ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತಾದ್‌ ಬಾಲೇಖಾನ್‌ ಸ್ಮರಣೆ, ಪ್ರಶಸ್ತಿ ಪ್ರದಾನ

Last Updated 31 ಜನವರಿ 2019, 19:45 IST
ಅಕ್ಷರ ಗಾತ್ರ

ಧಾರವಾಡದ ಪೇಢೆ, ಬೇಂದ್ರೆ, ಕಣವಿಯ ಕಾವ್ಯದ ಹಾಗೆ ಸಿತಾರ್‌ ನಾದ! ಅಂತಹ ಸವಿನಾದದ ಗಾರುಡಿಗನಾಡಿನ ಸಿತಾರ್‌ ಸ್ಟಾರ್‌ ಉಸ್ತಾದ್‌ ಬಾಲೇಖಾನ್‌. ನಾದ ಉಳಿಸಿ ಬೆಳೆಸಿ ಮರೆಯಾದ ಈ ಮಹಾನ್‌ ಸಿತಾರ್‌ ವಾದಕನ ನೆನಪಿಗೆ ನಗರದಲ್ಲಿ ಬಹುದೊಡ್ಡ ಕಾರ್ಯಕ್ರಮವೊಂದು ಇದೇಫೆ. 2ರಂದು (ಶನಿವಾರ) ಆಯೋಜನಗೊಳ್ಳುತ್ತಿದೆ.

ಮಧ್ಯಪ್ರದೇಶದ ಇಂದೋರ್‌ನಿಂದ ಧಾರವಾಡಕ್ಕೆ ಬಂದು ನೆಲೆಸಿದ ಸಿತಾರ್‌ ಕಲಾವಿದ ರಹೀಮತ್ ಖಾನ್‌ ಮೈಸೂರು ಮಹಾರಾಜರಿಂದ ‘ಸಿತಾರ್‌ ರತ್ನ’ ಬಿರುದು ಪಡೆದವರು. ಇಂಥ ಸಂಗೀತ ಪರಂಪರೆಯ ಮನೆತನದ ಕುಡಿ ಉಸ್ತಾದ್‌ ಬಾಲೇಖಾನ್‌.

ಅಜ್ಜನಿಂದ ಸಿತಾರ್‌ ಕಲಿಕೆಯನ್ನು ಆರಂಭಿಸಿ ತಂದೆಪ್ರೊ.ಅಬ್ದುಲ್‌ ಕರೀಂಖಾನ್‌ (ಧಾರವಾಡ ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿದ್ದವರು) ಅವರಿಂದ ಮಾರ್ಗದರ್ಶನ ಪಡೆದವರು. ನಾಡಿನಲ್ಲಿ ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತದಲ್ಲಿ ಸಿತಾರ್‌ ಜನಪ್ರಿಯತೆ ಹಬ್ಬಿಸಿದ ಕೀರ್ತಿ ಈ ಕುಟುಂಬದ್ದು.

ಧಾರವಾಡದವರಾಗಿದ್ದರೂ ಬೆಂಗಳೂರಿನಲ್ಲಿ ನೆಲೆಸಿದ ಬಾಲೇಖಾನ್‌ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಮೂರು ಬಾರಿ ಸದಸ್ಯರಾಗಿದ್ದರು. ಮೂರು ದಶಕಗಳ ಕಾಲ ಬೆಂಗಳೂರಿನಲ್ಲಿ ಸಿತಾರ್‌ ತರಬೇತಿ ನೀಡಿ ಅನೇಕ ಕಲಾವಿದರನ್ನು ತಯಾರು ಮಾಡಿದ್ದಾರೆ. ಬಾಲೇಖಾನ್‌ 65ನೇ ವಯಸ್ಸಿನಲ್ಲಿ 2007ರಲ್ಲಿ ನಿಧನರಾದರು.

‘ಉಸ್ತಾದ್‌ ಬಾಲೇಖಾನ್‌ ಸ್ಮರಣಾರ್ಥ ಸಂಸ್ಥೆ’ ಪ್ರತಿವರ್ಷ ಬಾಲೇಖಾನ್‌ ಸ್ಮರಣೆ ಕಾರ್ಯಕ್ರಮ ಆಯೋಜಿಸುವುದರ ಜೊತೆಗೆ ನಾಲ್ಕು ವರ್ಷಗಳಿಂದ ‘ಇನ್ಫೊಸಿಸ್‌ ಸಿತಾರ್‌ ನವಾಜ್‌ ಉಸ್ತಾದ್‌ಬಾಲೇಖಾನ್‌ ಸ್ಮಾರಕ ಪ್ರಶಸ್ತಿ’ ನೀಡುತ್ತಿದೆ. 2018ರ ಕಾರ್ಯಕ್ರಮ ಡಿಸೆಂಬರ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ, ನಟ ಅಂಬರೀಷ್‌ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿತ್ತು. ಆ ಸಮಾರಂಭ ಫೆ. 2ರಂದು ನಗರದಲ್ಲಿ ಆಯೋಜನೆಗೊಂಡಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಸಿತಾರ್‌ ಕಲಾವಿದರೂ ಆಗಿರುವ ಉಸ್ತಾದ್‌ ಹಫೀಸ್‌ಬಾಲೇಖಾನ್‌ (ಬಾಲೇಖಾನ್‌ ಅವರ ಪುತ್ರ) ಕಾರ್ಯಕ್ರಮದ ಮಾಹಿತಿ ನೀಡಿದ್ದಾರೆ.

‘2010ರಿಂದ ಟ್ರಸ್ಟ್‌ ಮೂಲಕ ತಂದೆಯ ಸ್ಮರಣೆಯಲ್ಲಿ ಸಂಗೀತ ಕಛೇರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ. 2015ರಿಂದದೇಶದ ಪ್ರಸಿದ್ದ ಸಿತಾರ್‌ ಕಲಾವಿದರನ್ನು ಆಯ್ಕೆ ಮಾಡಿ ಅಪ್ಪನ ಹೆಸರಿನಲ್ಲಿ ಗೌರವಿಸುತ್ತ ಬಂದಿದ್ದೇವೆ. ಈ ಪ್ರಶಸ್ತಿಗೆ ಸುಧಾಮೂರ್ತಿ ಅವರ ‘ಇನ್ಫೊಸಿಸ್‌ ಫೌಂಡೇಷನ್‌’ ಹಣಕಾಸಿನ ನೆರವು ನೀಡುತ್ತಿದೆ. ಪ್ರಶಸ್ತಿ ಮೊತ್ತ ₹1ಲಕ್ಷ ನಗದು’ ಎಂದು ಉಸ್ತಾದ್‌ ಹಫೀಸ್‌ಬಾಲೇಖಾನ್‌ ತಿಳಿಸಿದ್ದಾರೆ.

2018ರ ಸಾಲಿನ ‘ಇನ್ಫೊಸಿಸ್‌ ಸಿತಾರ್‌ ನವಾಜ್‌ ಉಸ್ತಾದ್‌ಬಾಲೇಖಾನ್‌ ಸ್ಮಾರಕ ಪ್ರಶಸ್ತಿ’ಯನ್ನು ಕಾಶ್ಮೀರ ಕಣಿವೆಯ ಸಂತೂರ್‌ ವಾದಕ ಪಂಡಿತ್‌ ಭಜನ್‌ ಸೊಪೊರಿ ಅವರಿಗೆ ನೀಡಲಾಗುತ್ತಿದೆ. ಇವರು ಭಾರತೀಯ ಶಾಸ್ತ್ರೀಯ ಸಂಗೀತದ ಸೂಫಿಯಾನ ಘರಾನ ಶೈಲಿಯ ಸಂಗೀತಗಾರ. ಇವರ ಕುಟುಂಬದ ಆರನೇ ತಲೆಮಾರಿನ ಸಂತೂರ್‌ ವಾದಕ ಇವರು. ಪ್ರಯಾಗ್‌ ಸಂಗೀತ ಸಮಿತಿ ಮತ್ತು ಅಲಹಾಬಾದ್‌ ವಿಶ್ವವಿದ್ಯಾಲಯ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹತ್ತು ವರ್ಷದ ಬಾಲಕ ಸೊಪೊರಿ ಮೊದಲ ಕಛೇರಿ ನೀಡಿದ್ದರು. ಉರ್ದು, ಹಿಂದಿ, ಕಾಶ್ಮೀರಿ, ಗುಜರಾತಿ, ಭೋಜ್‌ಪುರಿ, ಹಿಮಾಚಲ, ರಾಜಾಸ್ತಾನಿ, ಪಂಜಾಬಿ ಹಾಗೂ ತೆಲುಗು ಭಾಷೆಗಳ ಸುಮಾರು 4 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸೊಪೊರಿ ಮಟ್ಟುಗಳನ್ನು ಹಾಕಿದ್ದಾರೆ. ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನೂ ಅಧ್ಯಯನ ಮಾಡಿರುವ ಇವರಿಗೆಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ದೆಹಲಿ ತೆಲುಗು ಅಕಾಡೆಮಿ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ, ದೆಹಲಿ ರತ್ನ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.

ಪ್ರತಿ ವರ್ಷದ ಸಂಪ್ರದಾಯದಂತೆ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಪ್ರಶಸ್ತಿ ಪುರಸ್ಕೃತರಿಂದ ಸಂಗೀತ ಕಛೇರಿ ನಡೆಯಲಿದೆ. ಬಾಲೇಖಾನ್‌ ಪುತ್ರಿಯರಾದ ಅನೀಸಾ ಖಾನ್‌ ಸೌದಾಗರ್‌ ಮತ್ತು ಪರ್ವಿನ್‌ ಜೆ. ಷೇಕ್‌ ಪ್ರಾರ್ಥನೆಯೊಂದಿಗೆ ಕಛೇರಿ ಆರಂಭವಾಗಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಕಲಾರಸಿಕರಿಂದ ಉದಾರ ದೇಣಿಗೆ ಸ್ವೀಕರಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT