ಗುರುವಾರ , ಜೂನ್ 4, 2020
27 °C
ವಚನಾಮೃತ

ಬಲ್ಲೆ ಎನ್ನುವುದನ್ನು ಸಲ್ಲ!

ಪ್ರಜ್ಞಾ ಮತ್ತಿಹಳ್ಳಿ Updated:

ಅಕ್ಷರ ಗಾತ್ರ : | |

ವಾದ್ಯಕ್ಕೆ ಬಂಧವಲ್ಲದೆ, ನಾದಕ್ಕೆ ಬಂಧವುಂಟೆ?
ಅರಿವಿಂಗೆ ಬಂಧವಲ್ಲದೆ, ಅರುಹಿಸಿಕೊಂಬವಗುಂಟೆ ಬಂಧ?
ಅರಿದಿಹೆನೆಂಬ ಭ್ರಮೆ, ಅರುಹಿಸಿಕೊಂಡಿಹೆನೆಂಬ ಕುರುಹು
ಉಭಯನಾಸ್ತಿಯಾಗಿಯಲ್ಲದೆ ಭಾವಶುದ್ಧಿಯಿಲ್ಲ
ಕಾಮಧೂಮ ಧೂಳೇಶ್ವರಾ

ಮಾದಾರ ಧೂಳಯ್ಯ ಚರ್ಮವನ್ನು ಹದ ಮಾಡಿ ಪಾದರಕ್ಷೆ ಹೊಲಿಯುವ ಕಾಯಕ ಮಾಡುತ್ತಿದ್ದ ಶರಣಜೀವಿ. ವೃತ್ತಿಮೂಲದ ಪರಿಭಾಷೆಯನ್ನು ಹೇರಳವಾಗಿ ಬಳಕೆ ಮಾಡುತ್ತಲೇ ಭಕ್ತಿ, ಮೋಕ್ಷ ಮತ್ತು ಜ್ಞಾನದ ಕುರಿತಾಗಿ ಅಭಿವ್ಯಕ್ತಿಸುವುದು ಆತನ ವಚನಗಳ ವೈಶಿಷ್ಟ್ಯ.

ಮೇಲಿನ ವಚನದಲ್ಲಿ ಆತ ಜ್ಞಾನದ ಕುರಿತು ಅಪ್ರತಿಮವಾದ ಸತ್ಯವನ್ನು ನಿವೇದಿಸುತ್ತಿದ್ದಾನೆ.

ನಾದವನ್ನು ಹೊರಡಿಸುವ ವಾದ್ಯಗಳು ಅದರ ವಾದಕನ ಆಣತಿಯನ್ನು ಮೀರಲಾರದ ಬಂಧಕ್ಕೆ ಒಳಪಟ್ಟಿರುತ್ತವೆ. ವಾದಕನನ್ನು ಹೊರತು ಪಡಿಸಿ ಅವುಗಳಿಗೆ ಅಸ್ತಿತ್ವವಿರುವುದಿಲ್ಲ. ಆತ ನುಡಿಸಿದಂತೆ ಅವು ನಾದ ಹೊರಡಿಸುತ್ತವೆ. ಆದರೆ ಇದೇ ಮಾತು ವಾದ್ಯದಿಂದ ಹೊರಟ ನಾದಕ್ಕೆ ಅನ್ವಯವಾಗುವುದಿಲ್ಲ. ನಾದವು ಸ್ವತಂತ್ರವಾಗಿದ್ದು, ಅದು ಎಲ್ಲೆಡೆಯೂ ಪಸರಿಸಬಲ್ಲುದು. ವಾದ್ಯದಿಂದ ಹೊರ ಹೊಮ್ಮಿದ ತರುವಾಯದಲ್ಲಿ ನಾದವು ಪೂರ್ಣ ಸ್ವಾತಂತ್ರ್ಯದಿಂದ ಅಲೆಅಲೆಯಾಗಿ ಹರಡತೊಡಗುತ್ತದೆ. ಇದೇ ಮಾತನ್ನು ನಾವು ಜ್ಞಾನದ ಕುರಿತಾಗಿಯೂ ಹೇಳಬಹುದು.

ಅರಿವು ಅಥವಾ ಜ್ಞಾನ ಕೂಡ ಅದನ್ನು ಹೊಂದಿದವನ ಅಧೀನದಲ್ಲಿರುತ್ತದೆ. ಜ್ಞಾನಿಯನ್ನು ಬಿಟ್ಟು ಜ್ಞಾನವು ಸ್ವತಂತ್ರವಾಗಿ ಹರಿದಾಡಲು ಸಾಧ್ಯವಿಲ್ಲ. ಆ ಜ್ಞಾನಿ ತಾನೇ ಮುಂದಾಗಿ ಧಾರೆ ಎರೆದಾಗ ಮಾತ್ರ ಇನ್ನೊಬ್ಬರು ಅದನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗೆಂದು ಆ ಅರಿವನ್ನು ಪಡೆಯುವ ಸಾಧನಿಕನಿಗೆ ಯಾವ ಬಂಧವೂ ಇರುವುದಿಲ್ಲ. ಆತನು ತನ್ನ ಇಚ್ಛಾನುಸಾರವಾಗಿ ಅರಿವನ್ನು ಯಾರಿಂದಲಾದರೂ ಪಡೆದುಕೊಳ್ಳಬಹುದು. ಶಿವಶರಣರು ತಮ್ಮ ಅನೇಕ ವಚನಗಳಲ್ಲಿ ವಾದ್ಯವನ್ನು ಮನುಷ್ಯನ ಶರೀರಕ್ಕೆ ಹೋಲಿಸಿದ್ದಾರೆ.

ವಾದ್ಯವೆನ್ನುವುದು ಭೌತಿಕ ಶರೀರವಾದರೆ, ಅದರಿಂದ ಹೊಮ್ಮುವ ನಾದವು ತಿಳಿವನ್ನು ಪ್ರತಿನಿಧಿಸುತ್ತದೆ. ಜ್ಞಾನದ ವಿಷಯದಲ್ಲಿ ನಾವೆಲ್ಲರೂ ತಿಳಿದುಕೊಳ್ಳಲೇಬೇಕಾದ ವಿಚಾರವೇನೆಂದರೆ – ತಿಳಿದುಕೊಂಡಿದ್ದೇನೆ ಎಂಬುದೇ ಒಂದು ಭ್ರಮೆ. ಅರಿವಿಗೆ ಪೂರ್ಣವಿರಾಮ ಇರುವುದಿಲ್ಲ. ಅದು ಮಹಾಸಾಗರವಿದ್ದಂತೆ. ಎಷ್ಟು ತಿಳಿದುಕೊಂಡಿದ್ದರೂ ಮತ್ತಷ್ಟು ಇನ್ನಷ್ಟು ತಿಳಿವಳಿಕೆಯ ಕೊರತೆ ಉಳಿದೇ ಬಿಡುತ್ತದೆ. ನಾನು ಜ್ಞಾನವನ್ನು ನೀಡಿದೆ ಎಂದಾಗಲೀ, ಪಡೆದುಕೊಂಡೆ ಎಂದಾಗಲೀ ಯಾರೂ ಭಾವಿಸಿಕೊಳ್ಳಬಾರದು. ಅದು ಅಹಂಕಾರವಾಗುತ್ತದೆ. ಅಂತಹ ಅಹಂಭಾವ ಅಳಿದಾಗ ಭಾವಶುದ್ಧಿಯಾಗುತ್ತದೆ. ಆಗ ಭಕ್ತನಿಗೆ ಏನನ್ನೂ ಬಯಸದ, ಎಲ್ಲವನ್ನೂ ಪಡೆದುಕೊಂಡ ಅನುಪಮ ಆನಂದದ ಮನಃಸ್ಥಿತಿ ಪ್ರಾಪ್ತವಾಗುತ್ತದೆ. ಭಾವಶುದ್ಧಿ ಎನ್ನುವುದು ತಾಯಿಯ ಮಡಿಲಲ್ಲಿರುವ ಶಿಶುವಿನಂತಹ ನಿಶ್ಚಿಂತ ಮನೋಭಾವ. ಪ್ರತಿಯೊಬ್ಬ ಶರಣ ತನ್ನ ಆಧ್ಯಾತ್ಮಿಕ ಸಾಧನೆಯಿಂದ ಈ ಸ್ಥಿತಿಯನ್ನು ತಲುಪುವ ನಿಟ್ಟಿನಲ್ಲಿ ಉತ್ಸುಕನಾಗಿರುತ್ತಾನೆ. ನಾನೆಲ್ಲವನ್ನು ಬಲ್ಲೆ ಎಂಬ ಅಹಮಿಕೆಯನ್ನು ತ್ಯಜಿಸಿದಾಗ ಈ ಸ್ಥಿತಿ ಪ್ರಾಪ್ತಿಯಾಗುತ್ತದೆಯೆಂಬ ಕಿವಿ ಮಾತನ್ನು ಮಾದಾರ ಧೂಳಯ್ಯ ಮಾರ್ಮಿಕವಾಗಿ ಹೇಳುತ್ತಾನೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು