ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ನ್ಯೂಯಾರ್ಕಿಗೆ ನೆಗಡಿಯಾದರೆ

Last Updated 21 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

(1)

ಮೈಯೆಲ್ಲ ಮಾರಿಜ್ವರ

ಪಿತ್ತನೆತ್ತಿಗೇರುವಂತೆ ತೈಲಸಮರ

ಒಣಮರಕ್ಕೆ ನೇತಾಡುವ ಬಾವಲಿಯಂತೆ

ಜನಗಣ ಮನಗಳ ಜೀವಜಗತ್ತು

ಜನರಲ್ ವಾರ್ಡಿಗೆ ಸೇರಿಸಿ

ನರದುಂಬಿ ಹರಿಯುವ ಸಿರಂಜಿನ ಝರಿ

ಬತ್ತಿಹೋದ ಗಂಗೆ,ಯುಮನೆ ಕಾವೇರಿ

(2)

ಬೀಜಿಂಗಿಗೆ ಭೇದಿಯಾದರೆ

ಜನಗಣ ಮನಗಳ ಮೂಗಿಗೆ ಸುಗಂಧ ದ್ರವ್ಯ

ವಿಳಾಸರಹಿತ ವಾಸನೆಗಳ ಸಾಲು

ಬಂಜೆಗಳಿಗೆ ಜಪಾನಿ ತೈಲ

ಹರಿದ ಕರುಳ ಕಟ್ಟಲು ಲಂಡನ್ನಿನ ನೂಲು

ಹರೆಯದ ಬಟ್ಟೆಗೆ

ಪ್ಯಾರಿಸ್,ಮಾಸ್ಕೊ,ಟೋಕಿಯೊ ಬಣ್ಣ

ಈಗ ಮಣ್ಣಿನ ವಾಸನೆಗೂ

ಸೇಂಟೂ, ಪರ್ಫ್ಯೂಮಿನ ಸೋಂಕು !

ಈಗ ಮೂತ್ರವೆಲ್ಲವು ತೀರ್ಥ

ಸಕಲ ಮಲಕ್ಕೂ ಮದ್ದಿನರ್ಥ

(3)

ಮೂಗುಕಟ್ಟಿದರೆ ಹಣದ ಪರಿಮಳ

ಹೊಟ್ಟೆಯುಬ್ಬರಕ್ಕೆ ಡಾಲರಿನ ದೋಸೆ

ತಲೆಬೇನೆಗೆ ತುಕ್ಕಿಹಿಡಿದ ರೂಪಾಯಿ

ಎಲ್ಲರೂ ಸುಖವಾಗಿದ್ದಾರೆ

ಸಾವಿನ ಮನೆಯಲ್ಲಿ...!


ಇಂತಿಪ್ಪ ರೋಗಬಿದ್ದ ಕನಸುಗಳಿಗೆ

ಎಲ್ಲಿಂದ ತರುವುದು ತುಳಸಿ,ಶುಂಟಿ,

ಅಶ್ವಗಂಧ,ಅರಿಶಿನ ದಂಟು?

ಈ ಕುಲಾಂತರಿ ಲೋಕಕ್ಕೆ ಏನಾದರೂ

ಹೇಳು ಧನ್ವಂತರಿ ನೀನಾದರೂ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT