ಭಾನುವಾರ, ಸೆಪ್ಟೆಂಬರ್ 27, 2020
21 °C

ಕ್ಯಾನ್‍ಬೆರಾ

ಡಿ.ಎ. ಶಂಕರ್ Updated:

ಅಕ್ಷರ ಗಾತ್ರ : | |

ತಾಳಲಾಗದ ಚಳಿಗೆ ನಡುಗಿ, ಎಲೆ ಕಳಚಿ
ಬೆತ್ತಲಾಗಿ, ನಾಚಿ
ಬೆಳ್ಳಿ ಹಿಮದಲ್ಲಿ ಹಸಿರು ಪಾಚಿ ಹೊದ್ದು ನಿಂತ
ಸುದೀರ್ಘ ಮೌನದ ಸಾಲು ಮರಗಳ ಸಾಲು, ಸಾಲು;
ಇವುಗಳಡಿಯಲ್ಲಿ
ಹೊಸ ರೇಶಿಮೆ ಸೀರೆಗಳ ಸರಭರ ನಡಿಗೆ ನೆನಪಿಸುವ
ಬಣ್ಣ ಬಣ್ಣದ ಕಾರುಗಳ ನಿರಂತರ ಸಾಲು;
ಕಾಲ ಅಕಾಲದಲ್ಲಿ ಬೆಳಕಿಗಡ್ಡ ನಿಂತು
ನೆಲಕ್ಕಿಳಿದಿರುವ ಮಂಜುಮಣಿಗಳ
ಸದ್ದಿಲದ ಶ್ವೇತ ಮಣಿಮಾಲೆ;

ಆದರಿಲ್ಲಿ
ನಡೆಯುವ, ನಗುವ, ನಿಂತು ವಿರಾಮದಲ್ಲಿ
ಮಾತನಾಡುವ
ಜನ ಮಾತ್ರ ಬಲು ಅಪರೂಪ!

ಹೀಗೆಂದರೆ
ಜೀವ ಇಲ್ಲ ಎಂದಲ್ಲ;

ಬೋಳು ನೀಲಗಿರಿ ಮರಗಳ ಮೇಲೆ
ರೆಕ್ಕೆ ಪಟಪಟ ಬಡಿದು ಹಾರುತ್ತ ಬಂದು ಕೂರುತ್ತವೆ
ಪಂಚವರ್ಣದ ಗಿಳಿ, ಬಿಳಿಯ ಬಣ್ಣದ ಗಿಳಿ, ತಲೆಯ ಮೇಲೆ ಕಿರೀಟ ಹೊತ್ತ
ಬಿಳಿ, ಹಳದಿ ಬಣ್ಣದ ಗಿಳಿ;
ಕಾಗೆಯ ಹೋಲುವ ಮ್ಯಾಗ್‍ಪೈ; ಬೂದು ಪಾರಿವಾಳ;

ಬಿಳಿ ಪಟ್ಟೆಯ ಕಾಣಿಸುವ ಕರಿಮೈ ಕಾಗೆ;
ಚಕಿತ, ಚಂಚಲ ಮೈನಾ;
ಯಕ್ಷಗಾನದ ಕುಮ್ಮುಚೆಟ್ಟುಗಳ ನೆನಪಿಸುವ
ಥಕಥೈ ಹಾರುವ ಕಾಂಗರೂಗಳು;
ಟೆಡ್ಡಿಬೇರ್ ಹೋಲುವ, ಮೈತುಂಬ ಮೃದು ತುಪ್ಪಳದ
ವೊಂಬಾಟ್‍ಗಳು;

ಹೆಸರಿನ ಹಂಗಿಲ್ಲದ ಎಷ್ಟೋ ಪಕ್ಷಿ ಪ್ರಾಣಿ ಜೀವ
ಹಗಲ ಎಚ್ಚರಿಸುವಂತೆ ಕೂಗಿ, ಚೀರುತ್ತವೆ;
ತಿಳಿನೀರ ಕಾಸಾರಗಳಲ್ಲಿ
ನಿಶ್ಯಬ್ದ
ಮೀಯುತ್ತವೆ ಮೀನ ರಾಶಿ

ಕೊರವ ಚಳಿಯಲ್ಲೂ ಮಾತಿಲ್ಲದ ಜನರ ನಡುವೆಯೂ
ಜೀವ ಝಲ ಝಲ.
_________________

* ಕ್ಯಾನ್‌ಬೆರಾ: ಆಸ್ಟ್ರೇಲಿಯಾದ ರಾಜಧಾನಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.