ಮಂಗಳವಾರ, ನವೆಂಬರ್ 19, 2019
22 °C

ಅರಮನೆಯ ಭಿತ್ತಿಚಿತ್ರಗಳಲ್ಲಿ ಜಂಬೂಸವಾರಿ

Published:
Updated:
Prajavani

ಸೂರು ಎಂದಾಕ್ಷಣ ಅರಮನೆ, ದಸರಾ, ಜಂಬೂಸವಾರಿಯ ಚಿತ್ರ ಕಣ್ಣಮುಂದೆ ಬರುತ್ತದೆ. ಕಲೆ-ಸಂಸ್ಕೃತಿಯ ಸಂಭ್ರಮ ಅನಾವರಣಗೊಳ್ಳುತ್ತದೆ.

ಅರಮನೆಯಿಂದ ಬನ್ನಿಮಂಟಪದ ತನಕ ವಿಜೃಂಭಿಸುವ ಜಂಬೂಸವಾರಿ ಮೆರವಣಿಗೆ ಮನಮೋಹಕ ಸಂಗೀತ, ನೃತ್ಯ, ನಾಟ್ಯ, ಕ್ರೀಡೆ, ಸ್ತಬ್ಧಚಿತ್ರಗಳು, ಆನೆ, ಒಂಟೆ, ಕುದುರೆ, ಹಸುಗಳು, ಪೊಲೀಸ್, ಹೋಂ ಗಾರ್ಡ್ಸ್, ಎನ್.ಸಿ.ಸಿ... ಹೀಗೆ ನೂರಾರು ಪ್ರಕಾರದ ಕಲಾಶೈಲಿಯ ತಂಡಗಳು ಸಾಗುತ್ತವೆ. ತಾಯಿ ಚಾಮುಂಡೇಶ್ವರಿ ಮೂರ್ತಿಯನ್ನು ಹೊತ್ತ ಅಂಬಾರಿ ಆನೆಯನ್ನು, ಅದರ ರಾಜಗಾಂಭೀರ್ಯವನ್ನು ನೋಡಿ ಮೈಮನ ಪುಳಕಿತಗೊಳ್ಳುತ್ತದೆ.

ಮುಂದೆ ಅದೆ ನೆನಪಿನಾಳದಲ್ಲಿ ವಾಪಸ್ ತೆರಳಿ ಕಾಲ ನಂತರ ಆ ನೆನಪು ಮಾಸುತ್ತದೆ. ಕಳೆದು ಹೋದ ದಿನಗಳು ನಾಶಗೊಳ್ಳುತ್ತವೆ. ಮುಂದೂಂದು ದಿನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೆ ಗತವೈಭವದ ದಸರಾ ಜಂಬೂಸವಾರಿಯ ಮೆರವಣಿಗೆಯನ್ನು ವಿವರಿಸಲು ಯಾರೂ ಇರುವುದಿಲ್ಲ. ವಿವರಿಸಿದರೂ ಅರ್ಥವಾಗುವುದಿಲ್ಲ. ಅಂತೆ ಕಂತೆಗಳ ಸರಮಾಲೆಯಲ್ಲಿ ಇತಿಹಾಸ ತಿರುಚಿಕೊಳ್ಳುತ್ತ ತನ್ನ ವಾಸ್ತವ ನೆಲೆಗಟ್ಟನ್ನು ಮರೆಮಾಚುತ್ತದೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಳ್ವಿಕೆಯಲ್ಲಿ ಮೈಸೂರು ಅರಮನೆಯು ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ಭವ್ಯವಾಗಿ ಪುನರ್‌ನಿರ್ಮಾಣಗೊಂಡಿದೆ. ಅರಸರ ವಾಸಸ್ಥಳಕ್ಕಾಗಿ, ರಾಜ್ಯಾಡಳಿತಕ್ಕಾಗಿ ನಿರ್ಮಾಣಗೊಂಡ ಅರಮನೆಯು ಇಂದು ಜಗತ್ಪ್ರಸಿದ್ಧ ಪ್ರವಾಸಿತಾಣವಾಗಿ ರೂಪುಗೊಂಡಿದೆ.

ಎಲ್ಲವೂ ಕಲಾತ್ಮಕತೆಯಿಂದ ಕೂಡಿದೆ. ಅತ್ಯಂತ ಆಕರ್ಷಣೆ ಎಂದರೆ ಇಲ್ಲಿನ ಭಿತ್ತಿಚಿತ್ರಗಳು, ಇವು ಗತಕಾಲದ ವೈಭವವನ್ನು ಹಿಂದಕ್ಕೆ ಕರೆದೊಯ್ಯುತ್ತವೆ. ಇಲ್ಲಿನ ಹಲವಾರು ಭಿತ್ತಿಚಿತ್ರಗಳು ದಸರಾ ಜಂಬೂಸವಾರಿ ಮೆರವಣಿಗೆಗೆ ಸಂಬಂಧಿಸಿವೆ. ಅರಮನೆಯಿಂದ ಚಾಮರಾಜವೃತ್ತ, ದೊಡ್ಡಗಡಿಯಾರ, ಅಶೋಕರಸ್ತೆ, ಲಷ್ಕರ್‌ವೃತ್ತ, ಸಂತಫಿಲೋಮಿನಾ ಚರ್ಚ್, ಗುಂಚಿಚೌಕ, ಫೌಂಟೇನ್‌ವೃತ್ತದ ಮೂಲಕ ಬನ್ನಿಮಂಟಪದವರೆಗೆ ತೆರಳುವ ಮರವಣಿಗೆಯ ನಾನಾದೃಶ್ಯಗಳನ್ನು ಅರಮನೆಯ (ಗೊಡೆ) ಭಿತ್ತಿಗಳ ಮೇಲೆ ಚಿತ್ರಿಸಿರುವುದು ಶತಮಾನದ ಹಿಂದಿನ ಜಂಬೂಸವಾರಿ ಮೆರವಣಿಗೆಯ ಗತಕಾಲದ ವೈಭವವನ್ನು ಮರುಕಳಿಸುವಂತೆ ಮಾಡುತ್ತವೆ.

ಮೈಸೂರು ಅರಸರ ಮತ್ತು ರಾಜಪರಿವಾರದವರ, ಜನಸಾಮಾನ್ಯರ ನೈಜ ಚಿತ್ರಣ ಹಾಗೂ ಸ್ವತಂತ್ರ ಪೂರ್ವದ ನಾಡು-ನುಡಿ ಸಂಸ್ಕೃತಿಯ ವಿವಿಧ ಸನ್ನಿವೇಶಗಳು, ವೇಷ-ಭೂಷಣಗಳು, ಮನೆ-ಮಹಲ್‌ಗಳು, ಗುಡಿ-ಗೋಪುರಗಳು, ಚರ್ಚ್-ಮಸೀದಿಗಳು, ಅರಮನೆ, ಕೋಟೆ, ಹೆಬ್ಬಾಗಿಲು, ವೃತ್ತಗಳು, ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟ, ಮೆರವಣಿಗೆಯಲ್ಲಿ ತೆರಳುತ್ತಿರುವ ಸೈನಿಕರು, ಪಂಡಿತರು, ಕಲಾವಿದರು, ಸಾಹಸಿಗಳು, ಕ್ರೀಡಾಳುಗಳು. ವಿದೂಷಿಗಳು, ಒಂಟೆಗಳು, ಕುದುರೆಸವಾರರು, ಹಸುಗಳು, ಫಿರಂಗಿಗಳು, ನೂರಾರು ಜಾನಪದ ಕಲಾತಂಡಗಳು, ರಥಗಳು, ಬಂಡಿಗಳು, ಸಾರೋಟುಗಳು, ಪಲ್ಲಕ್ಕಿಗಳು, ಮುಖ್ಯವಾಗಿ ಆನೆಗಳು. ಅಂಬಾರಿ ಹೊತ್ತ ಆನೆ, ಕುಮ್ಕಿ ಆನೆಗಳ ರಾಜಗಾಂಭೀರ್ಯ ಹಾಗೂ ಅಂಬಾರಿಯಲ್ಲಿರುವ ಮಹಾರಾಜರ ನೈಜರೂಪ ಅತ್ಯಂತ ಮನಮೋಹಕವಾಗಿ ಅರಮನೆಯ ಭಿತ್ತಿಗಳಲ್ಲಿ ಸ್ಥಿರವಾಗಿ ಮೈದಳೆದಿವೆ.

ಯಾವುದೇ ತಂತ್ರಜ್ಞಾನ, ಆಧುನಿಕತೆಯ ಸೋಂಕು ಇಲ್ಲದ, ಮೋಟಾರುವಾಹನ, ಯಂತ್ರೋಪಕರಣಗಳಿಲ್ಲದ ಕಾಲದಲ್ಲಿ ಮನುಷ್ಯ ನಿರ್ಮಾಣದ ಜಂಬೂಸವಾರಿಯ ಪರಿಕಲ್ಪನೆಯನ್ನು ರಾಜಾಶ್ರಯದಲ್ಲಿದ್ದ ಅರಮನೆ ಕಲಾವಿದರು ಭಿತ್ತಿಗಳಲ್ಲಿ ಚಿತ್ರಸಿದ್ದಾರೆ.

ವೈ.ನಾಗರಾಜು, ವೈ.ಸುಬ್ರಹ್ಮಣ್ಯರಾಜು, ಎಸ್.ಶಂಕರರಾಜು, ಎಸ್.ನಂಜುಂಡಸ್ವಾಮಿ, ಕೆ.ಕೇಶವಯ್ಯ, ಎಸ್.ಆರ್.ಅಯ್ಯಂಗಾರ್, ಎಸ್.ನರಸಿಂಹಸ್ವಾಮಿ, ಮಧುಗಿರಿರಾಮು, ಮುಂತಾದವರು ಯಥಾವತ್ತಾಗಿ ನೈಜ ಚಿತ್ರಗಳನ್ನು ಚಿತ್ರಿಸಿ ಗತಕಾಲದ ವೈಭವವನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿದ್ದಾರೆ.

ಕಾಲಘಟ್ಟದ ಇತಿಹಾಸದ ಹಂತ ಹಂತಗಳು ಚಿತ್ರಕಲೆಯ ಮೂಲಕ ದಾಖಲಾಗಿವೆ. ಮುಂದೆಯೂ ಸಹಾ. ಕಾಲಂತರಕ್ಕೆ ನೆಲೆಯಾಗಿ ಕಲಾವಿದ ಉಳಿಯುತ್ತಾನೆ.

ಪ್ರತಿಕ್ರಿಯಿಸಿ (+)