ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ | ಸಿತಾರಿನ ತಾರು ಬಿಗಿಗೊಳಿಸುತ್ತ...

ತಂತಿಯೊಂದಿಗೆ ತಂತುಗಳನ್ನು ಬೆಸೆಯುವ ಜೀವ
Last Updated 4 ಜೂನ್ 2022, 20:15 IST
ಅಕ್ಷರ ಗಾತ್ರ

‘ಮೇ ರೆ ಆಟ್‌ ಪುಷ್ತೆ, ಇನ್‌ಕೆ ಪಾಂಚ್‌ ಪುಷ್ತೆ, ಸಿತಾರ್‌ಕೆ ಸಾಜ್‌ ಸೆ, ತಾರ್‌ಸೆ ಬಂಧೆ ಹುವೆ ಹೈ (ನನ್ನ ಎಂಟು ತಲೆಮಾರು, ಇವರ ಐದು ತಲೆಮಾರು, ಸಿತಾರಿನ ತಾರುಗಳೊಂದಿಗೆ, ನಾದದೊಂದಿಗೆ ಬೆಸೆದುಕೊಂಡಿವೆ)’
98 ವರ್ಷದ ಮೀರಜ್‌ನ ಹಾಜಿ ಅಹ್ಮದ್‌ ಸೊಅಬಾಸೊ ಅವರು ಹೀಗೆ ಹೇಳುವಾಗ ಅವರ ಕಂಗಳು ಹೊಳೆಯುತ್ತಿದ್ದವು. ಮೊದಲು ರಹಿಮತ್‌ ಖಾನ್‌ ಅವರಿಗೆ, ಕರೀಮ್‌ ಖಾನ್‌ ಅವರಿಗೆ, ಬಾಲೆಖಾನ್‌ ಅವರಿಗೆ, ನಂತರ ಗುನ್ನು (ಹಫೀಸ್‌ ಖಾನ್‌), ಈಗ ಅವರ ಮಗನಿಗೂ ಸಿತಾರ್‌ ಮಾಡಿಕೊಟ್ಟೆ. ಈಗಲೂ ರಟ್ಟೆಗಳಲ್ಲಿ ಶಕ್ತಿ ಇದೆ. ನನ್ನ ಅಂಗೈ ಒಮ್ಮೆ ಮುಟ್ಟಿನೋಡು. ಅದ್ಹೇಗೆ ಕಪ್ಪುಗಟ್ಟಿದೆ. ಬೆರಳುಗಳ ಗಿಣ್ಣಗಳನ್ನು ಮುಟ್ಟಿನೋಡು ಮಗಳೆ... ಅದೆಷ್ಟು ಬಿರುಸಾಗಿದೆ ಅಂತ.

ಮಾತಿನ ಲಹರಿಯಲ್ಲಿದ್ದ ಅಹ್ಮದ್‌ ಸೊಅಬಾಸೊ ಅವರ ಬೆರಳುಗಳಲ್ಲಿನ ಶ್ರಮದಿಂದಲೇ ರಾಗಗಳು ರೂಪತಾಳುತ್ತವೆ. ಪಂಡಿತ್‌ ಮಲ್ಲಿಕಾರ್ಜುನ ಮನಸೂರ, ಪಂಡಿತ್‌ ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಪುಟ್ಟರಾಜ ಗವಾಯಿಗಳು ಹೀಗೆ ಎಲ್ಲರ ಕೈ ಬೆರಳುಗಳೂ ಈ ಅಜ್ಜ ತಯಾರಿಸಿದ ತಾನ್‌ಪುರಾಗಳ ಮೇಲೆ ಆಡಿವೆ. ಇವರ ಮನೆತನದವರು ತಯಾರಿಸಿದ ಕೆಲವು ತಂಬೂರಿಗಳು, ತಾನ್‌ಪುರಾ ಹಾಗೂ ಸಿತಾರ್‌ಗಳು ಶತಮಾನವನ್ನೇ ಕಂಡಿವೆ.

ಧಾರವಾಡದಲ್ಲಿ ಸಿತಾರ್‌ ನವಾಜ್‌ (ಸಿತಾರ್‌ ವತ್ಸಲ) ಉಸ್ತಾದ್‌ ಬಾಲೆಖಾನ್‌ ಪ್ರತಿಷ್ಠಾನದಿಂದ ಜೀವಮಾನ ಪ್ರಶಸ್ತಿ ಪಡೆಯಲು ಬಂದ ಅಹ್ಮದ್‌ ಸೊಅಬಾಸೊ ಅವರು ತಮ್ಮ ಜೀವನದ ಖುಷಿಯ ಕ್ಷಣಗಳನ್ನು ಹಂಚಿಕೊಂಡರು.

ನಂಗೀಗ 90ರ ಮೇಲೆ ಎಂಟು ವರ್ಷಗಳು. ನೋಡಿ... ಹಲ್ಲು ಗಟ್ಟಿಯಾಗಿವೆ. ಈಗಲೂ ತಂತಿ ಬಿಗಿಯುತ್ತೇನೆ. ಮಿಶ್ರಾಬ್‌ಗಳನ್ನು ತಯಾರಿಸುತ್ತೇನೆ. ಯಾವುದೇ ಕಟಿಂಗ್‌ ಪ್ಲೇಯರ್‌ ಇಲ್ಲದೆಯೇ ತಂತಿಯನ್ನು ಕೈಯಿಂದಲೇ ತುಂಡರಿಸುತ್ತೇನೆ. ಹೀಗೆ ತುಂಡರಿಸುವುದರಿಂದ ಅವುಗಳಿಗೊಂದು ಬಿಗಿತ ಬರುತ್ತದೆ. ಎರಡು ಸುತ್ತಿನ, ನಾಲ್ಕು ಸುತ್ತಿನ ಮಿಶ್ರಾಬ್‌ಗಳನ್ನು ತಯಾರಿಸುತ್ತೇನೆ. ಬಾಲೆಖಾನ್‌ ಸಾಹೀಬರು ನಾಲ್ಕು ಸುತ್ತಿನ ಮಿಶ್ರಾಬ್‌ ಕೇಳಿ ಮಾಡಿಸಿಕಳ್ಳುತ್ತಿದ್ದರು. ಈಗ ಅವರ ಮನೆತನದವರು ಮಾತ್ರ ಇಂತಹ ಮಿಶ್ರಾಬ್‌ಅನ್ನು ಕೇಳುತ್ತಾರೆ ಅಷ್ಟೆ.

ಅರೆರೆ ನಿಮಗ ನಾ ಹೇಳಲಿಲ್ಲ, ನಾನು ವಿಜಯಪುರ ಮೂಲದವನು. ನಮ್ಮ ಮೊದಲ ತಲೆಮಾರು, ಮೊಯಿಸ್‌ಖಾನ್‌ ಕುಟುಂಬ ವಿಜಯಪುರದಿಂದ ಸಾಂಗ್ಲಿಗೆ ವಲಸೆ ಹೋಯಿತು. ರಾಜಾಡಳಿತ ಹೋಯಿತು, ಬ್ರಿಟಿಷ್‌ ಆಡಳಿತ ಹಾಗೂ ಸಂಸ್ಥಾನಗಳ ಆಡಳಿತವನ್ನು ಕಂಡವರು ನಾವು. ಸಾಂಗ್ಲಿ ಸಂಸ್ಥಾನದಲ್ಲಿ ನನ್ನಜ್ಜನಿಗೆ ಖಡ್ಗದ ಮೊನೆ, ಅಂಚು ಚೂಪುಗೊಳಿಸುವ ಕೆಲಸ ನೀಡಲಾಗಿತ್ತು. (ತಲ್ವಾರ್‌ ಧಾರ್‌ ಕರನಾ) ಕತ್ತಿಯನ್ನು ಒರೆಗೆ ಹಚ್ಚುವ ಆ ಕೆಲಸದಲ್ಲಿ ನನ್ನಜ್ಜ ತೊಡಗಿಸಿಕೊಂಡಿದ್ದರು. ಒಮ್ಮೆ ಗ್ವಾಲಿಯರ್‌ನ ಖಾನ್‌ ಸಾಹೀಬ್‌ ಎನ್ನುವವರು ಸಾಂಗ್ಲಿಯಲ್ಲಿ ಹಾಡಲು ಬಂದಾಗ ಅವರ ತಾನ್‌ಪುರಾದ ತಂತಿ ಕೆಟ್ಟುಹೋಯಿತು. ಕತ್ತರಿಸಿ ಹೋಗಿತ್ತು. ರಿಪೇರಿ ಮಾಡುವವರು ಸುತ್ತಲೂ ಇರಲಿಲ್ಲ. ಸಾಂಗ್ಲಿ, ಪುಣೆಗಳಲ್ಲಿ ಹುಡುಕಿದ ನಂತರ, ಮೀರಜ್‌ಗೆ ಬಂದಾಗ ನಮ್ಮಜ್ಜ ತಂತಿ ಬಿಗಿಗೊಳಿಸಿದರು. ಆದರೆ ಅದರ ರಾಗ ಹೇಗೆ ಒಂದಕ್ಕಿಂತ ಒಂದು ಭಿನ್ನವಾಗಬೇಕು, ಮೀಟಿದಾಗ ಒಂದೇ ಆಗಬೇಕು ಎಂಬುದನ್ನು ಖಾನ್‌ ಸಾಹೀಬರು ತಿಳಿಸಿಕೊಟ್ಟರು. ಅದು ಸರಿಪಡಿಸಿದಾಗ, ಅವರು ನಿನ್ನ ಬೆರಳುಗಳಲ್ಲಿ ಸರಸ್ವತಿ ದೇವಿ ಇದಾಳೆ. ಕತ್ತಿ ಒರೆಗೆ ಹಚ್ಚುವ ಬದಲು, ಇದೇ ಕೆಲಸ ಮುಂದುವರಿಸು ಎಂದು ಆಶೀರ್ವದಿಸಿದರು. ಅಂದಿನಿಂದ ತಾನ್‌ಪುರಾಗಳನ್ನು ದುರಸ್ತಿ ಮಾಡುವ, ಸಿದ್ಧಪಡಿಸುವ ಕೆಲಸ ನಮ್ಮ ಮನೆತನದ್ದಾಯಿತು.

ನಾನೂ ಅಪ್ಪನಿಂದ ಈ ವಿದ್ಯೆ ಕಲಿತೆ. ಉಸ್ತಾದ್ ರಹಿಮತ್‌ ಖಾನ್‌ ಅವರು ಸಿತಾರ್‌ ತಯಾರು ಮಾಡುವುದನ್ನು ಹೇಳಿಕೊಟ್ಟರು. ಪ್ರತೀ ರಾಗ, ಪ್ರತೀ ಭಾಗ, ಪ್ರತೀ ತಂತಿಯ ಕುರಿತು ಅವರು ತಿಳಿಸಿದ್ದೇ ಪಾಠವಾಯಿತು. ನಮ್ಮಜ್ಜನ ಇಬ್ಬರು ಮಕ್ಕಳು, ಅದನ್ನೇ ಮುಂದುವರಿಸಿದರು. ನನ್ನಪ್ಪನಿಗೆ ನಾವು ಎಂಟು ಜನ ಮಕ್ಕಳು. ಕೆಂಪು ದೇವದಾರು ಮರ ತಂದು, ತಂತಿ ಬಿಗಿಯುವವರೆಗೂ ಎಲ್ಲ ಕೆಲಸಗಳನ್ನು ಮಾಡುವ ಕೌಶಲ ಈಗ ನನ್ನ ಕುಟುಂಬಕ್ಕೆ ಇದೆ. ಉಳಿದವರು ದುರಸ್ತಿ ಮಾಡುವ ಕಾಯಕದಲ್ಲಿಯೇ ತೊಡಗಿದ್ದಾರೆ.

ಈ ವಾದ್ಯಗಳನ್ನು ತಯಾರಿಸುವ ಹಲವಾರು ಮಳಿಗೆಗಳು ನನ್ನ ಕುಟುಂಬಕ್ಕೆ ಸೇರಿವೆ. ಆದರೆ ನಾವು ಯಾರೂ ವ್ಯಾಪಾರ ಮಾಡುವುದಿಲ್ಲ. ಬರುವ ವ್ಯಕ್ತಿಯಲ್ಲಿ ಶ್ರದ್ಧೆ ಇದೆಯೇ ಎಂಬುದನ್ನು ಮಾತ್ರ ಗಮನಿಸುತ್ತೇವೆ. ಸಂಗೀತ ಕಲಿಯುವ ವಿದ್ಯಾರ್ಥಿಗಳು, ವಿದುಷಿಗಳು, ಪಂಡಿತರು, ಉಸ್ತಾದರು, ಬುವಾಗಳಿಗೂ ಮಾಡಿಕೊಡುತ್ತೇವೆ. ಯಾರು ಹೇಗೆ ನುಡಿಸುತ್ತಾರೆಯೋ ಅದನ್ನು ಗಮನಿಸಿಯೇ ತಯಾರಿಸಿಕೊಡುತ್ತೇವೆ.

ಒಮ್ಮೆ ಆಸ್ಟ್ರೇಲಿಯಾದ ಇಬ್ಬರು ವಿದ್ಯಾರ್ಥಿನಿಯರು ಬಂದಿದ್ದರು, ಸಿತಾರ್‌ ಮಾಡುವುದನ್ನು ಕಲಿಯಲು. ಮೀರಜ್‌ನ ಹೋಟೆಲ್‌ ಒಂದರಲ್ಲಿ ಇದ್ದರು. ನಮ್ಮೊಂದಿಗೆ ಹಗಲು ರಾತ್ರಿ ಎನ್ನದೆ ಇದ್ದು, ಕಲಿಯುತ್ತಿದ್ದರು. ಒಂದಿನ ಈ ಹುಡುಗಿಯರು ರಾತ್ರಿ ಊಟ ಎಲ್ಲಿ ಮಾಡುತ್ತಾರೆ... ಹತ್ತು ಹನ್ನೊಂದು ಗಂಟೆಯವರೆಗೂ ನಮ್ಮೊಟ್ಟಿಗೆ ಇದ್ದು, ಹೋಟೆಲ್‌ಗೆ ಹೋಗುವುದು ಹೇಗೆ ಎಂದು ಚಿಂತಿಸಿದಾಗ, ಅಂದು ರಾತ್ರಿ ನನ್ನೊಂದಿಗೆ ಊಟಕ್ಕೆ ಉಳಿಸಿಕೊಂಡೆ. ಮರುದಿನದಿಂದ ನಮ್ಮ ಮನೆಯಲ್ಲಿಯೇ ಉಳಿದುಕೊಂಡರು. ನನ್ನ ಮನೆಯ ಮಕ್ಕಳಂತೆಯೇ ಇದ್ದರು. ಫಜೀತಿ ಎನಿಸಿದ್ದು, ನಮ್ಮನೆಯಲ್ಲಿ ಶೌಚಾಲಯ ಇರಲಿಲ್ಲ. ಈ ಮಕ್ಕಳಿಗಾಗಿ, ಒಂದೇ ದಿನದಲ್ಲಿ ಶೌಚಾಲಯ ಕಟ್ಟಿಸಿದೆ.

ಧರ್ಮ, ದೇಶ, ಗಡಿ ಇವೆಲ್ಲ ನಾವು ಮಾಡಿಕೊಂಡಿದ್ದು. ನಮ್ಮ ಮನಸು ಸಾಫ್‌ ಇದ್ದರೆ ಜಗವೆಲ್ಲ ಬಳಗ ಆಗುವುದು. ಹಂಚಿ ಉಣ್ಣುವುದು, ಕೇಡು ಬಯಸದಿರುವುದು, ಇಷ್ಟೇ ನಮ್ಮ ಧರ್ಮ.

ನನಗೆ ಯಾವ ಚಟಗಳೂ ಇಲ್ಲ. ಆಗಾಗ ಬಿಸಿಬಿಸಿ ಚಹಾ ಗುಟುಕರಿಸ್ತೀನಿ. ಮತ್ತ ಎಲಿಯಡಕಿ ಹಾಕ್ಕೊಂತೀನಿ (ಎಳೀ ಎಲಿ ತೆಗೆದವರೆ, ಮಗುವಿನ ಕೆನ್ನೆ ಸವರುವಂತೆ, ಸುಣ್ಣ ಸವರಿ, ಕಾಚು ಬೆರೆಸಿ, ಅಡಕೆಯನ್ನು ಚಿಪ್ಸಿನಂತೆ ಸಣ್ಣಗೆ ಅಡ್ಡಕತ್ತರಿಯಲ್ಲಿ ಕತ್ತರಿಸಿ, ಎಲೆ ಮಾಡಿಕೊಟ್ಟರು. ‘ತಿನ್ನು ಮಗಳೆ... ಬಾಲೆಖಾನ್‌ ಸಾಹೇಬರಿಗೂ ಬೀಡಾ ಮಾಡಿಕೊಟ್ಟಿರುವೆ’ ಅನ್ನುತ್ತ ನನಗೂ ಕೊಟ್ಟು ತಾವೂ ಸವಿದರು. ಸವಿಯುತ್ತಲೇ ಮಾತಿಗಿಳಿದರು).

ಅಜ್ಜ, ಮುತ್ತಜ್ಜನಿಂದ ಬಂದ ಜಮೀನಿನ ತುಣುಕಿದೆ. ಕುಟುಂಬಕ್ಕೆ ಅಗತ್ಯವಿರುವ ಜೋಳ, ಗೋಧಿ ಬೆಳೆಯುತ್ತೇವೆ. ವಾರದಲ್ಲಿ ಒಂದೆರಡು ದಿನ ಮಾಂಸದಡುಗೆ ಫರಮಾಯಿಷಿ ಸವಿಯುತ್ತೇನೆ. ಗಟ್ಟಿಜೀವ ನನ್ನದು. ನನ್ನ ಕಣ್ಮುಂದೆ ನನ್ನ ಮಕ್ಕಳು ದೇವರ ಪಾದ ಸೇರಿದರು. ಮೊಮ್ಮಗುವನ್ನೂ ಕಳೆದುಕೊಂಡೆ. ಸಾವು ಜರ್ಜರಿತಗೊಳಿಸಿತು. ಕಳೆದ ವರ್ಷ 95ರ ಹರೆಯದ ನನ್ನ ಅರ್ಧಾಂಗಿಯೂ ಮೃತಳಾದಳು. ದೇವರು ಆರೋಗ್ಯ ನೀಡಿದ್ದಾನೆ. ಜೀವನದ ಸುಖ ದುಃಖಗಳನ್ನೂ ನೀಡಿದ್ದಾನೆ. ಮೀರಜ್‌ನಲ್ಲಿರುವ ದರ್ಗಾದಲ್ಲಿ ಹೋಗಿ ಕುಳಿತರೆ ಸಾಕಷ್ಟು ಸಮಾಧಾನ ಸಿಗುತ್ತದೆ. ಇನ್ನೂ ಅದೆಷ್ಟು ಜನರಿಗೆ ತಂಬೂರಿ, ಸಿತಾರ್‌ಗಳನ್ನು ಮಾಡಲಿದೆಯೋ? ದೇವರು ಈ ಕೆಲಸಕ್ಕಾಗಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಾವು ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇವೆ ಎನ್ನುತ್ತಾ ಮಾತಿಗೆ ವಿರಾಮ ನೀಡಿದರು ಈ ಅಜ್ಜ.

ಚಿತ್ರಗಳು: ಗೋವಿಂದರಾಜ್‌ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT