ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮದ ಅಪ್ಪುಗೆಯ ಓಸ್ಲೊ

Last Updated 23 ಜನವರಿ 2019, 19:30 IST
ಅಕ್ಷರ ಗಾತ್ರ

ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ಒಂದಾದ ನಾರ್ವೆಯ ರಾಜಧಾನಿ ಓಸ್ಲೊ. ಇದು ಬೇಸಿಗೆಯಲ್ಲಿ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಪ್ರವಾಸಿಗರು ಜುಲೈ-ಆಗಸ್ಟ್‌ ತಿಂಗಳಲ್ಲಿ ಇಲ್ಲಿಗೆ ಹೋಗುತ್ತಾರೆ. ಆದರೆ ಹಿಮದಿಂದ ಆವೃತವಾದ ನಾರ್ವೆಯನ್ನು ಚಳಿಗಾಲದಲ್ಲಿ ನೋಡುವ ಅನುಭವವೇ ವಿಶಿಷ್ಟವಾದದ್ದು. ಇಲ್ಲಿ ವರ್ಷದ ಆರು ತಿಂಗಳು ಚಳಿ. ಅದರಲ್ಲಿಯೂ ನವೆಂಬರ್‌ನಿಂದಲೇ ಹಿಮಪಾತ ಆರಂಭವಾಗಿ, ಡಿಸೆಂಬರ್, ಜನವರಿ ಮತ್ತು ಫೆಬ್ರುವರಿವರೆಗೂ ಮುಂದುವರೆ ಯುತ್ತದೆ.

ಹಿಮ ಬೀಳುವಾಗ ಓಸ್ಲೊಗೆ ಹೋಗಬೇಕೆಂಬ ನನ್ನ ಕನಸು ನನಸಾದದ್ದು ನಮ್ಮ ಶಿರಸಿಯ ಪ್ರತಿಮಾಳಿಂದ. ವರ್ಷದ ಹಿಂದೆ ಬೇಸಿಗೆಯಲ್ಲಿ ಅಲ್ಲಿಗೆ ಹೋಗಿದ್ದಾಗ, ‘ಚಳಿಗಾಲದ ಅನುಭವ ಪಡೆಯಲು ಫೆಬ್ರುವರಿಯಲ್ಲಿ ಇಲ್ಲಿಗೆ ಬನ್ನಿ’ ಎಂದಿದ್ದರು ಪ್ರತಿಮಾ. ಹಾಗಾಗಿ ವರ್ಷದ ಹಿಂದೆಯೆ ಈ ಪ್ರವಾಸಕ್ಕೆ ಸಿದ್ದತೆ ನಡೆಸಿದೆ. ಕೊನೆಗೊ ಹಿಮಾಚ್ಛಾದಿತ ಓಸ್ಲೊ ನೋಡಿ ಬಂದೆ.

ಹಿಮಪಾತದ ಅಡಚಣೆ

ಬೆಂಗಳೂರಿನಿಂದ ವಿಮಾನ ಪ್ಯಾರಿಸ್ ಮೂಲಕ ಓಸ್ಲೊಗೆ ಹೊರಟಿತು. ಆರಂಭದಲ್ಲೇ ಭಾರಿ ಹಿಮಪಾತದ ಅಡಚಣೆ. ವಿಮಾನ ನಸುಕಿನಲ್ಲಿ ಪ್ಯಾರಿಸ್‌ನಲ್ಲಿ ಇಳಿಯುವಾಗ ಆಗಸದಿಂದ ಹಿಮಚ್ಛಾದಿತ ಈ ಬೃಹತ್ ನಗರವನ್ನು ನೋಡುವುದೇ ವಿಶಿಷ್ಟ ಅನುಭವ.

ನಾನು ಪ್ಯಾರಿಸ್‌ನಲ್ಲಿಳಿದು ಇನ್ನೊಂದು ವಿಮಾನ ಏರಿ ಓಸ್ಲೊಗೆ ತಲುಪಬೇಕಿತ್ತು. ಆದರೆ ಭಾರಿ ಹಿಮಪಾತದಿಂದಾಗಿ ನಾವು ಬಂದ ವಿಮಾನ ರನ್‌ವೇದಿಂದ ನಿಗದಿತ ಸ್ಥಳ ತಲುಪಲು ಸಾಧ್ಯವಾಗಲಿಲ್ಲ. ತಾಸುಗಟ್ಟಲೇ ವಿಮಾನದ ಒಳಗಡೆ ಕುಳಿತುಕೊಳ್ಳಬೇಕಾಗಿ ಬಂತು. ಇದರಿಂದಾಗಿ ಓಸ್ಲೊಗೆ ಹೋಗುವ ವಿಮಾನ ಏರಲು ಹರಸಾಹಸ ಮಾಡಬೇಕಾಗಿ ಬಂತು. ವಿಮಾನದ ಒಳಗೆ ಕೂತಿದ್ದವನು, ಹಾಗೇ ಕಿಟಕಿಯಿಂದ ಹೊರಗಡೆ ನೋಡಿದೆ. ವಿಮಾನದ ರೆಕ್ಕೆಗಳ ಮೇಲೆ ದಪ್ಪದಾದ ಹಿಮ ಬಿದ್ದಿರುವುದು ಕಂಡಿತು. ಅದನ್ನು ಕರಗಿಸಲು, ಜೆಸಿಬಿಯಂತಹ ಬೃಹತ್ ಯಂತ್ರವೊಂದು ತನ್ನ ಬಾಹುಗಳನ್ನು ಚಾಚಿ, ರೆಕ್ಕೆಗಳ ಮೇಲೆ ಯಾವುದೋ ಒಂದು ದ್ರವವನ್ನು ಸಿಂಪಡಿಸಿ, ಹಿಮ ಕರಗಿಸಿತು. ಆ ಮೇಲೆ ವಿಮಾನ ಹಾರಾಟ ಸಾಧ್ಯವಾಯಿತು.

ಮಂಜು ಹೊದ್ದ ನಗರ

ವಿಮಾನ ಓಸ್ಲೊನಲ್ಲಿ ಇಳಿಯುತ್ತಿರುವಾಗ ಕೆಳಗಡೆ ಹಿಮದಿಂದ ಆವೃತವಾದ ಗುಡ್ಡಗಾಡು, ಕಣಿವೆಗಳು ಶ್ವೇತ

ವರ್ಣದ ಚಿತ್ತಾರ ಬಿಡಿಸಿದಂತೆ ಕಾಣುತ್ತಿತ್ತು. ಹಿಮ ಮಳೆ ಸುರಿಯುತ್ತಿದ್ದರೂ ವಿಮಾನ ನಿಲ್ದಾಣದ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತಿದ್ದವು. ವಿಮಾನದ ದಾರಿಯಲ್ಲಿ ಬಿದ್ದಿದ್ದ ಹಿಮವನ್ನು ಯಂತ್ರಗಳು ಸರಿಸುತ್ತಿದ್ದವು.

ನಿಲ್ದಾಣ ಇಳಿಯುವಾಗ ನನ್ನ ಚೆಕ್‌ ಇನ್‌ ಆಗಿದ್ದ ಬ್ಯಾಗೇಜ್‌ ಬರುವುದು ತಡವಾಗುತ್ತಿತ್ತು. ಅದರೊಳಗೆ, ಹೊದಿಕೆ ಮತ್ತಿತರ ಬೆಚ್ಚಗಾಗಿಸುವ ಪರಿಕರಗಳಿದ್ದವು. ಈ ವಸ್ತುಗಳಿಲ್ಲದಿದ್ದರೆ ಪ್ರವಾಸ ಪ್ರಯಾಸವಾಗುತ್ತದೆ ಎಂದು ಯೋಚಿಸಿ, ಪ್ರತಿಮಾಳಿಗೆ ವಾಟ್ಸ್‌ಆ್ಯಪ್ ಮಾಡಿ ಸಮಸ್ಯೆ ತಿಳಿಸಿದೆ. ಬೆಚ್ಚಗಿನ ದಿರಿಸನ್ನು ವಿಮಾನ ನಿಲ್ದಾಣಕ್ಕೆ ತರಲು ಹೇಳಿದೆ.

ಆದರೆ, ಇಲ್ಲಿನ ವಿಮಾನ ಹಾಗೂ ರೈಲು ನಿಲ್ದಾಣಗಳನ್ನು ಬಿಸಿಯಾಗಿಟ್ಟಿರುತ್ತಾರೆ. ಹಾಗಾಗಿ ಪ್ರಯಾಣಿಕರಿಗೆ ಅಷ್ಟು ತೊಂದರೆಯಾಗಲಿಲ್ಲ. ಹೊರಗಡೆ ಹೋಗಬೇಕಾದರೆ ಮಾತ್ರ, ಬೆಚ್ಚನೆಯ ದಿರಿಸು ಬೇಕು. ಮುಖ್ಯವಾಗಿ ಕಾಲಿಗೆ ಸರಿಯಾದ ಬೂಟು, ಉಣ್ಣೆಯ ಕಾಲು ಚೀಲ ಮತ್ತು ತಲೆ, ಕೈಗೆ ಕವಚ ಅನಿವಾರ್ಯ.

ಓಸ್ಲೊ ವಿಮಾನ ನಿಲ್ದಾಣದಿಂದ ರೈಲಿನಲ್ಲಿ ಶಹರದತ್ತ ಪಯಣಿಸುತ್ತಿದ್ದಾಗ, ಹೊರಗಡೆ ಹಿಮ ಮಳೆ ಸುರಿಯುತ್ತಿತ್ತು. ರಸ್ತೆಗಳು, ಕಟ್ಟಡಗಳ ಮೇಲೆ ಹಿಮದ ಕವಚ. ಆದರೂ ಜನ ಜೀವನ ಸಾಮಾನ್ಯವಾಗಿತ್ತು. ಮಲೆನಾಡಿನಲ್ಲಿ ವಾರಗಟ್ಟಲೇ ಎಡೆಬಿಡದೇ ಮಳೆ ಸುರಿದಾಗ ಜನ ಹೇಗೆ ಅದಕ್ಕೆ ಒಗ್ಗಿಕೊಂಡು ಜೀವನ ನಡೆಸುತ್ತಾರೋ ಹಾಗೆ ಇವರು ಹಿಮಕ್ಕೆ ಒಗ್ಗಿಕೊಂಡಹಾಗೆ ಕಂಡಿತು.

ಹಿಮದ ಮೇಲೆ ಹಾಕಿ ಆಟ

ಓಸ್ಲೊದಲ್ಲಿ ರಸ್ತೆ ಮೇಲೆ ಬೀಳುವ ಹಿಮವನ್ನು ತೆಗೆಯಲು ಹಗಲು-ರಾತ್ರಿ ನಿರಂತರವಾಗಿ ಯಂತ್ರಗಳು ಕೆಲಸಮಾಡುತ್ತಲೇ ಇರುತ್ತವೆ. ಆದ್ದರಿಂದ ಹೆಚ್ಚು ಹಿಮದಿಂದಾಗಿ ದಿನ ನಿತ್ಯದ ಬದುಕಿನಲ್ಲಿ ಏರುಪೇರು ಆಗುವುದಿಲ್ಲ. ಹೆಚ್ಚು ಹಿಮ ಬಿದ್ದರೆ, ಎರಡೂ ಕೈಗಳಲ್ಲಿ ‘ಸ್ಕೀ’ ಮಾಡುವ (ಜಾರುವುದಕ್ಕೆ ಆಧಾರವಾಗಿಟ್ಟುಕೊಳ್ಳುವ ಕೋಲು) ಕೋಲನ್ನು ಹಿಡಿದು ಆಫೀಸಿಗೆ ‘ಸ್ಕೀ’ ಮಾಡುತ್ತಾ ಹಿಮದಲ್ಲಿ ಆರಾಮಾಗಿ ತೇಲಿಕೊಂಡು ಹೋಗುತ್ತಾರೆ.

ಮಕ್ಕಳು ಕಾಲಿಗೆ ಚಕ್ರದ ಬೂಟ್‌ಕಟ್ಟಿಕೊಂಡು ಹಿಮದ ಮೈದಾನದಲ್ಲಿ ಜಾರುತ್ತಾ, ‘ಐಸ್ ಹಾಕಿ’ ಆಟವಾಡುತ್ತಿರುತ್ತಾರೆ. ಇವರ ಧೈರ್ಯ ಮೆಚ್ಚಲೇಬೇಕು. ಆದರೆ ಬೇರೆ ದೇಶದಿಂದ ಹೋದ ನಮ್ಮಂಥ ಪ್ರವಾಸಿಗರಿಗೆ, ಹಿಮದ ಮೇಲೆ ಹೆಜ್ಜೆ ಹಾಕುವಾಗ ಬಹಳ ಎಚ್ಚರವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೊ, ಕೈಕಾಲು ಮುರಿಯುವದು ಖಚಿತ! ಯಾಕೆಂದರೆ ಹಿಮ ಬಿದ್ದ ನಂತರ ಅದು ಗಟ್ಟಿಯಾಗಿ ಗಾಜಿನ ಹಾಗೆ ನುಣುಪಾಗಿರುತ್ತದೆ.

ಅಲ್ಲಿ ನಡೆಯುವುದು ಅತ್ಯಂತ ಅಪಾಯಕಾರಿ. ಕಾಲು ಜಾರುವದು, ಕೆಳಗಡೆ ಬೀಳುವದು, ಮೂಳೆ ಮುರಿತ ಇವು ಓಸ್ಲೊಗೆ ಭೇಟಿ ನೀಡಿದ ಪ್ರವಾಸಿಗರಿಗೆ ಚಳಿಗಾಲದ ದೇಣಿಗೆ. ಹೀಗಾಗಿ ಇಲ್ಲಿನ ಮೂಳೆ ತಜ್ಞರಿಗೆ ಚಳಿಗಾಲದಲ್ಲಿ ವಿಪರೀತ ಕೆಲಸ. ನಾನೂ ಹಿಮದ ಮೇಲೆ ಜಾರಿದೆ. ಆದರೆ ಮೂಳೆ ಮುರಿಯಲಿಲ್ಲ.

ಹಿಮವನ್ನು ಹಿಡಿದಿಡುವಂತಹ ವಸ್ತುವೊಂದನ್ನು (ಸ್ಪೈಕ್ ) ಬೂಟ್ ತಳಭಾಗಕ್ಕೆ ಜೋಡಿಸುತ್ತಾರೆ. ಅಂಥ ಬೂಟ್ ತೊಟ್ಟು ನಡೆದರೆ ಬೀಳುವ ಸಂಭವ ಕಡಿಮೆ. ಇಂಥ ಅಪಾಯದಿಂದ ಪಾರಾಗಲು ಹಾಗೂ ಆಸ್ಪತ್ರೆ ಖರ್ಚು ಉಳಿಸಲು ವಿದೇಶ ಪ್ರವಾಸ ಮಾಡುವವರು ಆರೋಗ್ಯವಿಮೆ ಮಾಡಿಸುವದು ಅನಿವಾರ್ಯ ಇದು ಈ ಪ್ರವಾಸದಿಂದ ನಾನು ಕಲಿತ ಪಾಠ!

ಯೂರೋಪ್‌ನ ಬಹುತೇಕ ನಗರಗಳ ಪ್ರಮುಖ ಸ್ಥಳಗಳಿಗೆ ಕಾಲು ನಡಿಗೆಯಲ್ಲೇ ಕರೆದುಕೊಂಡು ಹೋಗುವ ವ್ಯವಸ್ಥೆ ಇದೆ. ನಾನು ಒಬ್ಬ ಗೈಡ್ ನೇತೃತ್ವದಲ್ಲಿ ಶಹರದ ಐತಿಹಾಸಿಕ ಕಟ್ಟಡಗಳು, ಅರಮನೆ ಮತ್ತು ಇತರ ಸ್ಥಳಗಳ ಬಗ್ಗೆ ವಿವರಣೆ ಕೇಳುತ್ತಾ ಇಡೀ ದಿನ ನಗರದ ದರ್ಶನ ಮಾಡಿದೆ. ಅಲ್ಲಿನ ಶಾಸನ ಸಭೆ, ನೋಬೆಲ್ ಪ್ರಶಸ್ತಿಗೆ ಹೆಸರುವಾಸಿಯಾದ ನೋಬೆಲ್ ಕಟ್ಟಡ, ಪುರಾತನ ಚರ್ಚ್‌ಗಳು ಮತ್ತು ಹೊಸದಾಗಿ ನಿರ್ಮಾಣಗೊಂಡ ಸ್ಕ್ಯಾಂಡಿನೇವಿಯಾದ ಒಪೆರಾ ಹೌಸ್ ನೋಡಿದೆ.

ಚಳಿಗಾಲದಲ್ಲಿ ಹಿಮನಗರಿಯಾಗಿ ಪರಿವರ್ತನೆಯಾಗುವ ಓಸ್ಲೊ ಪ್ರವಾಸ ಎಂದಿಗೂ ಮರೆಯಲಾಗದ ಅನುಭವ. ನನ್ನ ಬಹುದಿನಗಳ ಕನಸು ನನಸಾಗಿಸುವಲ್ಲಿ ಬೆಂಬಲ ನೀಡಿದ ನಮ್ಮ ಉರಿನ ಹುಡುಗಿ ಪ್ರತಿಮಾಳನ್ನು ಮರೆಯಲಾದೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT