ಗೋವಾ ಇನ್ನೊಂದು ಮುಖ

7

ಗೋವಾ ಇನ್ನೊಂದು ಮುಖ

Published:
Updated:

ಸುಂದರ ಕಡಲ ಕಿನಾರೆಗಳ ನಗರಿ ‘ಗೋವಾ’ ಪ್ರವಾಸಿಗರ ಪಾಲಿನ ಸ್ವರ್ಗ. ಅಗ್ಗದ ದರದಲ್ಲಿ ಮದ್ಯ ಪೂರೈಸುವ ಬಾರ್‌ಗಳು; ರಾತ್ರಿ ವೇಳೆ ತುಂಬಿ ತುಳುಕುವ ಜೂಜು ಅಡ್ಡೆ ಕ್ಯಾಸಿನೊ ಪಾರ್ಕ್‌; ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುವ ಪಬ್‌, ಕ್ಲಬ್‌, ಡಿಸ್ಕೊಥೆಕ್‌ಗಳು; ದೇಹ ಮತ್ತು ಮನಸ್ಸಿಗೆ ನವಚೈತನ್ಯ ನೀಡುವ ಮಸಾಜ್‌ ಪಾರ್ಲರ್‌, ಸ್ಪಾಗಳು; ಪಾರ್ಟಿ, ಔತಣಕೂಟ ಏರ್ಪಡಿಸಲು ಹೇಳಿ ಮಾಡಿಸಿದ ಬೀಚ್‌ಗಳು; ವಿನೋದ–ವಿಹಾರಕ್ಕೆ ಕೈಬೀಸಿ ಕರೆಯುವ ಬೋಟಿಂಗ್‌... ಹೀಗೆ ಮೋಜು–ಮಸ್ತಿ ಮಾಡಲು ಗೋವಾ ಹೇಳಿ ಮಾಡಿಸಿದ ತಾಣ ಎಂಬುದು ಬಹುತೇಕ ಪ್ರವಾಸಿಗರ ಉವಾಚ.


ಗೃಹಿಣಿಗೆ ಬಳೆಯನ್ನು ತೊಡಿಸುತ್ತಿರುವ ಬಳೆಗಾರನ ಕಲಾಕೃತಿ

ಇದು ಗೋವಾದ ಒಂದು ಮುಖವಷ್ಟೆ. ಸಹ್ಯಾದ್ರಿಯ ಸೆರಗಿನಲ್ಲಿರುವ ಕೊಂಕಣಿಗರ ಈ ನಾಡಿಗೆ ಮತ್ತೊಂದು ಮುಖವೂ ಇದೆ. ಇದು ಭಾರತದ ಅತ್ಯಂತ ಚಿಕ್ಕ ರಾಜ್ಯ (ಭೌಗೋಳಿಕವಾಗಿ) ಮತ್ತು ಶ್ರೀಮಂತ ರಾಜ್ಯವೂ ಹೌದು. ಇಲ್ಲಿ ಭಾವೈಕ್ಯದ ಸಂದೇಶ ಸಾರುವ ಪುರಾತನ ಚರ್ಚ್‌ ಮತ್ತು ದೇಗುಲಗಳಿವೆ. ಇತಿಹಾಸದ ಗತವೈಭವವನ್ನು ಸಾಕ್ಷೀಕರಿಸುವ ಕೋಟೆ ಮತ್ತು ಗುಹೆಗಳಿವೆ. ಕಲೆ, ಸಂಸ್ಕೃತಿ, ವಿಜ್ಞಾನ–ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲುವ ಮ್ಯೂಸಿಯಂಗಳಿವೆ. ಅಂಥದ್ದೊಂದು ವಸ್ತುಸಂಗ್ರಹಾಲಯಗಳಲ್ಲಿ ಲೌಟೋಲಿಮ್‌ ಪ್ರದೇಶದಲ್ಲಿರುವ ‘ಅನ್ಸೆಸ್ಟ್ರಲ್‌ ಗೋವಾ’ ಅಥವಾ ‘ಬಿಗ್‌ ಫೂಟ್‌’ ಮ್ಯೂಸಿಯಂ ಪ್ರಮುಖವಾದುದು. ಈ ಮ್ಯೂಸಿಯಂ ಮಡಗಾಂವ್‌ನಿಂದ 10 ಕಿ.ಮೀ. ಮತ್ತು ಗೋವಾದ ರಾಜಧಾನಿ ಪಣಜಿಯಿಂದ 25 ಕಿ.ಮೀ. ಅಂತರದಲ್ಲಿದೆ.

ಗೋವಾ ಪ್ರದೇಶದ ಪೂರ್ವಿಕರ ಜೀವನ ಪದ್ಧತಿ, ಕಲೆ–ಸಂಸ್ಕೃತಿ, ಕಸುಬು– ವ್ಯಾಪಾರ, ಉಪಕರಣ–ಸಾಧನ, ವೇಷಭೂಷಣ, ಧಾರ್ಮಿಕ ನಂಬಿಕೆ ಹಾಗೂ ಕೋಮುಸೌಹಾರ್ದಕ್ಕೆ ಈ ಮ್ಯೂಸಿಯಂ ಕನ್ನಡಿ ಹಿಡಿಯುತ್ತದೆ. 9 ಎಕರೆ ಪ್ರದೇಶದಲ್ಲಿ ಅರಳಿರುವ ಇಲ್ಲಿನ ‘ಲೈಫ್‌ ಸೈಜ್‌’ ಕಲಾಕೃತಿಗಳು ಪ್ರವಾಸಿಗರನ್ನು 100 ವರ್ಷ ಹಿಂದಕ್ಕೆ ಕರೆದೊಯ್ಯುತ್ತವೆ. ಗೋವಾ ಜನರ ಮುಖ್ಯ ಕಸುಬುಗಳಾದ ಮೀನುಗಾರಿಕೆ, ಮದ್ಯ ತಯಾರಿಕೆ, ಮರಗೆಲಸ, ತೆಂಗಿನ ನಾರಿನ ವಸ್ತುಗಳ ತಯಾರಿಕೆ, ಕುಂಬಾರಿಕೆ, ಪಾದರಕ್ಷೆ ತಯಾರಿಕೆಯನ್ನು ಬಿಂಬಿಸುವ ಕಲಾಕೃತಿಗಳು ಆಕರ್ಷಕವಾಗಿ ಮೂಡಿಬಂದಿವೆ. ಗೋಡಂಬಿಯಿಂದ ಸಾಂಪ್ರದಾಯಿಕ ಪದ್ಧತಿಯಲ್ಲಿ ಮದ್ಯ ತಯಾರಿಸುವ ಘಟಕದ ಚಿತ್ರಣ ನೈಜವಾಗಿದೆ. ಕಲಾವಿದ ಮೈಂದ್ರಾ ಜೋಸಿಲಿನೊ ಅರೌಜೊ ಅಲ್ವಾರೆಸ್‌ ಅವರು ಈ ವಸ್ತುಸಂಗ್ರಹಾಲಯದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಮ್ಯೂಸಿಯಂ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ.

ಕ್ರಾಸ್‌ ಮ್ಯೂಸಿಯಂ!

ಈ ವಸ್ತುಸಂಗ್ರಹಾಲಯದಲ್ಲಿ 92 ಪ್ರಕಾರದ 1,458 ಶಿಲುಬೆಗಳನ್ನು ಕಲೆ ಹಾಕಲಾಗಿದೆ. ವಿವಿಧ ಗಾತ್ರ, ಬಣ್ಣ, ವಿನ್ಯಾಸದಲ್ಲಿರುವ ಶಿಲುಬೆಗಳು ಒಂದಕ್ಕಿಂತ ಒಂದು ಮನಮೋಹಕವಾಗಿವೆ. ಜತೆಗೆ ಆ ಶಿಲುಬೆಗಳ ಮಹತ್ವವನ್ನೂ ವಿವರಿಸಲಾಗಿದೆ. ಕ್ರೈಸ್ತ ಧರ್ಮೀಯರಿಗಂತೂ ಆ ಶಿಲುಬೆಗಳನ್ನು ನೋಡುವುದೇ ಹಬ್ಬ.


ಮರದ ಕೆತ್ತನೆ ಕೆಲಸದಲ್ಲಿ ನಿರತನಾಗಿರುವ ಬಡಗಿಯ ಕಲಾಕೃತಿ

ಅಷ್ಟೇ ಅಲ್ಲ, ನೀವು ಇದುವರೆಗೂ ಎಲ್ಲೂ ನೋಡಿರದ ಬುದ್ಧನ ಕಲಾಕೃತಿಯೊಂದು ಇಲ್ಲಿದೆ. ವಿಶೇಷವೆಂದರೆ, ಇದು ಸರ್ವಧರ್ಮಗಳ ಸಂಕೇತವಾಗಿದೆ!, ಹೌದು, 5X9 ಅಡಿ ಅಳತೆಯ ಬುದ್ಧ, ಯೇಸುಕ್ರಿಸ್ತ ಧರಿಸಿರುವ ಮುಳ್ಳಿನ ಕಿರೀಟವನ್ನು ಧರಿಸಿದ್ದಾನೆ. ತುರುಬಿನಲ್ಲಿ ಶಿವನ ಗಂಗೆಗೆ ಸ್ಥಾನ ನೀಡಿದ್ದಾನೆ. ಇಸ್ಲಾಂ ಧರ್ಮದ ಚಂದ್ರನನ್ನು ತಲೆಯಲ್ಲಿ ಧರಿಸಿ ಮಂದಸ್ಮಿತನಾಗಿ ಸರ್ವಧರ್ಮಗಳ ಸಾರ ಒಂದೇ ಎಂದು ಸಾರಿ ಹೇಳುತ್ತಿದ್ದಾನೆ.

ಲಿಮ್ಕಾ ರೆಕಾರ್ಡ್‌!

ಕಲಾವಿದ ಮೈಂದ್ರಾ ಜೋಸಿಲಿನೊ ಅವರು ರಚಿಸಿರುವ 5x14 ಮೀಟರ್‌ ಸುತ್ತಳತೆಯ ಸಂತ ಮೀರಾಬಾಯಿ ಕಲಾಕೃತಿ ಲಿಮ್ಕಾ ರೆಕಾರ್ಡ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ಭಾರತದ ಉದ್ದನೆಯ ಜಂಬುಮಣ್ಣಿನ (ಲ್ಯಾಟ್‌ರೈಟ್‌) ಕಲಾಕೃತಿ ಎಂಬ ಬಿರುದಿಗೆ ಪಾತ್ರವಾಗಿದೆ. ಇನ್ನೂ ವಿಶೇಷವೆಂದರೆ, ಈ ಕಲಾಕೃತಿ ಅರಳಿದ್ದು ಕೇವಲ 30 ದಿನಗಳಲ್ಲಿ! ‘ನ್ಯಾಚುರಲ್‌ ಹಾರ್ಮನಿ’ ಎಂಬ ಹೆಸರಿನಲ್ಲಿ ಈ ಕಲಾಕೃತಿಯನ್ನು ಪ್ರದರ್ಶಿಸಲಾಗಿದೆ.

ಇಲ್ಲಿ ದೇವತೆಗಳು ಮತ್ತು ರಾಕ್ಷಸರು ನಡೆಸಿದ ‘ಸಮುದ್ರ ಮಂಥನ’ದ ಚಿತ್ರಣ, ವಿಷ್ಣುವಿನ ಅವತಾರ ಎಂದೇ ನಂಬುವ ಪರಶುರಾಮನ ಪ್ರತಿಮೆ, ಗೋವಾ ಜನರ ಧಾರ್ಮಿಕ ನಂಬಿಕೆ ಮತ್ತು ಮಾನವೀಯ ಮೌಲ್ಯಗಳ ಸೆಲೆ ಇದೆ. ಒಟ್ಟಿನಲ್ಲಿ ಗೋವಾದ ಗ್ರಾಮೀಣ ಜನರ ಬದುಕಿನ ಮೇಲೆ ಈ ಮ್ಯೂಸಿಯಂ ಬೆಳಕು ಚೆಲ್ಲುತ್ತದೆ.

ಲೆಫ್ಟ್‌ ಹ್ಯಾಂಡರ್ಸ್‌ ಮ್ಯೂಸಿಯಂ!

ಹೆಚ್ಚಾಗಿ ಎಡಗೈ ಬಳಸುವವರನ್ನು ಎಡಚ, ಲೊಟ್ಟ, ರೊಡ್ಡಗೈ ಎಂದೆಲ್ಲಾ ಜನರು ಮೂದಲಿಸುತ್ತಾರೆ. ಆದರೆ, ಈ ಮ್ಯೂಸಿಯಂನಲ್ಲಿ ಎಡಗೈ ಬಳಸುವವರ ಮಹತ್ವವೇನು ಮತ್ತು ಎಂತೆಂಥ ಸಾಧಕರು ಎಡಗೈನವರೇ ಆಗಿದ್ದಾರೆ ಎಂಬುದನ್ನು ತಿಳಿಸಲು ‘ವರ್ಲ್ಡ್‌ ಫೇಮಸ್‌ ಲೆಫ್ಟ್‌ ಹ್ಯಾಂಡರ್ಸ್‌ ಮ್ಯೂಸಿಯಂ’ ತೆರೆಯಲಾಗಿದೆ. ‘ಇಂಡಿಯನ್‌ ಲೆಫ್ಟ್‌ ಹ್ಯಾಂಡರ್‌ ಕ್ಲಬ್‌’ ಸ್ಥಾಪಕ ಸಂದೀಪ್‌ ವಿಷ್ಣೋಯ್‌ ಅವರು ಈ ಮ್ಯೂಸಿಯಂ ಕರ್ತೃ.


ಕ್ರೈಸ್ತ ಧರ್ಮೀಯರ ಮನೆಯ ಚಿತ್ರಣ ಕಟ್ಟಿಕೊಡುವ ಕಲಾಕೃತಿ

ಮಹಾತ್ಮ ಗಾಂಧಿ, ಮದರ್‌ ತೆರೆಸಾ, ಆಲ್ಬರ್ಟ್‌ ಐನ್‌ಸ್ಟೀನ್‌, ಚಾರ್ಲಿ ಚಾಪ್ಲಿನ್‌, ಬರಾಕ್‌ ಒಬಾಮಾ, ನರೇಂದ್ರ ಮೋದಿ, ಅಮಿತಾಬ್‌ ಬಚ್ಚನ್‌, ಮರ್ಲಿನ್‌ ಮನ್ರೊ, ರಜನೀಕಾಂತ್‌, ಆಶಾ ಭೋಸ್ಲೆ, ಸಚಿನ್‌ ತೆಂಡೂಲ್ಕರ್‌, ಬ್ರಿಯಾನ್‌ ಲಾರಾ, ಯುವರಾಜ್‌ಸಿಂಗ್‌, ಮೇರಿ ಕೋಮ್‌, ರತನ್‌ ಟಾಟಾ, ಬಿಲ್‌ ಗೇಟ್ಸ್‌, ಜುಕರ್‌ ಬರ್ಗ್‌ ಹೀಗೆ ಸಮಾಜಸೇವೆ, ವಿಜ್ಞಾನ, ರಾಜಕೀಯ, ಸಿನಿಮಾ, ಕ್ರೀಡೆ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ 21 ಸಾಧಕರ ಕಂಚಿನ ಪ್ರತಿಮೆಗಳನ್ನು ಅನಾವರಣಗೊಳಿಸಲಾಗಿದೆ.

ಟೆನಿಸ್‌, ಬ್ಯಾಸ್ಕೆಟ್‌ಬಾಲ್‌, ಕ್ರಿಕೆಟ್‌, ಬಾಕ್ಸಿಂಗ್‌, ಈಜು ಮುಂತಾದ ಕ್ರೀಡಾ ವಿಭಾಗಗಳಲ್ಲಿ ಎಡಗೈನವರು ಪಾರಮ್ಯ ಸಾಧಿಸಿರುವ ಬಗ್ಗೆ, ಅಪ್ರತಿಮ ಬುದ್ಧಿವಂತಿಕೆ ಮತ್ತು ವಿಶೇಷ ಗುಣಗಳಿಂದ ಹಲವಾರು ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಬಗ್ಗೆ ಮಾಹಿತಿ ಕೊಡಲಾಗಿದೆ. ನೀವು ಎಡಗೈನವರಾಗಿದ್ದರೆ ಹೆಮ್ಮೆ ಪಡಬಹುದಾದ, ಬಲಗೈನವರಾಗಿದ್ದರೆ ಅಸೂಯೆ ಪಡುವಷ್ಟು ಮ್ಯೂಸಿಯಂ ಅದ್ಭುತವಾಗಿದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !