ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ | ಪರ್ವತಗಳ ಹಾಡನ್ನು ಹೊತ್ತು ತಂದು...

Last Updated 2 ಜುಲೈ 2022, 20:00 IST
ಅಕ್ಷರ ಗಾತ್ರ

ದಟ್ಟ ಸಾಂಸ್ಕೃತಿಕ ಬೇರುಗಳನ್ನೂ, ಕಟುವಾದ ನೆತ್ತರ ಕಲೆಗಳ ಚರಿತ್ರೆಯನ್ನೂ ಒಟ್ಟೊಟ್ಟಿಗೇ ಧರಿಸಿಕೊಂಡಿರುವ ನೆಲ ನಾಗಾಲ್ಯಾಂಡ್. ಈ ನೆಲದ ಸತ್ವವನ್ನುಂಡು ಬೆಳೆದ ಈ ಸೋದರಿಯರ ಸಂಗೀತ, ಅಲ್ಲಿನ ಮೇರು ಪರ್ವತಗಳ ಶತಮಾನಗಳ ಮಹಾಮೌನಕ್ಕೆ ಸ್ವರದೀಕ್ಷೆ ಕೊಟ್ಟಂತಿದೆ. ನಮ್ಮ ನೆಲದ ಸಂಸ್ಕೃತಿ, ಭಾಷೆಯ ಉಳಿವಿಗೆ ಸಂಗೀತವನ್ನು ಆರಿಸಿಕೊಂಡ ಈ ತೆತ್ಸಿಯೊ ಸೋದರಿಯರು ನಡೆಯುತ್ತಿರುವ ಹಾದಿ ಎಲ್ಲಾ ದೇಶ ಭಾಷೆಗಳಿಗೂ ಮಾದರಿಯಂತಿದೆ...

ಸಾ ಲು ಸಾಲು ಪರ್ವತಗಳಿಂದ ಆವೃತವಾಗಿರುವ ಈ ನಗರಿಗೆ ಸೌಂದರ್ಯವೇ ಕಿರೀಟ. ಸ್ವರ್ಗದ ತುಣುಕೊಂದು ಕೈತಪ್ಪಿ ಭುವಿಗೆ ಬಿದ್ದಂತಿರುವ ಇಲ್ಲಿನ ಪ್ರಕೃತಿಗೆ ಮನ ಸೋಲದವರು ಯಾರುಂಟು? ಆದರೆ ನಾಗಾಲ್ಯಾಂಡ್ ಎಂಬ ಈ ಚೆಲುವೆಗೆ ಸೌಂದರ್ಯವಷ್ಟೇ ಅಲ್ಲ, ಅಲ್ಲಿ ತಲೆತಲಾಂತರದಿಂದ ಬದುಕು ಕಟ್ಟಿಕೊಂಡ ಬುಡಕಟ್ಟು ಜನಾಂಗ, ಪರಂಪರೆ, ಆಚರಣೆ, ಸಂಗೀತವೇ ದೊಡ್ಡಶಕ್ತಿ. ಇದೇ ಈ ಮಣ್ಣಿನ ಗಟ್ಟಿತನ.

ಆದರೆ ಕಾಲ ಮುಂದೋಡಿದಂತೆ ಬುಡಕಟ್ಟು ಜನಾಂಗಗಳ ನೆಲವಾಗಿರುವ ನಾಗಾಲ್ಯಾಂಡ್‌ನಲ್ಲಿನ ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳು ಹಿಂದೆ ಉಳಿದು ಬಿಡುತ್ತವೆಯೇ? ನಾಗಾಲೋಟದಲ್ಲಿರುವ ಈ ಜಗತ್ತಿಗೆ ನಾಗಾಲ್ಯಾಂಡ್ ಮಣ್ಣಿನ ಕಥೆಗಳು ಕೇಳದೇ ಕಳೆದುಹೋಗುತ್ತವೆಯೇ? ಇಂಥ ಒಂದು ಆತಂಕವೇ ಈ ನಾಲ್ಕು ಸೋದರಿಯರನ್ನು ಒಟ್ಟು ನಿಂತು ‘ಭಾಷೆ’ ಉಳಿಸುವ ಕಾರ್ಯಕ್ಕೆ ಅಡಿಯಿಡುವಂತೆ ಮಾಡಿದ್ದು.

ಯಾವುದೇ ಇತಿಹಾಸ ಭವಿಷ್ಯಕ್ಕೆ ದಕ್ಕಬೇಕಾದರೆ ಭಾಷೆಯೇ ಮಾಧ್ಯಮ. ಆದರೆ ಲಿಪಿ ಇಲ್ಲದ ಭಾಷೆಯನ್ನು ತಲೆತಲೆಮಾರುಗಳಿಗೆ ದಾಟಿಸುವುದು ಪ್ರತೀ ಪೀಳಿಗೆಗೂ ಸವಾಲಿನ ಕೆಲಸ. ಅದು ಸಾಧ್ಯವಾಗಬೇಕಿರುವುದು ಮಾತು ಅಥವಾ ಸಂಗೀತದ ಮೂಲಕ ಮಾತ್ರ. ಈ ಮೂಲ ಸೂತ್ರವನ್ನು ಅರಿತ ನಾಗಾಲ್ಯಾಂಡ್‌ನ ಈ ಅಕ್ಕ ತಂಗಿಯರು ತಮ್ಮ ಬುಡಕಟ್ಟು ಭಾಷೆಯಾದ ‘ಚೋಕ್ರಿ’ ಉಳಿವಿಗೆ ಟೊಂಕ ಕಟ್ಟಿ ನಿಂತರು. ಅದಕ್ಕೆ ಜನಪದ ಸಂಗೀತ ಮಾಧ್ಯಮವನ್ನು ಆರಿಸಿಕೊಂಡರು.

ನಾಗಾ ಬುಡಕಟ್ಟುಗಳಲ್ಲಿ ಬಹುಮುಖ್ಯ ಜನಾಂಗವೆಂದು ಗುರುತಿಸಿಕೊಂಡಿರುವ ಚಾಕೇಸಾಂಗ್ ಸಮುದಾಯದ್ದು ಚೋಕ್ರಿ ಭಾಷೆ. ಬಹುಪಾಲು ಬುಡಕಟ್ಟು ಭಾಷೆಗಳಂತೆ ಲಿಪಿಯಿಲ್ಲದೇ ಜನರ ಬಾಯಿಂದ ಬಾಯಿಗೆ ಹರಿದಾಡುತ್ತಲೇ ಜೀವಿಸುತ್ತಿರುವ ಮಾಧ್ಯಮ. ಪ್ರಕೃತಿ ಆರಾಧಕರಾದ ಚಾಕೇಸಾಂಗ್ ನಾಗಾಗಳ ಬಗ್ಗೆ ಲಿಖಿತ ಮಾಹಿತಿ ಇಲ್ಲ. ಹೀಗಾಗಿ ಭಾಷೆಯ ಆಯಸ್ಸು ಮುಗಿದರೆ, ಮಾತಿನಲ್ಲೇ ಚಾಲ್ತಿಯಲ್ಲಿರುವ ಚಾಕೇಸಾಂಗ್ ಇತಿಹಾಸ, ಬದುಕು, ಸಂಸ್ಕೃತಿ, ಪೂರ್ವಜರ ಚರಿತ್ರೆ, ಆಚಾರ ವಿಚಾರಗಳ ಕುರಿತ ಕಥೆಗಳು ಕೂಡ ನಶಿಸಿಹೋಗಬಹುದು. ಹೀಗಾದರೆ ಮುಂದಿನ ತಲೆಮಾರಿಗೆ ಈ ಜನಾಂಗದ ಕುರುಹೂ ಇಲ್ಲವಾಗಬಹುದು... ಇಂಥ ಆಲೋಚನೆ ಈ ಸೋದರಿಯರನ್ನು ಬಹುವಾಗಿ ಆವರಿಸಿದ್ದು.

ತೆತ್ಸಿಯೊ ಸಿಸ್ಟರ್ಸ್ ಬ್ಯಾಂಡ್ ಜೀವ ತಳೆದಿದ್ದು...

ನಾಗಾಲ್ಯಾಂಡ್‌ನ ಫೆಕ್ ಜಿಲ್ಲೆಯ ಪುಟ್ಟ ಹಳ್ಳಿ ತುವೋಪಿಸು. ಸಾಂಪ್ರದಾಯಿಕ ನಾಗಾ ಸಂಗೀತಕ್ಕೆ ಪ್ರಸಿದ್ಧಿಯಾಗಿರುವ ಈ ಸ್ಥಳದಿಂದ ಬಂದ ನಾಲ್ವರು ಸೋದರಿಯರು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸುತ್ತಿದ್ದಾರೆ. ತಮ್ಮ ಜನಾಂಗದ ಸಂಗೀತ, ಆ ಮೂಲಕ ಭಾಷೆಯನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ಹಲವು ವರ್ಷಗಳಿಂದಲೂ ತೊಡಗಿಕೊಂಡಿದ್ದಾರೆ.

ನಾಗಾ ಬುಡಕಟ್ಟು ಸಂಗೀತಕ್ಕೆ ಹೆಸರಾದ ಮನೆತನ 'ತೆತ್ಸಿಯೊ'ದ ಈ ಸಹೋದರಿಯರ ಬ್ಯಾಂಡ್ ಆರಂಭವಾಗಿದ್ದು 1994ರಲ್ಲಿ. ಮೊದಲು ಮರ್ಸಿ ಹಾಗೂ ಆಜಿ ಜನಪದ ಹಾಡುಗಳ ಪ್ರದರ್ಶನ ನೀಡಲು ಆರಂಭಿಸಿದರು. ನಂತರದ ವರ್ಷಗಳಲ್ಲಿ ಕುವೇಲು ಹಾಗೂ ಅಲ್ಯೂನ್ ಜೊತೆಯಾದರು. ಬರುಬರುತ್ತಾ ಈ ಅಕ್ಕ ತಂಗಿಯರು ‘ತೆತ್ಸಿಯೊ ಸಿಸ್ಟರ್ಸ್’ ಎಂದೇ ಹೆಸರು ಮಾಡಿದರು. ಸುಮಾರು 20 ವರ್ಷಗಳ ಇವರ ಸಂಗೀತ ಪಯಣಕ್ಕೆ ಸಹೋದರ ಮಹ್‌ಸೀವ್ ಕೂಡ ಸಾಥ್ ಆದರು. ಈಶಾನ್ಯ ರಾಜ್ಯದ ಜನಪ್ರಿಯ ಬ್ಯಾಂಡ್ ಎಂದೂ ಗುರುತಿಸಿಕೊಂಡರು.

ಚೋಕ್ರಿ ಭಾಷೆಯಲ್ಲಿ ‘ಲೀ’ ಎಂದು ಕರೆಯಲಾಗುವ ಜನಪದ ಸಂಗೀತ ಈ ತಂಡದ ಮುಖ್ಯ ತಂತು. ಸಾಂಸ್ಕೃತಿಕ ಪುನರುಜ್ಜೀವನ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಇವರ ಪೋಷಕರು ಚಾಕೇಸಾಂಗ್ ಬುಡಕಟ್ಟಿನ 'ಲೀ' ಹಾಡುಗಳನ್ನು ತಮ್ಮ ಮಕ್ಕಳಿಗೆ ಬಳುವಳಿಯಾಗಿ ನೀಡಿದವರು.

ಚೋಕ್ರಿ ಭಾಷೆಯಲ್ಲಿ ತಮ್ಮ ಜನಾಂಗದ ಸೊಗಡಿನ ಸಂಗೀತ ಉಣಬಡಿಸುವ ಈ ತಂಡಕ್ಕೆ ‘ಭಾಷೆ’ ಎಂದಿಗೂ ಗಡಿ ಎನಿಸಿಲ್ಲ. 'ಬೇರೆ ರಾಜ್ಯಗಳ, ದೇಶಗಳ ಜನರಿಗೆ ಚೋಕ್ರಿ ಭಾಷೆ ಅರ್ಥವಾಗುವುದಿಲ್ಲ. ಆದರೆ ಈ 'ಲೀ' ಸಂಗೀತದಲ್ಲಿ ಮಾಂತ್ರಿಕತೆ ಇದೆ. ಭಾಷೆ ಅರ್ಥವಾಗದಿದ್ದರೂ ಕೇಳುಗರಿಗೆ ಮಾಧುರ್ಯ ತಟ್ಟುತ್ತದೆ. ಇದು ನಮ್ಮನ್ನು ಸೋಲದೇ ತಡೆದ ಬಹು ಮುಖ್ಯ ಸಂಗತಿ' ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಮರ್ಸಿ.

ಚಾಕೇಸಾನ್ ಸಮುದಾಯದ ಜನಪದವನ್ನು ಪರಿಚಯಿಸುವುದು ‘ಲೀ’ ಮುಖ್ಯ ಉದ್ದೇಶ. ಪೂರ್ವಜರನ್ನು ನೆನೆಯುವ, ಅವರ ಕಥೆ ಹೇಳುವ, ಅವರ ಜೀವನಾನುಭವ ಸಾರುವ, ಅವರು ಬದುಕಿದ ರೀತಿ ನೀತಿಯನ್ನು ಪದಗಳಲ್ಲಿ ದಾಟಿಸುವ ಉದ್ದೇಶವೇ ಇಲ್ಲಿ ಮುಖ್ಯವಾದ್ದರಿಂದ ಚೋಕ್ರಿ ಭಾಷೆಯಲ್ಲಿ ಹಾಡುವ ಮುನ್ನ ಹಾಡಿನ ಹಿಂದಿನ ಕಥೆ, ಸಾರವನ್ನು ಇಂಗ್ಲಿಷ್ ಭಾಷೆಯಲ್ಲಿ ಹೇಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ಗಾಯನವಷ್ಟೇ ಅಲ್ಲ, ಹಾಡಿನ ಮಧ್ಯೆ ಗದ್ಯ, ವಾದ್ಯ ಬೆರೆಸುವ ‘ಎ ಕ್ಯಾಪೆಲ್ಲಾ ಶೈಲಿ’ಯನ್ನು ಈ ಸೋದರಿಯರು ಅನುಸರಿಸುತ್ತಾರೆ. ಏಕತಂತಿ ವಾದ್ಯ ತಾಟಿ ಅಥವಾ ಹೆಕಾ ಲಿಬು (ಮಿಥುನ್ ಹಾರ್ನ್) ಇವರ ಗಾಯನಕ್ಕೆ ಜೊತೆಯಾಗುವ ವಾದ್ಯಗಳು. ಕೆಲವೊಮ್ಮೆ ಖ್ರೋ ಖ್ರೋ, ಬ್ಯಾಮ್‌ಹಂ ವಾದ್ಯವನ್ನೂ ಬಳಸುತ್ತಾರೆ.

ಆದರೆ ಕಾಲಕ್ಕೆ ತಕ್ಕಂತೆ ಬದಲಾಗುವುದೂ ಮುಖ್ಯ ಎಂದು ಅರಿತಿರುವ ಈ ಸಹೋದರಿಯರು ‘ಫೋಕ್ ಫ್ಯೂಷನ್’ಗೆ ಒತ್ತು ನೀಡಿದ್ದಾರೆ. ಚೋಕ್ರಿ ಜೊತೆಗೆ ತೆನ್ಯಿಡೀ ನಾಗಾ ಭಾಷೆ, ಇಂಗ್ಲಿಷ್, ಕೆಲವು ಕಡೆ ಹಿಂದಿ ಬೆರೆಸಿಯೂ ಸಂಗೀತ ಪ್ರದರ್ಶನ ನೀಡುತ್ತಿದ್ದಾರೆ. ಪಂಜಾಬಿ, ಜಪಾನ್, ಕೊರಿಯನ್ ಮೀಝೋ ಭಾಷೆಗಳನ್ನು ಬೆರೆಸಿ ಹಾಡಿರುವುದೂ ಇದೆ. ಇವೆಲ್ಲವೂ ಭಾಷೆಯೊಂದನ್ನು ಎಲ್ಲರಿಗೂ ಮುಟ್ಟಿಸುವ ಒಂದು ಪ್ರಯತ್ನ ಎಂದೇ ನಂಬಿದ್ದಾರೆ.

ಸಂಗೀತ ಈ ಸೋದರಿಯರ ಆತ್ಮ. ಹೀಗಾಗ್ಯೂ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಪರಿಣತಿ ಸಾಧಿಸಿರುವುದು ಇವರ ಹೆಗ್ಗಳಿಕೆ. ಲೂಲು ವೈದ್ಯೆ, ಆಹಾರ ವಿಮರ್ಶಕಿಯಾಗಿದ್ದರೆ, ಆಜಿ ಗಿಡ ಬೆಳೆಸುವ ಹವ್ಯಾಸದಲ್ಲಿ ಉತ್ಸಾಹಿ. ಕುವೇಲು ಫ್ಯಾಷನ್/ಸ್ಟೈಲ್ ಬ್ಲಾಗರ್, ಸಾಹಸಿ. ಹಿರಿಯ ಸೋದರಿ ಮರ್ಸಿ ಉತ್ಸಾಹಿ ಪ್ರವಾಸಿ, ಲೇಖಕಿ, ಚಿತ್ರ ನಿರ್ಮಾಪಕಿ, ಕಂಟೆಂಟ್ ಕ್ರಿಯೇಟರ್.

ಭಾಷೆ ಉಳಿವಿಗೆ ಯೂಟ್ಯೂಬ್ ಸೇತು...:
ತಮ್ಮ ಬುಡಕಟ್ಟು ಜನಾಂಗದ ಮೌಲ್ಯವನ್ನು ಇಡೀ ಜಗತ್ತಿಗೆ ಸಾರಲು ಇವರು ಆರಿಸಿಕೊಂಡಿದ್ದು ಯೂಟ್ಯೂಬ್ ಮಾಧ್ಯಮವನ್ನು. ‘ಅಳಿವಿನಂಚಿಗೆ ಸಾಗುತ್ತಿರುವ ಚಾಕೇಸಾಂಗ್ ಭಾಷೆ, ಸಂಸ್ಕೃತಿ, ಹಾಡುಗಳನ್ನು ಯುವಪೀಳಿಗೆಗೆ, ಅದರಲ್ಲೂ ನಮ್ಮ ನಾಗಾ ಜನರಿಗೆ ಪುನರ್ ಪರಿಚಯ ಮಾಡಿಕೊಡುವ ಉತ್ತಮ ಮಾರ್ಗ ಯೂಟ್ಯೂಬ್ ಎನಿಸಿತ್ತು’ ಎಂದು ಹೇಳಿಕೊಂಡಿದ್ದಾರೆ ಮರ್ಸಿ.

2011ರಲ್ಲಿ, ಅಂದರೆ ಆಗಿನ್ನೂ ಸಾಮಾಜಿಕ ಜಾಲತಾಣ ಇಷ್ಟೊಂದು ಸ್ಪರ್ಧೆ ಹೊಂದಿರದ ಆ ದಿನಗಳಲ್ಲಿಯೇ ಯೂಟ್ಯೂಬ್ ಚಾನೆಲ್ ಆರಂಭಿಸಿ ತಮ್ಮ ಸಂಗೀತ ಪ್ರದರ್ಶನದ ವಿಡಿಯೊಗಳನ್ನು ಬಿತ್ತಲು ಶುರು ಮಾಡಿದ್ದರು. ಈವರೆಗೂ ನಿರಂತರವಾಗಿ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದು, ಈಚೆಗೆ ಇವರ 'ಓ ರೋಸಿ' ಎಂಬ ಹಾಡಿನ ಪ್ರದರ್ಶನವನ್ನು 20 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಡಿಜಿಟಲ್ ವೇದಿಕೆಯ ಹೊಸ ಹಾದಿಗೆ ಜನರು ಹೊರಳುತ್ತಿರುವುದು ಇವರಿಗೆ ಮತ್ತಷ್ಟು ಹುರುಪು ತಂದಿದೆ. ‘ಹಿಂದಿಯೇತರ ಸಂಗೀತ ಕೇಳುವವರು ಹೆಚ್ಚಾಗುತ್ತಿದ್ದಾರೆ. ಡಿಜಿಟಲ್ ಮಾಧ್ಯಮದಲ್ಲಿ ಸ್ವತಂತ್ರ ಕಲಾವಿದರು ತಮ್ಮ ಮಾರ್ಗ ರೂಪಿಸಿಕೊಳ್ಳುತ್ತಿದ್ದಾರೆ. ಯೂಟ್ಯೂಬ್ ನಮ್ಮ ಉದ್ದೇಶ ಪೂರೈಕೆಗೆ ಉತ್ತಮ ವೇದಿಕೆಯಾಗಿದೆ’ ಎಂದು ಈ ಸೋದರಿಯರು ಸಂತಸ ವ್ಯಕ್ತಪಡಿಸಿದ್ದಾರೆ.

2011ರಲ್ಲಿ ‘ಲೀ ಚಾಪ್ಟರ್ ಒನ್’ ಎಂಬ ಮೊದಲ ಆಲ್ಬಂ ಬಿಡುಗಡೆ ಮಾಡಿದರು. 2019ರಲ್ಲಿ ಇಪಿ, ‘ಎ ಸ್ಲೈಸ್ ಆಫ್ ಲೀ’, ‘ಸೇ ಎಸ್ ಟು ಲೈಫ್’, ‘ರೋಡ್ ಟು ಸಂವೇರ್...’ ಹೀಗೆ ಹಲವು ಹಾಡುಗಳನ್ನು ಚೋಕ್ರಿ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆ ಮಾಡಿದರು. ಈ ಪ್ರಯತ್ನಗಳು ಇವರಿಗೆ ತಕ್ಕ ಫಲವನ್ನೂ ತಂದಿತ್ತವು.

ಟ್ರೇಲ್ ಬ್ಲೇಝರ್ ಅವಾರ್ಡ್, ಈಸ್ಟರ್ನ್ ಪನೋರಮಾ ಅಚೀವರ್ಸ್ ಅವಾರ್ಡ್, ನಾಗಾಲ್ಯಾಂಡ್ ಗವರ್ನರ್ಸ್ ಅವಾರ್ಡ್ ಫಾರ್ ಎಕ್ಸೆಲೆನ್ಸ್, ನಾರ್ಥ್ ಈಸ್ಟ್ ಯಂಗ್ ಹೀರೊ ಅವಾರ್ಡ್, ತುವೋಪಿಸುಮಿ ಗ್ಲೋಬಲ್ ಎಕ್ಸೆಲೆನ್ಸ್ ಅವಾರ್ಡ್ ಪ್ರಶಸ್ತಿಗಳು ಸಂದಿವೆ. ಈಚೆಗೆ ಲಡಾಖ್ ಇಂಟರ್‌ನ್ಯಾಷನಲ್ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ತಮ್ಮ ಸಂಗೀತದ ಘಮಲನ್ನು ಹರಿಸಿದ್ದಾರೆ.

ತಮ್ಮ ತಾಯ್ನುಡಿಯನ್ನು ಉಳಿಸಿ ಬೆಳೆಸುವ ಈ ಒಡಹುಟ್ಟಿದವರ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಇದಾಗ್ಯೂ, ‘ಪ್ರಕೃತಿಗೆ ನಾವು ಕೃತಜ್ಞತೆ ಸಲ್ಲಿಸುವುದೇ ಸಂಗೀತ. ನಮ್ಮ ಸುತ್ತಲಿನ ಪರ್ವತಗಳ ಒಳದನಿಯೇ ಸಂಗೀತ. ಈ ಪರ್ವತವಾಸಿಗಳ ಕನಸು, ಆಸೆಗಳೇ ಸಂಗೀತ. ನಾವಾಡುವ ಭಾಷೆಯೇ ಸಂಗೀತ. ಅದರ ಹೊರತು ನಮ್ಮ ಸ್ವಂತದ್ದೇನೂ ಇಲ್ಲ. ಈ ಪರ್ವತದ ದನಿ ಆಗಸಕ್ಕೂ ಮುಟ್ಟಬೇಕು. ನಮ್ಮ ಭಾಷೆ ಚಿರಕಾಲ ಉಳಿಯಬೇಕು’ ಎನ್ನುತ್ತಾ ತಮ್ಮ ಉದ್ದೇಶವನ್ನು ಸರಳವಾಗಿ ದಾಟಿಸಿಬಿಡುತ್ತಾರೆ.

ತೆತ್ಸಿಯೊ ಸಿಸ್ಟರ್ಸ್ ಹಾಡುಗಳನ್ನು ಕೇಳಲು https://www.youtube.com/c/TetseoSisters/featured ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT