ಗುರುವಾರ , ಜೂನ್ 4, 2020
27 °C

ವಿದುಷಿ ಯೋಗಕೀರ್ತನಾ, ಸೌಮ್ಯ– ಸರಳ ಗಾಯನ

ಡಾ. ರಮಾ ವಿ. ಬೆಣ್ಣೂರ್ Updated:

ಅಕ್ಷರ ಗಾತ್ರ : | |

Prajavani

ಆರೋಗ್ಯ ಮತ್ತು ಸಂಗೀತಗಳೆರಡನ್ನೂ ಒಂದೇ ಸೂರಿನಡಿ ತರುವ ಯತ್ನದಲ್ಲಿ ಯಶಸ್ವಿಯಾಗಿರುವ ‘ರಾಗ’ ಸಂಸ್ಥೆಯು ಸೆ.21ರಂದು ಎಂದಿನ ತನ್ನ ಮೂರನೆಯ ಶನಿವಾರದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯುವ ಗಾಯಕಿ ವಿದುಷಿ ಯೋಗಕೀರ್ತನಾ ಅವರನ್ನು ಮೈಸೂರಿಗೆ ಪರಿಚಯಿಸಿತು.

ಮೈಸೂರಿನಲ್ಲಿ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ಯೋಗಕೀರ್ತನಾ ಅವರ ಪೂರ್ಣ ಪ್ರಮಾಣದ ಕಛೇರಿಯು ಇದೇ ಪ್ರಥಮ ಬಾರಿಗೆ ನಡೆಯಿತು. ಅವರ ತಾಯಿ ವೈಣಿಕ ವಿದುಷಿ ಯೋಗವಂದನಾ ಅವರು. ಗುರು ನೀಲಾ ರಾಂಗೋಪಾಲ್ ಅವರ ಗರಡಿಯಲ್ಲಿ ಹಾಡುಗಾರಿಕೆಯಲ್ಲಿ ತಯಾರಾಗುತ್ತಿರುವ ಯೋಗಕೀರ್ತನಾ ಅವರ ಗಾಯನದಲ್ಲಿ ಮೃದುತ್ವ ಹಾಗೂ ತಾಜಾತನ ಎದ್ದು ಕಾಣುತ್ತವೆ. ಮೃದುವಾದರೂ ದೃಢವಾದ ಶಾರೀರವನ್ನು ಬೇಕಾದಂತೆ ಬಳಸಲು ಸಾಧ್ಯವಾಗುವಂತೆ ಅವರು ಸಾಧನೆಯಿಂದ ಹದಗೊಳಿಸಿದ್ದಾರೆ. ಶಾಸ್ತ್ರೀಯತೆಯ ಮೆರುಗಿನ ಮನೋಧರ್ಮವು ಈಗಾಗಲೇ ಅವರಲ್ಲಿ ಸಮೃದ್ಧವಾಗಿ ಪ್ರಕಟಗೊಂಡಿದೆ. ಅನುಭವದೊಡನೆ ನಿರಂತರ ಸಾಧನೆಯೂ ಸೇರಿದಲ್ಲಿ ಯಶಸ್ಸಿಗೇನೂ ಕೊರತೆ ಕಾಣದು.

ಅಂದು ಅವರಿಗೆ ಪಕ್ಕವಾದ್ಯದಲ್ಲಿ ವಿದ್ವಾಂಸರಾದ ವೆಂಕಟೇಶ ಜೋಸ್ಯರ್ (ಪಿಟೀಲು), ಪಿ.ಎಸ್.ಶ್ರೀಧರ್ (ಮೃದಂಗ) ಮತ್ತು ಶರತ್ ಕೌಶಿಕ್ (ಘಟ) ಅವರ ಸಹಕಾರ ಇತ್ತು. ಈ ಎಲ್ಲ ಹದವಾದ ಪಕ್ಕವಾದ್ಯಗಳ ಸಹಕಾರದೊಡನೆ ಅಂದಿನ ಕಛೇರಿಯು ಹಿತವಾದ ಅನುಭವವನ್ನು ನೀಡುವುದರಲ್ಲಿ ಯಶಸ್ವಿಯಾಯಿತು. ಸ್ವಾತಿ ತಿರುನಾಳರ ವರ್ಣ ‘ಸರಸಿಜನಾಭ’ಯೊಂದಿಗೆ (ಕಾಂಬೋಧಿ) ಹದವಾದ ವೇಗದಲ್ಲಿ ತಮ್ಮ ವಿನಿಕೆಯನ್ನು ಪ್ರಾರಂಭಿಸಿದ ಯೋಗಕೀರ್ತನಾ ಅವರು ತಮ್ಮ ಗಾಯನದೊಳಗಿನ ಅಪ್ಪಟ ಶಾಸ್ತ್ರೀಯತೆಯ ಪರಿಚಯವನ್ನು ಆರಂಭದಲ್ಲೇ ಮಾಡಿಸಿದರು. ಗಜಾನನನ್ನು ಕುರಿತ ಒಂದು ಶ್ಲೋಕವನ್ನು ಸುಶ್ರಾವ್ಯವಾಗಿ ಹಾಡಿ ‘ವಂದಿಸುವುದಾದಿಯಲಿ ಗಣನಾಥನ’ ಅನ್ನು ಚೊಕ್ಕವಾಗಿದ್ದ ಕಲ್ಪನಾ ಸ್ವರಗಳೊಡನೆ ಪ್ರಸ್ತುತ ಪಡಿಸಿದರು. ಮುತ್ತುಸ್ವಾಮಿ ದೀಕ್ಷಿತರ ಬೃಂದಾವನ ಸಾರಂಗ ರಾಗದ ನಿತ್ಯನೂತನ ಕೃತಿ ‘ರಂಗಪುರವಿಹಾರ’ವನ್ನು ಸಾವಕಾಶವಾಗಿ ಹಾಡಿ ಸೊಗಸಾದ ವರಾಳಿ ರಾಗಾಲಾಪನೆಗೆ ತೊಡಗಿದರು. ಅವರ ಗಾಯನದಲ್ಲಿ ಕಾಲ ಪ್ರಮಾಣದಲ್ಲಿ ಸಾಧಿಸಿರುವ ತಾಳ್ಮೆಯು ಬಹುಮುಖ್ಯ ಅಂಶ. ಸಾಮಾನ್ಯವಾಗಿ ಯುವ ವಿದ್ವಾಂಸರಲ್ಲಿ ಕಂಡುಬರುವ ಓಟವನ್ನು ಇವರು ಯಶಸ್ವಿಯಾಗಿ ಹತೋಟಿಯಲ್ಲಿಟ್ಟಿದ್ದಾರೆ ಎಂಬುದೇ ಸಂತಸದ ಸಂಗತಿ. ಇದು ಅವರ ಕಲ್ಪಿತ ಮತ್ತು ಕಲ್ಪನಾ ಸಂಗೀತ ಎರಡರಲ್ಲೂ ಕಂಡುಬರುವ ಗುಣ. ಇದರಿಂದ ಇವರ ಧೃತ ಕಾಲದ ಸ್ವರಗಳಾಗಲೀ ಸಂಗತಿಗಳಾಗಲೀ ಆಪ್ಯಾಯಮಾನವೆನಿಸುತ್ತವೆ. ವರಾಳಿ ರಾಗದ ವಿಸ್ತರಣೆಯನ್ನು ವೆಂಕಟೇಶ ಜೋಸ್ಯರರೂ ಚೆನ್ನಾಗಿ ಮಾಡಿದರು. ಅವರೀರ್ವರ ಪ್ರಸ್ತುತಿಯಲ್ಲಿ ಯಾವ ಕಳಪೆ ಕಸರತ್ತುಗಳೂ ಇಲ್ಲದೆ ನೆಮ್ಮದಿಯಾದ ಆಲಾಪನೆಯನ್ನು ಕೇಳುಗರು ಆನಂದಿಸಿದರು. ಶ್ಯಾಮಾ ಶಾಸ್ತ್ರೀಯಗಳ ‘ಕರುಣ ಜೂಡವಮ್ಮ’ ಕೀರ್ತನೆಯು ಕಾರುಣ್ಯರಸಭರಿತವಾಗಿತ್ತು. ಅದರ ಸ್ವರಗಳೂ ಸಹ ರಾಗಭಾವದಿಂದ ಕೂಡಿ ತೃಪ್ತಿಕರವಾಗಿತ್ತು.

ತ್ಯಾಗರಾಜರ ಮಧ್ಯಮ ಕಾಲದ ಕೃತಿ ‘ಕನ್ನತಂಡ್ರಿನಾಪೈ’ (ದೇವಮನೋಹರಿ) ಅನ್ನು ಚಕಚಕನೆ ಹಾಡಿ, ಅಂದಿನ ಮುಖ್ಯ ರಾಗವಾದ ಶಂಕರಾಭರಣಕ್ಕೆ ಬಂದರು. ರಾಜಗಾಂಭೀರ್ಯ ನಡೆಯ ಗತ್ತನ್ನು ಹೊಂದಿರುವ ಶಂಕರಾಭರಣ ರಾಗವು ಕೇಳುಗರನ್ನು ನಿರಾಸೆ ಪಡಿಸಲಿಲ್ಲ. ಅಪಾರ ಆಳ-ಅಗಲಗಳನ್ನು ಹೊಂದಿರುವ ಈ ರಾಗವನ್ನು ಅನ್ವೇಷಿಸಿದಷ್ಟೂ ಅನರ್ಘ್ಯ ರತ್ನಗಳು ಲಭ್ಯ. ಇದರ ದಾಟು ಪ್ರಯೋಗಗಳೂ ಅಷ್ಟೇ ಸುಂದರ. ಗಮಕಯುಕ್ತವಾಗಿ ಯೋಗಕೀರ್ತನಾ ಮತ್ತು ವೆಂಕಟೇಶ್ ಜೋಸ್ಯರ್ ಅವರು ಸುದೀರ್ಘವಾಗಿ, ಸಂತೃಪ್ತಿ ಆಗುವಂತೆ ಅದನ್ನು ಕೇಳುಗರಿಗೆ ಉಣಬಡಿಸಿದರು. ತ್ಯಾಗರಾಜರ ‘ಸ್ವರ ರಾಗ ಸುಧಾರಸ’ವು ನಿಜಾರ್ಥದಲ್ಲಿ ಸುಧಾರಸವೇ ಆಗಿದ್ದಿತು. ಅದರ ನೆರವಲ್ ಮತ್ತು ಕಲ್ಪನಾ ಸ್ವರಗಳೆರಡೂ ಶಾಸ್ತ್ರೀಯತೆಯ ಸೊಗಡಿನಿಂದ ಕೂಡಿತ್ತು. ಶ್ರೀಧರ್ ಮತ್ತು ಶರತ್ ಕೌಶಿಕ್ ಅವರೀರ್ವರ ಲಯವಾದ್ಯ ಸಹಕಾರವು ಸಂಗೀತದ ಅನುಭವವನ್ನು ಮತ್ತಷ್ಟು ದಟ್ಟವಾಗಿಸಿತು.

ಪುರಂದರದಾಸರ ‘ಮಗನೆಂದಾಡಿಸುವಳು’ ದೇವರನಾಮವು ವಿದುಷಿ ನೀಲಾ ರಾಂಗೋಪಾಲರ ಸಂಗೀತಜೋಡಣೆಯಲ್ಲಿ ಸುಂದರವಾದ ರಾಗಮಾಲಿಕೆಯಲ್ಲಿ ಸ್ಫುಟವಾಗಿ ಮೂಡಿಬಂದಿತು. ನಾರಾಯಣ ತೀರ್ಥರ ತರಂಗ ‘ಕಲ್ಯಾಣ ಗೋಪಾಲ ಕರುಣಾಲವಾಲ’ವೂ ಸಹ ಭಕ್ತಿಭಾವದಿಂದ ಕೂಡಿ ಹಿತವಾಗಿದ್ದಿತು. ಒಟ್ಟಾರೆ ಯಾವ ಅತಿರೇಕವೂ ಇಲ್ಲದೆ ಸೌಮ್ಯವಾದ ಹಾಡುಗಾರಿಕೆಯನ್ನು ನೀಡಿದ ಯುವ ವಿದುಷಿ ಯೋಗಕೀರ್ತನಾ ಅವರು ನಿಜಕ್ಕೂ ಅಭಿನಂದನಾರ್ಹರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು