ತಂದೆಯ ನೆರಳಲ್ಲಿ ಹಾಡಿನ ಜಾಡು ಹಿಡಿದು...

7

ತಂದೆಯ ನೆರಳಲ್ಲಿ ಹಾಡಿನ ಜಾಡು ಹಿಡಿದು...

Published:
Updated:

‘ಶ್ರೀವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೇ,

ಜಗಕತಿ ಪಾವನನೆ ಸನಕಾದಿ ಸಜ್ಜನನಿಕರ ದಾತಾರ...’

83 ವರ್ಷದ ಆ ಹಿರಿಯ ಗಾಯಕಿ ಹಾಡುತ್ತಿದ್ದರೆ, ಕಂಚಿನ ಕಂಠದ ಆ ಧ್ವನಿ ಎಂಥವರನ್ನೂ ಮೋಡಿ ಮಾಡುತ್ತದೆ. ಇವರು ಮಾಲಾ ದೀಕ್ಷಿತ್‌. ಬರೀ ಹಾಡುಗಾರಿಕೆಯಲ್ಲ ಮಾತ್ರವಲ್ಲ. ನಾಟಕ ಕಲಾವಿದೆ, ಹೂ– ಹಣ್ಣುಗಳನ್ನು ಬಹು ಸುಂದರವಾಗಿ ಜೋಡಿಸುವ ಕಲೆ, ಕೇಕ್‌ ತಯಾರಿಕೆ, ಕೇಕ್‌ ಡೆಕೊರೇಷನ್ ಹೀಗೆ ವಿವಿಧ ಪ್ರಕಾರಗಳಲ್ಲಿ ಮಾಲಾ ಅವರದು ಎತ್ತಿದ ಕೈ. ಹವ್ಯಾಸವಾಗಿ ರಷ್ಯನ್ ಭಾಷೆಯನ್ನೂ ಕಲಿತವರು ಮಾಲಾ.

ಮಾಲಾ ಅವರ ಬಗ್ಗೆ ಇಷ್ಟು ಮಾತ್ರ ಹೇಳಿದರೆ ಸಾಲದು. 1950ರಲ್ಲಿ ಧಾರವಾಡ ಆಕಾಶವಾಣಿ ಆರಂಭವಾದಾಗ ಆರಂಭಿಕ ಗೀತೆಯಾಗಿ ವಂದೇ ಮಾತರಂ ಪ್ರಸಾರ ಮಾಡಲಾಗಿತ್ತು. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು ಮತ್ತು ವಿ.ಎ. ಕಾಗಲಕರ ಅವರಲ್ಲದೇ ಮಾಲಾ ಅವರ ತಂದೆ ಗುರುರಾವ್ ದೇಶಪಾಂಡೆ ಅವರೂ ಹಾಡಿದ್ದರು.

ಖ್ಯಾತ ಕರ್ನಾಟಕ ಸಂಗೀತ ಗಾಯಕರಾಗಿದ್ದ ಗುರುರಾಯರು ಉತ್ತಮ ಗಮಕ ಕಲಾವಿದರೂ ಆಗಿದ್ದರು. ತಮ್ಮ ತಂದೆ ನಾರಾಯಣರಾವ್ ದೇಶಪಾಂಡೆ ಅವರಿಂದ ಕರ್ನಾಟಕ ಸಂಗೀತ ಕಲಿತಿದ್ದ ಗುರುರಾಯರು ಮಗಳಿಗೆ ಕರ್ನಾಟಕ ಸಂಗೀತದ ಜತೆ ಗಮಕವನ್ನೂ ಕಲಿಸಿದ್ದರು.

ಮಾಲಾ ಅವರ ತಾಯಿ ಇಂದಿರಾಬಾಯಿ ಅವರು ಮಾಲಾ ಅವರು ಎಂಟು ವರ್ಷದವರಿದ್ದಾಗಲೇ ತೀರಿಕೊಂಡಿದ್ದರು. ಹೀಗಾಗಿ ಮಾಲಾ ಮತ್ತು ಇತರ ನಾಲ್ವರನ್ನು (ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಸೇರಿ ಒಟ್ಟು ಐದು ಮಕ್ಕಳು) ಗುರುರಾಯರು ಮತ್ತು ಮಾಲಾ ಅವರ ಸೋದರತ್ತೆ ಬೆಳೆಸಿದ್ದರು.

ಮಾಲಾ ಅವರು ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದರು. ಪ್ರಾಣಿಶಾಸ್ತ್ರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮೊದಲ ದರ್ಜೆಯಲ್ಲಿ ಪಾಸಾಗಿದ್ದ ಅವರು ಹುಬ್ಬಳ್ಳಿಯ ಪಿ.ಸಿ. ಜಾಬಿನ ಕಾಲೇಜಿನಲ್ಲಿ ಜೀವ ವಿಜ್ಞಾನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನಂತರ ಎಚ್‌.ಎಸ್‌. ಕೋತಂಬ್ರಿ ಕಾಲೇಜಿನಲ್ಲಿ ಜೀವವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.

ಮನೆಯಲ್ಲಿ ಸಂಗೀತದ ವಾತಾವರಣ ಇದ್ದರೂ ಇವರ ವಿಜ್ಞಾನದ ಕಡೆಗಿನ ಒಲವಿನಿಂದಾಗಿ ಸಂಗೀತದತ್ತ ಅಷ್ಟು ಗಮನ ನೀಡಿರಲಿಲ್ಲ. ಆದರೆ ತಂದೆ ಗುರುರಾಯರು ಸಂಗೀತ ತರಗತಿಗಳನ್ನು ನಡೆಸುತ್ತಿದ್ದ ಕಾರಣ ಸಹಜವಾಗಿಯೇ ಕಿವಿಗೆ ಸಂಗೀತದ ನಾದ ಬೀಳುತ್ತಿತ್ತು. ಆರಂಭದಲ್ಲಿ ಸುಗಮ ಸಂಗೀತವನ್ನು ಹಾಡುತ್ತಿದ್ದ ಮಾಲಾ ಅವರಿಗೆ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಬೇಕೆಂಬ ಹಂಬಲವಾಗಿ ಹರಳುಗಟ್ಟಿದ್ದು 50 ವರ್ಷ ದಾಟಿದ ಬಳಿಕ. ಮಕ್ಕಳನ್ನು ಸಂಗೀತ ಶಾಲೆಗೆ ಕಳಿಸಬೇಕೆಂಬ ಹಂಬಲ ಇವರಲ್ಲೂ ಸಂಗೀತದ ಒಲವು ಮೂಡಿಸಿತು. ಹಿರಿಯ ಗಾಯಕ ಎನ್‌.ಜಿ. ಮೋಡಕ್ ಅವರಲ್ಲಿ ಸಂಗೀತಾಭ್ಯಾಸವನ್ನು ಆರಂಭಿಸಿದರು.

ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರವಾದ ಮೊದಲ ನಾಟಕ ‘ಎಚ್ಚಮನಾಯಕ’ (ನಿರ್ದೇಶನ: ಕೆ.ಜಿ.ಹಣಸಗಿ)ಯಲ್ಲಿ ಮಾಲಾ ಪಾತ್ರ ನಿರ್ವಹಿಸಿದ್ದರು.

ಧಾರವಾಡ ಆಕಾಶವಾಣಿಯಲ್ಲಿ ಬಿ ಹೈ ಗ್ರೇಡ್ ಕಲಾವಿದರಾಗಿದ್ದ ಮಾಲಾ ಅವರು ಸುಮಾರು 25 ವರ್ಷಗಳ ಕಾಲ ಸುಗಮ ಮತ್ತು ಶಾಸ್ತ್ರೀಯ ಸಂಗೀತ ಕಲಾವಿದರಾಗಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ತಮಗೆ 75 ವರ್ಷ ದಾಟಿದ ಬಳಿಕ ಇನ್ನು ಸಾಕು ಎಂದು ತಮಗೆ ತಾವೇ ನಿರ್ಧರಿಸಿ ಆಕಾಶವಾಣಿಗೆ ಪತ್ರ ಬರೆದು ಧನ್ಯವಾದ ಹೇಳುವ ಜತೆಗೆ ನಿವೃತ್ತಿಯಾಗುತ್ತಿರುವ ವಿಚಾರವನ್ನೂ ತಿಳಿಸಿದರು.

ಧಾರವಾಡದ ಕರ್ನಾಟಕ ಹೈಸ್ಕೂಲ್, ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಹುಮಾನ ಗಿಟ್ಟಿಸುತ್ತಿದ್ದ ಮಾಲಾ ಅವರು ನವದೆಹಲಿಯಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.

ಬರೀ ಭಾರತದಲ್ಲಿ ಮಾತ್ರವಲ್ಲ ಅಮೆರಿಕದಲ್ಲೂ ಅಲ್ಲಿನ ಕನ್ನಡ ಸಂಘಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಆಕಾಶವಾಣಿಯ ರೇಡಿಯೊ ನಾಟಕಗಳಲ್ಲಿ ಅಭಿನಯಿಸಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಮಾಲಾ ಅವರು, ಆಕಾಶವಾಣಿಯ ನಿಲಯ ನಿರ್ದೇಶಕರಾಗಿ ನಿವೃತ್ತರಾದ ಡಾ. ಬಸವರಾಜ ಸಾದರ ಅವರ ಪ್ರೋತ್ಸಾಹವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಮರಾಠಿ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿದ್ದ ಮಾಲಾ ಅವರ ನಾಟಕ ಹುಬ್ಬಳ್ಳಿ ಮತ್ತಿತರ ಕಡೆಗಳಲ್ಲಿ ಅವರ ನಿರ್ದೇಶನದಲ್ಲಿ ಪ್ರದರ್ಶನವಾಗಿತ್ತು. ಆಕಾಶವಾಣಿಯಲ್ಲಿ ಡಿ.ಎಸ್. ಕರ್ಕಿ, ಆನಂದಕಂದ (ಬೆಟಗೇರಿ ಕೃಷ್ಣಶರ್ಮ) ಮತ್ತಿತರ ಕವಿಗಳ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಮಾಲಾ ಅವರು ವಿಜ್ಞಾನ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ರೇಡಿಯೊ ಭಾಷಣಗಳನ್ನೂ ಮಾಡಿದ್ದಾರೆ.

ಗುರುದೇವ ರಾನಡೆ ಅವರ ಕಟ್ಟಾ ಶಿಷ್ಯೆಯಾದ ಮಾಲಾ ಅವರು ಮನಶಾಸ್ತ್ರಜ್ಞ ಪ್ರೊ.ಸಿ.ಸಿ. ದೀಕ್ಷಿತ್ ಅವರ ಪತ್ನಿ. ಪ್ರೊ. ದೀಕ್ಷಿತರ ತಂದೆ ಚಿದಂಬರ ದೀಕ್ಷಿತರು ಪ್ರಕಾಂಡ ಪಂಡಿತರು. ಚಿದಂಬರರ ಚರಿತ್ರೆಯನ್ನು ಗದ್ಯ ರೂಪದಲ್ಲಿ ಪ್ರಸ್ತುತಪಡಿಸಿದ್ದ ಚಿದಂಬರ ದೀಕ್ಷಿತರು ಭಾಮಿನಿ ಷಟ್ಪದಿಯಲ್ಲಿ ಕೂಡ ಪದ್ಯ ರೂಪದಲ್ಲಿ ಚಿದಂಬರ ಚರಿತ್ರೆಯನ್ನು ಬರೆದಿದ್ದಾರೆ. ಸೊಸೆಯ (ಮಾಲಾ ಅವರ) ಕಲಾ ಸೇವೆಗೆ ಮಾವ ಚಿದಂಬರರು ಅಪಾರ ಪ್ರೋತ್ಸಾಹ ನೀಡುತ್ತಿದ್ದರು. ಪ್ರೊ. ಸಿ.ಸಿ. ದೀಕ್ಷಿತರ ಅಣ್ಣ ಯಜ್ಞೇಶ್ವರ ದೀಕ್ಷಿತರು ಉತ್ತಮ ಲೇಖಕರಾಗಿದ್ದು ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು.

ಮಾಲಾ ಮತ್ತು ಪ್ರೊ. ದೀಕ್ಷಿತ ದಂಪತಿಗೆ ರಚನಾ ಮತ್ತು ನಂದನಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದು ಇಬ್ಬರೂ ಅಮೆರಿಕದಲ್ಲಿ ನೆಲೆಸಿದ್ದಾರೆ. ರಚನಾ ಅವರು ಸಹ ಉತ್ತಮ ಗಾಯಕಿ.

ಕುವೆಂಪು ಅವರ ‘ಅಗಣಿತ ತಾರಾ ಗಣಗಳ ನಡುವೆ...’ ಹಾಡನ್ನು ಹಾಡುತ್ತ ತಮ್ಮ ಕಲಾಯಾತ್ರೆಯ ವಿವಿಧ ಮಜಲುಗಳನ್ನು ಹಂಚಿಕೊಂಡ ಮಾಲಾ ಅವರು ಪತಿಯೊಂದಿಗೆ ಹುಬ್ಬಳ್ಳಿಯ ರಾಜನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !