ಭಾನುವಾರ, ಮಾರ್ಚ್ 7, 2021
31 °C
ಉಸ್ತಾದೋಂಕೆ ಉಸ್ತಾದ್‌ ಗುಲಾಮ್‌ ಮುಸ್ತಫಾ ಖಾನ್‌

ಗುಲಾಮ್‌ ಮುಸ್ತಫಾ ಖಾನ್ ಎಂಬ ರಾಗಧ್ಯಾನಿಗನ ಅಂತಿಮ ಯಾನ

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಂಗೀತಕ್ಷೇತ್ರದ ಮಹಾಗುರು ಒಬ್ಬರು ಇಂದು ನಾದಲೋಕದಲ್ಲಿ ಮೌನವಾದರು. ಲತಾಮಂಗೇಷ್ಕರ್‌, ಆಶಾ ಭೋಸ್ಲೆ, ಹರಿಹರನ್‌, ಸೋನು ನಿಗಮ್‌, ಶಾನ್‌, ಎ.ಆರ್‌. ರೆಹಮಾನ್‌ ಹೀಗೆ ಶಿಷ್ಯಕೋಟಿಯನ್ನು ಬೆಳೆಸಿದ ಗುಲಾಮ್‌ ಮುಸ್ತಫಾ ಖಾನ್‌ ತಮ್ಮ ಗಾನ ಯಾತ್ರೆಗಿಂದು ಕೊನೆ ಹಾಡಿದರು.

1931 ಮಾರ್ಚ್‌ 3ರಂದು ಉತ್ತರ ಪ್ರದೇಶದಲ್ಲಿ ಜನಿಸಿದರು. ಉಸ್ತಾದ್‌ ಇನಾಯತ್‌ ಹುಸೇನ್‌ ಖಾನ್‌ ಅವರ ಮೊಮ್ಮಗ ಮುಸ್ತಫಾ ಖಾನ್‌. ಇವರ ಮುತ್ತಜ್ಜ ಗ್ವಾಲಿಯರ್‌ ಘರಾನಾದಲ್ಲಿ ಹೆಸರುವಾಸಿಯಾಗಿರುವ ಹಡ್ಡುಖಾನ್‌ ಅವರು.

ಸಂಗೀತ ವಾತಾವರಣದಲ್ಲಿಯೇ ಜನಿಸಿದ ಮುಸ್ತಫಾ ಖಾನ್‌, ‘ಪದಗಳನ್ನು ಉಚ್ಚರಿಸುವ ಮೊದಲು ರಾಗಗಳನ್ನು ಕಲಿತೆ ನಾನು ಅಂತ ಒಂದೆಡೆ ಹೇಳಿಕೊಳ್ಳುತ್ತಾರೆ’ ಗೀತಾ ದತ್ತ, ಮನ್ನಾಡೇ, ವೈಜಯಂತಿಮಾಲಾ ಮುಂತಾದವರಿಗೂ ಸಂಗೀತ ಪಾಠ ಹೇಳಿದ ಮುಸ್ತಫಾ ಖಾನ್‌, ತಮ್ಮೆಲ್ಲ ಶಿಷ್ಯಂದಿರಿಗೂ ಹೇಳುತ್ತಿದ್ದಿದ್ದು ಒಂದೇ ಮಾತು. ‘ಹಣ ಎಲ್ಲದಕ್ಕೂ ಬೇಕು. ಆದರೆ ಎಲ್ಲವೂ ಹಣವೇ ಅಲ್ಲ’ ದುಡಿಯಬೇಕಾದಾಗ ಕಷ್ಟಪಟ್ಟು ದುಡಿಯಿರಿ. ಅದು ಆನ್ನ ಗಳಿಸಿಕೊಡುತ್ತದೆ. ಆನಂದಕ್ಕಾಗಿ ಸಂಗೀತವನ್ನು ಆಶ್ರಯಿಸಿ ಅಂತ.

ಅ ಡ್ರೀಮ್‌ ಐ ಲಿವ್ಡ್‌ ಅಲೋನ್‌ ಅವರ ಆತ್ಮಚರಿತ್ರೆಯಾಗಿದೆ. ಅವರ ಸೊಸೆ ನಮೃತಾ ಗುಪ್ತಾ ಖಾನ್‌ ಬರಹಕ್ಕಿಳಿಸಿದ್ದಾರೆ. ಈ ಪುಸ್ತಕದಲ್ಲಿ ಉಸ್ತಾದ್ ಜಾಕಿರ್‌ ಹುಸೇನ್‌ ಒಂದೆಡೆ ಹೇಳುತ್ತಾರೆ.‘ಉಸ್ತಾದ್ ಮುಸ್ತಫಾ ಖಾನ್‌ ಅವರ ಬಳಿ ನಾನು ಸ್ಕೂಲ್‌ ಯುನಿಫಾರ್ಮ್‌ನಲ್ಲಿ ತಬಲಾ ಹಿಡಿದುಕೊಂಡು ಹೋಗುವುದು ನೆನಪಿದೆ. ಅವರು ನನ್ನಂಥ ಹುಡುಗನಿಗೂ ಅಷ್ಟೇ ಆಸ್ಥೆಯಿಂದ ಕಲಿಸುತ್ತಿದ್ದರು. ಅವರ ಬಳಿ ಕಲಿತರವರೆಲ್ಲ ಇಂದು ಹೆಸರುವಾಸಿಯಾಗಿದ್ದಾರೆ. ಆದರೆ ಯಾರೂ ರಿಯಾಝ್‌ ಬಿಟ್ಟಿಲ್ಲ. ಸಂಗೀತದೊಂದಿಗೆ ತಾದಾತ್ಮ್ಯ ಸೃಷ್ಟಿಸುವ ಅವರ ಚರಿಷ್ಮಾ.. ಅವರಿಗೇ ಬರುತ್ತದೆ. 

ಹಿಂದೆ ಸಂಗೀತ ಕಾರ್ಯಕ್ರಮವನ್ನು ವೇದಿಕೆಗೆ ನೀಡಬೇಕೆಂದರೆ ಕಲಾವಿದರು ಜನ್ಮಾಷ್ಟಮಿ ಬರುವವರೆಗೂ ಕಾಯಬೇಕಿತ್ತು. ಪ್ರತಿ ಜನ್ಮಾಷ್ಟಮಿಯಂದು ಬಹುತೇಕ ಕಲಾವಿದರ ತಮ್ಮ ಮೊದಲ ವೇದಿಕೆ ಕಾರ್ಯಕ್ರಮವನ್ನು ನೀಡುತ್ತಿದ್ದರು. ಗುಲಾಮ್‌ ಮುಸ್ತಫಾ ಖಾನ್‌ ತಮ್ಮ 8ನೆಯ ವಯಸ್ಸಿಗೆ ಜನ್ಮಾಷ್ಟಮಿ ವೇದಿಕೆಯ ಮೇಲೆ ಕಾರ್ಯಕ್ರಮ ನೀಡಿದರು. 

ಹಿಂದೂಸ್ತಾನಿ ಸಂಗೀತದ ಸಾಂಪ್ರದಾಯಿಕ ಘರಾನಾಗಳಾದ ರಾಂಪುರ, ಗ್ವಾಲಿಯರ್‌ ಹಾಗೂ ಸಹಸ್ವಾನ್‌ ಘರಾನಾ ಶೈಲಿಯಲ್ಲಿ ಇವರು ಪಳಗಿದ್ದರು. ರಾಗಗಳನ್ನು ಜೋಡಿಸಿ, ಒಗ್ಗೂಡಿಸುವ ಅವರ ಕಲೆಗೆ ಅವರೇ ಸಾಟಿಯಾಗಿದ್ದರು. ಪ್ರತಿರಾಗವೂ ಇವರ ಅಪ್ಪಣೆಯನ್ನು ಕೇಳುವಂತೆ, ಇವರ ಧ್ವನಿಯಲ್ಲಿ ಏರಿಳಿಯುತ್ತಿತ್ತು. ಸಭೆಯಲ್ಲಿ ಸಂಗೀತ ಪ್ರಸ್ತುತ ಪಡಿಸುತ್ತಿದ್ದರೆ ಅವರೇ ರಾಗವಾಗುತ್ತಿದ್ದರು. ಅಷ್ಟು ತನ್ಮಯರಾಗುತ್ತಿದ್ದರು.

ತಮ್ಮ 88ನೆಯ ವಯಸ್ಸಿನಲ್ಲಿ ಸಂಗೀತ ಕಛೇರಿ ನೀಡಬೇಕಿತ್ತು. ಅದು ರೆಕಾರ್ಡಿಂಗ್‌ ಆಗಬೇಕಿತ್ತು. ಹಾಡಲು ಆರಂಭಿಸಿದೊಡನೆ ತಮ್ಮ ಹಿಯರಿಂಗ್‌ ಏಯ್ಡ್‌ ತೆಗೆದಿರಿಸುತ್ತಿದ್ದರು. ಆದರೆ ಕ್ಯಾಮರಾ ಮೆನ್‌ ಹೇಳುವ ನಿರ್ದೇಶನಗಳನ್ನು ಕೇಳಲು ಸಾಧ್ಯವಿರಲಿಲ್ಲ. ಅದು ಆಗಾಗ ಕಿರಿಕಿರಿ ಹುಟ್ಟಿಸುತ್ತಿತ್ತು. ಕೊನೆಗೆ ಹರಿಹರನ್‌ ಬಂದ ಮೇಲೆ, ಕ್ಯಾಮರಾಮನ್‌ ಯಾವ ನಿರ್ದೇಶನಗಳನ್ನೂ ನೀಡುವ ಅಗತ್ಯವಿಲ್ಲ. ಅವರ ಗಾಯ್ಕಿಯನ್ನು ಅದ್ಹೇಗೆ ಸಾಧ್ಯವೋ ಹಾಗೆಯೇ ದಾಖಲಿಸಬೇಕು ಎಂದಾಯಿತು. 

ಆಗ ಸುರ್‌ಬಹಾರ್‌ ರಾಗ ಎತ್ತಿಕೊಂಡ ಮುಸ್ತಫಾ ಖಾನ್‌ ಇಡೀ ಸ್ಟುಡಿಯೋದಲ್ಲಿ ಚೈತ್ರ ಬಂದಂತಹ ವಾತಾವರಣ ಸೃಷ್ಟಿಸಿದರು.

ಅವರ ಗಾಯಕಿ ಮುಗಿದಾಗ ಎಲ್ಲೆಡೆ ಒಂದು ಬಗೆಯ ಮೌನ. ಅದೇ ರಾಗಗಳಲ್ಲಿಯೇ ಎಲ್ಲರೂ ಕಳೆದುಹೋದಂತೆ. ಮಾತುಗಳು ಮರೆತು ಹೋದಂತೆ. ಇಡೀ ವಾತಾವರಣದಲ್ಲಿ ಸುರ್‌ ಬಹಾರ್‌ ಅನುರಣನಗೊಂಡಂತೆ... ಒಂದು ಕರತಾಡನದ ಮೊದಲಿನ ಆ ಮೌನ... ಅಕ್ಷರಶಃ ನಾದಬ್ರಹ್ಮನನ್ನು ಅಲ್ಲಿ ಆವಾಹಿಸಿದಂತಾಗಿತ್ತು.

ಈಗ ಗುಲಾಮ್‌ ಮುಸ್ತಫಾ ಖಾನ್‌ ಹಾಡದೆಯೇ ಒಂದು ಮೌನ ಸೃಷ್ಟಿಸಿ ಹೋಗಿದ್ದಾರೆ. ಭಾನುವಾರ ಜ.17 ಮುಂಬೈನ ಸಾಂತಾಕ್ರೂಜ್‌ ಖಬರಿಸ್ಥಾನದಲ್ಲಿ ತಮ್ಮ ಕರ್ಮಭೂಮಿಯಲ್ಲಿಯೇ ಮಣ್ಣಾಗುತ್ತಿದ್ದಾರೆ. ಆ ಮಣ್ಣು ಧನ್ಯ. 

ಪ್ರಶಸ್ತಿ–ಪುರಸ್ಕಾರಗಳು

ತಾನಸೇನ್‌ ಸಮ್ಮಾನ್‌, ಪದ್ಮಭೂಷಣ, ಪದ್ಮವಿಭೂಷಣ, ಕೇಂದ್ರ ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಇವರನ್ನು ಅರಿಸಿಕೊಂಡು ಬಂದವು.

ಪ್ರಶಸ್ತಿ ಸ್ವೀಕರಿಸಿದ ಕ್ಷಣ ಏನೆನಿಸಿತ್ತು ಎಂಬ ಪ್ರಶ್ನೆಗೆ.. ‘ಹಾಡುಗಳನ್ನು ಹಾಡುತ್ತ ಹೋಗಬೇಕು. ಸಂಗೀತದ ವಿನಾ ಮತ್ತೇನೂ ನೆನಪಿಲ್ಲ. ನೆನಪಿರಕೂಡದು. ಇಂಥ ಬಿರುದು, ಪ್ರಶಸ್ತಿಗಳ ಮಾಯೆಯಲ್ಲಿ ಬಿದ್ದರೆ ಸಂಗೀತ ಮರೆತುಹೋಗುತ್ತದೆ. ಸಂಗೀತವೊಂದೇ ನನಗೆ ನೆನಪಿರುವುದು’ ಎಂದು ಹೇಳಿದ್ದರು. 

ಉಸ್ತಾದೋಂಕೆ ಉಸ್ತಾದ್‌ ಅನ್ನುವುದೇ ಅವರಿಗಿಷ್ಟವಾಗಿತ್ತು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು