ಊರು ಕೇರಿ ನೆರೆ ಮನೆ

7
ಕವನ

ಊರು ಕೇರಿ ನೆರೆ ಮನೆ

Published:
Updated:
Deccan Herald

ಮನೆಗಳಲ್ಲಿ ತುಂಬಿದೆ ಕೆಸರು ಕೊಚ್ಚೆ

ಮನಗಳಲ್ಲಿ ಮಂಕು ಮೌನ

ಪಂಪೆ ನುಗ್ಗಿದಲ್ಲಿ, ನುಸುಳಿದಲ್ಲಿ ಸುಳಿಯುತ್ತಿರುವ ವಿಷಾದದ ಗಾಳಿಗೆ

ರಸ್ತೆ, ಬಯಲು, ತೋಟ, ಗದ್ದೆ, ಮೈದಾನಕ್ಕೆಲ್ಲಾ ಮೆತ್ತಿಕೊಂಡು ಅರಲು

ಬಳಿಕದ ಬಿರು ಬಿಸಲಿಗೆ ಒಣಗಿ

ನುಣ್ಣನೆ

ದೂಳಾಗಿ ಹಾರುವಾಗ

ಊರೊಂದು ಮರುಭೂಮಿ

 

ಕೊಚ್ಚೆ ತುಂಬಿದ ಮನೆಗಳಲ್ಲಿ

ದುರ್ಗಂಧ ಗಾಳಿ ಸಂಚಾರ

ಒಳಗಡಿಯಿಡುವಾಗ ಮೊಳಕಾಲವರೆಗೆ ಹೂತು

ಚಲ್ಲಾಪಿಲ್ಲಿ ಅವಶೇಷಗಳ ನಿರ್ಮಾನುಷ ಗೋಚರ

ಕಾವಳದಲ್ಲಿ ತಡವುತ್ತಾ,

ಕೈಗಳಿಂದ ಬಗೆದೂ ಬಗೆದೂ

ಹುಗಿದು ಹೋದ ಅಂತರಾಳದ ಮೋಹದ ಸಕಲವನ್ನು

ಅರಸುತ್ತಾ ಅಲೆಯುವ ಅಂತರಪಿಶಾಚಿಗಳು

ಊರ ತುಂಬ, ನಾಡ ತುಂಬ.

 

ಮಧ್ಯರಾತ್ರಿ, ಪ್ರಜೆಗಳೆಲ್ಲಾ

ದಿನದ ಕೆಲಸದ ಬಳಿಕ ದಣಿದು ಒರಗಿದ ಹೊತ್ತಲ್ಲಿ

ಅವರು ತೆರೆದು ಬಿಟ್ಟರು

ಅದೆಷ್ಟೋ ಜಲಾಶಯಗಳ ಇದ್ದಬದ್ದ ಬಾಗಿಲುಗಳ

ಸುಳಿವಿಲ್ಲಾ, ಸೂಚನೆಯಿಲ್ಲ.

ಜೊತೆ ಜೊತೆಗೆ ಸಡಿ ಮಳೆ, ಬೆಳಕಿಲ್ಲದ

ಕಡುಕಪ್ಪು ರಾತ್ರಿ, ಕಾರ ಮೇಘಗಳು

ಭೋರ್ಗರೆದು ನುಗ್ಗಿದ ಪಂಪಾ ನೀರಲ್ಲ ಆಗ

ಮಹೋರಗ,

ಬುಸುಗುಟ್ಟಿ, ಹೊಡಚುತ್ತಾ, ಹೊರಳುತ್ತಾ

ಏರೇರಿ ಮೇಲೆರಗಿ

ಭಿತ್ತಿಗಳು ಕಿತ್ತೆದ್ದು, ಮನೆ ಮಠಗಳು ಧರಾಶಾಯಿ

ಕಣ್ಣು ತೆರೆಯುವಷ್ಟರಲ್ಲಿ ಎಲ್ಲಾ ನೀರು ಪಾಲು.

ಮೂರು ರಾತ್ರಿ, ಮೂರು ಹಗಲು

ನಿರ್ಜಲ, ನಿರಶನ ಕಾಲನೊಂದಿಗೆ ಕಾಲಹರಣ, ಕಂಗೆಟ್ಟ ಜನಮನ

 

ನಾಡಿನ ತುಂಬಾ ಈಗ ಗೋರಿಯಿಂದ ಎದ್ದು ಬಂದಂತೆ ಅಳಿದುಳಿದ

ಹೈರಾಣು ಮಂದಿ

ಆ ರಾತ್ರಿಯಿಂದ ಉಟ್ಟ ಲುಂಗಿಯಲ್ಲಿ,

ತೊಟ್ಟ ನೈಟಿಯಲ್ಲಿ

ಜೋಂಬಿಗಳಾಗಿ ಅಲೆತ

ಕ್ಯಾಂಪುಗಳಲ್ಲಿ

ಕರುಣಾಮಯಿಗಳು, ಅವರಿವರು ಒಪ್ಪತ್ತು ಕೊಡುವ

ಬುತ್ತಿಗಾಗಿ ಕಾದು

ಮೊಗೆಮೊಗೆದು ಮಣ್ಣು ಮನೆಯಾಚೆ ತಳ್ಳುವ ಕರ್ಮ‌

 

ಪತ್ರಿಕೆಗಳ ಪ್ರತಿ ಪುಟದಲ್ಲೂ ನೆರೆಯ ವಿವರ

ನೆರೆಹೊರೆಯ ನಾನಾ ಚಿತ್ರ ಬಿತ್ತರ

ಮಾಯವಾಗಿದೆ

ಅಮ್ಮಂದಿರಿಗೆ ಆತು ನಿಂತ ಮಕ್ಕಳ ಕಣ್ಣಲ್ಲಿ

ಮಿನುಗು

ತುಟಿಯಲ್ಲಿ ನಗು

ತುಂಬಿದೆ ಮನೆಗಳಲ್ಲಿ ರಚ್ಚೆ ಕೆಸರು

ಕವಿದಿದೆ ಸುತ್ತು ಮಂಕು ಮೌನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !