ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಶಾಸ್ತ್ರೀಯ ಸಂಗೀತದ ನೆಲೆಗಟ್ಟಿನಲ್ಲಿ ಸೌಂದರ್ಯಲಹರಿ

ನವರಾತ್ರಿ ರಂಗಿಗೆ ಸೌಂದರ್ಯಲಹರಿ ಸೊಬಗು
Last Updated 14 ಅಕ್ಟೋಬರ್ 2020, 5:13 IST
ಅಕ್ಷರ ಗಾತ್ರ

‘ಗಲೇ ರೇಖಾಸ್ತಿಸ್ರೋ ಗತಿಗಮಕಗೀತೈಕನಿಪುಣೇ...’

ಆದಿ ಶಂಕರಾಚಾರ್ಯರು ಬರೆದ ಸೌಂದರ್ಯಲಹರಿಯ ನೂರು ಶ್ಲೋಕಗಳಲ್ಲಿ ಈ ಮೇಲಿನ ಸಾಲು ಅರುವತ್ತೊಂಬತ್ತನೇ ಶ್ಲೋಕದ ಮೊದಲ ಸಾಲು. ಇದು ವಿವರಿಸುವುದು ದೇವಿ ಸಂಗೀತದ ಶಾಸ್ತ್ರಭಾಗದಲ್ಲಿ ಎಷ್ಟು ನಿಪುಣೆಯಾಗಿದ್ದಳು ಎಂಬುದನ್ನು. ಶಾಸ್ತ್ರೀಯ ಸಂಗೀತದ ಗತಿ, ನಡೆ, ಗಮಕ, ಗೀತೆ, ರಾಗ, ಮಾರ್ಗಗಳಲ್ಲಿ ದೇವಿ ಅತ್ಯಂತ ನಿಪುಣೆಯಾಗಿದ್ದಳು ಎನ್ನುವ ಅಂಶವನ್ನು ಶ್ಲೋಕ ಸೊಗಸಾಗಿ ವರ್ಣಿಸುತ್ತದೆ. ಅಲ್ಲದೆ ಸಂಗೀತದ ಷಡ್ಜ, ಗಾಂಧಾರ, ಮಧ್ಯಮ ಸ್ವರಗಳ ವಿಶ್ಲೇಷಣೆಯೂ ಇದರಲ್ಲಿದೆ. ಒಟ್ಟಿನಲ್ಲಿ ದೇವಿಯೇ ಪರಮಶ್ರೇಷ್ಠ ಎಂಬುದನ್ನು ಶಂಕರಾಚಾರ್ಯರು ಸೌಂದರ್ಯಲಹರಿಯಲ್ಲಿ ವರ್ಣಿಸಿದ್ದಾರೆ.

ಅಂದಹಾಗೆ ಇದೀಗ ನವರಾತ್ರಿಯ ಸಂಭ್ರಮ, ಒಂಬತ್ತು ದಿನವೂ ದೇವಿ ದುರ್ಗೆಗೆ ಲಲಿತಾ ಸಹಸ್ರನಾಮ ಪಾರಾಯಣ, ದೇವಿಸ್ತುತಿ, ಶಕ್ತಿದೇವತೆಯ ಒಂಬತ್ತು ಅವತಾರಗಳನ್ನು ವರ್ಣಿಸುವ ಈ ಒಂಬತ್ತೂ ದಿನಗಳಲ್ಲಿ ಸೌಂದರ್ಯಲಹರಿ ಪಾರಾಯಣ ಮಾಡುವುದೂ ಬಹಳ ವಿಶೇಷ.

ಆದಿ ಶಂಕರಾಚಾರ್ಯರು ತಾಯಿ ದೇವಿಯ ಕುರಿತು ಸರಿಸುಮಾರು ಎಂಟನೇ ಶತಮಾನದಲ್ಲಿ ರಚಿಸಿದ ಸೌಂದರ್ಯಲಹರಿ ಶ್ಲೋಕಗಳು ಅತ್ಯದ್ಭುತವಾಗಿದೆ. ಇದನ್ನು ಸಂಸ್ಕೃತ ಬಲ್ಲವರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಅದರಂತೆ ಜಗದಂಬಿಕೆಯನ್ನು ಚಂಡಿ, ಚಾಮುಂಡಿ, ದುರ್ಗೆ ಸೇರಿದಂತೆ ಒಂಬತ್ತು ಅವತಾರಗಳ ಜೊತೆಗೆ ಆಕೆಯ ರೌದ್ರಾವತಾರದ ಮಹಿಮೆಯನ್ನೂ ವರ್ಣಿಸಲಾಗಿದೆ.

‘ಪ್ರೀತಿ, ತಾಳ್ಮೆ, ಕ್ಷಮೆ ಧರ್ಮದ ಜೀವಾಳ. ಧರ್ಮದ ಬೆಳಕಿನಲ್ಲಿ ಹೆಜ್ಜೆ ಹಾಕಿದಾಗ ಸರಳತೆ, ಸನ್ನಡತೆ, ಸತ್ಯಪ್ರಿಯತೆ ಒಡಮೂಡಿ ಸುಮಧುರ ಸಾಮರಸ್ಯಕ್ಕೆ ಕಾರಣವಾಗುತ್ತದೆ. ಆದಿ ಶಂಕರಾಚಾರ‍್ಯರು ರಚಿಸಿದ 'ಸೌಂದರ್ಯಲಹರಿ' ಸ್ತೋತ್ರವು ಸ್ತೋತ್ರಗಳಲ್ಲೇ ವಿಶಿಷ್ಟವಾದದು. ಶಕ್ತಿ, ವಿದ್ಯೆ ಹಾಗೂ ಲಕ್ಷ್ಮೀಸ್ವರೂಪಿಯಾದ ವಿಶ್ವ ಮಾತೆಯನ್ನು ಸ್ತುತಿಸುವ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿದರೆ ಮನಃಶಾಂತಿ ಪಡೆಯಬಹುದು’ ಎನ್ನುತ್ತಾರೆ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸ ಗಾನಕಲಾಭೂಷಣ ಆರ್‌.ಕೆ. ಪದ್ಮನಾಭ ಅವರು.

‘ಒಂದೊಂದು ದೇವರಿಗೆ ಒಂದೊಂದು ವಿಶೇಷಗಳಿವೆ. ಅಂದರೆ ದೇವಿ ಶಕ್ತಿಯ ಸಾಕಾರರೂಪ. ಶಿವನಿಗೆ ಅತ್ಯಂತ ಇಷ್ಟವಾದದ್ದು ಅಭಿಷೇಕವಾದ್ದರಿಂದ ರುದ್ರಾಭಿಷೇಕ ಖ್ಯಾತಿ ಪಡೆದಿದೆ. ವಿಷ್ಣು ಅಲಂಕಾರ ಪ್ರಿಯ, ಜೊತೆಗೆ ಧರ್ಮದ ಪ್ರತಿಪಾದಕ. ಗಣಪತಿ ವಿಘ್ನವಿನಾಶಕ ಹಾಗೂ ಮೋದಕ ಪ್ರಿಯ, ಇವರೆಲ್ಲರ ಹಾಗೆ ದೇವಿ ಸ್ತೋತ್ರ ಪ್ರಿಯೆ. ಹಾಗಾಗಿ ನವರಾತ್ರಿಯ ಸಂದರ್ಭದಲ್ಲಿ ದೇವಿ ಸ್ತೋತ್ರ ಪಾರಾಯಣ ಸಾಂದರ್ಭಿಕವೂ ಹೌದು.

ಶಾಸ್ತ್ರೀಯ ಸಂಗೀತದ ಕೃತಿರೂಪ

ಶ್ರೀಶಂಕರ ಭಗವತ್ಪಾದ ವಿರಚಿತ ಸೌಂದರ್ಯಲಹರಿ (ಶಾಸ್ತ್ರೀಯ ಸಂಗೀತ ಕೃತಿರೂಪ ದರ್ಶನ) ಸಂಗೀತ ಕ್ಷೇತ್ರಕ್ಕೆ ಒಂದು ಅಮೂಲ್ಯವಾದ ಕೃತಿ. ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರುಗಾಯಕ ವಿದ್ವಾನ್‌ ಆರ್‌.ಕೆ. ಪದ್ಮನಾಭ ಅವರ ಕಲ್ಪನೆ ಹಾಗೂ ರಾಗಸಂಯೋಜನೆಯಲ್ಲಿ ಈ ಅಪರೂಪದ ಕೃತಿ ಸೊಗಸಾಗಿ ಲೋಕಾರ್ಪಣೆಗೊಂಡಿದೆ. ಬೆಂಗಳೂರಿನ ಹನುಮಂತನಗರದಲ್ಲಿರುವ ಸಂಪದ ಪ್ರಕಾಶನ ಈ ಪುಸ್ತಕವನ್ನು ಅಚ್ಚುಕಟ್ಟಾಗಿ ಪ್ರಕಟಿಸಿದೆ.

ನವರಾತ್ರಿಯ ಸಂದರ್ಭದಲ್ಲಿ ಮಾಡುವ ಸೌಂದರ್ಯಲಹರಿ ಪಾರಾಯಣಕ್ಕೆ ಶಾಸ್ತ್ರೀಯ ಸಂಗೀತದ ಚೌಕಟ್ಟು ಒದಗಿಸಿ ಈ ಶ್ಲೋಕಗಳಿಗೆ ಇನ್ನಷ್ಟು ಇಂಪು, ಮಾಧುರ್ಯ, ತೂಕ ಹಾಗೂ ಗಂಭೀರತೆ ಬರುವಂತೆ ಮಾಡಿದ್ದಾರೆ ವಿದ್ವಾನ್‌ ಪದ್ಮನಾಭ ಅವರು. ಈ ಕೃತಿಯಲ್ಲಿ ನೂರು ಶ್ಲೋಕಗಳಿಗೂ ನೂರು ವಿವಿಧ ರಾಗಗಳನ್ನು ಅಳವಡಿಸಲಾಗಿದೆ. ಒಂದೊಂದು ಶ್ಲೋಕಕ್ಕೂ ವರ್ಣಮಟ್ಟು, ಸ್ವರಸಂಯೋಜನೆ ಮಾಡಿ ಕೃತಿ ರಸಾಸ್ವಾದವಾಗುವಂತೆ ನೋಡಿಕೊಂಡಿದ್ದಾರೆ ಈ ವಿದ್ವಾಂಸರು. ಯಡತೊರೆಯ ವೇದಾಂತ ಭಾರತಿ ಪ್ರಕಟಿಸಿದ ಪುಸ್ತಕದ ವಸ್ತುವೇ ಈ ಕೃತಿಯಲ್ಲಿರುವುದು. ಎಲ್ಲ ಕೃತಿಗಳಿಗೂ ಶ್ಲೋಕದ ಶುದ್ಧಸಾಹಿತ್ಯ, ಭಾವಾರ್ಥಗಳನ್ನು ಅಳವಡಿಸಲಾಗಿದೆ. ಸೌಂದರ್ಯ ಲಹರಿಯ ಮೊದಲ ಶ್ಲೋಕ ‘ಶಿವಃ ಶಕ್ತ್ಯಾಯುಕ್ತೋ’ ಸೌರಾಷ್ಟ್ರ ರಾಗದಿಂದ ಹಿಡಿದು ಕೊನೆಯ ಶ್ಲೋಕ ‘ಪ್ರದೀಪ ಜ್ವಾಲಾಭು:’ ಸಿಂಧು ಭೈರವಿ ರಾಗದೊಂದಿಗೆ ಕೊನೆಗೊಳ್ಳುತ್ತದೆ.

ಇದು ಸಂಗೀತ ಸಾರಸ್ವತ ಲೋಕಕ್ಕೆ ಒಂದು ಮೌಲಿಕ ಕೃತಿಯಾಗಿದೆ. ಎಲ್ಲ ನೂರೂ ಶ್ಲೋಕಗಳನ್ನು ರಾಗಬದ್ಧವಾಗಿ ಪದ್ಮನಾಭ ಅವರೇ ಹಾಡಿ ಸೀಡಿಯೊಂದನ್ನೂ ಹೊರತಂದಿರುವುದು ಸಂಗೀತದಲ್ಲಿ ಮತ್ತೊಂದು ಮಹತ್ವದ ಸಾಧನೆ. ವಿದ್ವತ್‌ಪೂರ್ಣ ಕೃತಿಗೆ ಮಾಧುರ್ಯಭರಿತ ಗಾಯನ ಸಂಗೀತ ಸಹೃದಯರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT