ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆಗೆ ಎದುರಾಗಿ ಪ್ರೀತಿ: ಜರ್ಮನ್ ಕವನ ‘ಕೊರೊನ’

Last Updated 5 ಏಪ್ರಿಲ್ 2020, 4:59 IST
ಅಕ್ಷರ ಗಾತ್ರ

ಪೌಲ್ ಸೆಲಾನ್ 1920ರಲ್ಲಿ ರೊಮೇನಿಯಾದಲ್ಲಿ ಜನಿಸಿದ. ಅವನು ಜರ್ಮನ್ ಭಾಷೆಯಲ್ಲಿ ಬರೆದ ಕವಿ ಮತ್ತು ಅನುವಾದಕಾರ. ರೊಮೇನಿಯಾ ಸಾಮ್ರಾಜ್ಯದಲ್ಲಿ ಯಹೂದ್ಯ ಕುಟುಂಬದಲ್ಲಿ ಜನಿಸಿದ ಪೌಲ್ ಅಂತ್ಚೇಫ್‌, ಪೌಲ್ ಸೆಲಾನ್ ಎಂಬ ಕಾವ್ಯನಾಮದಲ್ಲಿ ಜರ್ಮನ್ ಭಾಷೆಯಲ್ಲಿ ಕವನಗಳನ್ನು ಬರೆದು ಪ್ರಸಿದ್ಧನಾದ. ಎರಡನೆಯ ಮಹಾಯುದ್ಧದ ವೇಳೆಗೆ ಹಿಟ್ಲರನ ನಾಝಿ ಆಡಳಿತದಲ್ಲಿ ಅವನ ಯಹೂದ್ಯ ಕುಟುಂಬ ಸಂಕಷ್ಟಕ್ಕೆ ಒಳಗಾಯಿತು.

ಅವನು ವೈದ್ಯಕೀಯ ಶಿಕ್ಷಣಕ್ಕಾಗಿ 1938ರಲ್ಲಿ ಪ್ಯಾರಿಸ್‌ಗೆ ಹೋದ. ಅಲ್ಲಿಂದ 1941ರಲ್ಲಿ ಬರ್ಲಿನ್‌ಗೆ ಹೋದ. 1942ರಲ್ಲಿ ಅವನ ತಂದೆತಾಯಿಯನ್ನು ಜರ್ಮನಿಯಿಂದ ಗಡೀಪಾರು ಮಾಡಲಾಯಿತು. ಅವರು ನಾಝಿಗಳ ಯಾತನಾಶಿಬಿರದಲ್ಲಿ ಸತ್ತರು. 1944ರಲ್ಲಿ ಪೌಲ್ ಸೆಲಾನ್‌ನನ್ನು ಜೈಲಿಗೆ ಹಾಕಲಾಯಿತು. ಅಲ್ಲಿಂದ ತಪ್ಪಿಸಿಕೊಂಡು 1948ರಲ್ಲಿ ಅವನು ಪ್ಯಾರಿಸ್‌ಗೆ ಬಂದ. ಮುಂದೆ ಆಸ್ಟ್ರಿಯಾ, ಜರ್ಮನಿ ಮುಂತಾದ ದೇಶಗಳಿಗೆ ಪ್ರಯಾಣ ಮಾಡಿದರೂ ಪ್ಯಾರಿಸ್‌ನಲ್ಲೇ ಕೊನೆಯವರೆಗೂ ವಾಸಮಾಡಿದ. 1970ರಲ್ಲಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ.

ಪೌಲ್ ಸೆಲಾನ್ 1945ರಿಂದ ಜರ್ಮನ್ ಭಾಷೆಯಲ್ಲಿ ಕವನಗಳನ್ನು ಬರೆಯಲು ಆರಂಭಿಸಿದ. 1952ರ ವೇಳೆಗೆ ಅವನ ಕವನಗಳಿಗೆ ಯುರೋಪಿನಲ್ಲಿ ಮನ್ನಣೆ ದೊರೆಯಲು ಆರಂಭವಾಯಿತು. ಅವನ ಕವನಗಳು ಇಂಗ್ಲಿಷ್‌ಗೆ ಅನುವಾದ ಆದುವು. ಅವನು ಸುಮಾರು 900 ಕವನಗಳನ್ನು ಬರೆದಿದ್ದಾನೆ.

‘ಕೊರೋನ’ ಕವನವು ಹೊರನೋಟಕ್ಕೆ ಒಂದು ಪ್ರೇಮ ಕವನ. ಆದರೆ ಈ ಕವನದ ಅಂತರಾರ್ಥದಲ್ಲಿ ದ್ವೇಷದ ಭಸ್ಮಾಸುರ ಪರಿಣಾಮವನ್ನು ಕುರಿತ ಸತ್ಯವನ್ನು ಹೇಳುವ ಕನಸು ಇದೆ. ಸತ್ಯದ ಕಠೋರ ಮುಖವನ್ನು ಕಾಣಲು ಇದು ಸೂಕ್ತ ಸಮಯ ಎಂದು ಕವಿ ಭಾವಿಸುತ್ತಾನೆ. ಪ್ರೇಮವನ್ನು ಒಂದು ಭ್ರಮೆ ಎಂದಾಗಲೀ ಅಥವಾ ಎಲ್ಲವುಗಳಿಂದ ಪಲಾಯನ ಎಂದಾಗಲೀ ನೋಡಲು ಬಯಸದ ಜನರಿಗೆ, ಪ್ರೀತಿಸುವ ಕಷ್ಟ ಏನು ಎನ್ನುವುದನ್ನು ಹೇಳಲು ಬಯಸುವ ಕವನ ‘ಕೊರೋನ’. ಬದುಕನ್ನು ಅದರ ಅವಯವಗಳನ್ನು ಪ್ರತ್ಯೇಕಿಸುವ, ಮುಚ್ಚಿದ ವರ್ಗಗಳನ್ನಾಗಿ ನೋಡುವ, ಭಾನುವಾರವನ್ನು ಇತರ ವಾರಗಳಿಂದ ಬೇರೆ ಎಂದು ಭ್ರಮಿಸುವ, ಪ್ರೀತಿ, ಕನಸು ಮತ್ತು ನೆನಪುಗಳನ್ನು ಇತರ ವಾಸ್ತವಿಕತೆಯಿಂದ ಬೇರೆಮಾಡುವ ಮತ್ತು ಇಂತಹ ಪ್ರತ್ಯೇಕತೆಯಿಂದ ನರಳುವ ಜಗತ್ತನ್ನು ಅವಿಶ್ವಾಸದಿಂದ ನೋಡುವ ಜನರಿಗಾಗಿ ಈ ಕವನ ರಚನೆಯಾಗಿದೆ.

ಎರಡನೆಯ ಮಹಾಯುದ್ಧದ ಬಳಿಕದ ಹತ್ಯಾಕಾಂಡದ ನೆನಪು ಮತ್ತು ವ್ಯಂಗ್ಯ ಮನೋಧರ್ಮದ ಹಿನ್ನೆಲೆಯಲ್ಲಿ ಅಂತಹ ವಿಪತ್ತು ಮತ್ತೆ ಬಾರದ ಹಾಗೆ ಎಚ್ಚರ ಮತ್ತು ನಿರ್ವಹಣೆಯ ಅಗತ್ಯದ ಸೂಚನೆ ಈ ಕವನದಲ್ಲಿ ದೊರೆಯುತ್ತದೆ. ಪ್ರೀತಿ ಎಂಬುದು ಪಲಾಯನವಾಗದೆ, ಭಾವನಾತ್ಮಕ ಮೋಸವಾಗದೆ, ನೈತಿಕ ಸೋಲು ಆಗದೆ ಇರಬೇಕು ಎನ್ನುವ ಆಶಯ ಇಲ್ಲಿ ಧ್ವನಿತವಾಗಿದೆ. ‘ಕೊರೋನಾ’ ಎಂಬ ಲ್ಯಾಟಿನ್ ಪದಕ್ಕೆ ಅನೇಕ ಅರ್ಥಗಳು ಇವೆ. 1. ತಲೆಯಲ್ಲಿ ಗೌರವಸೂಚಕವಾಗಿ ಅಥವಾ ಘನತೆಯ ಸಂಕೇತವಾಗಿ ಧರಿಸುವ ಹಾರ.

ಅದು ಮುಳ್ಳುಗಳ ಜೋಡಣೆಯ ಕಿರೀಟ ಆಕಾರದಲ್ಲಿ ಇದ್ದಾಗ ಅದಕ್ಕೆ ‘ಕಿರೀಟ’ ಎಂಬ ಅರ್ಥ ಕೂಡ ಬಂತು. 2. ಆಕಾಶಕಾಯಗಳ ಸುತ್ತಲೂ ಇರುವ ಪ್ರಭಾವಲಯ.

3. ಸೂರ್ಯ ಅಥವಾ ಚಂದ್ರನ ಸುತ್ತ ಇರುವ ಪ್ರಕಾಶಮಾನವಾದ ವರ್ತುಲ. ವರ್ತುಲ ಆಕಾರದ ಬೆಳಕಿನ ಪುಂಜ.
‘ಕೊರೋನ’ ಕವನದಲ್ಲಿ ಆ ಶೀರ್ಷಿಕೆಯು ಬಹು ಬಗೆಯ ಅರ್ಥಗಳನ್ನು ಕೊಡುತ್ತದೆ. ಒಂದು, ಆಕಾಶಕಾಯಗಳ ಸುತ್ತಲಿನ ಬೆಳಕಿನ ಪ್ರಭಾವಲಯ. ‘ಚಂದ್ರನ ಹೊಂಗಿರಣ’ ಎನ್ನುವ ಪ್ರಯೋಗ ಕವನದಲ್ಲಿ ಇದೆ. ಇನ್ನೊಂದು ಅರ್ಥ- ಭಾವನೆಗಳು ಸೃಷ್ಟಿಸುವ ಅಸ್ಪಷ್ಟ ಬೆಳಕಿನ ಪ್ರಭಾವಲಯ. ಬೆಳಕಿನ ಉಂಗುರವು ಪ್ರೇಮಿಗಳ ಸಂಬಂಧಕ್ಕೆ ಕಿರೀಟಪ್ರಾಯವಾಗುತ್ತದೆ ಮತ್ತು ಕ್ಲಿಷ್ಟವಾದ ಬಿಕ್ಕಟ್ಟನ್ನು ಮೀರುವ ವಿಶ್ವಾಸವನ್ನು ಉಂಟುಮಾಡುತ್ತದೆ.

‘ಕೊರೋನ’ ಕವನವು ನಿರ್ದಿಷ್ಟ ಕಾಲ ಮತ್ತು ದೇಶದ ಮೇರೆಗಳನ್ನು ಮೀರಿ ಬೆಳೆಯಲು ಭರವಸೆಯನ್ನು ಕೊಡುತ್ತದೆ. ಪ್ರೀತಿಗೆ ಎಲ್ಲ ಕಾಲಕ್ಕೂ ಬಹುರೂಪಗಳ ಬಹುಪ್ರಮಾಣಗಳ ಅಪಾಯಗಳು ಎದುರಾಗುತ್ತವೆ . ಕೇವಲ ಹೊರಮೈಯ, ಭ್ರಮನಿರಸನದ, ಅಗೋಚರದ ಜಗತ್ತಿಗಿಂತ ಭಿನ್ನವಾದ ಹೊಸಬೆಳಕಿನ ವರ್ತುಲದ ನಿಜವಾದ ಬದುಕನ್ನು ನಾವು ನಡೆಸಲು ಪ್ರೇರಣೆಯನ್ನು ಕೊಡುತ್ತದೆ ಪೌಲ್ ಸೆಲಾನ್‌ನ ಕವನ ‘ಕೊರೋನ’.

ಅಗೋಚರ ‘ಕೊರೋನ’ದಿಂದ ಮುಕ್ತವಾಗಿ ಹೊಸ ಬೆಳಕಿನ ವರ್ತುಲದ ಕಡೆಗೆ ಭರವಸೆಯೊಂದಿಗೆ ಸಾಗಲು ‘ಇದು ಸಮಯ, ಈಗ ಇದುವೇ ಸಮಯ’.

ಕೊರೋನ

ಶರತ್ಕಾಲ ಮೆಲ್ಲುತ್ತದೆ ಎಲೆಯೊಂದನು ನನ್ನ ಕೈಯಿಂದ:
ನಾವು ಗೆಳೆಯರು.

ಕಳಚುತ್ತೇವೆ ನಾವು ಕಾಲವನ್ನು ಬೀಜದೊಳಗಿಂದ
ಕಲಿಸುತ್ತೇವೆ ನಾವು ಅದಕ್ಕೆ ನಡೆದಾಡಲು.
ಕಾಲ ಮತ್ತೆ ಒಳಸೇರಿಕೊಳ್ಳುತ್ತದೆ ಚಿಪ್ಪಿನೊಳಗೆ.

ಭಾನುವಾರವೆಂಬುದು ನಮಗೆ ಕನ್ನಡಿಯೊಳಗೆ
ಜನರು ಮಲಗುತ್ತಾರೆ ಕನಸಿನಲ್ಲಿ,
ನಿಜ ಹೇಳುವುದು ನಾಲಗೆ ಮಾತ್ರ.

ಹೊರಳುತ್ತದೆ ನನ್ನ ಕಣ್ಣು ಕೆಳಗೆ ಪ್ರಿಯತಮೆಯ ಸೊಂಟದೆಡೆಗೆ
ನಿಟ್ಟಿಸುತ್ತೇವೆ ನಾವು ಮುಖಾಮುಖಿಯಾಗಿ
ಪಿಸುಗುಡುತ್ತೇವೆ ನಾವು ಕತ್ತಲಲ್ಲಿ

ಪ್ರೀತಿಸುತ್ತೇವೆ ನೆನಪಿನ ಅಮಲಿನಲ್ಲಿ
ಮಲಗುತ್ತೇವೆ ಕಪ್ಪೆಚಿಪ್ಪಿನೊಳಗಿನ ವೈನ್ ನಂತೆ
ಚಂದ್ರನ ಹೊಂಗಿರಣದಲ್ಲಿ ಹೊಳೆಯುವ ಕಡಲಿನಂತೆ.

ನಿಲ್ಲುತ್ತೇವೆ ನಾವು ಕಿಟಿಕಿಯ ಬಳಿ ಅಪ್ಪಿಕೊಂಡು
ನೋಡುತ್ತಾರೆ ನಮ್ಮನ್ನು ಜನ ಬೀದಿಬದಿಯಲ್ಲಿ
ಗೊತ್ತು ಅವರಿಗೆ ಇದು ಸಮಯವೆಂದು!

ಇದು ಕಲ್ಲು ಅರಳುವ ಸಮಯ
ಕಳವಳಕ್ಕೆ ಹೃದಯ ಮಿಡಿಯುವ ಸಮಯ.
ಇದು ಸಮಯ, ಬಂದು ಹೋದ ಸಮಯ,
ಈಗ ಇದುವೇ ಸಮಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT