್ಮಿಕ ಶ್ರದ್ಧಾಳುಗಳ ನೆಚ್ಚಿನ ತಾಣವಾಗಿ, ಪ್ರವಾಸಿ ಕೇಂದ್ರವಾಗಿ ಹೆಸರುವಾಸಿಯಾಗಿರುವ ಜಲಕಂಠೇಶ್ವರ ದೇವಸ್ಥಾನಕ್ಕೆ ಮಹಾಶಿವರಾತ್ರಿಯಂದು ಭೇಟಿ ನೀಡಿದರೆ ಇಷ್ಟಾರ್ಥ ಸಿದ್ಧಿಯಾಗುವುದು ಖಚಿತ ಎಂಬುದು ಜನಸಾಮಾನ್ಯರ ನಂಬಿಕೆ. ದೇವಸ್ಥಾನದ ಗರ್ಭಗುಡಿಯಲ್ಲಿ ಜಲಕಂಠೇಶ್ವರ, ಪಾರ್ವತಿ ಹಾಗೂ ಕೈಲಾಸನಾಥೇಶ್ವರ ವಿಗ್ರಹಗಳಿವೆ. ಈ ಜಲಕಂಠೇಶ್ವರನನ್ನು ದೇವಸ್ಥಾನದ ಮುಂಭಾಗದಲ್ಲಿರುವ ಧ್ವಜಸ್ತಂಭದ ಬಳಿ ನಿಂತು ನೋಡಿದರೆ ಅರ್ಧನಾರೀಶ್ವರನಂತೆ ಕಾಣಿಸುವುದು ವಿಶೇಷ. ಶಿವರಾತ್ರಿ ಪ್ರಯುಕ್ತ ಲಕ್ಷ ಬಿಲ್ವಾರ್ಚನೆ ಮೊದಲಾದ ಸೇವೆಗಳು ನಡೆಯಲಿವೆ. 

ಕಾಡು ಮಲ್ಲೇಶ್ವರ ದೇವಾಲಯ

ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಮಲ್ಲೇಶ್ವರನ ದೇವಾಲಯ. ಈ ಹಿಂದೆ ಈ ಪ್ರದೇಶದಲ್ಲಿ ಕಾಡು ಇತ್ತು. ಕಾಡಿನ ಮಧ್ಯೆ ಇದ್ದ ಈ ದೇವಾಲಯ ‘ಕಾಡು ಮಲ್ಲೇಶ್ವರ’ವೆಂದೇ ಪ್ರಸಿದ್ಧವಾಯಿತು. ಇದು ಉದ್ಭವ ಲಿಂಗ (ಸ್ವಯಂಭೂ).

ಶಿವನನ್ನು ಆರಾಧಿಸುವ ಈ ದೇಗುಲದಲ್ಲಿ ನಂದೀಶ್ವರ ತೀರ್ಥವೂ ಒಂದು ಪ್ರಮುಖ ಆಕರ್ಷಣೆ. ಇಲ್ಲಿ ಬಸವ ವಿಗ್ರಹದ ಬಾಯಿಂದ ಸದಾ ಕಾಲ ನೀರು ಹರಿಯುತ್ತದೆ. ಇದು ವೃಷಭಾವತಿ ನದಿ ನೀರು. ಇಲ್ಲಿ ಗಣಪತಿ, ದಕ್ಷಿಣಾಮೂರ್ತಿ, ಬಾಲಸುಬ್ರಹ್ಮಣ್ಯ, ಚಂಡಿಕೇಶ್ವರ, ತ್ರಿಮೂರ್ತಿ ಬ್ರಹ್ಮ, ದುರ್ಗಾದೇವಿ ಮತ್ತು ನಾರಾಯಣನ ಶಿಲ್ಪಗಳೂ ಇವೆ. ಶಿವರಾತ್ರಿಯಂದು ಇಲ್ಲಿ ರುದ್ರಾಭಿಷೇಕ, ಮಹಾಮಂಗಳಾರತಿ, ಜಲಾಭಿಷೇಕ, ರುದ್ರ ಪಾರಾಯಣ ನಡೆಯುತ್ತದೆ.

ಕೆಂಫೋರ್ಟ್ ಶಿವ ದೇಗುಲ

ನಗರದ ಆಕರ್ಷಕ ದೇವಾಲಯಗಳಲ್ಲಿ ಕೆಂಫೋರ್ಟ್ ಶಿವ ದೇಗುಲವೂ ಒಂದು. ಇಲ್ಲಿ 65 ಅಡಿ ಎತ್ತರದ ಶಿವನ ಮೂರ್ತಿಯಿದೆ. ಹಳೇ ವಿಮಾನ ನಿಲ್ದಾಣ ರಸ್ತೆಯ ಮಾರ್ಗದಲ್ಲಿರುವ ಈ ದೇವಾಲಯದಲ್ಲಿ ಗಣೇಶ ವಿಗ್ರಹವೂ ಇದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ಶಿವರಾತ್ರಿ ದಿನ ಇಲ್ಲಿ ‘ಕೃತಜ್ಞತಾ ದಿನ’ ಎಂದು ಆಚರಿಸಲಾಗುತ್ತದೆ. ಸಾವಿರಾರು ಜನ ಆ ದಿನ ದೇವಸ್ಥಾನದಲ್ಲಿ ಸೇರಿ, ಶಿವನಿಗೆ ವಿವಿಧ ರೀತಿಯ ಪೂಜೆಗಳನ್ನು ಮಾಡುತ್ತಾರೆ. ಶಿವರಾತ್ರಿ ದಿನ ಜಾಗರಣೆ, ವಿಶೇಷ ಪೂಜೆ, ಭಜನೆಗಳು ರಾತ್ರಿಯಿಂದ ನಿರಂತರವಾಗಿ ಈ ದೇವಸ್ಥಾನದಲ್ಲಿ ನಡೆಯುತ್ತವೆ.

ಗವಿ ಗಂಗಾಧರೇಶ್ವರ ದೇವಾಲಯ

ನಗರದ ಅತ್ಯಂತ ಪ್ರಾಚೀನ ದೇವಾಲಯವೆಂದೇ ಪ್ರಸಿದ್ಧಿಯಾಗಿರುವಂಥದ್ದು ಗವಿಪುರಂನ ಗವಿ ಗಂಗಾಧರೇಶ್ವರ ದೇವಾಲಯ. ಸಹಜ ಗವಿಯೊಂದರಲ್ಲೇ ಈ ದೇವಾಲಯ ರೂಪುಗೊಂಡಿರುವುದು ವಿಶೇಷ. ‘ದಕ್ಷಿಣ ಕಾಶಿ’ ಎಂತಲೇ ಖ್ಯಾತಿಯಾಗಿರುವ ಈ ದೇವಸ್ಥಾನ, ಕ್ರಿ.ಶ. 7– 8ನೇ ಶತಮಾನದಲ್ಲಿ ರೂಪುಗೊಂಡಿರಬಹುದು ಎನ್ನುವುದು ಇತಿಹಾಸ ತಜ್ಞರ ಅಭಿಪ್ರಾಯ.

ದೇವಾಲಯದ ಗರ್ಭಗುಡಿಯಲ್ಲಿ ಲಿಂಗವಿದ್ದು, ದೇವಾಲಯದ ವಾಸ್ತುಶಿಲ್ಪ ಗಂಗರ ಶೈಲಿಯನ್ನು ಪ್ರತಿನಿಧಿಸುತ್ತದೆ. ದೇವಾಲಯದ ಆವರಣದಲ್ಲಿ ಸುಮಾರು 10 ಅಡಿ ಎತ್ತರದ ಏಕಶಿಲೆಯ ತ್ರಿಶೂಲ, ಡಮರು ಮತ್ತು ಸೂರ್ಯಪಾನವಿರುವ ಕಂಬಗಳಿವೆ. ಸಂಕ್ರಾಂತಿಯ ದಿನದಂದು ದೇವಾಲಯದ ಕಿಟಕಿಗಳ ಮೂಲಕ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸುವುದು ವಿಶೇಷ ಸಂಗತಿ. ಇದನ್ನು ವೀಕ್ಷಿಸುವುದಕ್ಕಾಗಿಯೇ ದೇಶ–ವಿದೇಶಗಳಿಂದ ಜನರು ಬರುವುದುಂಟು. ಶಿವರಾತ್ರಿ ದಿನದಂದು ಬೆಳಿಗ್ಗೆಯಿಂದ ಮರುದಿನದ ಬೆಳಿಗ್ಗೆಯವರೆಗೆ ನಿರಂತರವಾಗಿ ಶಿವನಿಗೆ ಅಭಿಷೇಕ ನಡೆಯುತ್ತದೆ.

ಹಲಸೂರು ಸೋಮೇಶ್ವರ ದೇವಾಲಯ

ಚೋಳ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಹಲಸೂರು ಸೋಮೇಶ್ವರ ದೇವಾಲಯ ಬೆಂಗಳೂರಿನ ಹಳೆಯ ದೇಗುಲಗಳಲ್ಲೊಂದು. ವಿಜಯನಗರ ಅರಸರ ಕಾಲದಲ್ಲಿ ಈ ದೇವಸ್ಥಾನವನ್ನು ನವೀಕರಿಸಲಾಗಿದೆ. ಗರ್ಭಗೃಹದಲ್ಲಿ ಪ್ರಾಚೀನವಾದ ಶಿವಲಿಂಗವಿದೆ. ಗಿರಿಜಾ ಕಲ್ಯಾಣದ ಉಬ್ಬುಶಿಲ್ಪಗಳು ಈ ದೇವಾಲಯದ ಪ್ರಮುಖ ಆಕರ್ಷಣೆ. ಶಿವರಾತ್ರಿಯಂದು ಇಲ್ಲಿ ಮುಂಜಾನೆಯಿಂದ ಮಧ್ಯರಾತ್ರಿ ತನಕವೂ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಹಳೇ ಮಡಿವಾಳದ ಸೋಮೇಶ್ವರ ದೇವಾಲಯ

10ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಹಳೇ ಮಡಿವಾಳದ (ತಾವರೆಕೆರೆ) ಸೋಮೇಶ್ವರ ದೇವಾಲಯ ನಗರದ ಪ್ರಾಚೀನ ದೇವಾಲಯ. ದ್ರಾವಿಡ ವಾಸ್ತುಶೈಲಿಯನ್ನು ಹೊಂದಿರುವ ದೇವಾಲಯದಲ್ಲಿ ಪ್ರಾಚೀನವಾದ ಶಿವಪರಿವಾರದ ಶಿಲ್ಪಗಳಿವೆ.

ಪ್ರಾಚೀನವಾದ ನಾಗರಶಿಲೆಯೊಂದು ನವರಂಗದಲ್ಲಿದ್ದು, ಶಿವಲಿಂಗಕ್ಕೆ ಅಭಿಮುಖವಾಗಿ ನಂದಿಯ ಬಿಂಬವನ್ನಿಡಲಾಗಿದೆ. ದೇವಾಲಯದ ಹೊರ ಆವರಣದಲ್ಲಿ ಕ್ರಮವಾಗಿ ಗಣಪತಿ, ದಕ್ಷಿಣಾಮೂರ್ತಿ, ವಿಷ್ಣು, ಬ್ರಹ್ಮ, ಚಂಡಿಕೇಶ್ವರ, ದುರ್ಗಾದೇವಿಯ ಶಿಲ್ಪಗಳಿವೆ.

ಹುಳಿಮಾವು ಸೋಮೇಶ್ವರ ದೇವಾಲಯ

ಅಷ್ಟಾಗಿ ಪ್ರಸಿದ್ಧವಾಗಿರದ ಹುಳಿಮಾವು ಸೋಮೇಶ್ವರ ದೇವಾಲಯ 10ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಗರ್ಭಗೃಹದಲ್ಲಿ ಶಿವಲಿಂಗ, ನವರಂಗದಲ್ಲಿ ಸೂರ್ಯ, ಭೈರವನ ಶಿಲ್ಪಗಳು ದೇವಾಲಯದ ಪ್ರಾಚೀನತೆಯನ್ನು ಸೂಚಿಸುತ್ತವೆ.

ಚಾಮರಾಜಪೇಟೆ ಮಹದೇಶ್ವರ ದೇವಾಲಯ

ಚಾಮರಾಜಪೇಟೆ ಎರಡನೇ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಮಹದೇಶ್ವರ ದೇವಾಲಯ ಕಲ್ಲಿನ ರಚನೆಯಾಗಿದ್ದು, ಅಧಿಷ್ಠಾನ, ಸರಳವಾದ ಭಿತ್ತಿಯನ್ನು ಹೊಂದಿದೆ. ಚೌಕಾಕಾರದ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಅಂತರಾಳದಲ್ಲಿ ಹುಲಿ ಏರಿದ ಮಹದೇಶ್ವರ ಸ್ವಾಮಿಯ ಬಿಂಬವಿದೆ.  ಆಧುನಿಕ ದೇವಾಲಯಗಳಂತೆ ನವರಂಗವಿರದೆ ಮುಖಮಂಟಪವನ್ನು ಅಂತರಾಳದಿಂದ ಸರಪಳಿಯ ತಡೆಗಟ್ಟಿನಿಂದ ಬೇರ್ಪಡಿಸಿದೆ. ದೇವಾಲಯದ ಗರ್ಭಗೃಹದ ಮೇಲೆ ಶಿಖರವೂ ಪ್ರವೇಶದ್ವಾರದ ಮೇಲೆ ರಾಜಗೋಪುರವೂ ಇದೆ. ದೇವಾಲಯದ ರಸ್ತೆಯ ಇಕ್ಕೆಲದಲ್ಲೂ ಭವ್ಯವಾದ ತೋರಣ ಮಂಟಪ ನಿರ್ಮಿಸಲಾಗಿದೆ.

ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನ

ಇದು ಬನಶಂಕರಿಯ ಬಿಡಿಎ ಕಾಂಪ್ಲೆಕ್ಸ್‌ ಪಕ್ಕದಲ್ಲಿದೆ. ಶಿವರಾತ್ರಿ ದಿನ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಶಿವರಾತ್ರಿ ದಿನದಂದು ನಿರಂತರವಾಗಿ ರುದ್ರಾಭಿಷೇಕ, ಜಲಭಿಷೇಕ ನಡೆಯುತ್ತವೆ.

ಮುನೇಶ್ವರ ಬಡಾವಣೆಯ ಕಾಶಿ ವಿಶ್ವನಾಥ, ದೊಡ್ಡ ಬಸವನಗುಡಿ ಹಿಂಭಾಗದ ಶಿವಾಲಯ, ಡಿ.ವಿ.ಗುಂಡಪ್ಪ ರಸ್ತೆಯ ಶಿವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು ನಡೆಯುತ್ತವೆ.

ಮಹಾಶಿವರಾತ್ರಿ ಕಾರ್ಯಕ್ರಮಗಳು

ಶಿವರಾತ್ರಿ ಪ್ರಯುಕ್ತ ಕಿರುನಾಟಕೋತ್ಸವ: ‘ಮತಿ ಪಲ್ಲಟ’ ಪೌರಾಣಿಕ ನಾಟಕ, ‘ಪಳೆಂಕರು’ ಹಾಸ್ಯ ನಾಟಕಗಳ ಪ್ರದರ್ಶನ, ಆಯೋಜನೆ–ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ಸ್ಥಳ–ಸಿದ್ಧಿವಿನಾಯಕ ಮತ್ತು ಶ್ರೀ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಆವರಣ, ಕನಕನಗರ, ಆರ್‌.ಟಿ.ನಗರ, ರಾತ್ರಿ 9

ಜಾಣಜಾಣೆಯರ ನಗೆ ಜಾಗರಣೆ: ಮಾಸ್ಟರ್‌ ಹಿರಣ್ಣಯ್ಯ, ಮಿಮಿಕ್ರಿ ದಯಾನಂದ್, ಎಂ.ಎಸ್‌.ನರಸಿಂಹಮೂರ್ತಿ, ಪ್ರೊ.ಕೃಷ್ಣೇಗೌಡ, ಆ.ರಾ.ಮಿತ್ರ, ಪ್ರಾಣೇಶ್‌, ಬಸವರಾಜ ಮಹಾಮನಿ, ರವಿಭಜಂತ್ರಿ ಹಾಗೂ ಇತರರ ನಗೆನಾಟಕಗಳು, ಹಾಸ್ಯಕಾವ್ಯಗಳು, ಹಾಸ್ಯ ಸಂಗೀತ, ಹಾಸ್ಯ ಸನ್ನಿವೇಶ, ಹಾಸ್ಯ ಭಾಷಣಗಳು, ಮ್ಯಾಜಿಕ್‌ ಶೋ, ಯಕ್ಷಗಾನದ ತುಣುಕುಗಳ ಕಾರ್ಯಕ್ರಮಗಳು, ಆಯೋಜನೆ–ಜಾಣಜಾಣೆಯರು, ಸ್ಥಳ–ಶಿರೂರು ಪಾರ್ಕ್‌ ಮೈದಾನ, ಮಂತ್ರಿ ಮಾಲ್ ಎದುರು, ರಾತ್ರಿ 7.30

ಮಹಾಶಿವರಾತ್ರಿ: ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ಸಮ್ಮುಖ ಮಹಾರುದ್ರಾಭಿಷೇಕ ಹಾಗೂ ಪೂಜೆ, ಕುಟುಂಬದ ಸದಸ್ಯರು ಒಟ್ಟಾಗಿ ಧ್ಯಾನಕ್ಕೆ ಅವಕಾಶ, ಆಯೋಜನೆ, ಸ್ಥಳ–ಆರ್ಟ್‌ ಆಫ್‌ ಲಿವಿಂಗ್‌ ಇಂಟರ್‌ನ್ಯಾಷನಲ್‌ ಸೆಂಟರ್‌,ಕನಕಪುರ ರಸ್ತೆ, ಸಂಜೆ 6

ನಾಲ್ಕು ಯಾಮಗಳ ಅಭಿಷೇಕ ಮತ್ತು ಪೂಜೆ, ಸಾಮೂಹಿಕ ಕುಲದೇವರ ಪೂಜೆ, ಮಾರ್ಕಂಡೇಶ್ವರಸ್ವಾಮಿ ದೇವಸ್ಥಾನದ 14ನೇ ವಾರ್ಷಿಕೋತ್ಸವ: ಬೆಳಿಗ್ಗೆ 6ಕ್ಕೆ ಅಭಿಷೇಕ, ಪೂಜೆ, ಮಹಾಮಂಗಳಾರತಿ, 6.30ಕ್ಕೆ ಪದ್ಮಶಾಲಿ ಕುಲಬಾಂಧವರಿಂದ ಸಂಗೀತ, ರಾತ್ರಿ 8ಕ್ಕೆ ನಾಲ್ಕು ಯಾಮಗಳಲ್ಲಿ ಅಭಿಷೇಕ, 8ರಿಂದ 10ಕ್ಕೆ ಪಂಚಾಮೃತ ಅಭಿಷೇಕ, 10ರಿಂದ 12 ಕ್ಕೆ ಅರಿಶಿನ, ಕುಂಕುಮ ಅಭಿಷೇಕ, 12ರಿಂದ 1ಕ್ಕೆ ಮೃತ್ಯುಂಜಯ ಹೋಮ, 1ರಿಂದ 3ಗಂಟೆಗೆ ಭಸ್ಮಾಭಿಷೇಕ, ಶತರುದ್ರಾಭಿಷೇಕ, 4ರಿಂದ 6 ಕ್ಕೆ–ಪಂಚಾಮೃತ ಅಭಿಷೇಕ, ಪುಷ್ಪಾಭಿಷೇಕ, ಆಯೋಜನೆ–ಕರ್ನಾಟಕ ಪದ್ಮಶಾಲಿ ಸಂಘ, ಸ್ಥಳ–ಮಾರ್ಕಂಡೇಶ್ವರಸ್ವಾಮಿ ದೇವಸ್ಥಾನದ ಪ್ರಾರ್ಥನಾ ಮಂದಿರ, 2ನೇ ಮುಖ್ಯರಸ್ತೆ, ಮಾರ್ಕಂಡೇಶ್ವರ ನಗರ, ಬಿನ್ನಿಮಿಲ್‌

ಮೃತ್ತಿಕಾ ಶಿವಲಿಂಗ ದರ್ಶನ: ಬೆಳಿಗ್ಗೆ 10ಕ್ಕೆ ವಿನಾಯಕ ಭಜನಾ ಮಂಡಳಿ. ಟಿ.ದಾಸರಹಳ್ಳಿ ಅವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12–ಶಾರದಾದೇವಿ ಆದ್ಯಾತ್ಮಿಕ ಸಂಘದಿಂದ ಶಿವಸಂಕೀರ್ತನೆ, 5.30ರಿಂದ ರಂಜನಿ ಗಾನ ವೃಂದದಿಂದ ದೇವರನಾಮಗಳು, ಸಂಜೆ 6.30–ರುದ್ರಾಭಿಷೇಕ, ರಾತ್ರಿ 9–ಮಹಾಮಂಗಳಾರತಿ, ಪ್ರಸಾದ, ಆಯೋಜನೆ–ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘ, ಸ್ಥಳ–ಶ್ರೀಕಠೇಶ್ವರ ಭವನ, 5 ನೇ ಅಡ್ಡರಸ್ತೆ, ಮಲ್ಲೇಶ್ವರ

‘ಕೃಷ್ಣಪ್ರಿಯ ಕನಕ’ ನೃತ್ಯರೂಪಕ: ರಚನೆ–ಕಲಾಕೇಸರಿ ಉದಯಕುಮಾರ್‌, ಸಾಹಿತ್ಯ–ಪುರಂದರದಾಸ, ಕನಕದಾಸ, ಸಂಗೀತ–ಯೋಗೇಶ್‌, ನಿರ್ಮಾಣ–ಸುಶೀಲಾದೇವಿ ಉದಯಕುಮಾರ್‌, ನಿರ್ದೇಶನ–ರೇಣುಕಾ ಬಾಲಿ ಉದಯಕುಮಾರ್‌, ಬೆಳಕು–ಠಾಕೂರ್‌ ನೀನಾಸಂ, ಪ್ರಸಾದನ–ಉಮೇಶ್‌, ರಂಗಸಜ್ಜಿಕೆ–ಪೃಥ್ವಿರಾಜ್‌, ಸಹಾಯ–ಸಂತೋಷ್‌ ಕುಲಕರ್ಣಿ, ಆಯೋಜನೆ–ಉದಯ ಕಲಾ ನಿಕೇತನ, ಸ್ಥಳ–ವರದಾಂಜನೇಯ ಸ್ವಾಮಿ ದೇವಸ್ಥಾನ, ಆರ್‌ಬಿಐ ಲೇಔಟ್‌, ಜೆ.ಪಿ.ನಗರ, 7ನೇ ಹಂತ, ಸಂಜೆ 6

ಆನಂದಲಿಂಗೇಶ್ವರ ದೇವಸ್ಥಾನ: ಅಮರರಂಗೋತ್ಸವದಲ್ಲಿ ಎರಡು ನಾಟಕಗಳ ಪ್ರದರ್ಶನ, ‘ವರಭ್ರಷ್ಟ’ ಪೌರಾಣಿಕ ನಾಟಕ, ಆಯೋಜನೆ–ನಾಟಕ ಮನೆ, ರಚನೆ–ಎನ್‌.ಎಸ್‌.ರಾವ್‌, ‘ವಜ್ರಪಂಜರ’ ಐತಿಹಾಸಿಕ ನಾಟಕ, ನಿರ್ದೇಶನ–ಡಿ.ವೆಂಕಟರಮಣಯ್ಯ, ನಿರ್ವಹಣೆ–ಶಾಂತಲಾದೇವಿ, ಆಯೋಜನೆ–ಅಮರೇಶ್ವರ ವಿಜಯ ನಾಟಕ ಮಂಡಳಿ, ಸ್ಥಳ–ಆರ್‌.ಟಿ.ನಗರದ ಚೋಳನಾಯಕನಹಳ್ಳಿಯ ದೇವಸ್ಥಾನದ ಆವರಣ, ರಾತ್ರಿ 9

ಕಾಶಿ ವಿಶ್ವನಾಥರ ದೇವಸ್ಥಾನ: ಅತಿಥಿಗಳು–ಜಗದೀಶ್‌ ಹಿರೇಮನ್‌, ಗಂಗಾಂಬಿಕೆ ಮಲ್ಲಿಕಾರ್ಜುನ, ನಾಗರತ್ನಮ್ಮ, ದಿನೇಶ್‌, ಕೆ.ವಾಸುದೇವಮೂರ್ತಿ, ಮಹೇಶ್‌ ಅರವಿಂದ್‌, ಬೆಳಿಗ್ಗೆ 10–ಕಳಸ ಪೂಜೆ, ಹೋಮ, ರುದ್ರಾಭಿಷೇಕ, ಮಹಾ ಮಂಗಳಾರತಿ, ಸಂಜೆ 6–ದೀಪ ಬೆಳಗುವಿಕೆ, ದೇವಸ್ಥಾನದ ಭಕ್ತರಿಂದ ದೇವರ ಸ್ತುತಿ, 6.30–ನಂದಿನಿ ಅವರಿಂದ ಭರತನಾಟ್ಯ, 7ಕ್ಕೆ–ಇ.ಯೋಗಮೂರ್ತಿ ಅವರಿಂದ ದೈವೀಕ ಭಾಷಣ, 7.30ಕ್ಕೆ–ಧೀಮ್‌ ಧಿರನ ಮ್ಯೂಸಿಕ್‌ ಎಂ.ಕೆ.ಟಿ.ರಾಜ ಅವರಿಂದ ಭಕ್ತಿ ಗೀತೆಗಳು, ರಾತ್ರಿ 12.30– ಅಂಬಲ ಕೊತ್ತನ್‌ ಅವರಿಂದ ಕಥಾಕಾಲಕ್ಷೇಪ, ಸ್ಥಳ–ಕಾಶಿ ವಿಶ್ವನಾಥ ದೇವಸ್ಥಾನದ ರಸ್ತೆ, ವಿವೇಕನಗರ

ಭಾರತೀಯ ಲಲಿತ ಕಲಾ ಸಂಸ್ಥೆ: ಶಿವಕುಮಾರ್‌ ಸ್ವಾಮೀಜಿ ಸ್ಮರಣಾರ್ಥ ಶಿವರಾತ್ರಿ ಅಭಿನಂದನಾ ಕಾರ್ಯಕ್ರಮ, ಸಾನ್ನಿಧ್ಯ–ಕುಮಾರಚಂದ್ರಶೇಖರನಾಥ ಸ್ವಾಮೀಜಿ, ಅಧ್ಯಕ್ಷತೆ–ವಿ.ಗೋಪಾಲಗೌಡರು, ಕವನ ಸಂಕಲನ ಬಿಡುಗಡೆ–ಗಂಗಾಂಬಿಕೆ ಮಲ್ಲಿಕಾರ್ಜುನ, ನೃತ್ಯ ಗುರುಗಳಿಗೆ ಅಭಿನಂದನೆ–ಬಿ.ಭದ್ರೇಗೌಡ, ಉದ್ಘಾಟನೆ–ಎಚ್‌.ಡಿ.ದೇವೇಗೌಡ, ಪ್ರಶಸ್ತಿ ಪ್ರದಾನ–ದಿನೇಶ್‌ ಗುಂಡೂರಾವ್‌, ಬಡಮಕ್ಕಳಿಗೆ ವಸ್ತ್ರ ವಿತರಣೆ–ಸೌಮ್ಯಾ ರೆಡ್ಡಿ, ಕರ್ನಾಟಕ ನವಚೇತನ ಪ್ರಶಸ್ತಿ ಪುರಸ್ಕೃತರು–ಚಿದಾನಂದಮೂರ್ತಿ, ಆರ್‌.ಕೆ.ಪದ್ಮನಾಭ, ಶುಭ ಧನಂಜಯ, ಪಿ.ಸೆಲ್ವಿದಾಸ್‌, ಓಂ ಪ್ರಕಾಶ್‌, ವೆಂಕಟ ದುರ್ಗಪ್ರಸಾದ್, ಕೆ.ಎಎಸ್‌.ನವೀನ್‌, ಎಸ್‌.ಪಿ.ದಯಾನಂದ್‌, ಕೆ.ಸಿ.ಸೆಲ್ವನ್‌. ಜಿ.ಬಾಬು, ಸ್ಥಳ–ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 5.45

ಪಂಚಲಿಂಗೇಶ್ವರ ಸ್ವಾಮಿ ದೇವಾಲಯ: ರಜತ ಮಹೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ, ಬೆಳಿಗ್ಗೆ 7ಕ್ಕೆ ಪಂಚಾಮೃತ, ರುದ್ರಾಭಿಷೇಕ, 9ಕ್ಕೆ–ಮಹಾಮಂಗಳಾರತಿ, ಮಹಾ ಸಂಕಲ್ಪ, ರುದ್ರಹವನ, 12–ಪೂರ್ಣಾಹುತಿ, ಕುಂಭಾಭಿಷೇಕ, ರಜತನಾಗ ಸಮರ್ಪಣೆ, ಮಹಾಮಂಗಳಾರತಿ, ಸಂಜೆ 5–ಪ್ರಥಮ ಯಾಮದ ಅಭಿಷೇಕ, 6ಕ್ಕೆ ಲಕ್ಷದೀಪೋತ್ಸವ ಮತ್ತು ಪ್ಯಾಲೇಸ್‌ ಗುಟ್ಟಹಳ್ಳಿಯ ಮಾರಮ್ಮ ದೇವಾಲಯದ ರಸ್ತೆಯಲ್ಲಿ ಪ್ರಾಕಾರೋತ್ಸವ, 9ಕ್ಕೆ–ದ್ವಿತೀಯ ಯಾಮದ ಅಭಿಷೇಕ, ರಾತ್ರಿ 12ರಿಂದ ತೃತೀಯ ಯಾಮದ ಅಭಿಷೇಕ, ಆಯೋಜನೆ–ಆಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್‌, ಸ್ಥಳ–ಗುಟ್ಟಹಳ್ಳಿ

ಸತ್ಯಸಾಯಿ ಆಶ್ರಮ: 12 ಗಂಟೆಗಳ ಕಾಲ ಅಖಂಡ ಭಜನೆ, ಸ್ಥಳ–ಸಾಯಿ ರಮೇಶ್ ಹಾಲ್‌, ಬೃಂದಾವನ, ಕಾಡುಗೋಡಿ, ವೈಟ್‌ಫೀಲ್ಡ್‌, ಸಂಜೆ 6

ಮಹಾಶಿವರಾತ್ರಿ ಮಹೋತ್ಸವ ಸಮಿತಿ: ಸಂಜೆ 6–ಗಾಯಿತ್ರಿ ಮಹಿಳಾ ಮಂಡಳಿ ಸದಸ್ಯರಿಂದ ಭಜನೆ, ಸಂಜೆ 7–ನೀಲಾಂಬಿಕ ಸಮಾಜದ ವತಿಯಿಂದ ಭಕ್ತಿಗೀತೆಗಳು, 8–ಯಕ್ಷ ಸಂಭ್ರಮ ಹುಳಿಮಾವು ತಂಡದಿಂದ ‘ಸುಕನ್ಯಾ’ ಕಲ್ಯಾಣ ನಾಟಕ ಪ್ರದರ್ಶನ, 11.45–ಮಹಾಮಂಗಳಾರತಿ, ಅತಿಥಿಗಳು–ಎಂ.ಕೃಷ್ಣಪ್ಪ, ಶಶಿರೇಖಾ ಜಯರಾಮ್‌, ಲಲಿತಾ ಟಿ.ನಾರಾಯಣ್‌, ಮುನಿರಾಜು ಗೌಡ, ಸ್ಥಳ–ಸೋಮೇಶ್ವರ ಸಭಾಭವನ, ಆರ್‌ಬಿಐ ಲೇಔಟ್‌, ಜೆ.ಪಿ.ನಗರ, 7ನೇ ಹಂತ

ವಿಎಲ್‌ಎನ್‌ ನಿರ್ಮಾಣ್‌ ಪುರಂದರ ಪ್ರತಿಷ್ಠಾನ: ಶಿವಗಾನಾಮೃತ ಭಕ್ತಿಗೀತೆಗಳ ಗಾಯನ–ಹಿಂದೂಸ್ತಾನಿ ಗಾಯಕ ಹೆಗ್ಗಾರ ಅನಂತ ಹೆಗಡೆ ಅವರಿಂದ, ತಬಲಾ–ವಿನಾಯಕ ಅನಂತ ಹೆಗಡೆ, ತಾಳ ಹಾಗೂ ಟ್ಯಾಂಬೊರಿನ್‌–ಗೌರೀಶ್ ಅನಂತ ಹೆಗಡೆ, ತಂಬೂರ–ಜಗನ್ನಾಥ, ಸ್ಥಳ–ಪುರಂದರ ಮಂಟಪ, ನಿಸರ್ಗ ಬಡಾವಣೆ, ಬನ್ನೇರುಘಟ್ಟ ಸಮೀಪ, ಸಂಜೆ 6

ಶಿವರಾತ್ರಿ ಪ್ರಯುಕ್ತ ಹಾಸ್ಯ ನಾಟಕ ಪ್ರದರ್ಶನ: ನಾಟಕ– ‘ಮಾಡಿದ್ದುಣ್ಣೋ ಮಹರಾಯ’. ತಂಡ– ನಾಟಕಮನೆ. ಆಯೋಜನೆ– ಸಿದ್ಧಿ ವಿನಾಯಕ ಮತ್ತು ಮೀನಾಕ್ಷಿ ಸುಂದರೇಶ್ವರ ದೇವಸ್ಥಾನ ಟ್ರಸ್ಟ್‌. ಸ್ಥಳ– ಸಿದ್ಧಿ ವಿನಾಯಕ ಮತ್ತು ಮೀನಾಕ್ಷಿ ದೇವಾಲಯದ ಆವರಣ, ಕನಕನಗರ, ಆರ್‌.ಟಿ.ನಗರ. ರಾತ್ರಿ 7.30

ಪರಮಹಂಸ ಸನ್ಯಾಸ ಆಶ್ರಮ: ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಭಕ್ತರಿಂದ ಅಖಂಡ ಶಿವಪಂಚಾಕ್ಷರಿ ನಾಮಜಪ. ಸಂಜೆ 6ರಿಂದ ಭಜನೆ. ರಾತ್ರಿ 12ಕ್ಕೆ ನಾಮ ಸಂಕೀರ್ತನೆ–ನಾಗನಲ್ಲೂರು ಮುರಳಿ ಭಾಗವತರ್‌ ಮತ್ತು ವೃಂದ. ಆಯೋಜನೆ, ಸ್ಥಳ– ಪರಮಹಂಸ ಸನ್ಯಾಸ ಆಶ್ರಮ, ನಂ 61, 9ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, ರಹೇಜಾ ಅಪಾರ್ಟ್‌ಮೆಂಟ್‌ ಎದುರು, ಗೋವಿಂದರಾಜನಗರ.

ಮಹಾಯಾಗ ಕ್ಷೇತ್ರ, ಶ್ರೀ ಗಾಯತ್ರಿ ದೇವಸ್ಥಾನ, ಸ್ವರ್ಣಗೌರಿ ಸಮೇತ ಅಗಸ್ತೇಶ್ವರ ಸ್ವಾಮಿ ಸನ್ನಿಧಿ: ಬೆಳಿಗ್ಗೆ 7ಕ್ಕೆ ಪೂರ್ವಕ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ. ಬೆಳಿಗ್ಗೆ 10ಕ್ಕೆ ಸ್ವರ್ಣಗೌರಿ ಅಗಸ್ತೇಶ್ವರ ಸ್ವಾಮಿ ಕಲ್ಯಾಣೋತ್ಸವ. ಕಾಶಿ ಸಾಲಿಗ್ರಾಮ ಶತಲಿಂಗಗಳಿಗೆ ಭಕ್ತರಿಂದಲೇ ಕ್ಷೀರಾಭಿಷೇಕ, ಬಿಲ್ವಾರ್ಚನೆ. ಜಾಗರಣೆ ಪ್ರಯುಕ್ತ ಅಹೋರಾತ್ರಿ ಸಂಗೀತ ನೃತ್ಯೋತ್ಸವ. ಸ್ಥಳ–ಯಶವಂತಪುರ.

ಶಂಕರ ಜಯಂತಿ ಮಂಡಲಿ: ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ. ಮಧ್ಯಾಹ್ನ 3ರಿಂದ ಸಂಜೆ 7.30ರವರೆಗೆ ರುದ್ರಾಭಿಷೇಕ, ಪೂಜೆ, ಶಿವಸ್ತೂತ್ರಗಳ ಪಠಣ, ಮಹಾ ಮಂಗಳರಾತಿ. ಸ್ಥಳ– ಶಂಕರ ಜಯಂತಿ ಮಂಡಲಿ, ನಂ– 45, ಶಂಕರ ಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬ್ಲಾಕ್‌, ಜಯನಗರ.

ಮುನೇಶ್ವರಸ್ವಾಮಿ ದೇವಾಲಯ: ಶಿವರಾತ್ರಿ ಪ್ರಯುಕ್ತ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಗಳು. ರಾತ್ರಿ 7ಕ್ಕೆ ಗಣಹೋಮ, ನವಗ್ರಹ ಹೋಮ, ರುದ್ರಹೋಮ. ರಾತ್ರಿ 7.30ಕ್ಕೆ ಪಂಚಾಮೃತ ಅಭಿಷೇಕ ಅಲಂಕಾರ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ. ರಾತ್ರಿ 9.30ಕ್ಕೆ ಜಾಗರಣೆ ಕಾರ್ಯಕ್ರಮ. ಆಯೋಜನೆ– ಮುನೇಶ್ವರ ಭಕ್ತಮಂಡಲಿ. ಸ್ಥಳ– ಮುನೇಶ್ವರ ದೇವಸ್ಥಾನ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ.

ಜಯನಗರ ಮಹಾಶಿವರಾತ್ರಿ ಉತ್ಸವ: ಸಂಜೆ 6ಕ್ಕೆ ಜಾನಪದ ಕಲಾ ತಂಡಗಳಾದ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಬೀಸು ಕಂಸಾಳೆಯಿಂದ ಉತ್ಸವಕ್ಕೆ ಚಾಲನೆ. ರಾತ್ರಿ 7ರಿಂದ 8 ಗಂಟೆವರೆಗೆ– ಮೇಘನಾ ವೆಂಕಟೇಶ್‌ ಮತ್ತು ತಂಡದವರಿಂದ ಭಕ್ತಿ ಭಾವ ಗೀತೆಗಳ ಗಾಯನ. ರಾತ್ರಿ 8ರಿಂದ 9 ಗಂಟೆಗೆ– ಲಯ ಲಾವಣ್ಯ ತಂಡದಿಂದ ‘ವಾದ್ಯ ವೈಭವ’. ರಾತ್ರಿ 9ರಿಂದ 10 ಗಂಟೆ– ಶ್ರದ್ಧಾ ಡಾನ್ಸ್‌ ಸೆಂಟರ್‌ ತಂಡದಿಂದ ‘ನವರಸ ನಾಯಕ ನಟರಾಜ’. ರಾತ್ರಿ 10ರಿಂದ 11 ಗಂಟೆ– ಪ್ರಭಾತ್‌ ಆರ್ಟ್ಸ್‌ ಇಂಟರ್‌ನ್ಯಾಷನಲ್‌ ಕಲಾವಿದರಿಂದ ‘ಮೋಹಿನಿ ಭಸ್ಮಾಸುರ’. ರಾತ್ರಿ 11ರಿಂದ 12 ಗಂಟೆ– ವೈ.ವಿ.ಗುಂಡೂರಾವ್‌ ಅವರಿಗೆ ‘ನಗೆಹೊನಲು’. ರಾತ್ರಿ 12ರಿಂದ 1 ಗಂಟೆ– ಸೂರ್ಯ ಕಲಾವಿದರಿಂದ ‘ಪುಣ್ಯಕೋಟಿ’ ಗೀತ ನಾಟಕ. ಮುಂಜಾನೆ 2ರಿಂದ 3 ಗಂಟೆ– ಪ್ರಸಾಧನ ಟ್ರಸ್ಟ್‌ ವತಿಯಿಂದ ‘ಶ್ರೀ ಕೃಷ್ಣ ಸಂಧಾನ’ ಹಾಸ್ಯ ನಾಟಕ. ಮುಂಜಾನೆ 3ರಿಂದ 4 ಗಂಟೆ– ಸುಪ್ರೀತ್‌ ಗಾಂಧಾರ್‌ ಮತ್ತು ತಂಡದವರಿಂದ ‘ಗಾನ ಬಜಾನ’. ಆಯೋಜನೆ– ಜಯನಗರ ಮಹಾಶಿವರಾತ್ರಿ ಉತ್ಸವ ಸಮಿತಿ. ಸ್ಥಳ– ದುರ್ಗಾಪರಮೇಶ್ವರಿ ಆಟದ ಮೈದಾನ, ಜೆ.ಪಿ.ನಗರ 2ನೇ ಹಂತ.

ರಾಜರಾಜೇಶ್ವರಿನಗರದಲ್ಲಿ ಶಿವರಾತ್ರಿ: 30 ಅಡಿ ಎತ್ತರದ ಶಿವನ ವಿಗ್ರಹ ಸ್ಥಾಪನೆ ಹಾಗೂ ಜಾಗರಣೆ ಪ್ರಯುಕ್ತ ಅಹೋರಾತ್ರಿ ಮನರಂಜನಾ ಕಾರ್ಯಕ್ರಮ. ಅತಿಥಿಗಳು– ಡಿ.ಕೆ.ಸುರೇಶ್‌, ಮುನಿರತ್ನ, ಜಿ. ಮೋಹನ್‌ ಕುಮಾರ್‌. ಸಂಜೆ 5.30ಕ್ಕೆ ಸ್ನೇಹಾಂಜಲಿ ಎಂಟರ್‌ಬೈನರ್ಸ್‌ ಮತ್ತು ಪ್ರೀತ್ಸ್‌ ಇವೆಂಟ್ಸ್‌ ತಂಡದಿಂದ ಸಂಗೀತ ರಸ ಸಂಜೆ ಮತ್ತು ನೃತ್ಯ ಕಾರ್ಯಕ್ರಮ. ರಾತ್ರಿ 7.20ಕ್ಕೆ ಜೂನಿಯರ್‌ ರಾಜ್‌ಕುಮಾರ್‌ ಅವರಿಂದ ವಿಶೇಷ ಕಾರ್ಯಕ್ರಮ. ರಾತ್ರಿ 7.30ಕ್ಕೆ ಗಾಯಕರಾದ ಹೇಮಂತ್‌ ಸುಬ್ರಹ್ಮಣ್ಯ, ಅನುರಾಧ ಭಟ್‌, ಮಾನಸಹೊಳ್ಳ ಅವರಿಂದ ಸಂಗೀತ ರಸ ಸಂಜೆ. ರಾತ್ರಿ 8.30ಕ್ಕೆ ರಿಷು, ಪುರುಷೋತ್ತಮ್‌ ಅವರಿಂದ ಸಂಗೀತ ರಸ ಸಂಜೆ, ಮನು ಡಾನ್ಸ್‌ ಸ್ಟುಡಿಯೊ ಕಲಾವಿದರಿಂದ ನೃತ್ಯ. ರಾತ್ರಿ 9.10ಕ್ಕೆ ನಟಿ ಶುಭ ರಕ್ಷಾ, ಅಟಲ್‌ ಚಾಂಪ್‌ ಪ್ರಕೃತಿ ರೆಡ್ಡಿ ಅವರಿಂದ ಸಂಗೀತ ರಸ ಸಂಜೆ. ರಾತ್ರಿ 9.30ಕ್ಕೆ ನಟಿ ಹರ್ಷಿಕಾ ಪೂಣಚ್ಚ ನೃತ್ಯ ಕಾರ್ಯಕ್ರಮ. ರಾತ್ರಿ 9.45ಕ್ಕೆ ನಟಿಯರಾದ ಸೋನುಗೌಡ, ಅಕ್ಷತಾ ಅವರಿಂದ ನೃತ್ಯ. ರಾತ್ರಿ 12ಕ್ಕೆ ಗಂಗಾವತಿ ಪ್ರಾಣೇಶ್‌ ಮತ್ತು ತಂಡದಿಂದ ‘ನಗೆಹಬ್ಬ’. ರಾತ್ರಿ 1ಕ್ಕೆ ಮಿಮಿಕ್ರಿ ಗೋಪಿ ಮತ್ತು ತಂಡದವರಿಂದ ‘ಹಾಸ್ಯ ಲಾಸ್ಯ’. ಸ್ಥಳ– ಲಗ್ಗೆರೆ ಬ್ರಿಡ್ಜ್‌ ಹತ್ತಿರ, ಡಾ. ವಿಷ್ಣುವರ್ಧನ್‌ ಆಟದ ಮೈದಾನ (ರಾಕ್ಷಸಿಹಳ್ಳ).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !