ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ FaceBook Live: ಜನ್ನಿ ಗಾಯನಕ್ಕೆ ಸಂಗೀತ ಪ್ರಿಯರ ಮೆಚ್ಚುಗೆ

Last Updated 24 ಮೇ 2020, 19:30 IST
ಅಕ್ಷರ ಗಾತ್ರ

ಕನ್ನಡದ ಸಾಂಸ್ಕೃತಿಕ ಪರಂಪರೆಯ ಮೂಲದ್ರವ್ಯ ಜಾನಪದ. ಆಡಂಬರ ಇಲ್ಲದ, ನಿರಹಂಕಾರಿ, ನಿಸ್ವಾರ್ಥ ಮನಸುಗಳ ಬೆಸೆಯುವಿಕೆಯಲ್ಲಿ ಜನಪದ ಕಾವ್ಯಗಳ ಸೌಂದರ್ಯ ಮೀಮಾಂಸೆಯನ್ನು ಮುಂದಿನ ಪೀಳಿಗೆ, ಮಕ್ಕಳಿಗೆ ಪ್ರಚುರ ಪಡಿಸಬೇಕು. ಜನಪದ ಮುಖ್ಯ ಪಠ್ಯವಾಗಬೇಕು, ಕಲಿಕೆಯ ಭಾಗವಾಗಬೇಕು. ಜನಪದ ಕೊಂಡಿ ಕಳಚಿದರೆ ಮನುಷ್ಯ ಸಂಬಂಧಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ. ಮಾನವೀಯತೆ ಮರೆಗೆ ಸರಿಯುತ್ತದೆ. ಇದಕ್ಕೆ ಅವಕಾಶ ನೀಡದೆ, ಕಲೆ ಮತ್ತು ಸಂಸ್ಕೃತಿ ಸದಾ ಚಲನಶೀಲವಾಗಿ ಸಾಗಬೇಕು. ತನುಮನಗಳಲ್ಲಿ ಮನೆಮಾಡಬೇಕು...

ಇದೇ ಆಶಯ ಹೊತ್ತು ಸಾಗುತ್ತಿರುವ ಹಿರಿಯ ರಂಗಕರ್ಮಿ, ಹೆಸರಾಂತ ಗಾಯಕ ಎಚ್‌.ಜನಾರ್ದನ್‌ (ಜನ್ನಿ) ಅವರು ಭಾನುವಾರ ‘ಪ್ರಜಾವಾಣಿ’ಯ ಫೇಸ್‌ಬುಕ್‌ ಲೈವ್‌ನಲ್ಲಿ ವೈವಿಧ್ಯಮಯ ಹಾಡುಗಳ ಮೂಲಕ ಜನಪದ, ತತ್ವಪದ, ಬಂಡಾಯದ ಗೀತೆಗಳನ್ನು ಪ್ರಚುರಪಡಿಸಿದರು. ಅವರ ಗಾಯನಕ್ಕೆ ರಾಜ್ಯದಾದ್ಯಂತ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಣ್ಣು–ಗಂಡಿನ ಸಂಬಂಧವನ್ನು ಸೌಂದರ್ಯಾತ್ಮಕವಾಗಿ, ಕಾವ್ಯಾತ್ಮಕವಾಗಿ ಹೆಣೆದಿರುವ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’, ನಾಗಲಿಂಗ ಯತಿಗಳ ಬಗ್ಗೆ ಸಂತ ಶಿಶುನಾಳ ಷರೀಫರು ರಚಿಸಿದ ತತ್ವಪದ ‘ನಾಗಲಿಂಗ ಯೋಗಿ ತಾನು ತಿರುಗುದ್ಯಾತಕೆ’, ಸಾವಿನ ಪದವೆಂದೇ ಕರೆಯುವ ‘ತನುವಿನ ಒಳಗೆ ಅನುದಿನವಿದ್ದು’, ಭಿನ್ನ–ಭೇದ, ಜಾತಿ ವ್ಯವಸ್ಥೆ ಕುರಿತ ‘ಭಿನ್ನ ಭೇದವ ಮಾಡ ಬ್ಯಾಡಿರಿ’, ‘ಬಡವರು ಸತ್ತರೆ ಸುಡಲಿಕೆ ಸೌದಿಲ್ಲೊ’ ಜನಪದ ಗೀತೆಗಳು ಸಂಗೀತ ಪ್ರಿಯರ ಗಮನ ಸೆಳೆದವು.

ಭಾರತ–ಚೀನಾ ಯುದ್ಧದ ಕುರಿತ ‘ಎಲ್ಲಿಂದ ಬಂದಿರೆಂದು ಕೇಳಬಹುದು ನೀವು’, ಡಾ.ಸಿದ್ಧಲಿಂಗಯ್ಯ ಅವರ ‘ಹಸಿವಿನಿಂದ ಸತ್ತೋರು, ಸೈಜುಗಲ್ಲು ಹೊತ್ತೋರು’ ಬಂಡಾಯ ಗೀತೆಗಳು ಜನರ ನೋವು, ದುಃಖವನ್ನು ತೆರೆದಿಟ್ಟಿವು. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಸ್ವಾತಂತ್ರ್ಯದ ಕಲ್ಪನೆ ಸಾಕಾರವಾಗಿಲ್ಲ ಎಂಬ ಆಕ್ರೋಶದ ನುಡಿಗಳನ್ನು ಒಳಗೊಂಡ ‘ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’ ಗೀತೆಯು ಬಡ–ಶ್ರೀಮಂತರ ನಡುವಿನ ಅಂತರದ ಚಿತ್ರಣ ಮೂಡುವಂತೆ ಮಾಡಿತು.

ಜನರ ಒಳಿತಿಗಾಗಿ ಕಲೆ, ಸಾಹಿತ್ಯ, ಸಂಸ್ಕೃತಿಯ ಮೂಲಕ ಸಮಾಜವನ್ನು ತಲುಪಬೇಕು. ಸಮ ಸಮಾಜ ನಿರ್ಮಾಣವಾಗಬೇಕಾದರೆ ಸ್ವಾರ್ಥವನ್ನು ಬಿಡಬೇಕು. ಜಾತೀಯತೆ, ಮತೀಯ ಭಾವನೆ ಹೋಗಬೇಕು. ಜಾತ್ಯತೀತ, ಮಾನವೀಯ ಮೌಲ್ಯಗಳ ಮೂಲಕ ಸಾಗಬೇಕು. ಎಲ್ಲರ ಚೇತನ ಅನಿಕೇತನವಾಗಬೇಕು ಎಂದ ಜನ್ನಿ ಅವರು ಕುವೆಂಪು ರಚಿತ ‘ಓ ನನ್ನ ಚೇತನ ಆಗು ನೀ ಅನಿಕೇತನ’ದ ಮೂಲಕ ಸಮಾಪ್ತಿಗೊಳಿಸಿದರು. ಪಕ್ಕವಾದ್ಯದಲ್ಲಿ ರಮೇಶ್‌ ಧನ್ನೂರ್‌ (ತಬಲ), ಪ್ರಭುರಾವ್ (ಹಾರ್ಮೋನಿಯಂ) ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT